ಭುವನೇಶ್ವರ: ಕೆಐಐಟಿ ಮತ್ತು ಕೆಐಎಸ್‌ಎಸ್‌ನ ಸಂಸ್ಥಾಪಕರಾದ ಡಾ. ಅಚ್ಯುತ ಸಮಂತ ಅವರು, ಭಾರತೀಯ ವಾಲಿಬಾಲ್ ಫೆಡರೇಶನ್‌ನ (ವಿಎಫ್‌ಐ) ಮುಖ್ಯ ಪೋಷಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ವಾರಣಾಸಿಯಲ್ಲಿ 72ನೇ ಸೀನಿಯರ್ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್- 2026 ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ಅಚ್ಯುತ ಸಮಂತ ಅವರು ಆಯ್ಕೆಯಾಗಿರುವುದು ವಿಶೇಷ. ಈ ಚಾಂಪಿಯನ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಚಾಲನೆ ನೀಡಿದ್ದರು.
ವಾರಣಾಸಿಯಲ್ಲಿ ನಡೆದ ಭಾರತೀಯ ವಾಲಿಬಾಲ್ ಫೆಡರೇಶನ್‌ನ ವಾರ್ಷಿಕ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ದೇಶದ ಎಲ್ಲಾ ರಾಜ್ಯಗಳ ವಾಲಿಬಾಲ್ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.
ಡಾ. ಸಮಂತ ಅವರು ಸದ್ಯ ಒಡಿಶಾ ವಾಲಿಬಾಲ್ ಅಸೋಸಿಯೇಷನ್‌ನ ಅಧ್ಯಕ್ಷರೂ ಆಗಿದ್ದಾರೆ.
ಪೂರ್ವ ನಿಗದಿತ ಕಾರ್ಯಕ್ರಮಗಳಿಂದಾಗಿ ವಾರಾಣಸಿಯಲ್ಲಿ ನಡೆದ ಸಭೆಗೆ ಸಮಂತ ಅವರು ಹಾಜರಾಗಿರಲಿಲ್ಲ. ಸಮಂತ ಅವರನ್ನು ವಿಎಫ್‌ಐ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ದೂರವಾಣಿ ಮೂಲಕ ಸಂಪರ್ಕಿಸಿ ಒಪ್ಪಿಗೆ ಪಡೆದರು. ನಂತರ, ಫೆಡರೇಶನ್ ಮುಖ್ಯ ಪೋಷಕರಾಗಿ ಆಯ್ಕೆ ಮಾಡಿತು.
ಕ್ರೀಡಾ ಕ್ಷೇತ್ರಕ್ಕೆ ವಿಶೇಷವಾಗಿ ವಾಲಿಬಾಲ್‌ಗೆ ಸಮಂತ ಅವರು ಬಹಳ ಕಾಲದಿಂದ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಇದನ್ನು ಪರಿಗಣಿಸಿ ಫೆಡರೇಶನ್ ಅವರ ಹೆಸರನ್ನು ಆಯ್ಕೆ ಮಾಡಿತು. ನಾಲ್ಕು ವರ್ಷಗಳ ಅವಧಿಗೆ ಮುಖ್ಯ ಪೋಷಕ ಹುದ್ದೆಯನ್ನು ಅಲಂಕರಿಸಲಿದ್ದಾರೆ.
ಕೆಐಐಟಿಯಲ್ಲಿ ಯುವ ವಾಲಿಬಾಲ್ ಚಾಂಪಿಯನ್‌ಶಿಪ್
ಕೆಐಐಟಿಯಲ್ಲಿ ರಾಷ್ಟ್ರೀಯ ಯುವ ವಾಲಿಬಾಲ್ ಚಾಂಪಿಯನ್‌ಶಿಪ್ ಅನ್ನು ಆಯೋಜಿಸಲು ಜನರಲ್ ಕೌನ್ಸಿಲ್ ಇದೇ ವೇಳೆ ಅನುಮೋದನೆ ನೀಡಿತು. ರಾಷ್ಟ್ರೀಯ ಮಟ್ಟದಲ್ಲಿ ವಾಲಿಬಾಲ್ ನಲ್ಲಿ ಒಡಿಶಾ ವಹಿಸುತ್ತಿರುವ ಪಾತ್ರಕ್ಕೆ ಇದರಿಂದ ಇನ್ನಷ್ಟು ಬಲ ಬಂದಿದೆ.
ಪ್ರತಿಷ್ಠಿತ ಗ್ರ್ಯಾಂಡ್ ಕ್ರಾಸ್ ಪ್ರಶಸ್ತಿ
ಡಾ. ಸಮಂತಾ ಅವರಿಗೆ ಪ್ರತಿಷ್ಠಿತ ಗ್ರ್ಯಾಂಡ್ ಕ್ರಾಸ್ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ಮತ್ತು ಅವರನ್ನು ಎಫ್‌ಐವಿಬಿ ವಾಲಿಬಾಲ್ ಫೌಂಡೇಶನ್ ಕೌನ್ಸಿಲ್‌ನ ಸದಸ್ಯರನ್ನಾಗಿ ನೇಮಿಸಿದ್ದಕ್ಕಾಗಿ ಅಂತರರಾಷ್ಟ್ರೀಯ ವಾಲಿಬಾಲ್ ಫೆಡರೇಶನ್ (ಎಫ್‌ಐವಿಬಿ) ಗೆ ಭಾರತೀಯ ವಾಲಿಬಾಲ್ ಫೆಡರೇಶನ್ ಇದೇ ವೇಳೆ ಕೃತಜ್ಞತೆಯನ್ನು ವ್ಯಕ್ತಪಡಿಸಿತು.
ಡಾ. ಸಮಂತ ಕೃತಜ್ಞತೆ
ಭಾರತೀಯ ವಾಲಿಬಾಲ್ ಫೆಡರೇಶನ್‌ನ (ವಿಎಫ್‌ಐ) ಮುಖ್ಯ ಪೋಷಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದಕ್ಕೆ ಡಾ. ಸಮಂತ ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಈ ಹುದ್ದೆಯನ್ನು ವಹಿಸಿಕೊಳ್ಳುವುದು ಅತ್ಯಂತ ಸಂತಸ ಮತ್ತು ಗೌರವ ತಂದಿದೆ. ವಿಎಫ್‌ಐ ಅಧ್ಯಕ್ಷ ವೀರೇಂದ್ರ ಕನ್ವರ್, ಪ್ರಧಾನ ಕಾರ್ಯದರ್ಶಿ ರಮಾನಂದ ಚೌಧರಿ ಮತ್ತು ಭಾರತೀಯ ವಾಲಿಬಾಲ್ ಫೆಡರೇಶನ್‌ನ ಎಲ್ಲಾ ಸದಸ್ಯರಿಗೆ ಕೃತಜ್ಞತೆಗಳು. ಅಲ್ಲದೆ ಒಡಿಶಾ ವಾಲಿಬಾಲ್ ಅಸೋಸಿಯೇಷನ್‌ಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
"ವಾಲಿಬಾಲ್ ನನ್ನ ಹೃದಯಕ್ಕೆ ಹತ್ತಿರವಾಗಿದೆ. ನೀವೆಲ್ಲ ನನ್ನ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ನಂಬಿಕೆಗೆ ಚಿರಋಣಿ. ತಳಮಟ್ಟದಿಂದ ವಾಲಿಬಾಲ್ ಅನ್ನು ಹೆಚ್ಚು ಪ್ರಚುರಪಡಿಸಲು ನಾನು ಸದಾ ಪ್ರಯತ್ನಿಸಿದ್ದೇನೆ. ವಿಎಫ್‌ಐ ನೀಡುತ್ತಾ ಬಂದಿರುವ ಪ್ರೋತ್ಸಾಹವನ್ನು ಮರೆಯಲಾಗದು. ಒಡಿಶಾ ಮತ್ತು ಭಾರತದಾದ್ಯಂತ ವಾಲಿಬಾಲ್‌ನ ಪ್ರಚಾರ ಮತ್ತು ಬೆಳವಣಿಗೆಗಾಗಿ ಇನ್ನಷ್ಟು ಬದ್ಧತೆಯಿಂದ ಕೆಲಸ ಮಾಡುತ್ತೇನೆ" ಎಂದು ಸಮಂತ ಅವರು ತಿಳಿಸಿದ್ದಾರೆ.