ಬಳ್ಳಾರಿ: ಗ್ಯಾರಂಟಿ ಯೋಜನೆಗಳನ್ನು ಸಾಕಾರಗೊಳಿಸಿ ಸೈ ಎನ್ನಿಸಿಕೊಂಡಿದ್ದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಬಡತನ ರೇಖೆಗಿಂತ ಕೆಳಗೆ ಇರುವ ಎಲ್ಲಾ ನಾಗರಿಕರು ನೆಮ್ಮದಿ ಜೀವನ ಕಂಡುಕೊಳ್ಳಬೇಕು ಎಂಬ ಉದ್ದೇಶದಿಂದ ಇಂದಿರಾ ಕಿಟ್ ನೀಡುವ ಯೋಜನೆ ಆರಂಭಿಸಿದೆ ಎಂದು ಕೆಪಿಸಿಸಿ ರಾಜ್ಯ ಮಾಧ್ಯಮ ವಕ್ತಾರರು ಹಾಗೂ ಪ್ರಚಾರ ಸಮಿತಿ ರಾಜ್ಯ ಸಂಯೋಜಕರಾದ ವೆಂಕಟೇಶ್ ಹೆಗಡೆ ತಿಳಿಸಿದ್ದಾರೆ.
10 ಕೆಜಿ ಅಕ್ಕಿ ನೀಡುವುದರಿಂದ ನೆಮ್ಮದಿಯ ಜೀವನ ಸಾಗದು ಎಂದು ಮನಗಂಡ ರಾಜ್ಯ ಸರ್ಕಾರ ಇದೀಗ 5 ಕೆಜಿ ಅಕ್ಕಿ ನೀಡಿ, ಇನ್ನೂ 5 ಕೆಜಿ ಅಕ್ಕಿ ಬದಲು1 ಕೆಜಿ ತೊಗರಿ, ೧ಕೆಜಿ ಬೇಳೆ, ಒಂದು ಕೆಜಿ ಎಣ್ಣೆ, ಒಂದು ಕೆಜಿ ಉಪ್ಪು ನೀಡಲು ನಿರ್ಧರಿಸಿದೆ. ಅಕ್ಕಿಯ ಕಾಳಸಂತೆ ದಂಧೆಗೆ ಲಗಾಮು ಬಿದ್ದಂತೆ ಆಗಿದ್ದಲ್ಲದೆ, ಜನರಿಗೆ ಸಾಕಷ್ಟು ನೆರವಾಗಲಿದೆ. ಬಡ ಕುಟುಂಬಗಳು ನೆಮ್ಮದಿಯ ಜೀವನ ಕಟ್ಟಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಬಡವರ ವಿರೋಧಿ ಆರ್ಥಿಕ ನೀತಿ ಅನುಸರಿಸುತ್ತಿದೆ. ದಿನದಿಂದ ದಿನಕ್ಕೆ ಬೆಲೆ ಏರಿಕೆಯಿಂದ ಬಡ, ಮಧ್ಯಮ ವರ್ಗದ ಜನರು ದಿನನಿತ್ಯ ಬದುಕು ಕಟ್ಟಿಕೊಳ್ಳಲು ಹೆಣಗಾಡುವಂತಾಗಿದೆ. ಇದನ್ನು ಕಂಡೇ ನಮ್ಮ ಸರ್ಕಾರ ಅನ್ನಭಾಗ್ಯ ಯೋಜನೆ ಆರಂಭಿಸಿತ್ತು. ಇದೂ ಸಹ ಸಾಲದು ಎಂಬುದನ್ನು ಅರಿತು ಇದೀಗ ಅಕ್ಕಿ ಜೊತೆ ಎಣ್ಣೆ, ಬೇಳೆ, ಉಪ್ಪು ವಿತರಿಸುವ ಕಾರ್ಯ ಆರಂಭಿಸಿದೆ.
ಇದರ ಜೊತೆಗೆ ಮಹಿಳಾ ಆರೋಗ್ಯ ಗಮನದಲ್ಲಿಟ್ಟುಕೊಂಡು ಋತುಚಕ್ರದ ಸಂದರ್ಭದಲ್ಲಿ ಮಹಿಳಾ ಉದ್ಯೋಗಿಗಳಿಗೆ ಒಂದು ದಿನದ ಕಡ್ಡಾಯ ವೇತನ ಸಹಿತ ರಜೆ ನೀಡಲಿದೆ. ಇದು ನಿಜಕ್ಕೂ ಮಹಿಳಾ ಕೆಲಸಗಾರರಿಗೆ ಸಾಕಷ್ಟು ನೆರವಾಗಲಿದೆ. ಋತುಸ್ರಾವದ ದಿನದಂದು ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ದೈಹಿಕವಾಗಿ ಆಯಾಸ ಸಹ ಉಂಟಾಗುತ್ತದೆ. ಆದರೂ ಬಡ, ಮಧ್ಯಮ ವರ್ಗದ ಮಹಿಳೆಯರು ಆರ್ಥಿಕ ಸಂಕಷ್ಟದ ಕಾರಣಕ್ಕೆ ಆಯಾಸದ ನಡುವೆ ಸಹ ಕೆಲಸಮಾಡುತ್ತಿದ್ದರು. ಇದೀಗ ರಾಜ್ಯ ಸರ್ಕಾರದ ಆದೇಶದಿಂದ ಗಾರ್ಮೆಂಟ್ಸ್, ಐಟಿ ವಲಯ ಸೇರಿದಂತೆ ವಿವಿಧ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರು ಋತುಸ್ರಾವದ ದಿನದಂದು ನೆಮ್ಮದಿಯಿಂದ ಮನೆಯಲ್ಲಿ ಇರಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.