ವಿಶ್ವವಿದ್ಯಾಲಯದ 16ನೇ ಸಂಸ್ಥಾಪನ ದಿನಾಚರಣೆ ಅಂಗವಾಗಿ ಬೋಧಕ-ಬೋಧಕೇತರ ಸಿಬ್ಬಂದಿಗೆ ವಾರ್ಷಿಕ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು.
ಒಟ್ಟು 8 ಕ್ರಿಕೆಟ್ ತಂಡಗಳು ಭಾಗವಹಿಸಿದ್ದ ಟೂರ್ನಿಯಲ್ಲಿ ಎಂ ಬಿ ಎ ವಿಭಾಗದ ಮುಖ್ಯಸ್ಥರಾದ ಡಾ ಕೆ ಸಿ ಪ್ರಶಾಂತ ನೇತೃತ್ವದ ಕಲ್ಯಾಣ ಕರ್ನಾಟಕ ವಾರಿಯರ್ಸ್ ತಂಡವು ಫೈನಲ್ ಪಂದ್ಯದಲ್ಲಿ ಪರೀಕ್ಷಾ ವಿಭಾಗದ ಡೈನಮಿಕ್ 11 ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

ಮೊದಲು ಬ್ಯಾಟ್ ಮಾಡಿದ ಡೈನಾಮಿಕ್ ತಂಡವು ನಿಗದಿತ 10 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 76 ರನ್‌ಗಳ ಗುರಿ ನೀಡಿತು. ಕರಾರುವಾಕ್ ಬೌಲಿಂಗ್ ದಾಳಿ ನಡೆಸಿದ ವಾರಿಯರ್ಸ ತಂಡದ ಸಂತೋಷ್, ಸಂತೋಷ್ ಪಾಟೀಲ್, ಅವಿನಾಶ್, ಶಿವರಾಜ್ ಎದುರಾಳಿ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ನಂತರ ಬ್ಯಾಟಿಂಗ್ ಆರಂಭಿಸಿದ ವಾರಿಯರ್ಸ್ ತಂಡದ ಆರಂಭಿಕರಾದ ಸಂತೋಷ್ ಮತ್ತು ಸಂತೋಷ್ ಪಾಟೀಲ್ ಎರಡು ಓವರ್‌ಗಳಲ್ಲಿ 25 ರನ್ ಬಾರಿಸಿ ಸ್ಫೋಟಕ ಆರಂಭ ಒದಗಿಸಿದರು. ನಾಯಕ ಡಾ ಕೆ ಸಿ ಪ್ರಶಾಂತ್ 8(9), ಜ್ಯೋತಿಲಿಂಗ 11(11) ರನ್ ಗಳಿಸಿ ಔಟಾದರು. ಆಗ ಕ್ರೀಸ್‌ಗಿಳಿದ ಶಿವರಾಜ್ 17(9) ಬೀಸಾಟಕ್ಕೆ ಡೈನಾಮಿಕ್ ಬೌಲರ್‌ಗಳು ಹೈರಾಣಾದರು. ಇನ್ನು 8 ಎಸೆತಗಳು ಬಾಕಿ ಇರುವಾಗಲೆ ವಾರಿಯರ್ಸ ತಂಡ ಗುರಿ ತಲುಪಿ ವಿಜಯ ಪತಾಕೆ ಹಾರಿಸಿತು.
ಸಂತೋಷ್ ಹ್ಯಾಟ್ರಿಕ್ ಸಾಧನೆ: ಕಲ್ಯಾಣ ಕರ್ನಾಟಕವಾರಿಯರ್ಸ್ ತಂಡದ ಬೌಲರ್ ಸಂತೋಷ್ ಅವರು ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿ ಗಮನ ಸೆಳೆದರು. ಇನಿಂಗ್ಸ್‌ನ ಎರಡನೇ ಓವರ್ ಬೌಲ್ ಮಾಡಿದ ಅವರು, ಡೈನಾಮಿಕ್ ತಂಡದ ಪ್ರಮುಖ ಬ್ಯಾಟರ್‌ಗಳಾದ ಸ್ಯಾಂಡಿ, ಶಿವಮೂರ್ತಿ ಹಾಗೂ ಬೋರಯ್ಯ ಅವರ ವಿಕೆಟ್ ಪಡೆದು ತಂಡದ ಬ್ಯಾಟಿಂಗ್‌ಬಲ ಕುಗ್ಗಿಸಿದರು.
ಚಾಂಪಿಯನ್ ಆಗಿ ಹೊರಹೊಮ್ಮಿರುವ ಕಲ್ಯಾಣ-ಕರ್ನಾಟಕ ವಾರಿಯರ್ಸ್ ತಂಡಕ್ಕೆ ವಿವಿಯ ಕುಲಪತಿಗಳಾದ ಪ್ರೊ ಎಂ ಮುನಿರಾಜು, ಕುಲಸಚಿವರಾದ ನಾಗರಾಜು ಸಿ, ಮೌಲ್ಯಮಾಪನ ಕುಲಸಚಿವರಾದ ಪ್ರೊ ಎನ್ ಎಂ ಸಾಲಿ ಮತ್ತು ವಿತ್ತಾಧಿಕಾರಿಗಳಾದ ನಾಗರಾಜ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.