- ಮಂಜುನಾಥ. ಡಿ ವಾಲ್ಮೀಕಿ
ಮರಿಯಮ್ಮನಹಳ್ಳಿ: ಪಟ್ಟಣದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕೆಲವು ವಿಕೃತ ಮನಸ್ಸುಳ್ಳ ಕಿಡಿಗೇಡಿಗಳು ಶಾಲಾ ಕೊಠಡಿ ಬಾಗಿಲು ಮುರಿದು ಒಳನುಗ್ಗಿ ಮಕ್ಕಳ ನಲಿಕಲಿ ಪುಸ್ತಕ, ಆಟಿಕೆಗಳನ್ನು ಬಿಸಾಡಿ, ಅಲ್ಲಿಯೇ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆಯುತ್ತಿದ್ದಾರೆ. ಈ ಕಿಡಿಗೇಡಿಗಳ ಕಾಟದಿಂದ ರೋಸಿದ ಶಾಲಾ ಶಿಕ್ಷಕರು , ಹಾವಳಿ ತಡೆಯುವಂತೆ ಜನರು ಒತ್ತಾಯಿಸಿದ್ದಾರೆ.
ನಿಲ್ಲದ ಹಾವಳಿ : ಶಾಲಾ ಅವಧಿ ಮುಗಿದ ಮೇಲೆ ಸಂಜೆಯಾದರೆ ಸಾಕು ಅಲ್ಲಿ ಕಿಡಿಗೇಡಿಗಳ ಕುಡಿದು ಬಾಟಲಿಗಳನ್ನು ಹೊಡೆದು ಅಲ್ಲಿನ ಮಕ್ಕಳಿಗೆ ತೊಂದರೆ ಯಾಗುತ್ತದೆ. ಈ ಹಾವಳಿ ಹೆಚ್ಚುತ್ತದೆ. ಹಾಗೂ ರಜಾ ದಿನಗಳಲ್ಲಿ ಶಾಲಾ ಕೊಠಡಿಗಳ ಮುಂದೆ ಪುಂಡರು ಜಮಾಯಿಸಿಕೊಂಡು ಮೊಬೈಲ್ ನಲ್ಲಿ ಗೇಮ್ ಆಡುತ್ತ, ಹರಟೆ ಹೊಡೆಯುತ್ತ, ಗುಟ್ಕಾ ಜಗಿದು ಆವರಣದಲ್ಲಿ ಉಗುಳಿ ಗಲೀಜು ಮಾಡುತ್ತಿದ್ದಾರೆ. ಇನ್ನೂ ಕೆಲವು ವಿಕೃತ ಮನಸ್ಸುಳ್ಳ ಕಿಡಿಗೇಡಿಗಳು ಶಾಲಾ ಕೊಠಡಿ ಬಾಗಿಲು ಮುರಿದು ಒಳನುಗ್ಗಿ ಮಕ್ಕಳ ನಲಿಕಲಿ ಪುಸ್ತಕ, ಆಟಿಕೆಗಳನ್ನು ಬಿಸಾಡಿ, ಅಲ್ಲಿಯೇ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದಾರೆ.
ಗೋಡೆ ಕೆಡವಿದ ದುರಳರು: ಕೆಲ ತಿಂಗಳಿಂದ ಸರಕಾರಿ ಹೈಸ್ಕೂಲ್ ಆವರಣದ ಸುತ್ತ ನೂತನ ತಡೆಗೋಡೆ ನಿರ್ಮಿಸಲಾಗುತ್ತಿದ್ದು, ಮುಗಿಯುವ ಹಂತದಲ್ಲಿದೆ. ಎರಡು ದಿನದ ಹಿಂದೆ ದುರುಳರು ಸರಕಾರಿ ಮಾದರಿ ಶಾಲೆ ಬಳಿಯ ನೂತನ ತಡೆ ಗೋಡೆ ಕೆಡವಿದ್ದಾರೆ.

ರೋಸಿದ ಶಿಕ್ಷಕರು: ಪದೇ ಪದೇ ಹಾನಿಯಾಗುತ್ತಿರುವ ಶಾಲಾ ಕೊಠಡಿ ಬಾಗಿಲು, ಕಿಟಕಿಗಳನ್ನು ದುರಸ್ತಿ ಗೊಳಿಸುವುದು, ದಿನ ಬೆಳಗಾದರೆ ಹೊಲಸು ಗೊಳಿಸಿದ ಕೊಠಡಿಗಳು, ಆವರಣ ಸ್ವಚ್ಚಗೊಳಿಸುವುದೇ ಕಾಯಕವಾಗಿದ್ದು ಶಿಕ್ಷಕರು, ಬಿಸಿಯೂಟ ಸಿಬ್ಬಂದಿ ರೋಸಿ ಹೋಗಿದ್ದಾರೆ.
ಕಠಿಣ ಕ್ರಮಕ್ಕೆ ಒತ್ತಾಯ: ಒಂದೆಡೆ ಸರಕಾರಿ ಶಾಲೆಗಳು ಮುಚ್ಚುವ ಕಾರ್ಯ ನೋವು ತಂದರೆ, ಇತ್ತ ಇರುವ ಶಾಲೆಗಳನ್ನು ರಕ್ಷಿಸುವುದು ಸವಾಲಿನ ಕೆಲಸವಾಗಿದೆ. ಇರುವ ಶಾಲೆಗಳನ್ನು ರಕ್ಷಿಸಿ, ಉಳಿಸಲು ಸಂಬಂಧಿಸಿದ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಲಿ ಎಂಬುದು ಜನರ ಕಳಕಳಿಯಾಗಿದೆ.

ಪೊಲೀಸರ ನಿರ್ಲಕ್ಷ್ಯ: ಹಲವು ಬಾರಿ ಸರಕಾರಿ ಶಾಲಾ ಆವರಣ ಅನೈತಿಕ ತಾಣ, ಕುಡುಕರ ಮತ್ತು ಕಿಡಿಗೇಡಿಗಳ ಹಾವಳಿ ಎಂದು ದಿನಪತ್ರಿಕೆಗಳಲ್ಲಿ ಸುದ್ದಿ ಪ್ರಕಟಗೊಳ್ಳುತ್ತಿದ್ದರು ಇತ್ತ ಪೊಲೀಸ್ ಇಲಾಖೆ ಗಮನ ಹರಿಸದಿರುವುದು ಅವರ ನಿರ್ಲಕ್ಷ್ಯ ಎತ್ತಿತೋರಿಸುತ್ತಿದೆ.