ಈ ಕುರಿತು ಪರಿಷತ್ತಿನ ಜಿಲ್ಲಾಧ್ಯಕ್ಷ ಆರ್.ಹೆಚ್.ಎಂ. ಚೆನ್ನಬಸವಸ್ವಾಮಿ ಅವರು ಪತ್ರಿಕಾ ಪ್ರಕಟಣೆ ನೀಡಿದ್ದು, ರಾಷ್ಟ್ರೀಯ ಜಾಹೀರಾತು ನೀತಿಯ ಪ್ರಕಾರ ಮತ್ತು ಮೌಢ್ಯತೆ ನಿರ್ಬಂಧ ಕಾನೂನಿನಡಿಯಲ್ಲಿ ಜಾಲಾತಾಣ ಹಾಗೂ ಮಾಧ್ಯಮಗಳಲ್ಲಿ ಸುಳ್ಳು ಜ್ಯೋತಿಷಿಗಳ ಜಾಹೀರಾತುಗಳನ್ನು ನಿರ್ಬಂಧಿಸಬೇಕು. ಔಷಧಗಳು ಹಾಗೂ ಮಾಂತ್ರಿಕ ಪರಿಹಾರಗಳ ಕಾಯ್ದೆಯ ಅನ್ವಯ ಸುಳ್ಳು ಜ್ಯೋತಿಷ್ಯ, ಅಂಧ ವಿಶ್ವಾಸಗಳನ್ನು ಜಾಹೀರಾತು ರೂಪದಲ್ಲಿ ನೀಡುವ ಹಾಗಿಲ್ಲ. ಆದರೂ ಸಹ ಸಮೂಹ ಮಾಧ್ಯಮಗಳಲ್ಲಿ ಇಂತಹ ಜಾಹೀರಾತುಗಳು ಅಡತಡೆ ಇಲ್ಲದೇ ಪ್ರಸಾರವಾಗುತ್ತಿವೆ. ಜಾಹೀರಾತುಗಳನ್ನು ನಿಯಂತ್ರಿಸುವ ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ ಕೌನ್ಸಿಲ್ ಆಫ್ ಇಂಡಿಯಾ ಇದಕ್ಕಾಗಿ ಮಾರ್ಗಸೂಚಿಗಳನ್ನು ರಚಿಸಿದೆ. ಆದರೂ ಇಂತಹ ಜಾಹೀರಾತುಗಳು ಪ್ರಸಾರವಾಗುತ್ತಿರುವುದು ದುರಾದೃಷ್ಟಕರವೆಂದು ಅವರು ತಿಳಿಸಿದ್ದಾರೆ.
ಎ.ಎಸ್.ಸಿ.ಐ.ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಅಥವಾ ವೈದ್ಯರು ದೃಢಪಡಿಸಲಾಗದ ಉತ್ಪನ್ನಗಳು ಮತ್ತು ಸೇವೆಗಳನ್ನು ಜಾಹೀರಾತು ಮಾಡಬಾರದು ಎಂದು ಅದು ಹೇಳುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ದೆವ್ವ, ಭೂತಗಳಿರುವಂತೆ ಗ್ರಾಫಿಕ್ಸ್ ಚಿತ್ರಗಳನ್ನು ಚಿತ್ರಿಸಿ, ಅವುಗಳನ್ನು ಪ್ರಸಾರ ಮಾಡಲಾಗುತ್ತಿದೆ. ಅವುಗಳನ್ನು ನಿಯಂತ್ರಿಸಲು ಸುಳ್ಳು ಸುದ್ದಿಗಳನ್ನು ನಿಯಂತ್ರಿಸುವ ``ಫ್ಯಾಕ್ಟ್ ಚೆಕ್'' ರೀತಿಯಲ್ಲಿ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಅವರು ಸರ್ಕಾರಗಳನ್ನು ಒತ್ತಾಯಿಸಿದ್ದಾರೆ.

ಬಹಳಷ್ಟು ಮಂದಿ ರೀಲ್ಸ್ ಮಾಡಿ ದೆವ್ವ ಬಿಡಿಸಲಾಗುತ್ತದೆ. ಇಲ್ಲಿ ಮಾಟ, ಮಂತ್ರ, ವಶೀಕರಣ ಮಾಡಲಾಗುತ್ತದೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಇಂಥವುಗಳನ್ನು ಸರ್ಕಾರ ಕಠಿಣವಾಗಿ ಕಾನೂನು ಕ್ರಮ ಜರುಗಿಸಿ, ಮುಲಾಜಿಲ್ಲದೇ ನಿರ್ಬಂಧಿಸಬೇಕು. ದೇಶದಲ್ಲಿಯೇ ಪ್ರಥಮವಾಗಿ ಕರ್ನಾಟಕ ರಾಜ್ಯವು ಮೂಢ ನಂಬಿಕೆಗಳ ವಿರುದ್ಧ ಕಾನೂನು ರೂಪಿಸಿದೆ. ಕೇವಲ ಕಾನೂನು ರೂಪಿಸಿದರೆ ಸಾಲದು, ಅಂಧಾಚರಣೆಗೆ ಕುಮ್ಮಕ್ಕು ನೀಡುವ, ಸುಳ್ಳು ಜಾಹೀರಾತುಗಳನ್ನು ನೀಡಿ ಜನರನ್ನು ವಂಚಿಸುತ್ತಿರುವವರ ಜಾಲದ ಬಾಲ ಕತ್ತರಿಸಬೇಕೆಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಆರ್.ಹೆಚ್.ಎಂ.ಚನ್ನಬಸವಸ್ವಾಮಿ ಅವರು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.