ಕೊಪ್ಪಳ : ಮುಂದಿನ ಪೀಳಿಗೆಗಾಗಿ ಗಿಡಿಗಳನ್ನು ನೆಟ್ಟು, ಉಳಿಸಿ ಬೆಳಸಿ ಎಂದು ಕೊಪ್ಪಳದ ಆರಾಧ್ಯದೈವ ನಡೆದಾಡುವ ದೇವರು ಅಭಿನವ ಗವಿಸಿದ್ದೇಶ್ವರ ಶ್ರೀಗಳು ಜಾಗೃತಿ ಮೂಡಿಸುವ ಅಭಿಯಾನ ಮಾಡುವುದಲ್ಲದೆ, ಮಠದ ಆವರಣದಲ್ಲಿ ಒಂದೇ ಒಂದು ಗಿಡವನ್ನು ಕಡಿಯದೇ ಗಿಡಗಳನ್ನು ಉಳಿಸಿ ಮಠದ ಕಾಮಗಾರಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅಷ್ಟೊಂದು ಪರಿಸರ ಉಳಿವಿಗಾಗಿ ಶ್ರೀಗಳು ಶ್ರಮಿಸುತ್ತಿದ್ದರೆ, ಇತ್ತ ಪರಿಸರ, ಗಿಡಿ, ಮರಗಳ ಮಹತ್ವ ಅರಿಯದ ಅಜ್ಞಾನಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಬೆಳೆದು ನಿಂತಿದ್ದ ಬೃಹತ್ ಮರಗಳನ್ನು ನೆಲಸಮ ಮಾಡಿರುವುದು ಸಾಕ್ಷಿಸಮೇತ ಬೆಳಕಿಗೆ ಬಂದಿದೆ.
ಹೌದು! ತಾಲೂಕಿನ ಜಿಲ್ಲಾಡಳಿತ ಭವನದ ಹಿಂಭಾಗ ಹಾಗೂ ಬೈಪಾಸ್ ರಾಷ್ಟ್ರೀಯ ಹೆದ್ದಾರಿ ಬಳಿಯ ಗೃಹಮಂಡಳಿ ಇಲಾಖೆಯಿಂದ ಸುಮಾರು 56 ಎಕರೆ ಪ್ರದೇಶದಲ್ಲಿ ನಿವೇಶನ ಮತ್ತು ಸೇವೆಗಳ ಯೋಜನೆಯಲ್ಲಿ ಬಡವಾಣೆ ಅಭಿವೃದ್ಧಿ ಪಡಿಸುವ ಕಾಮಗಾರಿ ನಡೆಯುತ್ತಿದೆ, ಆದರೆ ನಿವೇಶನಗಳ ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಬೃಹತ್ ಮರಗಳ ಮಾರಣಹೋಮ ಮಾಡಲಾಗಿದೆ.ಸುಮಾರು 50 ಕ್ಕೂ ಹೆಚ್ವು ಮರಗಳನ್ನು ಈಗಾಗಲೇ ನೆಲಸಮ ಮಾಡಿ ಸಮತಟ್ಟು ಮಾಡಲಾಗಿದ್ದು, ಕಡಿದ ಮರಗಳು ಸಹ ಸಾಗಾಟ ಮಾಡಲಾಗಿದೆ ಎನ್ನುವ ಆರೋಪ ಸಾಕ್ಷಿಸಮೇತ ಬಹಿರಂಗವಾಗಿದೆ

ಪ್ರಾದೇಶಿಕ ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ಗೃಹಮಂಡಳಿ ನಿವೇಶನ ಪ್ರದೇಶದಲ್ಲಿ ಈ ಹಿಂದೆ ನೆಟ್ಟಿದ ಗಿಡಗಳು ಇದೀಗ ಬೃಹತ್ ಮರಗಳಾಗಿ ಬೆಳೆದಿದ್ದವು, ಮುಂದೆ ನಿವೇಶನದಲ್ಲಿ ಮನೆಕಟ್ಟಿಕೊಳ್ಳುವವರಿಗೆ ನೆರಳು, ಗಾಳಿ ಕೊಡುವಂತಹ ಹಾಗೂ ಪಕ್ಷಿಗಳಿಗೆ ಆಶ್ರಯ ನೀಡುತ್ತಿದ್ದ ಮರಗಳನ್ನು ಕಾಮಗಾರಿ ಪಡೆದ ಗುತ್ತಿಗೆದಾರ ಕೆವಿ ಪ್ರಸಾದ ರೆಡ್ಡಿ ಮರಗಳನ್ನು ಕಡಿದು ನೆಲಸಮ ಮಾಡಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದೇ, ಜಿಲ್ಲಾಡಳಿತ ಅಧಿಕಾರಿಗಳ ಗಮನಕ್ಕೂ ಮಾಹಿತಿ ನೀಡದೆ ಗೃಹಮಂಡಳಿಯ ನಿವೇಶನದ ಜಾಗೆಯಲ್ಲಿ ಹತ್ತರಿಂದ ಹದಿನೈದು ಅಡಿ ಗುಂಡಿ ತೆಗೆದು ಮಣ್ಣು ಹಾಗೂ ಬೃಹತ್ ಕಲ್ಲು ಬಂಡೆಗಳನ್ನು ಅಗೆದು ಕಾಮಗಾರಿಗೆ ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪವನ್ನು ಸುತ್ತಮುತ್ತ ಗ್ರಾಮಸ್ಥರು ಮಾಡಿದ್ದಾರೆ.

ಇಷ್ಟೇ ಅಲ್ಲ, ಕಾಮಗಾರಿಯನ್ನು ಗುತ್ತಿಗೆ ಪಡೆದ ಗುತ್ತಿಗೆದಾರ ಗುಣಮಟ್ಟ ಕಾಮಗಾರಿ ಮಾಡದೇ ಕಳಪೆಮಟ್ಟದ ಕಾಮಗಾರಿಯನ್ನು ಮಾಡುತ್ತಿದ್ದಾನೆ ಎನ್ನುವುದು ಕೆಲವರು ಅಧಿಕಾರಿಗಳ ಗಮನಕ್ಕೆ ತಂದ್ರೂ, ಯಾವುದೇ ಅಧಿಕಾರಿಗಳು ಕಾಮಗಾರಿ ಪರಿಶೀಲನೆ ಗೋಜಿಗೆ ಹೋಗುತ್ತಿಲ್ಲ ಎನ್ನುವುದು ಸದ್ಯ ಕೇಳು ಬರುತ್ತಿರುವ ಆರೋಪ

ಒಟ್ಟಾರೆ ಬೆಳೆದು ನಿಂತಿದ್ದ ಮರಗಳ ಮಾರಣಹೋಮ ಒಂದಕಡೆಯಾದ್ರೆ, ಇನ್ನೊಂದಡೆ ಕಳಪೆ ಕಾಮಗಾರಿ ನಡೆಯುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಮಾತ್ರ ಇದ್ಯಾವುದರ ತಲೆ ಕಡೆಸಿಕೊಳ್ಳುತ್ತಿಲ್ಲ ಎನ್ನುವುದು ಸ್ಥಳೀಯರ ಆರೋಪ