LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೇಂದ್ರದ ಬಜೆಟ್ ಒಕ್ಕೂಟ ವ್ಯವಸ್ಥೆಯ ವಿರೋಧಿ

ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕ ಡಾ. ಆನಂದ್ ಕುಮಾರ್

ಬೆಂಗಳೂರು : ಕರ್ನಾಟಕದ ಪ್ರತಿನಿಧಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಆಯವ್ಯಯ, ಜನ ವಿರೋಧಿ ಮಾತ್ರವಲ್ಲ. ಒಕ್ಕೂಟ ವ್ಯವಸ್ಥೆಯನ್ನು ಅಸ್ಥಿರಗೊಳಿಸುವ ಷಡ್ಯಂತ್ರದ ಭಾಗವೂ ಹೌದು ಎಂದು ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿ ಡಾ. ಆನಂದ್ ಕುಮಾರ್ ಹೇಳಿದ್ದಾರೆ.

ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಬಂಧ ಸರಪಳಿಯಂತೆ. ಅದರಲ್ಲಿ ಒಂದು ಕೊಂಡಿ ಕಳಚಿದರೂ ಒಕ್ಕೂಟ ವ್ಯವಸ್ಥೆ ಅಸ್ಥಿರಗೊಳ್ಳುತ್ತದೆ. ಒಗ್ಗಟ್ಟು ಮಾಯವಾಗುತ್ತದೆ. ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯಾಗಲಿದೆ. ರಾಜ್ಯಗಳ ಸ್ವಾಯತ್ತತೆಗೆ ಘಾಸಿಯಾಗುತ್ತದೆ. ಇದನ್ನೇ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಮಾಡಿದೆ. ಒಕ್ಕೂಟ ವ್ಯವಸ್ಥೆಯನ್ನು ನಾಶಮಾಡುತ್ತಲೇ ಬಂದಿದ್ದು, ಈ ಬಜೆಟ್ ನಲ್ಲೂ ಅದು ಮುಂದುವರೆದಿದೆ. ಅನುದಾನ ವಿಳಂಬ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳ ಮೇಲೆ ಹೆಚ್ಚುವರಿ ನಿಯಂತ್ರಣದಿಂದ ಒಕ್ಕೂಟ ವ್ಯವಸ್ಥೆಗೆ ಅಸ್ಥಿರಗೊಳ್ಳುತ್ತಿದೆ. ರಾಜ್ಯಗಳ ಅಭಿವೃದ್ಧಿ ಕುಂಠಿತವಾಗುವ ಭೀತಿ ಎದುರಾಗಿದೆ. ಕೇಂದ್ರದ ಯೋಜನೆಗಳಿಂದ ಅನುದಾನ ನೀಡದ ಕಾರಣ ಕರ್ನಾಟಕಕ್ಕೆ 23,402 ಕೋಟಿ ರೂ. ಹೆಚ್ಚಿನ ಹೊರೆ ಬಿದ್ದಿದೆ ಎಂದು ಹೇಳಿದ್ದಾರೆ.

ನಾವು ಕೇಳುತ್ತಿರುವುದು ನಮ್ಮ ಹಕ್ಕನ್ನೇ ಹೊರತು ಭಿಕ್ಷೆಯನ್ನಲ್ಲ. ಕೇಂದ್ರದಿಂದ ಕರ್ನಾಟಕಕ್ಕೆ ವಿಶೇಷ ಯೋಜನೆಗಳಿಲ್ಲ, ಕೇಂದ್ರದ ಯೋಜನೆಗಳಿಗೆ ಪೂರಕ ಅನುದಾನ ನೀಡದೇ ಕನ್ನಡಿಗರಿಗೆ ಅಕ್ಷರಶಃ ಪಂಗನಾಮ ಹಾಕುತ್ತಿದೆ. ಕೇಂದ್ರದ ಯೋಜನೆಗಳಲ್ಲೂ ಸರಿಯಾಗಿ ಅನುದಾನ ನೀಡುತ್ತಿಲ್ಲ. ನಿರ್ಮಲಾ ಸೀತರಾಮನ್ ಅವರಿಂದ ಐದು ವರ್ಷಗಳಿಂದ ಕರ್ನಾಟಕಕ್ಕೆ ದ್ರೋಹ ಆಗುತ್ತಲೇ ಇದೆ. ಈ ಬಾರಿಯೂ ನಿರೀಕ್ಷೆ ಹುಸಿಯಾಗಿದೆ. ಸಾಮಾನ್ಯ ಜನರ ಆಶೋತ್ತರಗಳಿಗೆ ಸ್ಪಂದಿಸದೆ, ಕಾರ್ಪೊರೇಟ್ ವಲಯ ಹಾಗೂ ಶ್ರೀಮಂತ ವರ್ಗದ ಪರವಾಗಿಯೇ ಹೆಚ್ಚು ಒಲವು ತೋರಿದೆ. ಬಡವರು, ರೈತರು, ಕಾರ್ಮಿಕರು, ಮಧ್ಯಮ ವರ್ಗ ಮತ್ತು ಯುವಜನತೆ ಈ ಬಜೆಟ್ನಿಂದ ತೀವ್ರ ನಿರಾಶೆಗೆ ಒಳಗಾಗಿದ್ದಾರೆ. ಅಗತ್ಯ ವಸ್ತುಗಳ ಬೆಲೆ, ಇಂಧನ ದರ, ಅಡುಗೆ ಅನಿಲ, ವಿದ್ಯುತ್ ಮತ್ತು ಸಾರಿಗೆ ಶುಲ್ಕಗಳು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿವೆ. ಬೆಲೆ ಏರಿಕೆ ತಗ್ಗಿಸುವ ನಿಖರ ಕ್ರಮಗಳು ಕಾಣಿಸಿಕೊಂಡಿಲ್ಲ. ಪರೋಕ್ಷ ತೆರಿಗೆಗಳ ಭಾರ ಮುಂದುವರಿದಿದ್ದು, ಬದಕು ಮತ್ತಷ್ಟು ದುಬಾರಿಯಾಗಿದೆ ಎಂದಿದ್ದಾರೆ.

ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ಕೇವಲ ಘೋಷಣೆಯಲ್ಲೇ ಉಳಿದಿದೆ. ಕೃಷಿ ಕ್ಷೇತ್ರಕ್ಕೆ ನೀಡಿರುವ ಅನುದಾನ ವಾಸ್ತವಿಕ ಅಗತ್ಯಗಳಿಗೆ ಹೋಲಿಸಿದರೆ ನಿರಾಶೆ ಮೂಡುತ್ತದೆ. ಕನಿಷ್ಠ ಬೆಂಬಲ ಬೆಲೆ – ಎಂ.ಎಸ್.ಪಿಗೆ ಕಾನೂನು ಭದ್ರತೆ, ಸಾಲಮನ್ನಾ, ಬೆಳೆ ನಷ್ಟ ಪರಿಹಾರ ಮತ್ತು ಕೃಷಿ ಮೂಲಸೌಕರ್ಯಕ್ಕೆ ಸಮರ್ಪಕ ಹೂಡಿಕೆ ಕುರಿತಂತೆ ಬಜೆಟ್ ಸ್ಪಷ್ಟ ಉತ್ತರ ನೀಡಿಲ್ಲ. ಇದರಿಂದಾಗಿ ರೈತ ಸಮುದಾಯದ ಸಂಕಷ್ಟಗಳು ಮುಂದುವರಿಯುವ ಭೀತಿ ಎದುರಾಗಿದೆ ಎಂದು ಡಾ. ಆನಂದ್ ಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚುತ್ತುದ್ದು, ಬಜೆಟ್ನಲ್ಲಿ ದೊಡ್ಡ ಮಟ್ಟದ ಉದ್ಯೋಗ ಸೃಷ್ಟಿಗೆ ದಿಕ್ಕು ತೋರಿಸುವ ಯೋಜನೆಗಳಿಲ್ಲ. ಶಾಶ್ವತ ಉದ್ಯೋಗ ಒದಗಿಸುವ ಬದಲು, ಅಸ್ಥಿರ ಮತ್ತು ಒಪ್ಪಂದ ಆಧಾರಿತ ಕೆಲಸಗಳನ್ನೇ ಉತ್ತೇಜಿಸುವ ನೀತಿಗಳು ಮುಂದುವರಿದಿವೆ. ಭವಿಷ್ಯದ ಭದ್ರತೆ ಇಲ್ಲದ ಉದ್ಯೋಗ ವ್ಯವಸ್ಥೆ ಬಲವಾಗುತ್ತಿದೆ.  ಖಾಸಗೀಕರಣದ ದಿಕ್ಕಿನ ನೀತಿಗಳಿಂದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಶಿಕ್ಷಣ ಮತ್ತು ಆರೋಗ್ಯವನ್ನು ಇನ್ನಷ್ಟು ದುಬಾರಿಯಾಗಿಸುವ ಆತಂಕ ಮೂಡಿಸುತ್ತವೆ ಎಂದು ಹೇಳಿದ್ದಾರೆ.

ದೊಡ್ಡ ಉದ್ಯಮಗಳಿಗೆ ತೆರಿಗೆ ಸಡಿಲಿಕೆ, ಪ್ರೋತ್ಸಾಹ ಪ್ಯಾಕೇಜುಗಳು ಮತ್ತು ರಿಯಾಯಿತಿಗಳನ್ನು ಮುಂದುವರಿಸಿರುವ ಬಜೆಟ್, ಸಾಮಾನ್ಯ ಜನರ ಮೇಲಿನ ತೆರಿಗೆ ಭಾರವನ್ನು ಕಡಿಮೆ ಮಾಡಲು ವಿಫಲವಾಗಿದೆ. ಕಾರ್ಪೊರೇಟ್ಗಳಿಗೆ ಲಕ್ಷಾಂತರ ಕೋಟಿ ರೂ.ಗಳ ರಿಯಾಯಿತಿ ನೀಡಲಾಗುತ್ತಿದ್ದರೂ, ಅದರಿಂದ ಉದ್ಯೋಗ ಸೃಷ್ಟಿ ಅಥವಾ ಜನಸಾಮಾನ್ಯರ ಜೀವನ ಮಟ್ಟದಲ್ಲಿ ಗಣನೀಯ ಸುಧಾರಣೆ ಕಂಡುಬಂದಿಲ್ಲ. ಬಜೆಟ್ ಜನಪರ ಮತ್ತು ಸಾಮಾಜಿಕ ನ್ಯಾಯ ಆಧಾರಿತವಾಗಿಲ್ಲ. ಸಾಮಾನ್ಯ ಜನರ ಸಂಕಷ್ಟಗಳಿಗೆ ಸೂಕ್ತ ಪರಿಹಾರವಿಲ್ಲ. ದೇಶದ ಅಭಿವೃದ್ಧಿ ಕೇವಲ ಅಂಕಿಅಂಶಗಳಲ್ಲ, ಜನರ ಜೀವನದಲ್ಲಿ ಅದು ಪ್ರತಿಫಲಿಸಬೇಕು. ಆದರೆ ಬಜೆಟ್ ಆ ನಿರೀಕ್ಷೆಯನ್ನು ಈಡೇರಿಸಲು ವಿಫಲವಾಗಿದ್ದು, ಇದು ಜನವಿರೋಧಿ ಬಜೆಟ್ ಎಂದು ಆನಂದ್ ಕುಮಾರ್ ಹೇಳಿದ್ದಾರೆ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST