ಸದಾಶಿವನಗರದ ನಿವಾಸದ ಬಳಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, "ಯಾರನ್ನೂ ಓಲೈಕೆ ಮಾಡುತ್ತಿಲ್ಲ. ಒತ್ತುವರಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಕೆಲವರು ಹಣ ಸಂಗ್ರಹಿಸಿದ್ದಾರೆ ಎಂದು ಅಲ್ಲಿನವರೇ ಹೇಳಿಕೆ ನೀಡಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಯಾರಿಗೆ ಅರ್ಹತೆ ಇದೆಯೋ ಅವರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಮೂಲಕ ಮನೆ ನೀಡಲಾಗುವುದು" ಎಂದರು.
"ಈ ಹಿಂದೆ ಕೆಲವು ಭಾಗಗಳಲ್ಲಿ ಹಕ್ಕುಪತ್ರಗಳನ್ನು ನೀಡಲಾಗಿತ್ತು ಎಂದು ಹೇಳಿದ್ದಾರೆ. ಅದನ್ನು ಪರಿಶೀಲನೆ ನಡೆಸಲು ತಿಳಿಸಿದ್ದೇನೆ. ಹೊರಗಿನಿಂದ ಬಂದವರು ಸಹ ಹೊಸದಾಗಿ ಸೇರಿಕೊಂಡಿದ್ದಾರೆ. ನೈಜ ಮತದಾರರು ಎಷ್ಟಿದ್ದಾರೆ ಎಂಬ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ, ಅವರಿಗೆ ಪುನರ್ವಸತಿ ಕಲ್ಪಿಸಲಾಗುವುದು" ಎಂದರು.
ಕರ್ನಾಟಕದ ವಿಚಾರದಲ್ಲಿ ಕೇರಳ ರಾಜ್ಯದ ಹಸ್ತಕ್ಷೇಪ ಬೇಡ ಎನ್ನುವ ಹೇಳಿಕೆಯನ್ನು ಕೇರಳದ ಕೆಲವು ಸಂಸದರು ಖಂಡಿಸಿರುವ ಬಗ್ಗೆ ಕೇಳಿದಾಗ, "ನಾವು ಉತ್ತಮವಾಗಿ ಸರ್ಕಾರವನ್ನು ನಡೆಸಿಕೊಂಡು ಹೋಗುತ್ತಿದ್ದೇವೆ. ಅವರು ಏನು ಬೇಕಾದರೂ ಹೇಳಿಕೆ ನೀಡಲಿ. ನಾವು ಅಕ್ರಮ ಒತ್ತುವರಿಗೆ ಅವಕಾಶ ನೀಡುವುದಿಲ್ಲ. ಅವರು ಈ ಹಿಂದೆ ಕೊಟ್ಟ ಭರವಸೆ, ಪ್ರವಾಹದ ಸಂದರ್ಭದಲ್ಲಿ ನೀಡಿದ ಮಾತನ್ನೇ ಈಡೇರಿಸಿಲ್ಲ. ಅಂತಹವರು ನಮಗೆ ಹೇಳುವ ಅವಶ್ಯಕತೆ ಇಲ್ಲ. ನಮ್ಮ ರಾಜ್ಯದ ವಿಚಾರವನ್ನು ಹೇಗೆ ನಿಭಾಯಿಸಬೇಕು ಎಂಬುದು ನಮಗೆ ತಿಳಿದಿದೆ" ಎಂದರು.

ದೇಶದ ಹಿರಿಯ ನಾಯಕರು ಉತ್ತರಿಸಲಿದ್ದಾರೆ
ಕೋಗಿಲು ವಿಚಾರವಾಗಿ ಪಾಕಿಸ್ತಾನದ ವಿದೇಶಾಂಗ ಸಚಿವರು ಪ್ರತಿಕ್ರಿಯೆ ನೀಡಿರುವ ಬಗ್ಗೆ ಕೇಳಿದಾಗ, "ಇದಕ್ಕೆ ದೇಶದ ಹಿರಿಯ ನಾಯಕರು ಉತ್ತರಿಸಲಿದ್ದಾರೆ" ಎಂದರು.
ಎರಡೆರಡು ರಾಜ್ಯದ ಆಧಾರ್ ಕಾರ್ಡ್ ಗಳು, ಮತದಾರರ ಚೀಟಿಗಳು ಸಂತ್ರಸ್ತರ ಬಳಿ ಇರುವ ಬಗ್ಗೆ ಕೇಳಿದಾಗ, "ಇದರ ಬಗ್ಗೆ ನನಗೆ ಗೊತ್ತಿಲ್ಲ. ಅಧಿಕಾರಿಗಳು ಇದರ ಬಗ್ಗೆ ಪರಿಶೀಲನೆ ಮಾಡಲಿದ್ದಾರೆ" ಎಂದು ಹೇಳಿದರು.
ಅಕ್ರಮ ನಿವಾಸಿಗಳಿಗೆ ಎಲ್ಲಿಯೂ ಮನೆ ನೀಡಲಾಗುವುದಿಲ್ಲ ಎನ್ನಲಾಗುತ್ತಿತ್ತು, ಈಗ ಸಕ್ರಮ ಮಾಡಲಾಗುತ್ತಿದೆಯಲ್ಲ ಎಂದು ಕೇಳಿದಾಗ, "ಅರ್ಹರಿಗೆ ಮಾತ್ರ ಮನೆ ನೀಡಲಾಗುವುದು. ಸ್ಥಳೀಯ ಮತದಾರರ ಪಟ್ಟಿಯಲ್ಲಿ ಹೆಸರು ಹಾಗೂ ನಿಜವಾದ ಸ್ಥಳೀಯ ವಿಳಾಸ ಇದ್ದರೆ ಮಾತ್ರ ಮನೆ ನೀಡಲಾಗುವುದು. ಯಾವುದೇ ಸಕ್ರಮ ಮಾಡುತ್ತಿಲ್ಲ. ಅರ್ಹರನ್ನು ಗುರುತಿಸಲಾಗುವುದು" ಎಂದರು.
“ಕೇರಳ ಸಿಎಂ, ಕೇರಳ ಸರಕಾರ ಕರ್ನಾಟಕ ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದ್ದೇನೆಯೇ ಹೊರತು, ಕೇರಳಿಗರ ಬಗ್ಗೆ ನಾನು ಮಾತನಾಡಿಲ್ಲ. ನನ್ನ ಹೇಳಿಕೆ ತಿರುಚಿ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ಅವರು ಜನರ ದಾರಿ ತಪ್ಪಿಸುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜೀವ್ ಚಂದ್ರಶೇಖರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಕೇರಳದ ಜನರು ಹಾಗೂ ನನ್ನ ನಡುವೆ ಉತ್ತಮ ಬಾಂಧವ್ಯವಿದೆ. ಕೇರಳ ಜನ ನನ್ನನ್ನು ಬಹಳ ಪ್ರೀತಿಸುತ್ತಾರೆ. ನನಗೂ ಅವರ ಮೇಲೆ ಗೌರವವಿದೆ. ಕೇರಳ ಚುನಾವಣೆ ಪ್ರಚಾರಕ್ಕೆ ನಾನು ಹೋಗುತ್ತೇನೆ. ಅಲ್ಲಿ ನಮ್ಮ ಸರ್ಕಾರ ಬರಲಿದೆ. ಹೀಗಾಗಿ ಬಿಜೆಪಿಯವರು ಗೊಂದಲ ಸೃಷ್ಟಿಸಲು ಮುಂದಾಗಿದ್ದಾರೆ. ಅವರು ಈ ರೀತಿ ಹುಳಿ ಹಿಂಡುವುದು ಬೇಡ. ನಮ್ಮ ಪಕ್ಷದ ನಾಯಕರು ನಮಗೆ ಸಲಹೆ ನೀಡಿದ್ದು, ನಾವು ಅದನ್ನು ಸ್ವೀಕರಿಸುತ್ತೇವೆ” ಎಂದು ತಿಳಿಸಿದರು.
“ಇಂದು ಕರ್ನಾಟಕ ನೀರಾವರಿ ನಿಗಮ ಹಾಗೂ ಕೃಷ್ಣ ಭಾಗ್ಯ ಜಲ ನಿಗಮದ ನಿರ್ದೇಶಕರ ಮಂಡಳಿ ಸಭೆ ಮಾಡಿದೆವು. ಈ ನಿಗಮಗಳಲ್ಲಿ 5 ಸಾವಿರ ಕೋಟಿ ರೂಪಾಯಿಯಷ್ಟು ಕಾಮಗಾರಿ ತೆಗೆದುಕೊಳ್ಳುತ್ತಿದ್ದೇವೆ. ಕೃಷ್ಣ ಭಾಗ್ಯ ಜಲ ನಿಗಮದಲ್ಲಿ ನಾವು ಯುಕೆಪಿ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗೆ ಹೆಚ್ಚು ಆದ್ಯತೆ ನೀಡಿದ್ದೇವೆ. ಇದಕ್ಕೆ 70 ಸಾವಿರ ಕೋಟಿ ಹಣ ನೀಡಬೇಕಾಗಿದೆ. ಹೀಗಾಗಿ ಇತರೆ ಕೆಲಸಗಳನ್ನು ಮುಂದಿನ ಹಂತದಲ್ಲಿ ಕೈಗೊಳ್ಳಲಾಗುವುದು” ಎಂದು ಮಾಹಿತಿ ನೀಡಿದರು.
2026 ರ ಹೊಸ ವರ್ಷದಲ್ಲಿ ಡಿ.ಕೆ. ಶಿವಕುಮಾರ್ ಅವರ ನಿರ್ಣಯಗಳೇನು ಎಂದು ಕೇಳಿದಾಗ, “ನಿಮ್ಮನ್ನೆಲ್ಲಾ ಸಂತೋಷವಾಗಿಡುವುದು, ರಾಜ್ಯಕ್ಕೆ ಉತ್ತಮ ಆಡಳಿತ ನೀಡುವುದು ನಮ್ಮ ಗುರಿ. ಈ ವರ್ಷ ಉತ್ತಮ ಮಳೆಯಾದ ರೀತಿ ಮುಂದಿನ ವರ್ಷವೂ ಉತ್ತಮ ಮಳೆಯಾಗಿ, ಕೆರೆ ಕಟ್ಟೆಗಳು ತುಂಬಿ ರೈತರ ಬದುಕು ಹಸನಾಗಲಿ. ನಮ್ಮ ಗ್ಯಾರಂಟಿ ಯೋಜನೆಗಳು ಮುಂದುವರಿದು ಜನರಿಗೆ ಶಕ್ತಿ ತುಂಬಲಿದೆ. ಮುಂದಿನ ವರ್ಷ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ” ಎಂದು ತಿಳಿಸಿದರು.
2026ರಲ್ಲಿ ನಿಮ್ಮ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡಲಾಗುವುದೇ ಎಂದು ಕೇಳಿದಾಗ, “ಕಾಂಗ್ರೆಸ್ ಸರ್ಕಾರದ ನೇತೃತ್ವದಲ್ಲಿ ಉತ್ತಮ ಆಡಳಿತ ಮುಂದುವರಿಯಲಿದೆ. ಮುಂದಿನ ಏಳೂವರೆ ವರ್ಷ ಈ ಆಡಳಿತ ಮುಂದುವರಿಯಲಿದೆ” ಎಂದರು.
ಇಕ್ಬಾಲ್ ಹುಸೇನ್ ಹೇಳಿಕೆ ಬಗ್ಗೆ ಕೇಳಿದಾಗ, “ಅವರ ಮಾತನ್ನು ಗಣನೆಗೆ ತೆಗೆದುಕೊಳ್ಳಬೇಡಿ” ಎಂದರು. 2026ರಲ್ಲಿ ನಿಮ್ಮ ನೇತೃತ್ವ ನಿರೀಕ್ಷೆ ಮಾಡಬಹುದೇ ಎಂದು ಕೇಳಿದಾಗ, “ಈ ಬಗ್ಗೆ 2026 ರಲ್ಲೇ ಮಾತನಾಡುತ್ತೇನೆ” ಎಂದರು.