ಪಟ್ಟಣದ ಪಾದಗಟ್ಟೆಯ ಬಳಿ ಸತತ 9ನೇ ವರ್ಷದಿಂದ ಗಣೇಶೋತ್ಸವ ನಡೆಯುತ್ತಿದ್ದು ಅದಕ್ಕಾಗಿ ಆಯೋಜಕರು 9ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದರು. ಅದರಂತೆ 9ನೇ ದಿನಕ್ಕೆ ವಿಸರ್ಜಿಸಲು ತೀರ್ಮಾನಿಸಿ ಗುರುವಾರ ಬೆಳಗಿನಿಂದಲೇ ಪಾದಗಟ್ಟೆಯ ಬಳಿ ನೂರಾರು ಕಾರ್ಯಕರ್ತರು ಗಣೇಶ ವಿಸರ್ಜನೆಗೆ ಸಕಲ ಸಿದ್ಧತೆಯನ್ನು ಕೈಗೊಂಡಿದ್ದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೇಸರಿ ಬಾವುಟಗಳು ರಾರಾಜಿಸಿದವು.

ವಾಲ್ಮೀಕಿ ವೃತ್ತದಲ್ಲಿ ಸುಂದರವಾಗಿ ಬಣ್ಣಬಣ್ಣದ ಹೂವುಗಳಿಂದ ಓಂ ಅಕ್ಷರದ ಚಿತ್ತಾರವನ್ನು ಬಿಡಿಸಲಾಗಿತ್ತು. ಆಕರ್ಷಕವಾಗಿದ್ದ ಚಿತ್ತಾರದ ಪೋಟೋ ತೆಗೆದುಕೊಳ್ಳುವಲ್ಲಿ ನೂರಾರು ಯುವಕರು ನಿರತರಾಗಿದ್ದರು.
ಮದ್ಯಾಹ್ನ 3ಗಂಟೆಗೆ ವಿಶ್ವಹಿಂದೂ ಮಹಾಗಣಪತಿಗಳನ್ನು ಅಲಂಕಾರಗೊಂಡ ಟ್ರಾಕ್ಟರ್‌ಗಳಲ್ಲಿ ಪ್ರತಿಷ್ಠಾಪಿಸಿಕೊಂಡು ಶೋಭಾಯಾತ್ರೆಗೆ ಸಿದ್ದಗೊಳಿಸಲಾಯಿತು. ಇದೇವೇಳೆ ಮೆರವಣಿಗೆಗೆ ಪಟ್ಟಣ ಸೇರಿದಂತೆ ಸುತ್ತಮುತ್ತಲ 10ಕ್ಕೂ ಹೆಚ್ಚು ಹಳ್ಳಿಗಳಿಂದ 1000ಕ್ಕೂ ಹೆಚ್ಚು ಯುವಕರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಮೆರವಣಿಗೆಯು ಪಟ್ಟಣದ ಪಾದಗಟ್ಟೆಯಿಂದ ಆರಂಭಗೊಂಡು ವಾಲ್ಮೀಕಿವೃತ್ತಕ್ಕೆ ಆಗಮಿಸಿತು. ನಂತರ ವಾಲ್ಮೀಕಿ ವೃತ್ತದಲ್ಲಿ ಅಲಂಕಾರಗೊಳಿಸಿದ್ದ ಓಂ ಪ್ರತಿರೂಪಕ್ಕೆ ಎಲ್ಲ ಟ್ರಾಕ್ಟರ್‌ಗಳು ಪ್ರದಕ್ಷಿಣೆ ಹಾಕಿ ನಂತರ ತೇರುಬೀದಿ, ಹಟ್ಟಿಮಲ್ಲಪ್ಪನಾಯಕ ವೃತ್ತ, ಗುರುತಿಪ್ಪೇರುದ್ರಸ್ವಾಮಿ ಒಳಮಠ, ನಾಗರಕಟ್ಟೆ, ಅಂಬೇಡ್ಕರ್‌ವೃತ್ತ ಮೂಲಕ ಸಾಗಿಬಂದು ಪೊಲೀಸ್‌ಠಾಣೆಯ ಮುಂಭಾಗದಿಂದ ತೆರಳಿ ಅಂತಿಮವಾಗಿ ಚಿಕ್ಕಕೆರೆ ಬಂದು ಶೋಭಯಾತ್ರೆ ಮುಕ್ತಾಯಗೊಳಿಸಿ ಸಕಲ ಪೂಜಾ ವಿಧಿವಿಧಾನಗಳ ಮೂಲಕ ಎಲ್ಲ 9 ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು.

ಬಿಗಿ ಪೊಲೀಸ್ ಬಂದೋಬಸ್ತ್
ಪಟ್ಟಣದಲ್ಲಿ ಈದ್‌ಮಿಲಾದ್ ಹಾಗೂ ಶೋಭಯಾತ್ರೆ, ಗಣಪತಿ ವಿಸರ್ಜನೆಯ ನಿಮಿತ್ತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಇಬ್ಬರು ಸಿಪಿಐ, 4ಪಿಎಸ್‌ಐ, 50ಕ್ಕೂ ಹೆಚ್ಚು ಪೇದೆಗಳು, 50ಕ್ಕೂ ಹೆಚ್ಚು ಹೋಂ ಗಾರ್ಡ್ಸ್, ಎರಡು ಸಶಸ್ತ್ರ ಮೀಸಲು ಪಡೆ, ಒಂದು ಕೆಎಸ್‌ಆರ್‌ಪಿ ತುಕಡಿಯನ್ನು ನೇಮಿಸಲಾಗಿತ್ತು. ಪೊಲೀಸ್‌ಇಲಾಖೆಯಿಂದ ಗಣೇಶ ವಿಸರ್ಜನೆಯ ಎಲ್ಲಾ ಹಂತಗಳ ವಿಡಿಯೋ ಚಿತ್ರೀಕರಣ ಮಾಡಿದರು. ಮತ್ತು ಪಟ್ಟಣದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಶೋಭಾಯಾತ್ರೆಯಲ್ಲಿ ಡಿಜೆ ಬದಲಿಗೆ ಕಡಿಮೆ ಶಬ್ದದ ಎರಡು ಸ್ಪೀಕರ್ ಧ್ವನಿವರ್ಧಕಗಳಿಗೆ ಅವಕಾಶ ನೀಡಲಾಗಿತ್ತು. ನಾಸೀಕ್‌ಡೋಲುಗಳು, ಜಾನಪದ ವಾದ್ಯಗಳು, ಗೊಂಬೆಗಳ ಕುಣಿತ ಶೋಭಾಯಾತ್ರೆಯ ಮೆರುಗನ್ನು ಹೆಚ್ಚಿಸಿದ್ದವು.
ಅಂತಿಮವಾಗಿ ಗುರುತಿಪ್ಪೇರುದ್ರಸ್ವಾಮಿ ಚಿಕ್ಕಕೆರೆಯಲ್ಲಿ ಪಟ್ಟಣಪಂಚಾಯಿತಿ ನಿಗದಿ ಪಡಿಸಿದ್ದ ಸ್ಥಳದಲ್ಲಿ ಗಣೇಶ ವಿಸರ್ಜನೆ ನೆರವೇರಿಸಲಾಯಿತು.