ಮರಿಯಮ್ಮನಹಳ್ಳಿ : ಒಂದು ಕಡೆ ಗಬ್ಬು ನಾರುತ್ತಿರುವ ವಾರ್ಡ್ಗಳು. ರೋಗದ ಭೀತಿಯಲ್ಲಿ ಜೀವನ ನಡೆಸುತ್ತಿರುವ ಜನರು ಇನ್ನೊಂದೆಡೆ. ಇಷ್ಟಾದರೂ ಇತ್ತಕಡೆ ನೋಡದ ಪಟ್ಟಣ ಪಂಚಾಯತಿ ಅಧಿಕಾರಿಗಳು ಹಾಗೂ 7ನೇ ವಾರ್ಡಿನ ಸದಸ್ಯರು.
ಹೌದು, ಪಟ್ಟಣದ 7 ನೇ ವಾರ್ಡಿನಲ್ಲಿ ಸೂಕ್ತ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆಗಳೇ ಚರಂಡಿಗಳಾಗಿವೆ. ಅಲ್ಲದೆ ರಸ್ತೆಯ ಮೇಲೆ ಗಿಡಗಂಟೆಗಳು ಬೆಳೆದಿರುವುದರಿಂದ ಹಾವು, ಚೇಳು, ಅದರಲ್ಲಿ ಸೇರಿಕೊಂಡಿವೆ. ಅಲ್ಲಿ ಚಿಕ್ಕ, ಚಿಕ್ಕ ಮಕ್ಕಳು ಆಟವಾಡುತ್ತಾರೆ. ಅಲ್ಲದೆ ಜನರಲ್ಲಿ ರೋಗದ ಭೀತಿ ಉಂಟಾಗಿದೆ. ಇದರಿಂದ ವಾರ್ಡಿನ ಜನರು ಬೇಸತ್ತು ಹೋಗಿದ್ದಾರೆ. ಸೂಕ್ತ ಚರಂಡಿ ಇಲ್ಲದಿರುವುದರಿಂದ ಹೊಲಸು ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ. ಇದರಿಂದ ಎಲ್ಲೆಡೆ ದುರ್ವಾಸನೆ ಬೀರುತ್ತಿದೆ.ಈ ಬಗ್ಗೆ ವಾರ್ಡಿನ ಸದಸ್ಯರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ವಾರ್ಡಿನಲ್ಲಿ ಚರಂಡಿ ವ್ಯವಸ್ಥೆಯೇ ಇಲ್ಲದಿರುವುದು ಮಾತ್ರ ವಿಪರ್ಯಾಸದ ಸಂಗತಿ ಎಂದು ವಾರ್ಡಿನ ಜನರು ಹೇಳಿದರು.

ರೋಗದ ಭೀತಿ: ಅಲ್ಲಲ್ಲಿ ನೀರು ನಿಂತು ದುರ್ವಾಸನೆ ಬರತೊಡಗಿದೆ. ಸೊಳ್ಳೆಗಳ ಕಾಟ ಹೇಳತೀರದಾಗಿದೆ. ಮಲೇರಿಯಾ, ಡೆಂಗ್ಯೂ, ಕಾಲರಾದಂತಹ ರೋಗಗಳು ಹರಡುವ ಭೀತಿಯಲ್ಲಿಯೇ ಜನತೆ ವಾಸ ಮಾಡಬೇಕಾಗಿದೆ. ಅಂಥ ಗಲೀಜು ನೀರಿನಲ್ಲಿ ವೃದ್ಧರು ಹಾಗೂ ಚಿಕ್ಕ ಮಕ್ಕಳು ಕಾಲು ಜಾರಿ ಬೀಳುತ್ತಿದ್ದಾರೆ, ಅಲ್ಲದೆ ಪಕ್ಕದಲ್ಲಿಯೇ ಅಂಗನವಾಡಿ ಶಾಲೆ ಕೂಡ ಇದೆ ಅಲ್ಲಿ ಚಿಕ್ಕ ಚಿಕ್ಕ ಮಕ್ಕಳು ಇರುತ್ತಾರೆ ದಯಮಾಡಿ ರಸ್ತೆ, ಚರಂಡಿ ವ್ಯವಸ್ಥೆ ಮಾಡಿಕೊಡಿ ಎಂದು ವಾರ್ಡಿನ ಜನರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಪಟ್ಟಣ ಪಂಚಾಯತಿ ಅಧ್ಯಕ್ಷರು, ಮುಖ್ಯಾಧಿಕಾರಿಗಳು ಇಲ್ಲಿನ ಸಮಸ್ಯೆ ಬಗೆಹರಿಸದೆ ಇದ್ದರೆ ವಾರ್ಡಿನ ಜನರು ಸೇರಿಕೊಂಡು ಪಟ್ಟಣ ಪಂಚಾಯತಿಯ ಮುಂದೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.