ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ, ಗೌರವ ಹಾಳಾಗಿ ಹೋಗಿದೆ. ಅದನ್ನು ಮರುಸ್ಥಾಪಿಸಿ, ಸಾಹಿತ್ಯ ಚಟುವಟಿಕೆ, ಕನ್ನಡಪರ ಚಿಂತನೆಗೆ ಒತ್ತು ಕೊಡಲಾಗುವುದು ಎಂದು ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಸಾಹಿತಿ, ಕನ್ನಡಪರ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನಕ್ಕೆ 'ನಾಡು - ನುಡಿ ಜಾಗೃತ ಸಮಿತಿ'ಯಿಂದ ಅಭ್ಯರ್ಥಿಯನ್ನು ಘೋಷಿಸಿ ನಂತರದ ಗಾಂಧಿ ಭವನದಲ್ಲಿ ನಡೆದ ಕಸಾಪ ಸದಸ್ಯರು, ಹೋರಾಟಗಾರರ ಸಮಾಲೋಚನಾ ಸಭೆಯಲ್ಲಿ ಶನಿವಾರ ಅವರು ಮಾತನಾಡಿದರು.
ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಕಸಾಪದ ಸಾಹಿತ್ಯ ಚಟುವಟಿಕೆ, ಪ್ರಕಟಣೆಗಳಿಗೆ ಹಿನ್ನೆಡೆಯಾಗಿದೆ. ಬೈಲಾ ತಿದ್ದುಪಡಿ ಮೂಲಕ ಅಧ್ಯಕ್ಷರು ಸಾರ್ವಭೌಮತ್ವ ಪಡೆದು, ನಾಡು ನುಡಿಯ ಕಾಳಜಿಯನ್ನೆ ಮರೆತರು. ಮುಂದೆ ಕಸಾಪದ ಕೆಲಸ ಮಾಡಲು ಜಾತಿ ಅಡ್ಡಿಯಾಗಬಾರದು. ಅಭ್ಯರ್ಥಿಯ ಸಾಹಿತ್ಯ, ನಾಡು ನುಡಿಯ ಹೋರಾಟ, ಅರ್ಹತೆ ಮುಖ್ಯವಾಗಬೇಕು ಎಂದು ಅಭಿಪ್ರಾಯಿಸಿದರು
ಮುಂಬರುವ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ ಯಾವುದೇ ರಾಜಕೀಯ ಪಕ್ಷಗಳ ಹಸ್ತಕ್ಷೇಪ ಇಲ್ಲದೆ ನಡೆಯಬೇಕು. ಕನ್ನಡ, ಕನ್ನಡಿಗ, ಕರ್ನಾಟಕದ ಸಮಸ್ಯೆಗೆ ಪರಿಷತ್ತು ದನಿಯಾಗಬೇಕಿರುವುದರಿಂದ ಯಾವ ಪಕ್ಷವೂ ಮೂಗು ತೂರಿಸುವ ಅಗತ್ಯ ಇಲ್ಲ ಎಂದು ಹಿರಿಯ ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಕರೆ ನೀಡಿದರು.
ಕನ್ನಡಿಗರ ಅಸ್ಮಿತೆಗೆ ಸಾಕ್ಷಿಯಾಗಿರುವ ಕಸಾಪ ಈಚಿನ ವರ್ಷಗಳಲ್ಲಿ ವಿವಾದಕ್ಕೊಳಗಾಗಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ ಕನಸನ್ನು ನನಸು ಮಾಡಿ, ಅದರ ಪರಂಪರೆಯನ್ನು ಮರು ಸೃಷ್ಟಿಸಿ, ಇತಿಹಾಸವನ್ನು ಸ್ಮರಿಸಬೇಕು. ಪ್ರಾಮಾಣಿಕ ಸೇವೆ ಮಾಡುವ ಸಾಹಿತಿ, ಹೋರಾಟಗಾರರು ಮುಂದಿನ ದಿನಗಳಲ್ಲಿ ಕಸಾಪದ ಚುಕ್ಕಾಣಿ ಹಿಡಿಯಬೇಕು ಎಂದು ಕರೆ ನೀಡಿದರು.
ಕಸಾಪ ಅಧ್ಯಕ್ಷರಾಗಿ ಆಯ್ಕೆ ಆದವರು ಸರ್ಕಾರವನ್ನು ಓಲೈಸದೆ, ಭಾಷೆ, ನೆಲ, ಜಲದ ಬಗ್ಗೆ ಹೋರಾಡುವ ಮನೋಭಾವ ತೋರಬೇಕು. ಯಾವುದೇ ಕ್ಷೇತ್ರದ ಸಂಘ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವವರಿಗೆ ಸಾರ್ವಜನಿಕ ಲಜ್ಜೆ, ವಿನಯ, ಸೇವಾ ಮನೋಭಾವ ಇರಬೇಕು. ಪರಿಷತ್ತು ತಾನಾಗೆ ಹಾಳಾಗಿಲ್ಲ. ಅಲ್ಲಿ ಕೂತವರು ಕುಜ್ಜರಾಗಿ ಅಧಿಕಾರ ನಡೆಸಿದರು ಎಂದು ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶಗೌಡ ಹೇಳಿದರು.
.ಸಭೆಯಲ್ಲಿ ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್, ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು, ಸಾಹಿತಿಗಳಾದ ಡಾ. ಬಂಜಗೆರೆ ಜಯಪ್ರಕಾಶ, ಚಂದ್ರಶೇಖರ ತಾಳ್ಯ, ಡಾ. ಎಚ್.ಎಲ್. ಪುಷ್ಪ, ಮಲ್ಲಿಕಾರ್ಜುನ ಕಡಕೋಳ, ಆರ್ ಜಿ ಹಳ್ಳಿ ನಾಗರಾಜ, ಕೃಷ್ಣ ಮಾಸಡಿ, ಎನ್. ಆರ್. ನಂಜುಂಡೇಗೌಡ, ರುದ್ರಪ್ಪ ಹನಗವಾಡಿ, ಸಂಘಟಕರಾದ ಮಂಜುನಾಥ ಶಿವಮೊಗ್ಗ, ಸಿ.ಕೆ. ರಾಮೇಗೌಡ, ಶಂಕರ ಹೂಗಾರ ಮೊದಲಾದವರು ಉಪಸ್ಥಿತರಿದ್ದರು.