ಇಲ್ಲಿನ ಶ್ರೀ ಸತ್ಯನಾರಾಯಣ ಪೇಟೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸಭಾಂಗಣದಲ್ಲಿ ಶುಕ್ರವಾರದಂದು ಸಂಜೆ ಬಳ್ಳಾರಿಯ ಪುನರುತ್ಥಾನ ಅಧ್ಯಯನ ಕೇಂದ್ರದಿAದ ಆಯೋಜಿಸಿದ್ದ ಪುನರುತ್ಥಾನ ಉಪನ್ಯಾಸ ಸಂವೃತ್ತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರೀಮದ್ ವ್ಯಾಸರಾಯರ ಮೇರು ವ್ಯಕ್ತಿತ್ವ ಹಾಗೂ ಅವರ ಐತಿಹಾಸಿಕ, ಸಾಂಸ್ಕೃತಿಕ, ಸಮಾಜಮುಖಿ ಮಹತ್ಕಾರ್ಯಗಳ ಕುರಿತಂತೆ ವಿದ್ವತ್ಪೂರ್ಣವಾಗಿ, ವಿಮರ್ಶಾತ್ಮಕವಾಗಿ, ಐತಿಹಾಸಿಕ ಆಧಾರ ಆಕರಗಳ ಮಾಹಿತಿಯ ಸಹಿತವಾಗಿ, ಸ್ಫೂರ್ತಿದಾಯಕ ಉಪನ್ಯಾಸ ನೆರವೇರಿಸಿದರು.
`ಕರ್ನಾಟಕ ವಿಜಯನಗರ ಸಾಮ್ರಾಜ್ಯ' ಸಂಸ್ಥಾಪನೆಯ ಶುಭ ದಿನೋತ್ಸವ ಸ್ಮೃತಿಯಲ್ಲಿ ಶ್ರೀ ವ್ಯಾಸರಾಜತೀರ್ಥ ಸ್ವಾಮಿ ನಿರ್ಮಿತ `ವ್ಯಾಸ ಸಮುದ್ರ' ಜಲಾಶಯಕ್ಕೆ ೫೦೦ ವರ್ಷಗಳು ಸಂದಿರುವ ಐತಿಹಾಸಿಕ ಸುದಿನದ ವೇಳೆ `ವಿಜಯನಗರ ಸಾಮ್ರಾಜ್ಯದ ಕಾಲಘಟ್ಟದಲ್ಲಿ ಶ್ರೀ ವ್ಯಾಸತೀರ್ಥ ಯತಿಗಳ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಮಹಾತ್ಕಾರ್ಯಗಳು... ಕೊಡುಗೆಗಳು' ಕುರಿತು ಸಾದ್ಯಂತವಾಗಿ ವಿವರಿಸಿದ ಅವರು, `ವ್ಯಾಸ ಸಮುದ್ರ' ಜಲಾಶಯ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಕಾರ್ಮಿಕರಿಗೆ ನೀರುಣಿಸುತ್ತಿದ್ದ ಇಬ್ಬರು ಸಾಮಾನ್ಯ ಸಹೋದರರಿಂದ ಲೋಕಾರ್ಪಣೆಗೊಳಿಸಿದ್ದು ವ್ಯಾಸರಾಯ ತೀರ್ಥರ ದೊಡ್ಡಸ್ತಿಕೆ. ಆಗ ಆ ಜಲಾಶಯವನ್ನು ಅವರು ಮನಸ್ಸು ಮಾಡಿದ್ದಿದ್ದರೆ ಚಕ್ರವರ್ತಿ ಶ್ರೀಕೃಷ್ಣದೇವಾಯ ಅಥವಾ ಸಮಾಜದ ಉನ್ನತ ವ್ಯಕ್ತಿಳಿಗಂದ ಲೋಕಾರ್ಪಣೆ ಮಾಡಬಹುದಿತ್ತು. ಆದರೆ, ಜನಸಾಮಾನ್ಯರಿಗೆ ಅವರು ಆದ್ಯತೆ ನೀಡಿದ್ದರು ಎಂದು ಸ್ಮರಿಸಿದರು.

ಇಂದಿನ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಂದಕೂರು ಗ್ರಾಮದ ಬಳಿಯ ಬರಡು ಪ್ರದೇಶದಲ್ಲಿ `ಪಾಪಾಘ್ನಿ' ನದಿ ಬಳಸಿಕೊಂಡು ಬೃಹತ್ ಜಲಾಶಯ ನಿರ್ಮಿಸಿದ್ದಾರೆ. ಕಾಲುವೆಗಳು, ತೂಬುಗಳು ಇಂದಿನ ಜಲತಂತ್ರಜ್ಞರಿಗೆ ಮತ್ತು ನೀರಾವರಿ ತಜ್ಞರಿಗೆ ಮಾದರಿಯಾಗಿವೆ. ಆ ಕಾಲದಲ್ಲಿ ಕೆರೆಗಳನ್ನು ಕಟ್ಟಿಸುವಾಗ ಗರ್ಭಿಣಿ ಸ್ತಿçÃಯರಿಗೆ ಬಲಿ ಕೊಡುವ, ಕೆರೆಗೆ ಹಾರದಂತಹ ಪದ್ಧತಿ ಇತ್ತು. ಇದನ್ನು ನಿರ್ಮೂಲನೆ ಮಾಡಿದ ವ್ಯಾಸರಾಯತೀರ್ಥರು ಸಾಲಿಗ್ರಾಮ ಶಿಲೆ, ಶ್ರೀ ವೆಂಕಟೇಶ, ಶ್ರೀ ನರಸಿಂಹ ದೇವರು ಮತ್ತು ಶ್ರೀ ಪ್ರಾಣದೇವರ ತೂಬುಗಳನ್ನು ನಿರ್ಮಿಸಿ, ನೀರಿನ ಪ್ರವಾಹ ತಡೆದುಕೊಳ್ಳಲು ದೈವೀ ಶಕ್ತಿ ಸಂಚಯಿಸುವAತೆ ಮಾಡಿದ್ದರು. ಆ ಕಾಲದಲ್ಲೇ ಇದೊಂದು ದೊಡ್ಡ ಕ್ರಾಂತಿಕಾರಿ ಬೆಳವಣಿಗೆ. `ವ್ಯಾಸ ಸಮುದ್ರ' ೫೦೦ ವರ್ಷಗಳುರುಳಿದರೂ ಇಂದಿಗೂ ಹಾಗೆಯೇ ಇರುವುದು ವಿಶೇಷ. ಮಳೆ ಇಲ್ಲದೇ ಬರಡಾಗಿದ್ದ ಕಂದಕೂರು ಗ್ರಾಮದಲ್ಲಿ ೧೨ ವರ್ಷಗಳ ಕಾಲ ಅಲ್ಲಿಯೇ ನೆಲೆಗೊಂಡಿದ್ದ ಅವರು ಜಲಾಶಯ ನಿರ್ಮಾಣ ಮಾಡಿರುವ ಕುರಿತು ಅನೇಕ ಶಾಸನೋಕ್ತ, ಸಾಹಿತ್ಯಾಧಾರಗಳಿವೆ. ಸೋಮನಾಥ ಕವಿಯ ವ್ಯಾಸ ಚರಿತ್ರೆ, ಕಾವ್ಯಗಳು, ಹತ್ತಾರು ಶಾಸನಗಳು, ತಾಮ್ರ ಪತ್ರದ ಆಧಾರಗಳನ್ನಾಧರಿಸಿ ವಿದ್ವಾನ್ ಮುತ್ತಿಗಿ ಅವರು `ವ್ಯಾಸ ಸಮುದ್ರ' ದ ಇತಿಹಾಸದ ಮೇಲೆ ಬೆಳಕು ಚೆಲ್ಲಿದರು.
ವಿಜಯನಗರ ಆಳರಸರಾದ ಸಾಳ್ವ ನರಸಿಂಹ ರಾಯನಿಂದ ಮೊದಲುಗೊಂಡು ಅಚ್ಯುತದೇವರಾಯರವರೆಗೂ ೬ ಜನ ಚಕ್ರವರ್ತಿಗಳ ಕುಲಗುರುಗಳಾಗಿ ಮಾರ್ಗದರ್ಶನ ನೀಡಿದಂತಹ ಮಹತ್ ರಾಜ್ಯ ಕಾರ್ಯ ಅವರದಾಗಿತ್ತು. ವಿಶೇಷವಾಗಿ ಶ್ರೀಕೃಷ್ಣದೇವರಾಯರ ಕಾಲಘಟ್ಟದಲ್ಲಿ ನಡೆದ ಯುದ್ಧಗಳಲ್ಲಿ ವ್ಯಾಸತೀರ್ಥರು ಪ್ರತ್ಯಕ್ಷವಾಗಿ ಭಾಗಿಯಾಗಿ, ಸೂಕ್ತ ಮಾರ್ಗದರ್ಶನ ನೀಡಿ ಗೆಲುವಿಗೆ ಪ್ರೇರಣೆ ನೀಡಿದ್ದರು. ಕೃಷ್ಣದೇವರಾಯ ರಾಯಚೂರು ಮೇಲಿನ ಘೋರ ಯುದ್ಧದ ವೇಳೆ ವ್ಯಾಸರಾಯರ ಕೊಡುಗೆ ಅನನ್ಯವಾಗಿತ್ತು ಎನ್ನುವುದನ್ನು ವಿದೇಶಿ ಪ್ರವಾಸಿಗರು ದಾಖಲಿಸಿದ್ದಾರೆ. ಯುದ್ಧದ ಕ್ಯಾಂಪ್ ನಲ್ಲಿದ್ದುಕೊಂಡು ಯುದ್ಧ ಸೋಲುವಂಥ ಸನ್ನಿವೇಶಗಳಲ್ಲಿ ಗೆಲುವಿನ ರೂವಾರಿಗಳೆನಿಸಿದ್ದರು. ರಾಜ್ಯಾಡಳಿತ ಕಾರ್ಯಗಳಲ್ಲಿ ಶ್ರೀಕೃಷ್ಣ ದೇವರಾಯರಿಗೆ ಆಗಾಗ ಸೂಕ್ತ ಸಲಹೆಗಳನ್ನು ನೀಡುತ್ತಿದ್ದ ವ್ಯಾಸರಾಯರು ವಿಜಯನಗರ ಸಾಮ್ರಾಜ್ಯದುದ್ದಕ್ಕೂ ೭೩೨ ಪ್ರಾಣದೇವರುಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದರು. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಇಂದಿಗೂ ಶ್ರೀ ವ್ಯಾಸರಾಜ ಪ್ರತಿಷ್ಠಾಪಿತ ಆಂಜನೇಯ ಸ್ವಾಮಿ ದೇವಾಲಯಗಳಿವೆ. ಸಮಾಜದ ಎಲ್ಲ ಜಾತಿ, ಮತ, ಪಂಥಗಳ ಭೇದವಿಲ್ಲದೇ ಎಲ್ಲರೂ ಆಂಜನೇಯನನ್ನು ಪೂಜಿಸಿ, ಆರಾಧಿಸಲು ಅವಕಾಶ ಮಾಡಿಕೊಟ್ಟಿದ್ದರು. ಹಳ್ಳಿಗಳಲ್ಲಿ ಆ ಕಾಲಘಟ್ಟದಲ್ಲಿಯೇ ಸನಾತನ ಹಿಂದೂ ಧರ್ಮದ ಸಂಘಟನೆ, ಒಗ್ಗಟ್ಟು ಮತ್ತು ಐಕ್ಯತೆ ಮೂಡಿಸುತ್ತ ಜನರಲ್ಲಿ ಭಕ್ತಿ ಭಾವನೆಗಳನ್ನು ಬಿತ್ತುವ ಮೂಲಕ ದೊಡ್ಡ ಮಟ್ಟದ ಕ್ರಾಂತಿಗೈದಿದ್ದಾರೆ ಎಂದರು.
ಹಿರಿಯ ಖ್ಯಾತ ವಕೀಲರಾದ ಶ್ರೀನಿವಾಸ ಢಣಾಪುರ ಸ್ವಾಗತಿಸಿದರೆ, ಪುನರುತ್ಥಾನದ ಶ್ರೀನಾಥ ಜೋಷಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಿ.ಹರಿಪ್ರಸಾದ್ ಅವರು ಪ್ರಾರ್ಥಿಸಿದರೆ, ಶ್ರೀಮತಿ ಸೌಭಾಗ್ಯ ತಂಡದವರು, ಕುಮಾರಿ ಚಿ.ಶ್ರೇಯ, ಶ್ರೀರಕ್ಷಾ ಕಾವಿ, ಚಿಕ್ಕ ಕು.ಸಾಧನಾ ಅವರು ಗೀತಗಾಯನ ನಡೆಸಿಕೊಟ್ಟರು. ನಿವೃತ್ತ ಶಿಕ್ಷಕರು ಹಾಗೂ ಸಮಾಜ ಸೇವಕರಾದ ಗುಂಡಾಚಾರ್ ವಂದಿಸಿದರು. ಸತ್ಯನಾರಾಯಣ ಪೇಟೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ವ್ಯವಸ್ಥಾಪಕರು, ಸಿಬ್ಬಂದಿ ವರ್ಗ ಹಾಗೂ ಕಾರ್ಯಕರ್ತರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಡಿ.ಕೆ.ಪ್ರಸಾದ್ ಸೇರಿದಂತೆ ಕಾರ್ಯಕ್ರಮದಲ್ಲಿ ಅನೇಕ ಇತಿಹಾಸಪ್ರಿಯರು ಪಾಲ್ಗೊಂಡಿದ್ದರು. ಪರಂಪರಾಗತ ಐತಿಹ್ಯದಂತೆ, ವಿಜಯನಗರ ಸಾಮ್ರಾಜ್ಯದ ಸಂಸ್ಥಾಪನೆಯು ಸಂಭವಿಸಿದ್ದು - ಶಾಲಿವಾಹನ ಶಕ ೧೨೫೮, ಧಾತೃ ಸಂವತ್ಸರ, ವೈಶಾಖ ಶುದ್ಧ ಸಪ್ತಮಿ - ಏಪ್ರಿಲ್ ೧೭, ೧೩೩೬ರ ಸ್ಮರಣೆಗಾಗಿ ಈ ಕಾರ್ಯಕ್ರಮ ಚೇತೋಹಾರಿಯಾಗಿ ಜರುಗಿದ್ದು ವಿಶೇಷ.