ಬೆಂಗಳೂರು: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸತತ 11 ವರ್ಷಗಳ ಪರಿಶ್ರಮದಿಂದ ಕೊನೆಗೂ ಗುಡ್ಡಗಾಡು ಪ್ರದೇಶವಾದ ಮಿಜೋರಾಂನ ಸೈರಾಂಗ್-ಬೈರಾಬಿ ಮಧ್ಯೆ ನೂತನ ರೈಲು ಯೋಜನೆ ಸಾಕಾರಗೊಂಡಿದೆ.
ಈ ಯೋಜನೆಯ ಆಳ-ಹರಿವು ತಿಳಿದುಕೊಳ್ಳಲು ಮತ್ತು ಕರ್ನಾಟಕದಲ್ಲಿ ಈ ಕುರಿತು ಪ್ರಚಾರ ಮಾಡಲು ಹುಬ್ಬಳ್ಳಿ ನೈಋತ್ಯ ರೈಲ್ವೆ ಇಲಾಖೆಯ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಬಿ.ರಾಧಾರಾಣಿ ಮತ್ತು ಪ್ರಚಾರ ವಿಭಾಗದ ಹಿರಿಯ ಅಧಿಕಾರಿ ಪವನ್ ಹೆಚ್.ಸೋಮಣ್ಣವರ್ ಅವರು ಸೆ.೫ರಂದು ಬೆಂಗಳೂರಿನಿಂದ ಆಸ್ಸಾಂನ ಗುವಾಹಟಿ ಮಾರ್ಗವಾಗಿ ಮಿಜೋರಾಂನ ಐಜ್ಞಾಲ್ ರಾಜಧಾನಿ ಲೆಂಗ್ ಪುಯಿ ಗೆ ವಿಮಾನದ ಮೂಲಕ ಕರೆದೊಯ್ದಿದ್ದರು. ಅಂದು ಲೆಂಗ್ ಪುಯಿ ನಿಲ್ದಾಣಕ್ಕೆ ಸೆ.೫ರ ಸಂಜೆ ಬಂದಿಳಿದ ಪತ್ರಕರ್ತರು ಅಲ್ಲಿಂದ ಮಿಜೋರಾಂನ ರಾಜಧಾನಿ ಐಜ್ಞಾಲ್ ನ ಪ್ರಮುಖ ಹೋಟೆಲ್ ಗಳಾದ ಫ್ಲೋರಿಯಾ ಮತ್ತು ಲಾಲಾವಿ ಯಲ್ಲಿ ವಸತಿ ಸೌಲಭ್ಯ ಕಲ್ಪಿಸಿದರು.

ಸೆ.6 ರಂದು ಬೆಳಿಗ್ಗೆ 9 ಗಂಟೆಗೆ ಶುಚಿ, ರುಚಿಯಾದ ಉಪಹಾರ ಸೇವನೆಯ ಬಳಿಕ ಸೈರಾಂಗ್ ನಿಂದ ಬೈರಾಬಿ ರೇಲ್ವೆ ನಿಲ್ದಾಣದವರೆಗಿನ ಘಟ್ಟ ಪ್ರದೇಶಗಳಲ್ಲಿ ನಡೆದ ರೇಲ್ವೆ ನಿರ್ಮಾಣ ಯೋಜನೆಯ ವರದಿಗಾರಿಕೆಗೆ ತೆರಳಲಾಯಿತು. ಅಲ್ಲಿನ ರೇಲ್ವೆ ಇಲಾಖೆಯ ಸಿಪಿಆರ್‌ಓ ಕೆ.ಕೆ.ಶರ್ಮಾ ಅವರು ಸೈರಾಂಗ್ ನ ಅತಿ ಎತ್ತರದ ರೇಲ್ವೆ ಸೇತುವೆ ಬಳಿ ಮಾಧ್ಯಮಗೋಷ್ಠಿ ನಡೆಸಿದರು. ರೈಲ್ವೆ ಯೋಜನೆಯ ಸಂಪೂರ್ಣ ಮಾಹಿತಿ ನೀಡಿದರು. ಹೊರ್ಟೋಕಿ, ಕಾನ್‌ಪುಯಿ, ಮುವಾಲ್ಖಾಂಗ್ ಮತ್ತು ಸೈರಾಂಗ್ ಈ ಮಾರ್ಗದಲ್ಲಿರುವ ರೈಲು ನಿಲ್ದಾಣಗಳಾಗಿದ್ದು ಟನಲ್ ಗಳ ಬಳಿ, ಸೇತುವೆಗಳ ಪರಿಚಯಗಳನ್ನು ಅಧಿಕಾರಿಗಳು ಪತ್ರಕರ್ತರಿಗೆ ತಿಳಿಸಿದರು. ಮಧ್ಯಾಹ್ನ 2-30ಕ್ಕೆ ಬೈರಾಬಿಯಲ್ಲಿ ಪತ್ರಕರ್ತರು ಮತ್ತು ರೇಲ್ವೆ ಅಧಿಕಾರಿಗಳೊಂದಿಗೆ ಸಾಮೂಹಿಕ ಭೋಜನ ವಿರಾಮ ದೊರೆಯಿತು.
ಮಿಜೋರಾಂ ಸರ್ಕಾರದ ಹಿರಿಯ ಸಲಹೆಗಾರರಾದ ಹೆಚ್.ತಾವ್ನಾ ಅವರು ಮಿಜೋರಾಂ ರಾಜ್ಯದ ಐತಿಹಾಸಿಕ ಚರಿತ್ರೆ, ಸ್ಥಳೀಯವಾಗಿ ಮಾತನಾಡುವ ಮಿಜೋ ಭಾಷೆ, ಜನಸಂಖ್ಯೆ, ಭೌಗೋಳಿಕ, ಆರ್ಥಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಇತ್ತೀಚಿನ ವರ್ತಮಾನಗಳ ಬಗ್ಗೆ ಮಾಹಿತಿ ನೀಡಿದರು. ಅವರೊಂದಿಗೆ ಎ.ಹುಸೇನ್ ಅವರೂ ಇದ್ದು ಮಿಜೋರಾಂನ ಜನರ ದೈನಂದಿನ ಬದುಕು, ಬವಣೆ, ಅವರ ಸಾಂಸ್ಕೃತಿಕ ಮತ್ತು ನಾಗರಿಕ ಪ್ರಜ್ಞೆಗಳ ಕುರಿತು ವಿವರವಾಗಿ ಹೇಳಿದರು. ಅಡಿಕೆ, ಬಾಳೆ, ತೆಂಗು ಈ ಭಾಗದ ಜನರ ಮೂಲ ಕೃಷಿ ಚಟುವಟಿಕೆಗಳಾದರೆ ಬಿದಿರು ಮತ್ತು ಶುಂಠಿ ರಫ್ತಿಯಲ್ಲಿ ಮಿಜೋರಾಂ ದೇಶದಲ್ಲಿಯೇ ಮೊದಲ ರಾಜ್ಯವೆನಿಸಿದೆ. ರೈಲು ಯೋಜನೆಯಿಂದ ಇನ್ನಷ್ಟು ಸಂಪರ್ಕ ಸಾಧ್ಯವಾಗಲಿದ್ದು ಇದರಿಂದ ಪ್ರಜಾಹಿತ ಸೌಲಭ್ಯಗಳು ಹೆಚ್ಚಿನ ಪ್ರಮಾಣದಲ್ಲಿ ದೊರೆಯಲಿವೆ ಎಂದರು.

ಐಜ್ಞಾಲ್ ನ ಗುಡ್ಡಗಾಡು ಪ್ರದೇಶದ ಗ್ರಾಮೀಣ ಜನರಿಗೆ ರೈಲು ಯೋಜನೆ ಸಾಕಾರಗೊಂಡಿದ್ದಕ್ಕೆ ಸಾಕಷ್ಟು ಸಂಭ್ರಮ ವ್ಯಕ್ತಪಡಿಸಿದ್ದು ಇದರಿಂದ ಹೊರ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಅನುಕೂಲವಾಗಲಿದೆ ಎಂದು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಮಿಜೋರಾಂನ ಗುಡ್ಡಗಾಡು ಪ್ರದೇಶಗಳಲ್ಲಿ ಒಮ್ಮೆ ವಾಸ್ತು ತಜ್ಞರು, ವಾಸ್ತು ಪ್ರಕಾರ ಮನೆಗಳನ್ನು ನಿರ್ಮಾಣ ಮಾಡಬೇಕೆನ್ನುವವರು ಭೇಟಿ ನೀಡಬೇಕಾದ ಸ್ಥಳವಾಗಿದೆ. ಅಲ್ಲಿನ ಜನರು ಪರಿಶ್ರಮ ಜೀವಿಗಳು, ಗುಡ್ಡದ ಶ್ರೇಣಿಗಳಲ್ಲಿ ಮನೆಗಳು ಅಂಟಿಕೊಂಡೇ ನಿರ್ಮಾಣಗೊಂಡಿವೆ. ಮನೆ ನಿರ್ಮಾಣ ಮಾಡುವ ಮುನ್ನ ತಳಪಾಯ ಹಾಕಲು ಸಿಮೆಂಟ್ ಗೋಡೆ, ಕಟ್ಟಿಗೆಗಳನ್ನು ಆಸರೆಯಾಗಿಟ್ಟು ಅದರ ಮೇಲೆ ತಮ್ಮ ಗೂಡನ್ನು ನಿರ್ಮಿಸಿಕೊಂಡಿದ್ದಾರೆ. ಪ್ರಕೃತಿ ಇವರ ಜೀವನ ಪ್ರೀತಿಗೆ ಸಾಥ್ ನೀಡುತ್ತಿರುವುದು ಸೋಜಿಗ.
ಕೃಷಿಯೇ ಪ್ರಧಾನವಾದ ಇಲ್ಲಿನ ಜನರು ತಮಗೆ ಸಿಗುವ ಅಲ್ಪ ಸ್ವಲ್ಪ ಹಣಕಾಸಿನ ಸ್ಥಿತಿಯಲ್ಲಿಯೇ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ನೈಸರ್ಗಿಕವಾಗಿ ಬೆಳೆಯು ತರಕಾರಿ ಸೊಪ್ಪುಗಳು, ಭತ್ತ, ಗೋಧಿ ಇನ್ನಿತರೆ ಆಹಾರ ಧಾನ್ಯಗಳನ್ನು ಯಾವುದೇ ರಾಸಾಯನಿಕ ಬೆರೆಸದೇ ಬೆಳೆಯುತ್ತಾರೆ. ಹೀಗಾಗಿ ಇಲ್ಲಿನ ಜನರು ಗಿಡ್ಡ ಹಾಗೂ ದಪ್ಪ, ಗಟ್ಟಿಮುಟ್ಟಾಗಿದ್ದಾರೆ. ಶತಮಾನ ಪೂರೈಸುವ ಬಹುತೇಕ ಜನರಿಗೆ ಇಲ್ಲಿನ ಪರಿಸರ, ಗಾಳಿ ಮತ್ತು ದೈನಂದಿನ ಆಹಾರ ಪದ್ಧತಿಯೇ ಸಾಕ್ಷಿಯಾಗಿದೆ. ಇರುವುದರಲ್ಲಿಯೇ ತಿಂದುಂಡು ಸಂತೃಪ್ತ ಜೀವನ ನಡೆಸುವ ಇಲ್ಲಿನ ಜನರ ಬದುಕು ಅತ್ಯಂತ ಸರಳ. ಮುಂಜಾನೆ 5 ಗಂಟೆಗೆ ಬೆಳಕು ಹರಿದರೆ, ಸಂಜೆ 5ಕ್ಕೆ ಹೊತ್ತು ಮುಳುಗುತ್ತದೆ. ಸಂಜೆ 7ಕ್ಕೆಲ್ಲ ಅಂಗಡಿಮುಂಗಟ್ಟುಗಳನ್ನು ಬಾಗಿಲು ಹಾಕಿ ಜನರು ಮನೆ ಸೇರುತ್ತಾರೆ. ಶನಿವಾರ ಸಂಜೆ 6 ಗಂಟೆಗೆಲ್ಲ ಮಿಜೋರಾಂನ ಐಜ್ಞಾಲ್ ನಗರ ನಿರ್ಜನವಾಗಿರುತ್ತದೆ. ಇನ್ನು ಭಾನುವಾರ ಬಂತೆಂದರೆ ಸಾಕು, ಇಡೀ ಮಾರುಕಟ್ಟೆಯೇ ಭನಗುಡುತ್ತಿರುತ್ತದೆ. ಜನರು ಬೆಳಿಗ್ಗೆ 8 ಗಂಟೆಯಿಂದಲೇ ಪ್ರಾರ್ಥನಾ ಮಂದಿರಕ್ಕೆ ತೆರಳುತ್ತಾರೆ. ಆದರೆ, ಸಂಜೆಯಿಂದ ರಾತ್ರಿ 10-30ರವರೆಗೆ ಇಲ್ಲಿ ತರಕಾರಿ, ಹಣ್ಣು, ಹಂಪಲು, ಸೊಪ್ಪುಗಳನ್ನು ಮಾರಾಟ ಮಾಡಲಾಗುತ್ತಿದೆ.
ಇಡೀ ದೇಶದಲ್ಲಿಯೇ ಕೇರಳ ಹೊರತುಪಡಿಸಿದರೆ ಸಾಕ್ಷರತಾ ಪ್ರಮಾಣದಲ್ಲಿ ಮಿಜೋರಾಂ ದ್ವಿತೀಯ ಸ್ಥಾನದಲ್ಲಿದೆ. ಸರ್ಕಾರದ ಸಲಹೆಗಾರರು ಹೇಳುವ ಪ್ರಕಾರ ಜನಸಂಖ್ಯೆ ಕೇವಲ 10 ಲಕ್ಷ ಮಾತ್ರ. ವರ್ಷದ ಒಂಭತ್ತು ತಿಂಗಳು ಇಲ್ಲಿ ಮಳೆ ಆಗುತ್ತದೆ. ಮೂರು ತಿಂಗಳು ಮಾತ್ರ ಬಿಡುವಿನ ಸಮಯ. ಬೆಳಿಗ್ಗೆ ಮತ್ತು ಸಂಜೆ ನಗರ, ಹಳ್ಳಿಗಳ ಆಕಾಶದ ಮೇಲೆ ಮೋಡಗಳು ಚೆಲ್ಲಾಟವಾಡುತ್ತಿರುತ್ತವೆ. ಜನರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಮಗ್ನರಾಗಿರುತ್ತಾರೆ. ಐಜ್ಞಾಲ್ ನ ಜನರಿಗೆ ಸೋಲೋಮಾನ್ಸ್ ಟೆಂಪಲ್ ಪ್ರಾರ್ಥನಾ ಮಂದಿರವಾದರೆ, ಐಜ್ವಾಲ್ ಪೀಕ್ ರೆಸ್ಟೋರಾಂಟ್ ಮನರಂಜನೆ ಮತ್ತು ರಾತ್ರಿಯ ಹೊತ್ತು ಆಕಾಶ ಮಾರ್ಗವಾಗಿ ಐಜ್ಞಾಲ್ ನಗರ ವೀಕ್ಷಣೆ ಮಾಡುವ ಪ್ರದೇಶವಾಗಿದೆ. ಕಡಿದಾದ ಬೆಟ್ಟ, ಗುಡ್ಡಗಳ ಅಡಿಯಲ್ಲಿ ಕಿರಿದಾದ ರಸ್ತೆಗಳು ಇದ್ದು ಈ ನಗರದಲ್ಲಿ ಸಂಚರಿಸುವುದೇ ಒಂದು ವಿಶೇಷ ಅನುಭೂತಿ ಸಿಗುತ್ತದೆ.

ಮೋದಿ ಅವರ ರೈಲು ಯೋಜನೆ:
ಬೈರಾಬಿ - ಸೈರಾಂಗ್ ಹೊಸ ರೈಲು ಮಾರ್ಗ ಯೋಜನೆ ಸಂಕ್ಷಿಪ್ತ ಇತಿಹಾಸ:
2014ರ ನವೆಂಬರ್ 29 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಿಜೋರಾಂ ರಾಜ್ಯದಲ್ಲಿ ಬೈರಾಬಿಯಿಂದ ಸೈರಾಂಗ್ ತನಕ ಹೊಸ ರೈಲು ಮಾರ್ಗದ ಶಿಲಾನ್ಯಾಸ ಮಾಡಿದರು. 2016ರ ಮಾರ್ಚ್ 21ರಂದು ಅಸ್ಸಾಂನಿಂದ ಬೈರಾಬಿವರೆಗೆ ರೈಲು ಮಾರ್ಗವನ್ನು ಬ್ರಾಡ್ ಗೇಜ್‌ಗೆ ಪರಿವರ್ತನೆ ಮಾಡಲಾಗಿದ್ದು, ಮಿಜೋರಾಂನಲ್ಲಿ ಬೈರಾಬಿಗೆ ಮೊದಲ ಸರಕು ರೈಲು ತಲುಪಿತು. 2025ರ ಜೂನ್ 10ರಂದು ಹೋರ್ಟೋಕಿಯಿಂದ ಸೈರಾಂಗ್ ತನಕದ ಅಂತಿಮ ಹಂತವನ್ನು ಉದ್ಘಾಟನೆ ಮಾಡಿ 51.38 ಕಿ.ಮೀ ಮಾರ್ಗವನ್ನು ಪೂರ್ಣಗೊಳಿಸಲಾಯಿತು. ಇದರೊಂದಿಗೆ ಐಜಾಲ್ ನಗರವು ಮೊದಲ ಬಾರಿಗೆ ಭಾರತೀಯ ರೈಲ್ವೆ ಜಾಲಕ್ಕೆ ಸಂಪರ್ಕ ಹೊಂದಿತು.
ತಾಂತ್ರಿಕ ವಿವರಗಳು:
ಒಟ್ಟು ಯೋಜನೆ ಉದ್ದ 51.38 ಕಿ.ಮೀ., ಮಾರ್ಗ ಕೊಲಸಿಬ್ ಮತ್ತು ಐಜಾಲ್ ಜಿಲ್ಲೆಗಳ ಮೂಲಕ ಸಾಗುತ್ತದೆ. ವೇಗ ಸಾಮರ್ಥ್ಯ 100 ಕಿ.ಮೀ, ಗಂಟೆ, ಒಟ್ಟು ನಿಲ್ದಾಣಗಳು 4 ಇದ್ದು ಹೋರ್ಟೋಕಿ, ಕವನ್‌ಪುವಿ, ಮುಆಲ್ಖಾಂಗ್ ಮತ್ತು ಸೈರಾಂಗ್ ಎಲ್ಲವೂ ಮಿಜೋರಾಂನಲ್ಲಿವೆ. ಯೋಜನೆಯ ಒಟ್ಟು ವೆಚ್ಚ ರೂ 8071 ಕೋಟಿ.
ಯೋಜನೆಯ ವಿಶೇಷತೆಗಳು:
ಸಂಪೂರ್ಣ ರೈಲು ಮಾರ್ಗವು ದಟ್ಟ ಅರಣ್ಯ, ಕಠಿಣ ಗುಡ್ಡಗಾಡು ಮತ್ತು ಆಳವಾದ ಕಣಿವೆಗಳ ಮೂಲಕ ಸಾಗುತ್ತದೆ. 70 ಮೀ. ಗಿಂತಲೂ ಎತ್ತರದ 6 ಸೇತುವೆಗಳು (ಗರಿಷ್ಠ 114 ಮೀ). ಸವಾಲಿನ ಭೂವೈಜ್ಞಾನಿಕ ಪರಿಸ್ಥಿತಿಗಳಲ್ಲಿ 45 ಸುರಂಗಗಳು. ಎಲ್ಲಾ ಸುರಂಗಗಳಲ್ಲಿ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್ ಅಳವಡಿಸಲಾಗಿದೆ.
ಸೇತುವೆಗಳು:
ಒಟ್ಟು ಸೇತುವೆಗಳ ಉದ್ದ 11.78 ಕಿ.ಮೀ (23%), ಒಟ್ಟು ಸೇತುವೆಗಳು (ಆರ್ ಓ ಬಿ ಮತ್ತು ಆರ್ ಯು ಬಿ ಸೇರಿ) 153, ಸಣ್ಣ ಸೇತುವೆಗಳು 88, ಆರ್ ಓ ಬಿ ಮತ್ತು ಆರ್ ಯು ಬಿ 10, ದೊಡ್ಡ ಸೇತುವೆಗಳು 55.

ಸುರಂಗಗಳು:
ಒಟ್ಟು ಸುರಂಗಗಳು 45, ಒಟ್ಟು ಉದ್ದ 15.885 ಕಿ.ಮೀ (31%), ಅತಿದೊಡ್ಡ ಸುರಂಗ 1.868 ಕಿ.ಮೀ, ಸುರಂಗಗಳ ಮುಖಭಾಗಗಳಲ್ಲಿ ಮಿಜೋರಾಂ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲಾತ್ಮಕ ಚಿತ್ರಗಳು ಮೂಡಿಸಲ್ಪಟ್ಟಿವೆ. ಇವುಗಳಲ್ಲಿ ಮಿಜೋರಾಂ ಜನರ ಉಡುಪು, ಹಬ್ಬ, ಸಂಪ್ರದಾಯಗಳು, ಹಳ್ಳಿಗಳ ಜೀವನ ಶೈಲಿ, ಹಾಗೆಯೇ ರಾಜ್ಯದ ಸಸ್ಯಜೀವಿ ಮತ್ತು ಪ್ರಾಣಿಜೀವಿಗಳ ಚಿತ್ರಣ ನೀಡಲಾಗಿದೆ.
ಆಳವಾದ ಕಡಿತಗಳು:
ಸೇತುವೆ ಮತ್ತು ಸುರಂಗಗಳನ್ನು ಹೊರತುಪಡಿಸಿ 23.715 ಕಿ.ಮೀ (46%) ಮಾರ್ಗವು ಬಯಲಿನಲ್ಲಿ ಇದೆ. ಕೆಲವೆಡೆ 65 ಮೀ. ಆಳದ ಕಡಿತಗಳನ್ನು ಮಾಡಲಾಗಿದೆ. ಮಳೆಯಿಂದಾಗಿ ಭೂಕುಸಿತ ತಡೆಯಲು ಗುಡ್ಡಗಳನ್ನು ಸೂಕ್ತ ರಕ್ಷಣಾ ಯೋಜನೆಗಳೊಂದಿಗೆ ಬಲಪಡಿಸಲಾಗಿದೆ.
ಸವಾಲುಗಳು:
ಪ್ರತಿ ವರ್ಷ ಕೇವಲ 4-5 ತಿಂಗಳು (ನವೆಂಬರ್-ಮಾರ್ಚ್) ಮಾತ್ರ ಕೆಲಸ ಸಾಧ್ಯ; ಏಪ್ರಿಲ್-ಅಕ್ಟೋಬರ್ ಗಳು ಭಾರಿ ಮಳೆಯಿಂದ ಕಾರ್ಯ ನಿಂತುಹೋಗುತ್ತದೆ. ಕಷ್ಟದ ಗುಡ್ಡಗಾಡು, ಕಣಿವೆ, ಆಳವಾದ ಕಣಿವೆಗಳಲ್ಲಿ ಸುರಂಗಗಳು ಮತ್ತು ಎತ್ತರದ ಸೇತುವೆಗಳು ನಿರ್ಮಾಣ. ಶೇಲ್, ಸಿಲ್ಟ್ಸ್ಟೋನ್, ಸ್ಯಾಂಡ್‌ಸ್ಟೋನ್ ಹಗುರ ಕಲ್ಲುಗಳು ನೀರು ನುಗ್ಗುವಿಕೆ ಮತ್ತು ಕುಸಿತಕ್ಕೆ ಕಾರಣ. ಕೆಲಸದ ಸ್ಥಳಗಳಿಗೆ ಹೋಗುವ ರಸ್ತೆಗಳಲ್ಲಿ ಭೂಕುಸಿತ ಸಾಮಾನ್ಯ; ಸಣ್ಣ ಮಳೆಯಾದರೂ ರಸ್ತೆ ಜಾರಿ ಹೋಗಿ ಜನರು ಮತ್ತು ಸಾಮಗ್ರಿಗಳ ಚಲನೆ ಅಸಾಧ್ಯ. ಸ್ಥಳೀಯ ಕಾರ್ಮಿಕರ ಕೊರತೆ; ಇತರ ರಾಜ್ಯಗಳಿಂದ ಕಾರ್ಮಿಕರನ್ನು ತರಬೇಕಾಗುತ್ತದೆ. ಮರಳು, ಕಲ್ಲು ಚಿಪ್ಪು ಮುಂತಾದ ಸಾಮಗ್ರಿಗಳು ಮಿಜೋರಾಂನಲ್ಲಿ ಲಭ್ಯವಿಲ್ಲ; ಅಸ್ಸಾಂ, ಪಶ್ಚಿಮ ಬಂಗಾಳ, ಮೇಘಾಲಯ ಹಾಗೂ ಇತರ ರಾಜ್ಯಗಳಿಂದ ತರಬೇಕಾಗಿದೆ.

ಯೋಜನೆಯ ಲಾಭಗಳು:
ಐಜಾಲ್ ಜಿಲ್ಲೆಗೆ ಮೊದಲ ಬಾರಿಗೆ ರೈಲು ಸಂಪರ್ಕ. ಕೊಲಸಿಬ್ ಮತ್ತು ಐಜಾಲ್ ಜನರಿಗೆ ಕಡಿಮೆ ವೆಚ್ಚದಲ್ಲಿ ಸುಲಭ ಸಂಚಾರ; ಶಿಕ್ಷಣ ಮತ್ತು ಆರೋಗ್ಯ ಕೇಂದ್ರಗಳಿಗೆ (ಸಿಲ್ಚರ್, ಗೌಹಾಟಿ, ದೆಹಲಿ) ಉತ್ತಮ ಪ್ರವೇಶ. ಸರಕು ರೈಲು ಚಲನೆ ಸುಲಭವಾಗಿ ವ್ಯಾಪಾರ ಮತ್ತು ಲಾಜಿಸ್ಟಿಕ್ಸ್ ಚಟುವಟಿಕೆಗಳಿಗೆ ಉತ್ತೇಜನ. ಐಜಾಲ್ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಇಳಿಕೆ. ಬೈರಾಬಿ-ಸೈರಾಂಗ್ ಮಾರ್ಗದಲ್ಲಿ ಪ್ರಯಾಣ ಸಮಯ ರಸ್ತೆ ಮೂಲಕ 7 ಗಂಟೆಯಿಂದ ರೈಲು ಮೂಲಕ ಕೇವಲ 3 ಗಂಟೆಗೆ ಇಳಿಕೆ. ಸ್ಥಳೀಯ ಅರಣ್ಯ ಉತ್ಪನ್ನಗಳು, ಹಸ್ತಕಲೆಗಳು, ತೋಟಗಾರಿಕೆ ಉತ್ಪನ್ನಗಳ ಸಾಗಾಟ ಸುಲಭ.
ಸರಕು ಸಾಗಣೆ:
ಮಿಜೋರಾಂ ರಾಜ್ಯದ ಜನರಿಗೆ ಸರಕು ಮತ್ತು ಪ್ರಯಾಣದ ವೆಚ್ಚದಲ್ಲಿ ಇಳಿಕೆ. ಅಗತ್ಯ ವಸ್ತುಗಳ ನಿರಂತರ ಸರಬರಾಜು ಖಾತ್ರಿ. ಪ್ರಮುಖ ನಿಲ್ದಾಣಗಳಲ್ಲಿ ಗೂಡ್ಸ್ ಶೆಡ್ ನಿರ್ಮಾಣದಿಂದ ಉದ್ಯೋಗಾವಕಾಶಗಳು.

ಪರ್ಯಟನ ಪ್ರೋತ್ಸಾಹ:
2025 ರ ಆಗಸ್ಟ್ನಲ್ಲಿ ಐಆರ್‌ಸಿಟಿಸಿ ಮಿಜೋರಾಂ ಸರ್ಕಾರದೊಂದಿಗೆ 2 ವರ್ಷಗಳ ಅವಧಿಗೆ ಪ್ರವಾಸೋದ್ಯಮ ಪ್ರೋತ್ಸಾಹಕ್ಕಾಗಿ ಒಪ್ಪಂದ ಮಾಡಿಕೊಂಡಿದೆ. ಡಿಸ್ಕವರ್ ಓಇ ಬಿಯಾಂಡ್ ಗೌಹಾಟಿ - ವಿಶೇಷ ಪ್ರವಾಸಿ ರೈಲು - ಐಜ್ವಾಲ್ ಪ್ರಮುಖ ತಾಣ. ಸಂಯುಕ್ತ ಪ್ರಚಾರ, ಸುಲಭ ಪ್ರಯಾಣ ವ್ಯವಸ್ಥೆ ಮತ್ತು ಆಯ್ದ ಪ್ರವಾಸಿ ಪ್ಯಾಕೇಜ್‌ಗಳು. ಪ್ರವಾಸೋದ್ಯಮ ವೃದ್ಧಿಯಿಂದ ಸ್ಥಳೀಯ ಆತಿಥ್ಯ, ಹೋಟೆಲ್, ಮಾರ್ಗದರ್ಶಕ ಸೇವೆಗಳಲ್ಲಿ ಉದ್ಯೋಗಾವಕಾಶ. ಪ್ರವಾಸಿಗರಿಂದ ಹಸ್ತಕಲೆ, ವಸ್ತ್ರ, ಕೃಷಿ ವ್ಯಾಪಾರಗಳಿಗೆ ಉತ್ತೇಜನ.
ನಿಲ್ದಾಣಗಳು ಮತ್ತು ರಸ್ತೆಗಳಲ್ಲಿ ಮೂಲಸೌಕರ್ಯ ಸುಧಾರಣೆ ಮೂಲಕ ಆರ್ಥಿಕ ಅಭಿವೃದ್ಧಿಗೆ ಸಹಕಾರ.