ಇಂದಿನ ವಿಶ್ವ ತಂತ್ರಜ್ಞಾನ ಕ್ರಾಂತಿಯ ಅಂಚಿನಲ್ಲಿ ನಿಂತಿದೆ. “ಆರ್ಟಿಫಿಷಿಯಲ್ ಇಂಟಲಿಜೆನ್ಸಿ” ಎಂದರೆ ಮಾನವನ ಬುದ್ಧಿಯ ಮಾದರಿಯಲ್ಲಿ ಕಾರ್ಯನಿರ್ವಹಿಸುವ ಯಂತ್ರಗಳು. ಅವು ನಿರ್ಣಯ ತೆಗೆದುಕೊಳ್ಳುತ್ತವೆ, ಕಲಿಯುತ್ತವೆ, ಬರೆಯುತ್ತವೆ, ಹಾಡುತ್ತವೆ, ಚಿತ್ರ ಬಿಡಿಸುತ್ತವೆ. ಆದರೆ ಒಂದು ಪ್ರಶ್ನೆ ನಮ್ಮನ್ನು ಎದುರಿಸುತ್ತಿದೆ ಯಂತ್ರಗಳು ಬುದ್ಧಿವಂತವಾಗುತ್ತಿದ್ದಂತೆ, ಮನುಷ್ಯ ಮಾನವೀಯತೆಯನ್ನು ಕಳೆದು ಕೊಳ್ಳುತ್ತಿದ್ದಾನೆಯೇ?
ಈ ಪ್ರಶ್ನೆಗೆ ಉತ್ತರ ಹುಡುಕಲು, ನಾವು ಹಿಂದು ಮುಂದು ನೋಡಬೇಕು ಭಕ್ತಿ, ತತ್ತ್ವ ಮತ್ತು ಮಾನವೀಯತೆಯ ಧ್ವನಿ ಎತ್ತಿದ ಕನಕದಾಸರ ಕಾಲದತ್ತ.
ಆತ್ಮಜ್ಞಾನವೇ ನಿಜವಾದ ಬುದ್ಧಿವಂತಿಕೆ
ಕನಕದಾಸರು 16ನೇ ಶತಮಾನದಲ್ಲಿ ಬದುಕಿದರೂ, ಅವರ ಚಿಂತನೆ 21ನೇ ಶತಮಾನದ ಯಂತ್ರಮಾನವ ಕಾಲಕ್ಕೂ ಮಾರ್ಗದರ್ಶಕ. ಅವರು ಹೇಳಿದರು: “ನಿನ್ನೊಳಗಿದ್ದ ದೇವನ ಅರಿಯದವನಿಗೆ ಹೊರಗಿನ ಬುದ್ಧಿಯೆಲ್ಲ ವ್ಯರ್ಥವಯ್ಯಾ!”
ಎಐ ಕಾಲಘಟ್ಟದಲ್ಲಿ ಈ ಮಾತುಗಳು ಇನ್ನಷ್ಟು ಪ್ರಸ್ತುತ. ಇಂದು ಜಗತ್ತು ಡೇಟಾ, ಅಲ್ಗಾರಿಥಮ್ ಮತ್ತು ಸಾಫ್ಟ್‌ವೇರ್‌ನ ಆಳ್ವಿಕೆಯಲ್ಲಿ ಬದುಕುತ್ತಿದೆ. ಆದರೆ ಕನಕದಾಸರ ತತ್ತ್ವ ನಮಗೆ ನೆನಪಿಸುತ್ತದೆ. ನಿಜವಾದ ಬುದ್ಧಿವಂತಿಕೆ ಯಂತ್ರದಲ್ಲಿ ಅಲ್ಲ, ಮನುಷ್ಯನ ಆತ್ಮಜ್ಞಾನದಲ್ಲಿದೆ.
ತಂತ್ರಜ್ಞಾನ ನಮ್ಮ ಕೈಯಲ್ಲಿ ಇದ್ದರೂ, ಅದರ ನೈತಿಕ ನಿಯಂತ್ರಣ ನಮ್ಮ ಮನಸ್ಸಿನಲ್ಲಿ ಇರಬೇಕು ಎಂಬುದೇ ಅವರ ತತ್ತ್ವದ ನವೀನ ವ್ಯಾಖ್ಯಾನ.
ಯಂತ್ರಗಳು ಕಲಿಸುತ್ತಿವೆ, ಆದರೆ ಮನುಷ್ಯ ಭಾವಿಸುತ್ತಿದ್ದಾನೆಯೇ?

ಎಐ ಶಿಕ್ಷಣ ಕೊಡಬಹುದು, ವೈದ್ಯಕೀಯ ಚಿಕಿತ್ಸೆ ನೀಡಬಹುದು, ಸುದ್ದಿ ಬರೆಯಬಹುದು. ಆದರೆ ಅದು ಅನುಭವಿಸದು.
ಅಲ್ಗಾರಿಥಮ್ ಮಾನವೀಯ ಹೃದಯದ ಭಾವನೆಗೆ ಬದಲಿ ಆಗಲಾರದು.
ಕನಕದಾಸರ ಭಕ್ತಿ ಈ ವ್ಯತ್ಯಾಸದ ಜೀವಂತ ಚಿತ್ರಣ. ಅವರ ಕೃತಿಗಳು ಕೇವಲ ದೇವರ ಆರಾಧನೆ ಅಲ್ಲ, ಅದು ಮಾನವನೊಳಗಿನ ಭಾವದ ಶೋಧನೆ.
ಅವರು ಬರೆದರು: “ಮನದೊಳಗಿಲ್ಲದ ಭಕ್ತಿ ವ್ಯರ್ಥವಯ್ಯಾ!”
ಈ ಸಾಲು ಇಂದು ಹೊಸ ಅರ್ಥ ಪಡೆಯುತ್ತದೆ:
“ಮನದೊಳಗಿಲ್ಲದ ಬುದ್ಧಿವಂತಿಕೆ ವ್ಯರ್ಥವಯ್ಯಾ!”
ಯಂತ್ರಗಳು ಲೆಕ್ಕ ಹಾಕುತ್ತವೆ, ಮನುಷ್ಯ ಭಾವಿಸುತ್ತಾನೆ. ಈ ಭಾವನೆ ಕಳೆದುಕೊಂಡರೆ, ಮನುಷ್ಯನು ಯಂತ್ರಕ್ಕಿಂತ ವಿಭಿನ್ನವಾಗುವುದಿಲ್ಲ.
ಕನಕದಾಸರ ಸಮಸಮಾಜದ ಕನಸು ಮತ್ತು ಡಿಜಿಟಲ್ ಅಸಮಾನತೆ
ಕನಕದಾಸರು ತಮ್ಮ ಕಾಲದಲ್ಲಿ ವರ್ಣಭೇದ, ಅಸ್ಪೃಶ್ಯತೆ, ಅನ್ಯಾಯದ ವಿರುದ್ಧ ಹೋರಾಡಿದರು. ಅವರ ದೃಷ್ಟಿಯಲ್ಲಿ ದೇವರ ಕೃಪೆಗೆ ಜನ್ಮ, ವರ್ಣ, ಧನ ವ್ಯತ್ಯಾಸವಿಲ್ಲ.

ಇಂದಿನ ಕಾಲದಲ್ಲಿ ಹೊಸ ರೀತಿಯ ಅಸಮಾನತೆ ಹುಟ್ಟಿದೆ
ಡಿಜಿಟಲ್ ಡಿವೈಡ್: ತಂತ್ರಜ್ಞಾನ ಕೆಲವರ ಕೈಯಲ್ಲಿ ಕೇಂದ್ರೀಕರಿಸಿದಾಗ, ಅದು ಹೊಸ ವರ್ಣವ್ಯವಸ್ಥೆ ಸೃಷ್ಟಿಸುತ್ತದೆ.
ಕನಕದಾಸರ “ರಾಮಧಾನ್ಯ ಚರಿತೆ” ಯಲ್ಲಿ ರಾಗಿಯ ಗೆಲುವು ಬಡವರ ಆತ್ಮಗೌರವದ ಸಂಕೇತ. ಇಂದಿನ ಡಿಜಿಟಲ್ ಯುಗದಲ್ಲಿ ಇದೇ ಸಂದೇಶ ಅನ್ವಯಿಸುತ್ತದೆ
ತಂತ್ರಜ್ಞಾನವು ಎಲ್ಲರಿಗೂ ಲಭ್ಯವಾಗ ಬೇಕು, ಮನುಷ್ಯನ ಗೌರವ ಅದರ ಕೇಂದ್ರವಾಗಬೇಕು.
ಎಐ ನೈತಿಕತೆ ಮತ್ತು ಕನಕದಾಸರ ಧರ್ಮ: ಇಂದಿನ ತಂತ್ರಜ್ಞಾನ ಚರ್ಚೆಯ ಪ್ರಮುಖ ವಿಷಯ ಎಐ ಎತಿಕ್ಸ್ (ನೈತಿಕತೆ).ಯಂತ್ರಗಳು ನಿರ್ಧಾರ ತೆಗೆದುಕೊಳ್ಳುವಾಗ ಅದು ನ್ಯಾಯಸಮ್ಮತವೇ ? ಪಕ್ಷಪಾತವಿಲ್ಲದೆ ಕೆಲಸಮಾಡುತ್ತದೆಯೇ?
ಈ ಪ್ರಶ್ನೆಗಳಿಗೆ ಉತ್ತರಕ್ಕಾಗಿ ಶಾಸ್ತ್ರಗಳಿಗಿಂತ ಕನಕದಾಸರ ಧರ್ಮದ ತತ್ತ್ವ ಹೆಚ್ಚು ಪ್ರಸ್ತುತ.
ಅವರು ಹೇಳಿದರು:“ಧರ್ಮವೆಂದರೆ ಸತ್ಯಸಂಧತೆ, ಅಧರ್ಮವೆಂದರೆ ಅನ್ಯಾಯ.” ಇದು ಎಐ ಯುಗದ ನೈತಿಕ ಕೋಡ್ ಆಗಬಹುದು.
ಯಂತ್ರಗಳಿಗೆ ಧರ್ಮ ಕಲಿಸಲು, ಮೊದಲು ಮನುಷ್ಯನೇ ತನ್ನ ಧರ್ಮ ಅರಿಯಬೇಕು. ಯಂತ್ರಗಳನ್ನು ನ್ಯಾಯಪಾಲಕರಾಗಿಸಲು, ಮೊದಲು ನಾವು ನ್ಯಾಯಪರರಾಗಬೇಕು. ಭಕ್ತಿಯ ಶಕ್ತಿ - ಯಂತ್ರಕ್ಕಿಲ್ಲದ ಮಾನವೀಯ ತಂತ್ರ
ಕನಕದಾಸರ ಭಕ್ತಿ ತತ್ತ್ವದಲ್ಲಿ ಪ್ರಜ್ಞೆ ಮತ್ತು ಕರುಣೆ ಒಂದುಗೂಡಿವೆ. ಅವರು ದೇವರಲ್ಲಿ ನಂಬಿಕೆ ಇಟ್ಟರೂ, ಅದನ್ನು ಮಾನವೀಯತೆಗಾಗಿ ಬಳಸಿದರು.
ಇಂದಿನ ಎಐ ಪ್ರಪಂಚದಲ್ಲಿ ನಾವು ಶಕ್ತಿಶಾಲಿಗಳಾಗಿದ್ದೇವೆ, ಆದರೆ ಸಹಾನುಭೂತಿ ಶಾಲಿಗಳಾಗಿಲ್ಲ.
ಕನಕದಾಸರು ಕಲಿಸಿದ ಪಾಠ - ಭಕ್ತಿ ಅಂದರೆ ಸಾಫ್ಟ್‌ವೇರ್‌ನ ಕೋಡ್ ಅಲ್ಲ; ಅದು ಮಾನಸಿಕ ಪ್ರೋಗ್ರಾಂ ಮನುಷ್ಯನೊಳಗಿನ ಕರುಣೆ, ಶಾಂತಿ ಮತ್ತು ಸಮಾನತೆಯ ಸಂವೇದನೆ.
“ದೈವ ಅರಿಯದ ಬುದ್ಧಿ ಮೂರ್ಖತೆ, ಮನುಷ್ಯ ಅರಿಯದ ವಿಜ್ಞಾನ ವಿನಾಶ.”
ಈ ಸಾಲುಗಳನ್ನು ಕನಕದಾಸರ ಮನಸ್ಸಿನಿಂದ ನಾವು ಇಂದು ಓದಬಹುದು.
ಕಲೆಯ ಯಾಂತ್ರೀಕರಣ ಕನಕದಾಸರ ಭಾವದ ಪ್ರಸ್ತುತತೆ ಎಐ ಈಗ ಕಲೆ ಮಾಡುತ್ತಿದೆ ಚಿತ್ರ ಬಿಡಿಸುತ್ತದೆ, ಸಂಗೀತ ಸೃಷ್ಟಿಸುತ್ತದೆ, ಕವಿತೆ ಬರೆಯುತ್ತದೆ.
ಆದರೆ ಅದರಲ್ಲಿಲ್ಲ ಆತ್ಮದ ಉಷ್ಣತೆ.
ಕನಕದಾಸರ ಕಾವ್ಯದಲ್ಲಿ ತಂತ್ರವಿಲ್ಲ, ಭಾವವಿದೆ;

ಎಐ ರಚನೆಗಳಲ್ಲಿ ತಂತ್ರವಿದೆ, ಆದರೆ ಭಾವವಿಲ್ಲ. ಕನಕದಾಸರು ಭಾವದ ಕವಿ; ಅವರ ಪದಗಳಲ್ಲಿ ಅನುಭವದ ಉಸಿರು ಇದೆ.ಇಂದಿನ ಕಲೆ ಎಐ ಯಾಂತ್ರೀಕರಣದ ಮಧ್ಯೆ ಅವರ ಕಾವ್ಯ ನಮಗೆ ನೆನಪಿಸುತ್ತದೆ ?
“ಕಲೆ ಯಂತ್ರದಿಂದ ಹುಟ್ಟಬಹುದು, ಆದರೆ ಕಾವ್ಯ ಮನಸ್ಸಿನಿಂದ ಮಾತ್ರ ಹುಟ್ಟುತ್ತದೆ.”
ಮಾನವೀಯತೆ ಇಲ್ಲದ ಬುದ್ಧಿ ಕನಕದಾಸರ ಎಚ್ಚರಿಕೆ
ಆರ್ಟಿಫಿಷಿಯಲ್ ಇಂಟಲಿಜೆನ್ಸಿಯ ಬೆಳವಣಿಗೆ ಮನುಷ್ಯನಿಗೆ ಸಹಾಯವಾಗಬೇಕೆಂದು ಉದ್ದೇಶಿತ.
ಆದರೆ ಅದು ಅಹಂಕಾರದ ಆಯುಧವಾಗಬಾರದು.
ಕನಕದಾಸರು “ಅಕ್ಕಿಯ ಅಹಂಕಾರ, ರಾಗಿಯ ವಿನಯ” ಎಂದು ಬರೆದಾಗ ಅದು ಇಂದಿನ “ಡಿಜಿಟಲ್ ಅಹಂಕಾರ”ಕ್ಕೂ ಅನ್ವಯಿಸುತ್ತದೆ.
ಮನುಷ್ಯನು ಯಂತ್ರಕ್ಕಿಂತ ಶ್ರೇಷ್ಠನೆಂದು ಸಾಬೀತುಪಡಿಸಬೇಕಾದರೆ, ಅವನು ನೈತಿಕತೆ, ಕರುಣೆ, ಸಹಾನುಭೂತಿ ಉಳಿಸಿಕೊಳ್ಳಬೇಕು.
ಅದೇ ಕನಕದಾಸರ ತತ್ತ್ವದ ಹೃದಯ. ಕನಕದಾಸ ತಂತ್ರಜ್ಞಾನ ಯುಗದ ನೈತಿಕ ನಕ್ಷೆ
ಯಂತ್ರಗಳು ವೇಗ, ನಿಖರತೆ, ವಿಶ್ಲೇಷಣೆ ನೀಡುತ್ತವೆ. ಆದರೆ ಅವು ದಿಕ್ಕು ನೀಡುವುದಿಲ್ಲ. ದಿಕ್ಕು ನೀಡುವುದು ತತ್ತ್ವ, ಮೌಲ್ಯ, ಭಕ್ತಿ.
ಕನಕದಾಸರ ಕಾವ್ಯ ಇಂದು ನವೀಕೃತ ನಕ್ಷೆಯಂತಿದೆ ?
“ಯಂತ್ರದ ಬೆಳಕಿನಲ್ಲಿ ದಾರಿ ಕಾಣಿಸಿದರೂ, ಮನುಷ್ಯತ್ವದ ದೀಪ ಇಲ್ಲದಿದ್ದರೆ ಅದು ಕತ್ತಲೇ.”
ಆರ್ಟಿಫಿಷಿಯಲ್ ಇಂಟಲಿಜೆನ್ಸಿ ಯುಗದ ಅತ್ಯಂತ ಪ್ರಾಮಾಣಿಕ ಪಾಠ ಇದು ?
ಕೋಡ್‌ನೊಳಗೆ ಕರುಣೆ ಇರಲಿ, ಡೇಟಾದೊಳಗೆ ದಂಯೆ ಇರಲಿ.
ಕನಕದಾಸರ ಚಿಂತನೆ, ನವಯುಗದ ದೀಪ: ಭಕ್ತಿ ಇಲ್ಲದ ಬುದ್ಧಿ, ಮಾನವೀಯತೆ ಇಲ್ಲದ ಪ್ರಗತಿ, ಆತ್ಮಜ್ಞಾನ ಇಲ್ಲದ ವಿಜ್ಞಾನ, ಇವು ಅಂಧ ಅಭಿವೃದ್ಧಿಯ ಮಾರ್ಗಗಳು.
ಎಐ ಯುಗದಲ್ಲಿ ಕನಕದಾಸರ ಧ್ವನಿ ಹೊಸ ರೂಪದಲ್ಲಿ ಮೊಳಗುತ್ತದೆ: “ದೈವವನ್ನು ಯಂತ್ರದಲ್ಲಿ ಹುಡುಕಬೇಡ, ಅದು ನಿನ್ನೊಳಗಿದೆ, ನಿನ್ನ ನೈತಿಕ ಚಿಂತನೆಗಳಲ್ಲಿದೆ.” ಇಂದಿನ ಮನುಷ್ಯನಿಗೆ ಅವರ ಶಾಶ್ವತ ಸಂದೇಶ ಕೋಡ್‌ನಲ್ಲಲ್ಲ, ಕನಿಕರದಲ್ಲೇ ಮನುಷ್ಯತ್ವ ಉಳಿಯುತ್ತದೆ.
ಅದು ಇಂದಿನ ಅಗತ್ಯ ಕೂಡ........

ಆರ್. ಶಿವರಾಮ ಸಂಡೂರು