LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪಟ್ಟಭದ್ರರಿಂದ ಗೋಮಾಳ ಕಿತ್ತುಕೊಳ್ಳುವ ಹುನ್ನಾರ - ಜಿಲ್ಲಾಧಿಕಾರಿಗಳಿಗೆ ದೂರು

ಕೊಪ್ಪಳ: ಜಿಲ್ಲೆಯ ಬೇವಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಹಪುರ ಗ್ರಾಮದ ಸವುಳು ಹಳ್ಳದ ಕೆರೆ ಪ್ರದೇಶದ ದಡದಲ್ಲಿರುವ ಗೋಮಾಳ ಜಾಗೆಯನ್ನು ಕೆಲವು ಪಟ್ಟಭದ್ರರು ಕಿತ್ತುಕೊಳ್ಳುವ ಹುನ್ನಾರ ನಡೆಸಿದ್ದು ಗೋಮಾಳ ರಕ್ಷಿಸಿಕೊಡುವಂತೆ ಕುರಿಗಾಹಿಗಳು ಕೊಪ್ಪಳ ಜಿಲ್ಲಾಡಳಿತ, ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆ, ಡಿವೈಎಸ್‌ಪಿ ಮತ್ತು ತಾಲೂಕು ತಹಶೀಲ್ದಾರರಿಗೆ ಮನವಿ ಮಾಡಿದ್ದಾರೆ.



ಗ್ರಾಮದ ಸರ್ವೇ ನಂಬರ್ 14, 15, 16, 20 ಮತ್ತು 27ರ ಸಂಖ್ಯೆಯ ವ್ಯಾಪ್ತಿಯಲ್ಲಿ ಸವುಳು ಹಳ್ಳದ ಕೆರೆ ಪ್ರದೇಶ 30 ಎಕರೆಗೂ ಅಧಿಕ ಇದೆ. ಕೆರೆಯ ಸುತ್ತಲೂ ಗ್ರಾಮದ ಐವತ್ತಕ್ಕೂ ಹೆಚ್ಚು ಕುಟುಂಬಗಳು ಈ ಹಿಂದೆ ಕುರಿ, ದನ, ಕರುಗಳನ್ನು ಸಾಕಣೆ ಮಾಡಿಕೊಂಡು ಉಪಜೀವಿಸುತ್ತಿದ್ದರು. ಇದೀಗ ಹದಿನೈದಕ್ಕೂ ಹೆಚ್ಚು ಕುರಿಗಾಹಿಗಳು ಮತ್ತು ದನಗಾಹಿಗಳು ಗೋಮಾಳದಲ್ಲಿ ನಮ್ಮ ಪೂರ್ವಜರಂತೆಯೇ ಬೀಡು ಬಿಟ್ಟು ಜೀವನ ನಡೆಸುತ್ತಿದ್ದೇವೆ. ಪ್ರತಿನಿತ್ಯ ಹಿಟ್ನಾಳ, ಅಗಳಕೇರಿ, ಶಿವಪುರ, ಕೆರೆಹಳ್ಳಿ, ಲಿಂಗದಹಳ್ಳಿ, ಗುಡದಳ್ಳಿ ಮತ್ತಿತರೆ ಗ್ರಾಮಗಳ ಅಡವಿಗೆ ತೆರಳಿ ಕುರಿ ಮತ್ತು ದನಗಳನ್ನು ಮೇಯಿಸಿಕೊಂಡು ಬರುತ್ತಿದ್ದೇವೆ. ರಾಸುಗಳನ್ನು ಮೇಯಿಸಲೆಂದು ಹೋದಾಗ ಗೋಮಾಳ ಜಾಗೆಯನ್ನು ಆಕ್ರಮಿಸಿಕೊಳ್ಳಲು ಪಟ್ಟಭದ್ರರು ಹುನ್ನಾರ ನಡೆಸುತ್ತಿದ್ದಾರೆಂದು ಕುರಿಗಾಹಿಗಳು ಮತ್ತು ದನಗಾಹಿಗಳು ಜಿಲ್ಲಾಡಳಿತಕ್ಕೆ ತಿಳಿಸಿದ್ದಾರೆ. 

 

ಕುರಿಗಾಹಿಗಳಾದ ವೀರಣ್ಣ ಕೋಮಲಾಪುರ, ಮಲ್ಲೇಶ್ ಕುರಿ, ಕಂಪ್ಲೆಪ್ಪ ಕಂಬಳಿ ಇನ್ನಿತರರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಶಹಪುರ ಗ್ರಾಮದ ಉತ್ತರ ದಿಕ್ಕಿನಲ್ಲಿರುವ ಸವುಳು ಹಳ್ಳದ ಕೆರೆ ದಂಡೆಯ ಮೇಲೆ ಕುರಿ ಮತ್ತು ದನಗಳು ಸೇರಿ ಒಟ್ಟು ಸಾವಿರಾರು ಸಾಕು ಪ್ರಾಣಿಗಳನ್ನು ಈ ಗೋಮಾಳದಲ್ಲಿ ತಂಗಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇತ್ತೀಚೆಗೆ ಆಂಧ್ರಪ್ರದೇಶದಿAದ ಬಂದ ಕೆಲವೊಂದು ಪಟ್ಟಭದ್ರ ವ್ಯಕ್ತಿಗಳು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಕರ್ನಾಟಕದ ಶಹಪುರ ಗ್ರಾಮದ ಸರ್ಕಾರಿ ಜಮೀನು ಹೊಂದಿರುವ ಮತ್ತು ಸದರಿ ಗೋಮಾಳವನ್ನು ಆಕ್ರಮಿಸಿಕೊಳ್ಳಲು ಹುನ್ನಾರ ನಡೆಸಿದ್ದಾರೆ. ಇದನ್ನು ಪ್ರಶ್ನಿಸಲು ಹೋದ ಕುರಿಗಾಹಿಗಳು ಮತ್ತು ದನಗಾಹಿಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಇದರಿಂದ ನಮ್ಮ ಜೀವಕ್ಕೆ ಆತಂಕ ಎದುರಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಗೋಮಾಳ ಜಮೀನನನ್ನು ಯಥಾವತ್ತಾಗಿ ಉಳಿಸಿಕೊಡಬೇಕು. ತಮ್ಮ ಜೀವ ಮತ್ತು ಜೀವನಕ್ಕೆ ಭದ್ರತೆ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.



ನೂರಾರು ಕೋಟಿ ರೂಪಾಯಿ ಬೆಳೆ ಬಾಳುವ ಈ ಗೋಮಾಳ ಜಾಗೆಯನ್ನು ಕಳೆದ ಹದಿನೈದು ವರ್ಷಗಳಿಂದ ಆಕ್ರಮಿಸಿಕೊಳ್ಳಲು ಪಟ್ಟಭದ್ರರಿಂದ ಎಲ್ಲ ರೀತಿಯ ಚಿತಾವಣೆ ನಡೆಯುತ್ತಿದೆ. ಕಳೆದ ಹದಿನೈದು ವರ್ಷಗಳಿಂದಲೂ ನಾವುಗಳು ಪ್ರತಿಯೊಂದು ಹಂತದಲ್ಲೂ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದೇವೆ. ಈ ಹಿಂದೆ ತಹಶೀಲ್ದಾರರು, ಪೊಲೀಸ್ ಅಧಿಕಾರಿಗಳು ಸಹಿತ ಸ್ಥಳಕ್ಕೆ ಭೇಟಿ ನೀಡಿ ನೈತಿಕ ಬೆಂಬಲ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪಟ್ಟಭದ್ರರು ಮತ್ತೆ ಷಡ್ಯಂತ್ರ ನಡೆಸುವ ಮೂಲಕ ಗೋಮಾಳ ಜಾಗೆಯನ್ನು ಹೇಗಾದರೂ ಮಾಡಿ ಲಪಟಾಯಿಸುವ ಗುರಿ ಹೊಂದಿದ್ದು, ನಮ್ಮ ಮೇಲೆ ಆಗಂತುಕರನ್ನು ಬಿಟ್ಟು ದೌರ್ಜನ್ಯ ಎಸಗುತ್ತಿದ್ದಾರೆ. ನಮಗೆ ಜೀವ ಭಯ ಕಾಡುತ್ತಿದೆ. ಸಾವಿರಾರು ಸಂಖ್ಯೆಯ ಕುರಿ, ದನಗಳನ್ನು ಮೇಯಿಸಿ, ಸಂರಕ್ಷಿಸುವುದು ಒಂದೆಡೆಯಾದರೆ, ಮಗದೊಂದೆಡೆ ಪಟ್ಟಭದ್ರರ ದೌರ್ಜನ್ಯ ನಮ್ಮನ್ನು ಅಧೀರಗೊಳ್ಳುವಂತೆ ಮಾಡುತ್ತಿದೆ. ಇದರಿಂದ ಹಗಲೂ ರಾತ್ರಿ ಜೀವಭಯದಲ್ಲಿ ಕುರಿ, ದನಗಳನ್ನು ಮೇಯಿಸುವಂತಾಗಿದೆ. ನಮ್ಮ ಜೀವಕ್ಕೆ ಭಯ ಕಾಡುತ್ತಿದೆ. ಹೀಗಾಗಿ ಗೋಮಾಳ ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ, ನಮ್ಮ ಬದುಕಿಗೆ ಭದ್ರತೆ ಒದಗಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.



ಈ ಸಂದರ್ಭದಲ್ಲಿ ಬೇವಿನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರಾಜ ದೊಡ್ಡಮನಿ, ಹಾಲಪ್ಪ ತೋಟದ, ಶಹಪುರ ಗ್ರಾಮದ ಧುರೀಣರಾದ ನಿಂಗಪ್ಪ ನಾಗಲಾಪುರ, ಕುರಿಗಾಹಿಗಳಾದ ಗುಡದಪ್ಪ ಕಿನ್ನಾಳ, ಹುಲ್ಲೇಶ್ ಕುರಿ, ಎಲ್ಲಪ್ಪ ಹಳ್ಳಿಗುಡಿ ಇನ್ನಿತರರು ಇದ್ದರು. 
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST