ನಾಯಕನಹಟ್ಟಿ : ಹೋಬಳಿಯ ಜಾಗನೂರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರು ಕರ್ತವ್ಯಲೋಪ ಎಸಗಿರುವ ಹಿನ್ನೆಲೆಯಲ್ಲಿ ಅವರನ್ನು ಕೂಡಲೇ ಕರ್ತವ್ಯದಿಂದ ಅಮಾನತಿ ಮಾಡಬೇಕೇಂದು ಗ್ರಾಮಸ್ಥರು ಒತ್ತಾಯಿಸಿದರು.
ಯುವಕ ದೇವರಾಜ್ ಮಾತನಾಡಿ ನಮ್ಮ ಶಾಲೆಯಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಬೇಕು ಸುಸಜ್ಜಿತವಾದ ಶೌಚಾಲಯ ನಿರ್ಮಾಣ ಮಾಡಬೇಕು, ಮಕ್ಕಳಿಗೆ ಕುಡಿಯಲು ಶುದ್ಧವಾದ ನೀರನ್ನು ಕೊಡಬೇಕು, ಹಾಲಿನ ಪ್ಯಾಕೆಟ್‌ನ್ನು ಮಾರಿಕೊಂಡಿರುವ ಮುಖ್ಯಶಿಕ್ಷಕ ನಮ್ಮ ಶಾಲೆಗೆ ಅವರು ಅವಶ್ಯಕತೆ ಇರುವುದಿಲ್ಲ ಬೇರೆ ಕಡೆಗೆ ವರ್ಗಾವಣೆ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್‌ರವರಿಗೆ ಮನವಿಮಾಡಿಕೊಂಡರು.
ಜಾಗನೂರಹಟ್ಟಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧ರಿಂದ೭ನೇ ತರಗತಿಯವರೆಗೂ ೧೪೩ಮಕ್ಕಳು ಕಲಿಕೆಯಲ್ಲಿ ತೊಡಗಿದ್ದಾರೆ. ಮುಖ್ಯಶಿಕ್ಷಕ ಸೇರಿ ೪ಜನ ಸಹ ಶಿಕ್ಷಕರು, ಒಬ್ಬರು ಅತಿಥಿ ಶಿಕ್ಷಕರಿದ್ದಾರೆ. ಶಾಲೆಯಲ್ಲಿರುವ ಮುಖ್ಯಶಿಕ್ಷಕರು ೨೦೦೮ರಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಒಂದು ದಿನವೂ ತರಗತಿಯನ್ನು ತೆಗೆದುಕೊಂಡಿಲ್ಲ. ಶಾಲೆಯಲ್ಲಿ ೬ಗಣಕಯಂತ್ರಗಳಿದ್ದರೂ ಅವುಗಳನ್ನು ಬಳಸುತ್ತಿಲ್ಲ. ಗಣಕಯಂತ್ರ ಬಳಸುವ ನೈಪುಣ್ಯವಿರುವ ಶಿಕ್ಷಕರಿದ್ದರೂ ಗಣಕಯಂತ್ರ ಕಲಿಕೆಗೆ ಪ್ರೋತ್ಸಾಹ ನೀಡುತ್ತಿಲ್ಲ. ಕ್ರೀಡಾಪರಿಕರಗಳಿದ್ದರೂ ವಿದ್ಯಾರ್ಥಿಗಳ ಬಳಕೆಗೆ ಸಿಗುತಿಲ್ಲ. ಶಾಲೆಯಲ್ಲಿ ಹಲವು ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲ. ಅದರ ದುರಸ್ಥಿಗೆ ಕ್ರಮವಹಿಸಿಲ್ಲ. ಶುದ್ಧಕುಡಿಯುವ ನೀರಿಲ್ಲ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಒಂದು ಶೌಚಾಲಯವಿದ್ದರೂ ಅದು ಸುಸ್ಥಿತಿಯಲ್ಲಿಲ್ಲ. ಹಾಗಾಗಿ ಬಹುತೇಕ ವಿದ್ಯಾರ್ಥಿಗಳು ಶಾಲಾ ಆವರಣದಿಂದ ಹೊರಬಂದು ಸಮೀಪದ ಹೊಲಗಳಿಗೆ ಶೌಚಾಲಯಕ್ಕೆ ತೆರಳಬೇಕಾಗಿರುವ ಅನಿವಾರ್ಯತೆ ಎದುರಾಗಿದೆ. ಈ ಬಗ್ಗೆ ಮುಖ್ಯಶಿಕ್ಷಕರು ಅಗತ್ಯ ಕ್ರಮಕೈಗೊಂಡಿಲ್ಲ. ಸಮಯಕ್ಕೆ ಸರಿಯಾಗಿ ಶಾಲೆ ಬರುವುದಿಲ್ಲ. ಇದರಿಂದ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ತೊಡಕಾಗಿದೆ ಎಂದು ಗ್ರಾಮಸ್ಥರಾದ ವಿ.ಅಭಿಷೇಕ್, ಟಿ.ನಾಗೇಂದ್ರ, ಮಹಾಂತೇಶ್ ಆರೋಪಿಸಿದರು.
ಸರ್ಕಾರ ವಿದ್ಯಾರ್ಥಿಗಳಿಗಾಗಿ ನೀಡಿರುವ ಶೂಗಳಲ್ಲಿ ಮುಖ್ಯಶಿಕ್ಷಕರು ಇತ್ತೀಚಿಗೆ ೧೯ಜೊತೆ ಶೂಗಳನ್ನು ನಾಯಕನಹಟ್ಟಿ ಖಾಸಗಿ ಅಂಗಡಿಗೆ ಮಾರಾಟ ಮಾಡಿರುವ ಬಗ್ಗೆ ನಮ್ಮ ಗ್ರಾಮದ ಯುವಕರು ವಿಡಿಯೋ ಚಿತ್ರಿಕರಿಸಿಕೊಂಡಿದ್ದಾರೆ. ಹಾಗೇ ನಿಯಾಮವಳಿಯಂತೆ ಶಾಲೆಯಲ್ಲಿ ವಾರದಲ್ಲಿ ಕೇವಲ ೨ದಿನ ಮಾತ್ರ ಮೊಟ್ಟೆ ವಿತರಿಸುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ಶಾಲೆಗೂ ಗ್ರಾಮಸ್ಥರಿಗೂ ಸಂಬAಧವಿಲ್ಲ ಎಂದು ಉಡಾಫೆ ಉತ್ತರ ನೀಡುತ್ತಾರೆ. ಹಾಗೇ ಶಾಲೆಯಲ್ಲಿದ್ದ ಹಳೆಯ ಕಬ್ಬಿಣದ ಸಾಮಾಗ್ರಿಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ. ಮಾರಾಟದ ಹಣದ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಜತೆಗೆ ೧೪೩ ವಿದ್ಯಾರ್ಥಿಗಳಿಗೆ ಬಿಸಿಯೂಟಕ್ಕೆ ೧೪ಕೆಜಿಯಷ್ಟು ಅಕ್ಕಿ ನೀಡಬೇಕು. ಆದರೆ ಕೇವಲ ೭ಕೆಜಿಯಷ್ಟು ಅಕ್ಕಿ ನೀಡಿ ಮಕ್ಕಳಿಗೆ ಗುಣಮಟ್ಟದ ಮತ್ತು ಹೊಟ್ಟೆತುಂಬಾ ಊಟ ಹಾಕುತ್ತಿಲ್ಲ. ಸಾಂಬಾರ್ ಯಾವಾಗಲೂ ಕಳೆಪೆಯಾಗಿರುತ್ತದೆ. ಅಕ್ಷರದಾಸೋಹದ ಆಹಾರ ಪಟ್ಟಿಯಂತೆ ಊಟ ನೀಡುತ್ತಿಲ್ಲ ಎಂದು ಗ್ರಾಮಸ್ಥರಾದ ಒ.ಉಮೇಶ್, ಜಿ.ಬಿ.ದೇವರಾಜ್, ಪಾಲಯ್ಯ ಆರೋಪಿಸಿ ಶಾಲಾ ಆವರಣಕ್ಕೆ ದಾವಿಸಿದ ೧೦೦ಕ್ಕೂ ಹೆಚ್ಚು ಗ್ರಾಮಸ್ಥರೊಂದಿಗೆ ಮುಖ್ಯಶಿಕ್ಷಕರ ಕರ್ತವ್ಯಲೋಪವನ್ನು ಖಂಡಿಸಿ ಪ್ರತಿಭಟನೆಗೆ ಮುಂದಾದರು. ಆಗ ಸ್ಥಳಕ್ಕಾಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಗ್ರಾಮಸ್ಥರ ಆರೋಪಗಳನ್ನು ಆಲಿಸಿದರು.

ನಾಯಕನಹಟ್ಟಿ ಪಟ್ಟಣದ ಜಾಗನೂರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು.
ಶಾಲೆಯಲ್ಲಿನ ದಾಖಲೆಗಳನ್ನು ಮತ್ತು ವಸ್ತು ಸ್ಥಿತಿಯನ್ನು ಪರಿಶೀಲಿಸಿ ಮುಖ್ಯಶಿಕ್ಷಕರನ್ನು ತಕ್ಷಣದಿಂದಲೇ ಕರ್ತವ್ಯದಿಂದ ಅಮಾನತಿ ಮಾಡಲು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಶಿಫಾರಸು ಮಾಡಲಾಗುವುದು ಎಂದರು. ಇದರಿಂದ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದರು. ಇದೇ ವೇಳೆ ಪ.ಪಂ.ಸದಸ್ಯ ಎಂ.ಟಿ.ಮಂಜುನಾಥ, ಗ್ರಾಮಸ್ಥರಾದ ಎಸ್.ಪಿ.ಪಾಲಯ್ಯ, ನಾಗರಾಜ, ಪ್ರಹ್ಲಾದ, ಮಂಜಣ್ಣ, ಉಮೇಶ್, ದೇವರಾಜ್, ದರ್ಶನ್, ಸುರೇಶ್, ಬಿ.ಟಿ.ಪ್ರಕಾಶ್, ಮುತ್ತಯ್ಯ, ನಿಂಗಣ್ಣ, ಪಾಪಣ್ಣ ಇದ್ದರು.