ಕವಿತಾಳ: ಪಟ್ಟಣ ಸಮೀಪದ ಚಿಂಚರಿಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆ. ತಿಮ್ಮಾಪುರ್ ಗ್ರಾಮದಲ್ಲಿ ಕೀಟನಾಶಕವನ್ನು ಒಳಗೊಂಡಿರುವ ತರಕಾರಿ ಸೇವಿಸಿ ಒಂದೇ ಕುಟುಂಬದ ಮೂವರೂ ಸಾವನ್ನುಪ್ಪಿರುವ ಘಟನೆ ನಡೆದಿದೆ.
ಕಳೆದ ರಾತ್ರಿ ರೊಟ್ಟಿ, ಚವಳೆಕಾಯಿ ಪಲ್ಯ, ಅನ್ನ, ಸಾಂಬಾರ್ ಸೇವಿಸಿದ್ದ ಕುಟುಂಬದ ಸದಸ್ಯರಲ್ಲಿ ತಂದೆ ರಮೇಶ(35), ಮಗಳು ನಾಗಮ್ಮ(8), ದೀಪಾ( 6) ಸಾವನ್ನಪ್ಪಿದ್ದಾರೆ. ಉಳಿದಂತೆ ಅಸ್ವಸ್ಥಗೊಂಡಿದ್ದ ಮೂರು ಮಕ್ಕಳು, ಪತ್ನಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪತ್ನಿ ಪದ್ಮಾವತಿ(34) ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಇನ್ನೂ ಪದ್ಮಾವತಿಯನ್ನು ನಗರದ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಕೃಷ್ಣ, ಚೈತ್ರ ಎಂಬ ಮತ್ತಿಬ್ಬರು ಮಕ್ಕಳನ್ನು ಲಿಂಗಸುಗೂರು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಊಟ ಮಾಡಿ ಮಲಗಿದ ಕೆಲವೇ ಕ್ಷಣಗಳಲ್ಲಿ ಹೊಟ್ಟೆನೋವು ಕಾಣಿಸಿಕೊಂಡಿದೆ. ಕುಟುಂಬದ ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಬೆಳಗಿನ ಜಾವ ತಂದೆ ರಮೇಶ್, ಮಗಳು ನಾಗಮ್ಮ ಸಾವನ್ನಪ್ಪಿದ್ದರು.
ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಘಟನೆ ಗ್ರಾಮದಲ್ಲಿ ಆತಂಕ ಮೂಡಿಸಿದೆ.