ಹರಿಹರ ಘಟಕಕ್ಕೆ ಸೇರಿದ ಸಾರಿಗೆ ಬಸ್ ಬಳ್ಳಾರಿಗೆ ಹೋಗುತ್ತಿತ್ತು. ಕೊಟ್ಟೂರಿನಿಂದ ಕೂಡ್ಲಿಗಿಗೆ ಬರುವ ರಸ್ತೆಯಲ್ಲಿನ ಮಲ್ಲನಾಯಕಹಳ್ಳಿ ಬಳಿ ಬಸ್ ಚಾಲಕ ರಾಮಲಿಂಗಪ್ಪ ಕೂಡ್ಲಿಗಿ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಮಂಜುನಾಥ ಹಾಗೂ ಇನ್ನೊಬ್ಬ ಕಾನ್‌ಸ್ಟೆಬಲ್ ಇದ್ದ ಬೈಕ್‌ನ್ನು ಹಿಂದಿಕ್ಕಿದ್ದಾರೆ. ಇನ್ನೇನು ಬೈಕ್ ಅನ್ನು ಹಿಂದಿಕ್ಕಬೇಕು ಅನ್ನುವಷ್ಟರಲ್ಲಿ ಎದುರಿನಿಂದ ಕಾರೊಂದು ಬಂದಿದೆ. ಕೂಡಲೇ ಎಚ್ಚೆತ್ತ ಸಾರಿಗೆ ಚಾಲಕ ರಾಮಲಿಂಗಪ್ಪ ಬಸ್ ಅನ್ನು ಎಡಕ್ಕೆ ಎಳೆದುಕೊಂಡಿದ್ದಾರೆ. ಈ ವೇಳೆ ಬಸ್ ನ ಹಿಂಭಾಗ ಬೈಕ್ ನ ಹ್ಯಾಂಡಲ್ ಗೆ ಚೂರು ಟಚ್ ಆಗಿದೆ.

ಈ ವೇಳೆ ಏನಾಯ್ತು ಎಂದು ಚಾಲಕ ಮಿರರ್ ಮೂಲಕ ವೀಕ್ಷಿಸಿದ್ದಾರೆ, ಆದರೆ ಏನು ಕಾಣದ ಹಿನ್ನಲೆ ಮುಂದೆ ಸಾಗಿದ್ದಾರೆ. ಇದರಿಂದ ಸಿಟ್ಟಾದ ಕೂಡ್ಲಿಗಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಸ್ಟೇಬಲ್ ಮಂಜುನಾಥ್ ಗಜಾಪೂರ ಬಳಿ ಬಸ್ ಅನ್ನು ನಿಲ್ಲಿಸಿದ್ದಾರೆ. ಬಳಿಕ ಬಸ್ ಒಳಗೆ ಬಂದ ಮಂಜುನಾಥ್ ಏನನ್ನು ಪ್ರಶ್ನೆ ಮಾಡದೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾನೆ, ಅಲ್ಲದೇ ಕಾಲಿನಲ್ಲಿದ್ದ ಚಪ್ಪಲಿ ತೆಗೆದು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ. ಜೊತೆಗೆ ಚಾಲಕನ ಜೇಬಿನಲ್ಲಿದ್ದ ಮೊಬೈಲ್ ಅನ್ನು ಕಿತ್ತುಕೊಂಡು ಸ್ಟೇಷನ್ ಗೆ ಬಾ ಎಂದು ಹೇಳಿ ಬಸ್ ನಿಂದ ಇಳಿದು ಹೋಗಿದ್ದಾನೆ.
ನಂತರ ಬಸ್ಸಿನಿಂದ ಇಳಿದು ನಾನೇನು ತಪ್ಪು ಮಾಡಿಲ್ಲ. ದಯವಿಟ್ಟು ಮೊಬೈಲ್ ನೀಡುವಂತೆ ರಾಮಲಿಂಗಪ್ಪ ಕೇಳಿದ್ದಾರೆ. ಇದರಿಂದ ಮತ್ತಷ್ಟು ಕೆರಳಿದ ಮಂಜುನಾಥ ತನ್ನ ಕೈಯಲ್ಲಿದ್ದ ಹೆಲೈಟ್ ನಿಂದ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ. ಇನ್ನು ಈ ಘಟನೆಗೆ ಸಂಬAಧಪಟ್ಟAತೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹೆಡ್ ಕಾನ್ಸ್ ಸ್ಟೇಬಲ್ ಮಂಜುನಾಥ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವರದಿಯ ಪ್ರಕಾರ, ಮಂಜುನಾಥ್ ಕರ್ತವ್ಯದಲ್ಲಿ ಇರಲಿಲ್ಲ, ಹೀಗಿರುವ ಕರ್ತವ್ಯ ನಿರತ ಅಧಿಕಾರಿಯ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಸಾರ್ವಜನಿಕರು ಕಿಡಿಕಾರಿದ್ದಾರೆ.
ಸದ್ಯ ಕರ್ತವ್ಯ ನಿರತ ಸಿಬ್ಬಂದಿಯ ಮೇಲೆ ಹಲ್ಲೆ ಮಾಡುವುದು ಕಾನೂನು ಬಾಹಿರ ಎಂದು ತಿಳಿದಿದ್ದರೂ ಕೂಡ ಹಲ್ಲೆ ನಡೆಸಿರುವುದು ಖಂಡನೀಯ, ಈ ಕೂಡಲೇ ಪೊಲೀಸ್ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ಕೆಲಸದಿಂದ ವಜಾ ಮಾಡಬೇಕು ಎಂದು ಸಾರಿಗೆ ನೌಕರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.