ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ.
ಸಿರುಗುಪ್ಪ: ತಾಲೂಕಿನ ಕುಡುದರಹಾಳ್ ಗ್ರಾಮದ ‘ರಾಯಲ್ ಬೇಕ್ಸ್’ ಬೇಕರಿಯಲ್ಲಿ ಫಂಗಸ್ (ಬೂಜು) ಬಂದಿರುವ ಅತ್ಯಂತ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿರುವುದು ಸಾಕ್ಷಿ ಸಮೇತ ಬೆಳಕಿಗೆ ಬಂದಿದೆ. ಸಾರ್ವಜನಿಕರ ಆರೋಗ್ಯದ ಜೊತೆ ಮುಕ್ತವಾಗಿ ಚೆಲ್ಲಾಟವಾಡುತ್ತಿರುವ ಈ ಬೇಕರಿ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮಾತ್ರ ಉಡಾಫೆ ಉತ್ತರ ನೀಡುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ವರದಿಯಾಗುತ್ತಿರುವ ಸಾಲು ಸಾಲು ಪ್ರಕರಣಗಳು: ಕೊತ್ತಲಚಿಂತ ಗ್ರಾಮದ ಗ್ರಾಹಕರಾದ ಸತ್ಯನಾರಾಯಣರೆಡ್ಡಿ ಎಂಬುವವರು ನಿನ್ನೆ ಬೆಳಿಗ್ಗೆ ತಮ್ಮ ವಯಸ್ಸಾದ ತಂದೆಗೆ ತಿನ್ನಿಸಲು ಈ ಬೇಕರಿಯಿಂದ ಬನ್ ಖರೀದಿಸಿದ್ದರು. ಆದರೆ, ಸಂಜೆಯಾಗುವಷ್ಟರಲ್ಲೇ ಆ ಬನ್ ಪೂರ್ತಿಯಾಗಿ ಬೂಜು ಹಿಡಿದಿದೆ. "ಇಲ್ಲಿ ಮಾರಾಟ ಮಾಡುವ ಖಾದ್ಯ ಪದಾರ್ಥಗಳು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿವೆ" ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಇದೇ ಬೇಕರಿಯ ಕಳಪೆ ದಂದೆಗೆ ಮತ್ತೊಂದು ತಾಜಾ ಸಾಕ್ಷಿ ಎಂಬಂತೆ ಭೈರಗಾಮದಿನ್ನೆ ಗ್ರಾಮದ ನಿವಾಸಿಯಾದ ಆರ್.ಪಿ.ಮಂಜುನಾಥ್ ಎಂಬುವವರು ನಿನ್ನೆ ಸಂಜೆ ತಮ್ಮ ಮಕ್ಕಳಿಗೆ ತಿನ್ನಿಸಲು ಇದೇ ರಾಯಲ್ ಬೇಕ್ಸ್ ಬೇಕರಿಯಿಂದ ಬ್ರೆಡ್ ಖರೀದಿಸಿದ್ದರು. ಆದರೆ ಇಂದು ಬೆಳಿಗ್ಗೆ ನೋಡುವಷ್ಟರಲ್ಲಿ ಆ ಬ್ರೆಡ್ ನಡುಭಾಗದಲ್ಲಿ ಹಸಿರು ಮತ್ತು ಹಳದಿ ಬಣ್ಣದ ವಿಷಕಾರಿ ಫಂಗಸ್ (ಬೂಜು) ಆವರಿಸಿರುವುದು ಚಿತ್ರದಲ್ಲಿ ಸ್ಪಷ್ಟವಾಗಿ ಸಾಕ್ಷಿ ಸಮೇತ ಕಂಡುಬಂದಿದೆ. ಮಕ್ಕಳ ಆರೋಗ್ಯಕ್ಕೆ ಮಾರಕವಾಗಬಲ್ಲ ಇಂತಹ ಪದಾರ್ಥಗಳನ್ನು ಬೇಕರಿ ಯಾವುದೇ ಹಿಂಜರಿಕೆಯಿಲ್ಲದೆ ಮಾರಾಟ ಮಾಡುತ್ತಿದೆ.

ಈ ಗಂಭೀರ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಮಾರಕವಾಗಿರುವ ಸಮಸ್ಯೆಯ ಕುರಿತು ತಾಲೂಕು ಹೆಲ್ತ್ ಇನ್ಸ್ಪೆಕ್ಟರ್‌ಗಳಾದ ಶ್ರೀನಿವಾಸ್ ಮತ್ತು ಸ್ವರ್ಣಲತಾ ಅವರನ್ನು ಸಂಪರ್ಕಿಸಿದಾಗ, ಅವರು ಅತ್ಯಂತ ಬೇಜವಾಬ್ದಾರಿಯ ಉತ್ತರ ನೀಡಿದ್ದಾರೆ. "ಈ ಬೇಕರಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ" ಎಂದು ಹೇಳುವ ಮೂಲಕ ಇಬ್ಬರೂ ಅಧಿಕಾರಿಗಳು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಂಡಿದ್ದಾರೆ.ಒಂದೆಡೆ ಕಳಪೆ ಆಹಾರ ತಿಂದು ಮಕ್ಕಳು ಮತ್ತು ವೃದ್ಧರು ಆಸ್ಪತ್ರೆ ಸೇರುವ ಭೀತಿಯಲ್ಲಿದ್ದರೆ, ಇನ್ನೊಂದೆಡೆ ಆರೋಗ್ಯ ಇಲಾಖೆಯ ಅಧಿಕಾರಿಗಳು ವ್ಯಾಪ್ತಿಯ ನೆಪ ಹೇಳಿ ಕಾಲಹರಣ ಮಾಡುತ್ತಿದ್ದಾರೆ. ಇನ್ನಾದರೂ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಉನ್ನತ ಅಧಿಕಾರಿಗಳು ಎಚ್ಚೆತ್ತುಕೊಂಡು, ಕುಡುದರಹಾಳ್ ಗ್ರಾಮದ ರಾಯಲ್ ಬೇಕ್ಸ್ ಬೇಕರಿಯ ಕಳಪೆ ಆಹಾರದ ದಂದೆಗೆ ಬೀಗ ಜಡಿದು, ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಮುಂದಾಗಬೇಕಿದೆ.