ಎಂ.ವಿ.ಜೋಷಿ
``ಪಂಢರಪುರವೆಂಬ ದೊಡ್ಡ ನಗರ.... ಅಲ್ಲಿ ವಿಠೋಬನೆಂಬ ದೊಡ್ಡ ಸಾಹುಕಾರ... ವಿಠೋಬನಿರುವುದು ನದೀ ತೀರ... ಅಲ್ಲಿ ಪಂಢರಿ ಭಜನೆ ವ್ಯಾಪಾರ....!'' ಪುರಂದರ ದಾಸರ ಈ ಕೀರ್ತನೆಯಲ್ಲಿ ಭಕ್ತರ ಕೈವಶವಾಗಿರುವ ಪಂಢರಪುರ ಪಾಂಡುರಂಗನ ಮಹಿಮೆ ಅಡಗಿದೆ. ``ಕನಕದಾಸೆ ಇವಗಿಲ್ಲಂತೆ.... ಹಣದ ಆಸೆ ಬೇಕಿಲ್ಲವಂತೆ... ನಾದಬ್ರಹ್ಮನೆಂಬೋನಂತೇ.... ಭಕುತರ ಕರೆಗೆ ಒದಗೋನಂತೆ... ಇಟ್ಟಿಗೆ ಮೇಲೆ ನಿಂತ ನಮ್ಮ ವಿಠ್ಠಲ ತಾನು... ಪುಟ್ಟ ಪಾದ ಊರಿ ನಿಂತ ದಿಟ್ಟ ತಾನು.... ವಿಠ್ಠಲ ವಿಠ್ಠಲ ಪಾಂಡುರಂಗ ಜಯ ಹರಿ ವಿಠ್ಠಲ ಪಾಂಡುರಂಗ....!!'' ಹರಿದಾಸ ಕೀರ್ತನೆಗಳಲ್ಲಿ ಬರುವ ಈ ಸಾಲುಗಳೇ ಸಾಕು. ಭಕ್ತರ ಪರಾಧೀನನಾದ ಶ್ರೀ ಹರಿ ವಿಠ್ಠಲ ಪಾಂಡುರಂಗ ಕೋಟ್ಯಾಂತರ ಮನಸ್ಸುಗಳನ್ನು ಹೇಗೆ ತನ್ನತ್ತ ಸೆಳೆದಿದ್ದಾನೆ ಊಹಿಸಲು ಸಾಧ್ಯವಿಲ್ಲ .

ಅಂದಹಾಗೆ.... ಪ್ರತಿವರ್ಷ ಆಷಾಢ ಮಾಸ ಆರಂಭವಾಯಿತೆಂದರೆ ಸಾಕು ದಕ್ಷಿಣ ಭಾರತದ ನಾಲ್ಕಾರು ರಾಜ್ಯಗಳಲ್ಲಿ ಅಷ್ಟೇ ಏಕೆ ಜಗತ್ತಿನ ಮೂಲೆ ಮೂಲೆಯಿಂದ ವಿಠ್ಠಲನ ಭಕ್ತರಿಗೆ ಎಲ್ಲಿಲ್ಲದ ಪುಳಕ ಮತ್ತು ಸಂಭ್ರಮ ಪುಟಿದೇಳುತ್ತದೆ. ಭಾವ ಭಾವದಲಿ... ಜೀವ ಜೀವದಲಿ ಜೀವಸೆಲೆ ಹರಿದಾಡುತ್ತದೆ. ರಸನೆಯಲ್ಲಿ ವಿಠ್ಠಲನ ನಾಮಸ್ಮರಣೆ ಅನುರಣಿಸುತ್ತಿರುತ್ತದೆ. ಆಷಾಢ ಮಾಸದ ಗಾಳಿಯಂತೆ ವಿಠ್ಠಲನ ನಾಮಸ್ಮರಣೆ ಭಕ್ತರ ಧಮನಿ ಧಮನಿಯಲ್ಲಿ ಹರಿದಾಡುತ್ತದೆ. ಹೃದಯ ಹೃದಯಗಳಲ್ಲಿ ಕ್ಷಣ ಕ್ಷಣವೂ `ವಿಠ್ಠಲ' ನೆಂಬ ವೀಣೆ ಮೀಟುತ್ತಿರುತ್ತದೆ. ಉಸಿರು ಉಸಿರಿನಲ್ಲೂ `ವಿಠ್ಠಲ' ನ ಘೋಷಣೆ ಮೊಳಗುತ್ತಿರುತ್ತದೆ. ಈ ಬಾರಿಯೂ ವಿಶ್ವಾವಸುನಾಮ ಸಂವತ್ಸರದ ಜೂನ್ ತಿಂಗಳು 26 ರಿಂದ ಜಾಗತಿಕ ಮಟ್ಟದ ಭಕ್ತರು ಎಲ್ಲೆಡೆಯಿಂದ ಮಹಾರಾಷ್ಟçದ ಪುಣೆ ಜಿಲ್ಲೆಯ ದೇಹು ಮತ್ತು ಆಳಂದಿಯಲ್ಲಿ ಸಂದಣಿಸಿದ್ದು `ವಾರಿ' ಯ ಪರಂಪರೆಯಲ್ಲಿ ಪಾರಮಾರ್ಥದ ಪಾರಮ್ಯತೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಪಾದಯಾತ್ರೆ ಪಂಢರಪುರದತ್ತ ಭವ್ಯ ಮತ್ತು ದಿವ್ಯತೆಯ ಸಾಕ್ಷಿಯಾಗಿ ಸಾಗುತ್ತಿದೆ.

ವೈಕುಂಠ ತೋರಿದ್ದ ವಿಠ್ಠಲ:
ಹದಿನಾಲ್ಕು ಲೋಕಗಳನ್ನು ಆಳುವ ದೊರೆ `ವಿಠ್ಠಲ'ನೆಂದು ಹರಿದಾಸರು ನಂಬಿದ್ದಾರೆ. ನಮಗೆ ಮರ್ತ್ಯಲೋಕ ಬಿಟ್ಟು ಇನ್ನು ಉಳಿದ ಲೋಕಗಳ ಪರಿಚಯವಿಲ್ಲ. ಹರಿದಾಸರು `ವಿಠ್ಠಲ'ನ ನೆನೆದು ಭಾವುಕರಾಗಿ ತಮ್ಮ ನೆಚ್ಚಿನ ದೈವವನ್ನು ಸಾಕ್ಷಾತ್ಕರಿಸಿಕೊಂಡಿದ್ದಾರೆ. ಅಗತಣಿತ ಭಕ್ತರಿಗೆ ಅಗಣಿತೋತಮನಾದ `ವಿಠ್ಠಲ' ನು ತನ್ನ ಇರುವಿಕೆಯನ್ನು ಪ್ರಕಟಿಸಿದ್ದಾನೆ. ಅತ್ಯಂತ ದೀನನಾಗಿ ಪ್ರಾರ್ಥಿಸಿದ್ದ ಪುರಂದರ ದಾಸರು, ಕನಕದಾಸರು, ಅನ್ನಮಾಚಾರ್ಯರು, ಜಗನ್ನಾಥ ದಾಸರು, ವಿಜಯದಾಸರು, ಗೋಪಾಲ ದಾಸರು, ಶ್ರೀ ರಾಘವೇಂದ್ರ ಸ್ವಾಮಿಗಳು ಹೀಗೆ ಅನೇಕ ಹರಿದಾಸರು ಭಗವಂತನನ್ನು ತಮ್ಮ ನಾಮಸ್ಮರಣೆಯ ಮೂಲಕ ಸಾಕ್ಷಾತ್ಕರಿಸಿಕೊಂಡಿದ್ದಾರೆ. ಅದೇರೀತಿ ಮಹಾರಾಷ್ಟ್ರದ ಸಂತ ಜ್ಞಾನೇಶ್ವರ ಮತ್ತು ಸಂತ ತುಕಾರಾಮರೂ ಕೂಡ ವಿಠ್ಠಲನನ್ನು ಸಾಕ್ಷಾತ್ಕರಿಸಿಕೊಂಡಿರುವ ತಾಣಗಳು ಜಗತ್ತಿನ ಗಮನ ಸೆಳೆದಿವೆ. ಸಂತ ತುಕಾರಾಮ ಸಾಮಾನ್ಯ ಭಕ್ತನಾಗಿದ್ದರೂ ಅಸಾಮಾನ್ಯ ಭಕ್ತಿಯಿಂದ ವಿಠ್ಠಲನನ್ನು ಒಲಿಸಿಕೊಂಡಿದ್ದವರು. ಭಕ್ತನಿದ್ದಲ್ಲಿಗೇ ಗರುಡ ವಾಹನದಲ್ಲಿ ಬಂದಿಳಿದ ವಿಷ್ಣು ತನ್ನ ವೈಕುಂಠವನ್ನು ಪರಿಚಯಿಸಿ ಮತ್ತೆ ತುಕಾರಮನಿದ್ದಲ್ಲಿಗೆ ತಂದು ಬಿಡುವಷ್ಟು ಭಕ್ತರಾಧೀನ `ಪಾಂಡುರಂಗ' ನೆಂಬ ಐತಿಹ್ಯ ಇಂದಿಗೂ ಇಂದ್ರಾಣಿ ನದಿ ತೀರದಲ್ಲಿ ಹರಿಯುತ್ತಿದೆ.

200 ಕಿ.ಮೀ.ಉದ್ದದ ಪಾದಯಾತ್ರೆ:
ಸಂತ ಜ್ಞಾನೇಶ್ವರರು ತಮ್ಮ ಬಾಲ್ಯದಲ್ಲಿಯೇ ಭಾಗವತಕ್ಕೆ ತಾತ್ಪರ್ಯ ಬರೆದ ಖ್ಯಾತಿ ಇದೆ. ಈ ಕಾರಣಕ್ಕಾಗಿ ಭಗವಂತ ತನ್ನ ಭಕ್ತರಿಗೆ ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಬಂದು ಹರಸುತ್ತಾನೆ, ಮೈದಡವಿ ಸಾಯುಜ್ಯ ನೀಡುತ್ತಾನೆ ಎನ್ನುವ ನಂಬಿಕೆ ಹರಿದಾಸ ಪರಂಪರೆಯಲ್ಲಿದೆ. ಈ ಕಾರಣಕ್ಕಾಗಿ ದೇಹು ಮತ್ತು ಆಳಂದಿ ಉಭಯ ಕ್ಷೇತ್ರಗಳು `ವಿಠ್ಠಲ' ನ ಭಕ್ತರಿಗೆ ವೈಕುಂಠ ಸದೃಶವಾಗಿವೆ. ಇದಕ್ಕೆ ಸಾಕ್ಷಿ ಎನ್ನುವಂತೆ ಇಂದ್ರಾಣಿ ನದಿ ಸುಪ್ತವಾಹಿನಿಯಾಗಿ `ವಿಠ್ಠಲನ ಗಾಯನ' ದಲ್ಲಿ ಸಾಗುತ್ತಿದ್ದಾಳೆ. ಭಕ್ತರೂ ಸಹಿತ ಆಷಾಢ ಮಾಸದಲ್ಲಿ ಸಾಗರೋಪಾದಿಯಲ್ಲಿ ಜಮಾವಣೆಗೊಂಡು ಅಲ್ಲಿಂದ ದಿಂಡಿ ಯ ಮೂಲಕ ಪಂಢರಪುರ ಯಾತ್ರೆ ಹೊರಡುತ್ತಾರೆ. ಸುಮಾರು 200 ಕಿ.ಮೀ. ಉದ್ದದ ಪಾದಯಾತ್ರೆ ನಡೆಸುವ ಭಕ್ತರಿಗೆ ಮಹಾರಾಷ್ಟ್ರ ಸರ್ಕಾರವೇ ದೈನ್ಯತೆಯಿಂದ ಭಕ್ತರಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಿರುತ್ತದೆ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧರೆಂಬ ಭೇದ ಇಲ್ಲದೇ ಅನೇಕ ಸಿರಿವಂತ ಭಕ್ತರು ವಾರಿಯಲ್ಲಿ ಪಾಲ್ಗೊಳ್ಳುವ ಎಲ್ಲ ಭಕ್ತರಿಗೆ ದೈನಂದಿನ ಅವಶ್ಯಕತೆಗಳನ್ನು ಒದಗಿಸಿ ಕೃತಾರ್ಥರಾಗುತ್ತಿದ್ದಾರೆ. ಇದು ಜಗತ್ತಿನ ಅತ್ಯಂತ ಶ್ರೇಷ್ಠ ಯಾತ್ರೆ ಎಂದು ಹೇಳಲಾಗುತ್ತಿದೆ.

ಭಕ್ತಿಯೊಂದೇ ಇಲ್ಲಿ ಶಕ್ತಿ:
ಇಂದು ಯಾವುದೇ ಕಾರ್ಯಕ್ರಮ ಮಾಡಲು ಸಾಕಷ್ಟು ಪೂರ್ವದಲ್ಲಿ ಯೋಜನೆಗಳು ರೂಪಿಸಿರುತ್ತೇವೆ. ಜನರನ್ನು ಸೇರಿಸಲು ಏನೇಲ್ಲಾ ಮಾಡುತ್ತೇವೆ. ಆದರೂ ನಮ್ಮ ನಿರೀಕ್ಷೆಗೆ ತಕ್ಕಂತೆ ಜನಸಂದಣಿ ಇರುವುದಿಲ್ಲವೆಂದು ಪೇಚಾಡುತ್ತೇವೆ. ಆದರೆ, ದೇಹು-ಆಳಂದಿ ಯಾತ್ರೆಗೆ ಯಾವುದೇ ಮುನ್ಸೂಚನೆ ಇರುವುದಿಲ್ಲ. ಯಾರೂ ಯಾರಿಗೂ ಕರೆಯುವುದಿಲಲ. ಯಾವುದೇ ಸಂಘಟನೆ ಈ ಯಾತ್ರೆಯನ್ನು ಸಂಘಟಿಸುವುದಿಲ್ಲ. ಭಕ್ತರೇ ಈ ಸಮಯದಲ್ಲಿ ಬಂದು ಸೇರುತ್ತಾರೆ. ಇಲ್ಲಿ ಕೇವಲ ಭಕ್ತಿಯೊಂದೇ ಮಾರ್ಗ. ಜಗತ್ತಿನ ಮೂಲೆ ಮೂಲೆಯಿಂದ ಜನರು ಆಷಾಢ ಆರಂಭವಾಗುತ್ತಿದ್ದಂತೆ ದೇಹು-ಆಳಂದಿಯ ಇಂದ್ರಾಣಿ ನದಿ ತೀರದಲ್ಲಿ ಜಮಾಯಿಸುತ್ತಾರೆ. ಜಗತ್ತಿನ ಅತ್ಯಂತ ಬೃಹತ್ ಪ್ರಮಾಣದಲ್ಲಿ ಹೀಗೆ ಸೇರುವ ತಾಣ ಇದೊಂದೇ. ಈ ಯಾತ್ರೆಯಲ್ಲಿ ಮಿಲಿಯನ್ ಗಟ್ಟಲೆ ಜನರು ಸೇರುತ್ತಾರೆ. ಇಲ್ಲಿ ಯಾವುದೇ ಜಾತಿ, ಭೇದ ಇಲ್ಲ. ವಯಸ್ಸಿನ ನಿರ್ಬಂಧ ಇಲ್ಲ. ಯಾರು ಬೇಕಾದರೂ ಯಾತ್ರೆಯಲ್ಲಿ ಪಾಲ್ಗೊಳ್ಳಬಹುದು.

ಏನಿದು ವಾರಿ ಯ ಇತಿಹಾಸ?:
ಆಳಂದಿಯು ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿರುವ ಪಟ್ಟಣ. ಇದು ಕ್ರಿ.ಶ.12ನೇ ಶತಮಾನದಿಂದಲೇ ಧಾರ್ಮಿಕ ಕ್ಷೇತ್ರವಾಗಿತ್ತು. ಮರಾಠಿ ಸಂತ ಜ್ಞಾನೇಶ್ವರರ ಸಮಾಧಿ ಸ್ಥಳವಾಗಿ ಪ್ರಸಿದ್ಧವಾಗಿದೆ. 1296ರಲ್ಲಿ ಸಂತ ಜ್ಞಾನೇಶ್ವರರು ಆಗ ಇದ್ದ ಸಿದ್ಧೇಶವರ ದೇವಸ್ಥಾನ ಆವರಣದಲ್ಲಿ ಸಮಾಧಿ ಆದಮೇಲೆ ಪ್ರಾಮುಖ್ಯತೆ ಪಡೆಯಿತು. ಸುಮಾರು 1580-1600ರಲ್ಲಿ ಸಮಾಧಿಯ ಮೇಲೆ ಅಂಬೇಡ್ಕರ್ ದೇಶಪಾಂಡೆ ಒಂದು ದೇವಾಲಯವನ್ನು ಕಟ್ಟಿದರು. ನಂತರ ಬಂದ ಅಧ್ವರ್ಯುಗಳು ಜ್ಞಾನೇಶ್ವರರ ಪಾದುಕೆಯನ್ನು ಪಲ್ಲಕ್ಕಿ ಉತ್ಸವದಲ್ಲಿ ಪಂಢರಪುರಕ್ಕೆ ಕೊಂಡೊಯ್ಯುವ ಸಂಪ್ರದಾಯವನ್ನು ಆರಂಭಿಸಿದರು. ಇದನ್ನು ಪಂಢರಪುರ ವಾರಿ ಎಂದು ಕರೆಯುತ್ತಾರೆ. 19ನೇ ಶತಮಾನದ ಕೊನೆಯಲ್ಲಿ ವರ್ಷಕ್ಕೆ ಸುಮಾರು 50 ಸಾವಿರದಷ್ಟು ಯಾತ್ರಿಕರು ಆಳಂದಿಗೆ ಬರುತ್ತಿದ್ದರು. ಅಂದಿನಿಂದ ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಲಿದೆ. ಕೋಟ್ಯಾಂತರ ಸಂಖ್ಯೆಯಲ್ಲಿ ಭಕ್ತರು `ವಾರಿ ಯಾತ್ರೆ'ಯಲ್ಲಿ ಪಾಲ್ಗೊಳ್ಳುತ್ತಾರೆ.

ತೀರ್ಥ ಕ್ಷೇತ್ರವಾಗಿ ಪರಿವರ್ತನೆ:
ವಿಠ್ಠಲ ಭಕ್ತರಾದ ಸಂತ ಜ್ಞಾನೇಶ್ವರರ ಸಮಾಧಿ ದೇಹುವಿನಲ್ಲಿದೆ. ಈ ಸಮಾಧಿಯ ಹಿಂದೆ ವಿಠ್ಠಲ ಮತ್ತು ರುಕ್ಮಿಣಿಯರ ವಿಗ್ರಹಗಳಿವೆ. ಆಳಂದಿಯು ಸಂತ ಜ್ಞಾನೇಶ್ವರರ ಸಮಾಧಿ ಸ್ಥಳವಾಗಿದ್ದು, ಭಾವುಕ ಜನರಿಗೆ ತೀರ್ಥ ಕ್ಷೇತ್ರವಾಗಿದೆ. ಜ್ಞಾನೇಶ್ವರರ ಭಕ್ತರು ತಮ್ಮ ಗುರುಗಳು ಇನ್ನೂ ಬದುಕಿರುವುದಾಗಿ ನಂಬಿದ್ದಾರೆ. ಜ್ಞಾನೇಶ್ವರರ ಸಮಾಧಿಯ ಮೇಲೆ ದೇವಾಲಯ ನಿರ್ಮಿಸಿದ್ದು ಯಾತ್ರಾರ್ಥಿಗಳು, ಮುಖ್ಯವಾಗಿ ವಾರಕರಿ ಪಂಥಕ್ಕೆ ಸೇರಿದವರು ತೀರ್ಥಯಾತ್ರೆಗೆ ಬರುತ್ತಾರೆ. ಪ್ರತಿ ತಿಂಗಳ ಕೃಷ್ಣ ಪಕ್ಷದ ಏಕಾದಶಿಯಂದು ಸುಮಾರು 60-70 ಸಾವಿರ ಭಕ್ತರು ಆಳಂದಿಗೆ ಬರುತ್ತಾರೆ. ಈ ಸಂಖ್ಯೆ ಇದೀಗ ಲಕ್ಷ ಮೀರುತ್ತಿದೆ.

ಪಂಢರಪುರ ವಾರಿ:
ಪ್ರತಿ ವರ್ಷ ಪಂಢರಪುರ ವಾರಿ ಎಂಬ 21 ದಿನಗಳ ಪಲ್ಲಕ್ಕಿ ಉತ್ಸವದಲ್ಲಿ ಸಂತ ಜ್ಞಾನೇಶ್ವರರ ಪಾದುಕೆಗಳನ್ನು ಆಳಂದಿಯಿಂದ ಪಂಢರಪುರಕ್ಕೆ ಕೊಂಡೊಯ್ಯಲಾಗುತ್ತದೆ. ಈ ಬಾರಿ ಇದು ಪಂಢರಪುರಕ್ಕೆ ಆಷಾಢ ಏಕಾದಶಿಯಾದ ಜುಲೈ 6 ರಂದು ಬಂದು ತಲುಪುತ್ತದೆ. 200 ಕಿ.ಮಿ. ಉದ್ದ ಸಾಗುವ ಪಲ್ಲಕ್ಕಿ ಉತ್ಸವವನ್ನು ನೋಡಲು ಕೋಟ್ಯಾಂತರ ವಾರಕರಿ ಭಕ್ತರು ಸೇರುತ್ತಾರೆ. ಮಕ್ಕಳು, ಮಹಿಳೆಯರು, ವೃದ್ಧರು ಆದಿಯಾಗಿ ಎಲ್ಲ ಕ್ಷೇತ್ರಗಳ ಜನರೂ ಈ ವಾರಿಯಲ್ಲಿ ಪಾಲ್ಗೊಳ್ಳುವುದು ವಾಡಿಕೆ. ಸಾಗರೋಪಾದಿಯಲ್ಲಿ ಹರಿದು ಬರುವ ಜನರಿಗೆ ಉಳ್ಳವರು ಎಲ್ಲ ರೀತಿಯ ಕೊಡುಗೆಗಳನ್ನು ನೀಡುತ್ತಾರೆ. ಕುಡಿಯುವ ನೀರಿನಿಂದ ಹಿಡಿದು ಅನ್ನ, ವಸ್ತç ಎಲ್ಲವನ್ನೂ ಭಕ್ತರಿಗೆ ಧಾರೆ ಎರೆಯುತ್ತಾರೆ. ದಣಿದ ಭಕ್ತರಿಗೆ ಉಚಿತ ವೈದ್ಯಕೀಯ ಸೇವೆ ಇರುತ್ತದೆ. ಭಕ್ತರು ಆಳಂದಿಗೆ ಭೇಟಿ ನೀಡಿದಾಗ ಊರಿನ ಸುತ್ತ ಪ್ರದಕ್ಷಿಣೆ ಹಾಕುತ್ತಾರೆ. ಆಳಂದಿ ವ್ಯಾಪ್ತಿಯಲ್ಲಿರುವ ಧಾರ್ಮಿಕ ಮಹತ್ವವುಳ್ಳ ಕ್ಷೇತ್ರಗಳನ್ನು ದರ್ಶಿಸುತ್ತಾರೆ. ಜ್ಞಾನೇಶ್ವರ ಸಮಾಧಿ ಸ್ಮಾರಕ - ಸ್ಮಾರಕದ ಆವರಣದಲ್ಲಿ ಸಮಾಧಿ, ಶ್ರೀ ಸಿದ್ದೇಶ್ವರ ದೇವಾಲಯ ಮತ್ತು ಅಜಾನ್ ವೃಕ್ಷವಿದೆ. ಇಂದ್ರಾಯಣಿ ನದಿ ದಡದಲ್ಲಿರುವ ಘಾಟಿಗಳು. ಇಂದ್ರಾಯಣಿ ನದಿ ದಡದ ಹತ್ತಿರ, ಸಮಾಧಿ ಮಂದಿರದ ದಕ್ಷಿಣದಲ್ಲಿರುವ ರಾಮ ಮಂದಿರವು ಆಳಂದಿಯ ದೊಡ್ದ ದೇವಸ್ಥಾನಗಳಲ್ಲಿ ಒಂದಾಗಿದೆ. ಲಕ್ಷ್ಮಿ ನಾರಾಯಣ ಮಂದಿರ, ರಾಮ ಮಂದಿರದ ಹತ್ತಿರ, ವಿಠ್ಠಲ-ರುಕ್ಮಿಣಿ, ನರಸಿಂಹ ಸರಸ್ವತಿ ಮಠ, ಶ್ರೀ ಗಜಾನನ ಮಹಾರಾಜ ದೇವಸ್ಥಾನ, ಜ್ಞಾನೇಶ್ವರ ಸಮಾಧಿ ಸ್ಮಾರಕದ ದಕ್ಷಿಣದಲ್ಲಿವೆ. ಭಕ್ತರು ಈ ತಾಣಗಳನ್ನು ದರ್ಶಿಸುತ್ತಾರೆ.

ಯುನೆಸ್ಕೋ ಪಟ್ಟಿಯಲ್ಲಿ ಸೇರ್ಪಡೆ:
ವಿಶ್ವ ವಿಖ್ಯಾತ ಪಂಢರಪುರ ವಾರಿಯು ಭಾರತದ ಪರಂಪರೆ ಮತ್ತು ಸಾಂಸ್ಕೃತಿಕ ಹಿರಿಮೆ-ಗರಿಮೆಯನ್ನು ಹೊಂದಿದೆ. ಈ `ವಾರಿ' ಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಭಕ್ತರನ್ನೂ `ಮಾವುಲಿ' ಎಂದೇ ಸಂಬೋಧಿಸಲಾಗುತ್ತಿದೆ. `ಮಾವುಲಿ' ಎಂದರೆ `ವಿಠ್ಠಲ' ಎಂದರ್ಥ. ಪಾದಯಾತ್ರೆಯ ಸಂದರ್ಭದಲ್ಲಿ ಕುದುರೆ `ರಿಂಗಣ್' ನಡೆಯುತ್ತದೆ. `ರಿಂಗಣ್' ನೋಡುವುದೇ ಒಂದು ಚಂದನೆಯ ಪ್ರಕ್ರಿಯೆ. ಇಲ್ಲಿ ಭಕ್ತರು ಚಕ್ರಾಕಾರವಾಗಿ ಸೇರುತ್ತಾರೆ. ರಿಂಗಣ್ ನಲ್ಲಿ ಮೂರು ಸುತ್ತು ಸುತ್ತುವ ಕುದುರೆ ಹೆಜ್ಜೆಗಳ ಮಣ್ಣನ್ನು ಭಕ್ತರು ಹೆಕ್ಕಿ, ಅದನ್ನು ಸಂಗ್ರಹಿಸಿ ಮನೆಯಲ್ಲಿಟ್ಟುಕೊಳ್ಳುತ್ತಾರೆ. ಯಶಸ್ಸು ಮತ್ತು ಕೀರ್ತಿಗಾಗಿ ರಿಂಗಣ್ ಮಣ್ಣು ಶ್ರೇಷ್ಠ. ಮನೆಯಲ್ಲಿ ಯಾವುದೇ ದುಷ್ಟ ಶಕ್ತಿಯ ಪ್ರಲಾಪ ಇರುವುದಿಲ್ಲ. ಶಾಂತಿ ಮತ್ತು ಸಮೃದ್ಧಿಯ ಜೊತೆಗೆ ಸಾತ್ವಿಕ ಗುಣಗಳು ಕುಟುಂಬ ಸದಸ್ಯರಲ್ಲಿ ಮೂಡುತ್ತವೆ ಎನ್ನುವುದು ಭಕ್ತರ ನಂಬಿಕೆ. ಇಲ್ಲಿನ ಯಾತ್ರೆ ಜಗತ್ತಿನ ಯಾವ ಭಾಗದಲ್ಲೂ ಕಾಣಲು ಸಾಧ್ಯವಿಲ್ಲ. ಹೀಗಾಗಿ ಇದು ಯುನೆಸ್ಕೋ ಪರಂಪರಾ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ.