ಪ್ರತಿವರ್ಷ ಶ್ರಾವಣ ಮಾಸದ ಕೊನೆ ಶನಿವಾರ ಅಂದಿಗಾಲೀಶ ಸ್ವಾಮಿಯ ಜಾತ್ರೆ ನಡೆಯುವುದು ವಾಡಿಕೆ. ಈ ಬಾರಿ ಶ್ರಾವಣ ಮಾಸದಲ್ಲಿ ಐದು ಶನಿವಾರವಾಗಳು ಬಂದಿದ್ದರಿAದ ಮತ್ತು ಐದನೇ ಶನಿವಾರ ಅಮಾವಾಸ್ಯೆ ಇರುವುದರಿಂದ ನಾಲ್ಕನೇ ಶನಿವಾರದಂದು ಸದ್ಭಕ್ತರು ಶ್ರೀ ಅಂದಿಗಾಲೀಶ ಜಾತ್ರೆಯನ್ನು ಅಯೋಜಿಸಿದ್ದರು. ಗುಡ್ಡದಲ್ಲಿ ಅಗಳಕೇರಿ-ಶಹಪುರ-ಶಿವಪುರ ಮತ್ತಿತರೆ ಹಲವಾರು ಗ್ರಾಮಗಳ ದೈವಸ್ಥರ ಸಹಕಾರದೊಂದಿಗೆ ಬೆಳಿಗ್ಗೆಯಿಂದ ಸಂಜೆಯವರಗೆ ವಿವಿಧ ಧಾರ್ಮಿಕ ಆಚರಣೆಗಳು ನಡೆದವು.

ಬೆಟ್ಟ ಏರಲು ಕಳೆದ ೯ ವರ್ಷಗಳ ಹಿಂದೆ ೯೫೬ ಮೆಟ್ಟಿಲುಗಳನ್ನು ನಿರ್ಮಾಣ ಮಾಡಿದ್ದು, ಮೆಟ್ಟಿಲುಗಳಿಗೆ ಸುಣ್ಣ-ಬಣ್ಣ ಬಳಿಯುವ ಕಾರ್ಯಕ್ರಮದಲ್ಲಿ ಭಕ್ತರು ಕಳೆದ ಒಂದು ವಾರದಿಂದ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಜಾತ್ರೆಯ ದಿನದಂದು ಅಗಳಕೇರಿಯಿಂದ ಬೆಳಿಗ್ಗೆ ಶ್ರೀ ಅಂದಿಗಾಲೀಶನ ಭವ್ಯ ಪ್ರಭಾವಳಿಯನ್ನು ಪಲ್ಲಕ್ಕಿ ಮೆರವಣಿಗೆ ಮೂಲಕ ಗುಡ್ಡಕ್ಕೆ ಕರೆ ತರಲಾಯಿತು. ಅಂದಿಗಾಲೀಶನ ಗುಡ್ಡದಲ್ಲಿ ಪ್ರಾತಃಕಾಲದಿಂದಲೇ ತೈಲಾಭಿಷೇಕ, ಯೋನಿಕುಂಡದ ಜಲಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಎಲೆ ಚಟ್ಟು ಸೇವೆ, ಹೂವಿನ ಅಲಂಕಾರ ಸೇವೆ, ಹಣ್ಣು, ಕಾಯಿ, ಪಂಚಕಜ್ಜಾಯ ಸಮರ್ಪಣೆ ಬಳಿಕ ಮಹಾಮಂಗಳಾರತಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಗಂಟೆ, ಜಾಗಟೆ, ತಾಳ, ಮೇಳಗಳ ಮಂಗಲಕರ ವಾದ್ಯಗಳು ಮೊಳಗಿದವು.

ಸದ್ಭಕ್ತರ ನೆರವಿನೊಂದಿಗೆ ಬೆಳಿಗ್ಗೆಯಿಂದ ಸಂಜೆಯವರೆಗೂ ಅನ್ನಸಂತರ್ಪಣೆ ಜರುಗಿದ್ದು, ಗುಡ್ಡಕ್ಕೆ ಸಾವಿರಾರು ಭಕ್ತರು ಆಗಮಿಸಿ ಶ್ರೀ ಅಂದಿಗಾಲೀಶ ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಹಾವಿನ ಹೆಡೆಯ ಬಂಡೆಯ ಹುತ್ತದ ಪೂಜೆ ನೆರವೇರಿಸಿದ ಭಕ್ತರು ಯೋನಿಕುಂಡದ ಬಳಿಯ ವಿಶಾಲವಾದ ಬಂಡೆಯಲ್ಲಿ ಕುಟುಂಬ ಸಮೇತ ಖಾದ್ಯಗಳನ್ನು ಸೇವಿಸಿ, ಪ್ರಕೃತಿಯ ವಿಸ್ಮಯ ಲಾಸ್ಯವನ್ನು ಸವಿದರು. ಅನೇಕ ಭಕ್ತರು ತಮ್ಮ ಪರಿವಾರದೊಂದಿಗೆ ಆಗಮಿಸಿ ಗುಡ್ಡದಲ್ಲಿ ಅಡುಗೆ ತಯಾರಿಸಿ, ಅಂದಿಗಾಲೀಶನಿಗೆ ನೈವೇದ್ಯ ಸಮರ್ಪಿಸಿ ಮೂಲ ಸಂಪ್ರದಾಯ ಮೆರೆದರು. ಸಂಜೆಯ ಹೊತ್ತು ಅಂದಿಗಾಲೀಶ ಸ್ವಾಮಿಯ ಪಲ್ಲಕ್ಕಿ ಮರಳಿ ಅಗಳಕೇರಿ ಗ್ರಾಮಕ್ಕೆ ಕರೆ ತರಲಾಯಿತು. ಬಳಿಕ ಗುಡ್ಡದಲ್ಲಿ ಪಟಾಕಿ, ಮದ್ದುಗಳನ್ನು ಸಿಡಿಸಿ ಅಂದಿಗಾಲೀಶ ಜಾತ್ರೆಯನ್ನು ಸಂಪನ್ನಗೊಳಿಸಲಾಯಿತು.
ತುಂಗಭದ್ರಾ ಎಡದಂಡೆ ನಾಲೆಗೆ ಸೇತುವೆ ಇರದೇ ಇರುವುದರಿಂದ ಭಕ್ತರು ಕಾಲು ಸೇತುವೆ ಮೂಲಕ ಗುಡ್ಡದತ್ತ ತೆರಳಲು ಆತಂಕವನ್ನು ಎದುರಿಸಬೇಕಾಯಿತು. ಮುನಿರಾಬಾದ್ ಪೊಲೀಸ್ ಠಾಣೆಯ ಅಧಿಕಾರಿ ಸುನೀಲ್ ಮತ್ತು ಸಿಬ್ಬಂದಿಗಾಳದ ನರಸಪ್ಪ, ಶರಣು ಮತ್ತಿತರರು ಕಾಲು ಸೇತುವೆ ದಾಟುವಲ್ಲಿ ಭಕ್ತರಿಗೆ ಇಡೀ ದಿನ ನೆರವಾಗಿ ಆತಂಕವನ್ನು ದೂರ ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

ಜಾತ್ರೆಯಲ್ಲಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಿAದಲೂ ಭಕ್ತರು ಬಂದಿದ್ದು ವಿಶೇಷವಾಗಿತ್ತು. ಕರ್ನಾಟಕದ ರಾಜಧಾನಿ ಬೆಂಗಳೂರು ಒಳಗೊಂಡAತೆ ರಾಜ್ಯದ ನಾನಾ ಜಿಲ್ಲೆಗಳ ಭಕ್ತರು, ಕೊಪ್ಪಳ, ಗಂಗಾವತಿ, ಕನಕಗಿರಿ, ಹೊಸಪೇಟೆ, ಯಲಬುರ್ಗಾ, ಗದಗ, ಕಾರಟಗಿ, ಹುಲಿಗಿ, ರಾಯಚೂರು, ಸುತ್ತಮುತ್ತಲಿನ ಗ್ರಾಮಗಳಾದ ಚಂದ್ರಗಿರಿ, ಬಿಳೇಬಾವಿ, ಅಚಲಾಪುರ, ಹಿಟ್ನಾಳ, ಕಂಪಸಾಗರ, ಹೊಸಳ್ಳಿ, ಬೇವಿನಹಳ್ಳಿ, ಗುಡ್ಡದಹಳ್ಳಿ, ಲಿಂಗದಹಳ್ಳಿ, ಬೂದುಗುಂಪಾ, ಇಂದರಿಗಿ ಸೇರಿದಂತೆ ನೂರೆಂಟು ಗ್ರಾಮಗಳ ಸಹಸ್ರಾರು ಭಕ್ತರು ಶ್ರೀ ಅಂದಿಗಾಲೀಶನ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಜಾತ್ರೆಯ ವಿಶೇಷ ಕಾರ್ಯಕ್ರಮಗಳ ನೇತೃತ್ವವನ್ನು ಅಂದಿಗಾಲೀಶನ ಭಕ್ತರಾದ ಕೃಷ್ಣ ಗಡಾದ, ಕನಕರಾಜ ಬುಳ್ಳಾಪುರ, ಮಂಜುನಾಥ ಶೆಟ್ಟರ್, ಪರಶುರಾಮ ವಡ್ಡರ್, ಹನುಮಂತ ಭಜಂತ್ರಿ, ರಾಮಕೃಷ್ಣ ಬಿಲಂಕರ್, ಹುಲುಗಪ್ಪ ಗಡಾದ, ಕೆಂಚಪ್ಪ ಹಿಟ್ನಾಳ, ವೀರಣ್ಣ ಕೋಮಲಾಪುರ ಸೇರಿದಂತೆ ಅನೇಕ ಮುಖಂಡರು, ಧುರೀಣರು ವಹಿಸಿದ್ದರು. ಮುಂದಿನ ವರ್ಷ ದಶಮಾನೋತ್ಸವವನ್ನು ಸದ್ಭಕ್ತರ ನೆರವಿನೊಂದಿಗೆ ಇನ್ನಷ್ಟು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಅಗಳಕೇರಿ-ಶಿವಪುರ-ಶಹಪುರ ಸೇರಿದಂತೆ ಹಲವು ಗ್ರಾಮಗಳ ದೈವಸ್ಥರು ತಿಳಿಸಿದ್ದಾರೆ.