LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಡಾ. ಆನಂದ ಕುಮಾರ್ ಟೀಕೆ

ಬೆಂಗಳೂರು:  “ಚಿನ್ನ ಖರೀದಿ ಬೇಡ, ತೈಲ ಬಳಕೆ ತಗ್ಗಿಸಿ” ಎಂದು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆ ಅತ್ಯಂತ ಬಾಲಿಶವಾದದ್ದು. ಜನರ ಖರೀದಿ ಸ್ವಾತಂತ್ರ್ಯ, ಮಾರುಕಟ್ಟೆ ಆಧಾರಿತ ಬೆಲೆ ನಿರ್ಧಾರ ಮತ್ತು ದೀರ್ಘಕಾಲೀನ ಹೂಡಿಕೆಗಳಿಗೆ ಇದು ವಿರುದ್ಧವಾಗಿದೆ ಎಂದು ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿ ಡಾ. ಆನಂದ ಕುಮಾರ್ ಟೀಕಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮೋದಿಯವರ ಈ ಕರೆ ಜನರ ಬದುಕಿನ ವಾಸ್ತವಿಕತೆಗಳನ್ನು ಗಮನಿಸದೇ ಕೇವಲ ರಾಜಕೀಯ ಪ್ರದರ್ಶನದಂತೆ ತೋರುತ್ತದೆ. ಜನರಿಗೆ ಪರ್ಯಾಯ ವ್ಯವಸ್ಥೆಗಳನ್ನು ಒದಗಿಸದೆ “ಬಳಕೆ ಕಡಿಮೆ ಮಾಡಿ” ಎಂದು ಹೇಳಿಕೆ ನೀಡುವುದು ಹೊಣೆಗಾರಿಕೆಯ ಕೊರತೆಯ ಸಂಕೇತವಾಗಿದೆ. ಜಾಗತಿಕ ಆರ್ಥಿಕ ಕುಸಿತ ತಡೆದ  ಡಾ. ಮನಮೋಹನ್ ಸಿಂಗ್ ರೂಪಿಸಿದ ಆರ್ಥಿಕ ತತ್ವಗಳಿಗೆ ಇದು ವಿರುದ್ಧವಾಗಿದೆ. 1991 ರಲ್ಲಿ ದೇಶ ಎದುರಿಸುತ್ತಿದ್ದ ಆರ್ಥಿಕ ಸಂಕಷ್ಟ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಅವರ ಆರ್ಥಿಕ ನೀತಿ ದೇಶವನ್ನು ಗಂಡಾಂತರದಿಂದ ಪಾರು ಮಾಡಿತು. 2008 ರ ಜಾಗತಿಕ ಆರ್ಥಿಕ ಹಿಂಜರಿಕೆ ಸಂದರ್ಭದಲ್ಲಿ ದೇಶಕ್ಕೆ ಸ್ವಲ್ಪವೂ ತೊಂದರೆಯಾಗದಂತೆ ರಕ್ಷಿಸಿದ್ದರು. ಆದರೆ ಮೋದಿ ಅವರ ಕರೆ ಜನರ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿವೆ ಎಂದು ಆರೋಪಿಸಿದ್ದಾರೆ.

ಇದು ಜನರ ಖಾಸಗಿ ಖರ್ಚುಗಳನ್ನು ನಿಯಂತ್ರಿಸುವ ಪ್ರಯತ್ನವಾಗಿದೆ. ಜಾಗತಿಕ ತೈಲ ಬೆಲೆ ಏರಿಕೆ, ವಿದೇಶಿ ವಿನಿಮಯ ಸಂಗ್ರಹದ ಒತ್ತಡವನ್ನು ನಿಯಂತ್ರಿಸಲು ಸಾಕಷ್ಟು ಮಾರ್ಗಗಳಿವೆ. ಮನಮೋಹನ್ ಸಿಂಗ್ ಅವರು ಜನರ ಖರೀದಿ ಸ್ವಾತಂತ್ರ್ಯಕ್ಕೆ ಉತ್ತೇಜನ ನೀಡಿ ಮಾರುಕಟ್ಟೆಯಲ್ಲಿ ಹಣ ಹರಿಯಲು ಒತ್ತು ನೀಡಿದ್ದರು. ಒಂದು ವರ್ಷ ಚಿನ್ನ ಖರೀದಿ ಬೇಡ ಎಂದು ಕರೆ ನೀಡಿರುವುದು ಚಿನ್ನದ ಆಮದಿಂದ ಭಾರತಕ್ಕೆ ದೊಡ್ಡ ವಿದೇಶಿ ವಿನಿಮಯ ಹೊರೆಯಾಗಲಿದೆ. ಆದರೆ ಸಿಂಗ್ ಅವರ ದೃಷ್ಟಿಕೋನದಲ್ಲಿ ಚಿನ್ನ ಖರೀದಿ ಜನರ ಹೂಡಿಕೆ ಸ್ವಾತಂತ್ರ್ಯದ ಭಾಗ. ಸರ್ಕಾರವು ಜನರ ಖಾಸಗಿ ಹೂಡಿಕೆಗಳನ್ನು ನಿಯಂತ್ರಿಸುವ ಬದಲು, ಆರ್ಥಿಕತೆಯನ್ನು ಬಲಪಡಿಸುವ ಮೂಲಕ ವಿದೇಶಿ ವಿನಿಮಯ ಒತ್ತಡವನ್ನು ತಗ್ಗಿಸಬೇಕು ಎಂದು ಡಾ. ಆನಂದ ಕುಮಾರ್ ಕಿವಿ ಮಾತು ಹೇಳಿದ್ದಾರೆ.

ಮೋದಿ ಅವರು ನೀಡಿರುವ ಕರೆ ಜನರ ಖಾಸಗಿ ಬದುಕಿಗೆ ವಿರುದ್ಧವಾಗಿದೆ. ಚಿನ್ನ ಭಾರತೀಯ ಸಂಸ್ಕೃತಿಯಲ್ಲಿ ಕೇವಲ ಆಭರಣವಲ್ಲ, ಭದ್ರತೆ ಮತ್ತು ಹೂಡಿಕೆಯ ಸಂಕೇತ. ಜನರಿಗೆ ಚಿನ್ನ ಖರೀದಿಸಬೇಡಿ ಎಂದು ಹೇಳುವುದು ಅವರ ಆರ್ಥಿಕ ಸ್ವಾತಂತ್ರ್ಯವನ್ನು ನಿರ್ಲಕ್ಷಿಸುವಂತಾಗುತ್ತದೆ. ಸರ್ಕಾರ ತನ್ನ ಹಣಕಾಸು ನೀತಿಗಳ ವೈಫಲ್ಯವನ್ನು ಜನರ ಮೇಲೆ ಹಾಕುತ್ತಿರುವಂತೆ ಕಾಣುತ್ತಿದೆ. ತೈಲ ಬಳಕೆ ಕಡಿಮೆ ಮಾಡುವುದು ಪರಿಸರದ ದೃಷ್ಟಿಯಿಂದ ಒಳ್ಳೆಯದಾದರೂ, ಜನರಿಗೆ ಪರ್ಯಾಯ ವ್ಯವಸ್ಥೆಗಳನ್ನು ಒದಗಿಸದೇ ಕೇವಲ ಕರೆ ನೀಡುವುದು ಸಮಂಜಸವಲ್ಲ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ದುರ್ಬಲವಾಗಿರುವಾಗ, ಜನರು ತಮ್ಮ ದೈನಂದಿನ ಬದುಕನ್ನು ಹೇಗೆ ನಡೆಸಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದಿದ್ದಾರೆ.

ಸರ್ಕಾರ ತನ್ನ ಆರ್ಥಿಕ ನಿರ್ವಹಣೆಯ ದೋಷಗಳನ್ನು ಮುಚ್ಚಿಹಾಕಲು ಜನರ ಖರೀದಿ ಮತ್ತು ಬಳಕೆಯ ಮೇಲೆ ನಿಯಂತ್ರಣ ಹೇರಲು ಪ್ರಯತ್ನಿಸುತ್ತಿದೆ. ಇದು ಜನರ ಹಕ್ಕುಗಳನ್ನು ಕಸಿಯುವಂತಾಗುತ್ತದೆ. ಚಿನ್ನದ ಖರೀದಿ ನಿಲ್ಲಿಸಿದರೆ ಗ್ರಾಮೀಣ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ಬೀಳುತ್ತದೆ. ತೈಲ ಬಳಕೆ ಕಡಿತ ಮಾಡಿದರೆ ಮಧ್ಯಮ ವರ್ಗದ ಬದುಕು ಇನ್ನಷ್ಟು ಕಷ್ಟಕರವಾಗುತ್ತದೆ ಎಂದು ಡಾ. ಆನಂದ ಕುಮಾರ್ ಟೀಕಿಸಿದ್ದಾರೆ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST