ಬಳ್ಳಾರಿ : ನಗರದ ಅಂದ್ರಾಳ್ ಪ್ರದೇಶದಲ್ಲಿ ಕೌಟುಂಬಿಕ ಕಲಹ ಭೀಕರ ದುರಂತಕ್ಕೆ ಕಾರಣವಾಗಿದ್ದು, ಪತ್ನಿ ಹಾಗೂ ಏಳು ತಿಂಗಳ ಹೆಣ್ಣು ಮಗುವನ್ನು ಹತ್ಯೆ ಮಾಡಿರುವ ಆರೋಪ ಪತಿಯ ವಿರುದ್ಧ ಕೇಳಿಬಂದಿದೆ.
ಮೃತರನ್ನು ರಾಜೇಶ್ವರಿ ಹಾಗೂ ಏಳು ತಿಂಗಳ ಆಶ್ಬಿನಿ ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆ ಪತಿ ಹೊನ್ನೂರುಸ್ವಾಮಿ ಸುತ್ತಿಗೆಯಿಂದ ಹಲ್ಲೆ ನಡೆಸಿ ಇಬ್ಬರನ್ನೂ ಹತ್ಯೆ ಮಾಡಿರುವುದಾಗಿ ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ.
ಘಟನೆ ನಡೆದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸುದ್ದಿ ತಿಳಿಯುತ್ತಿದ್ದಂತೆ ಎಪಿಎಂಸಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಬಂಧನಕ್ಕಾಗಿ ಶೋಧ ಕಾರ್ಯ ಆರಂಭಿಸಿದ್ದು, ಘಟನೆಯ ನಿಖರ ಕಾರಣ ಕುರಿತು ತನಿಖೆ ಮುಂದುವರಿದಿದೆ.
ಈ ದುರ್ಘಟನೆ ಸ್ಥಳೀಯರಲ್ಲಿ ತೀವ್ರ ಆಘಾತ ಉಂಟುಮಾಡಿದ್ದು, ಕೌಟುಂಬಿಕ ಕಲಹ ಇಂತಹ ದುರಂತಕ್ಕೆ ಕಾರಣವಾಗಿರುವುದು ವಿಷಾದನೀಯ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.