
ತುಂಗಭದ್ರಾ ಎಡದಂಡೆ ನಾಲೆಯ ನೀರು ಟಿ.ಬಿ.ಡ್ಯಾಂ ಕ್ಯಾಂಪ್, ನಿಂಗಾಪುರ, ಹುಲಿಗಿ ಕ್ಯಾಂಪ್, ಹಿಟ್ನಾಳ್ ಕ್ರಾಸ್, ಹಿಟ್ನಾಳ, ಶಹಪುರ ಮತ್ತು ಅಗಳಕೇರಿ ಮೂಲಕ ಸಣಾಪುರ ಕೆರೆವರೆಗೆ ಪೂರೈಕೆಯಾಗುತ್ತದೆ. ಸುಮಾರು 40 ಕಿ.ಮೀ.ಅಂತರದಲ್ಲಿ ಹರಿಯುವ ನೀರು ಇದೀಗ ಸ್ಥಗಿತಗೊಳಿಸಿದ್ದರಿಂದ ಮೊಣಕಾಲುದ್ದ ಮತ್ತು ಅದಕ್ಕಿಂತ ಕಡಿಮೆ ಉಳಿದ ನೀರಿನಲ್ಲಿ ಮೀನು ಹಿಡಿಯುವ ಮತ್ಸ್ಯ ಪ್ರೇಮಿಗಳಿಗೆ ಅನುಕೂಲ ಕಲ್ಪಿಸಿಕೊಟ್ಟಿದೆ.

ನಾಲೆಯ ಎರಡೂ ಪಾರ್ಶ್ವದಲ್ಲಿರುವ ಗ್ರಾಮಗಳ ಕೆಲ ಮತ್ಸ್ಯಪ್ರಿಯರು ಬೆಳಿಗ್ಗೆಯಿಂದ ನಾಲೆಯಲ್ಲಿ ಬಲೆ ಬೀಸಿ ಜಿಲೇಬಿ, ರವು ನಂತಹ ಮೀನುಗಳನ್ನು ಹಿಡಿದು ದೈನಂದಿನ ಉಪ ಜೀವನಕ್ಕೆ ಆಧಾರ ಮಾಡಿಕೊಂಡಿದ್ದಾರೆ. ಅಳಿದುಳಿದ ನೀರಿನಲ್ಲಿ ಸಣಾಪುರ ಕೆರೆಯಿಂದ ಮತ್ತು ತುಂಗಭದ್ರಾ ಜಲಾನಯನ ಪ್ರದೇಶದಿಂದ ಬರುವ ಮೀನುಗಳು ಗ್ರಾಮೀಣ ಭಾಗದ ಕೆಲ ಜನರಿಗೆ ಜೀವನೋಪಾಯ ಕಲ್ಪಿಸುತ್ತಿವೆ.
ಜಿಲೇಬಿ ಮತ್ತು ರವು ಮೀನು ಕೆ.ಜಿ.ಗೆ 100 ರೂ.ನಂತೆ ಮಾರಾಟ ಮಾಡಿ ಮತ್ಸ್ಯ ಪ್ರೇಮಿಗಳು ಉಳಿದ ಮೀನುಗಳನ್ನು ತಮ್ಮ ದೈನಂದಿನ ಉಪಜೀವನಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ತುಂಗಭದ್ರೆ ಬಂಜೆಯಲ್ಲ. ಎಲ್ಲರಿಗೂ ಎಲ್ಲ ರೀತಿಯಿಂದಲೂ ನೆರವಾಗುತ್ತಿದ್ದಾಳೆ ಎನ್ನುವುದಕ್ಕೆ ಇದು ಸಾಕ್ಷಿ.