ಯುನೈಟೆಡ್ ವೇ ಬೆಂಗಳೂರು ಮತ್ತು ವಾಗಟ ಗ್ರಾಮ ಪಂಚಾಯತ್ ಸಹಯೋಗ
ಬೆಂಗಳೂರು : ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಕಾರ್ಯಕ್ರಮದಡಿ ಬೆಂ. ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ವಾಗಟ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪುನಶ್ಚೇತನಗೊಳಿಸಿದ ಕನೆಕ್ಕಲ್ಲು ಸರೋವರವನ್ನು ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಉದ್ಘಾಟಿಸಿದೆ.
ಈ ಸರೋವರದ ಪುನಶ್ಚೇತನ ಹಮ್ಮಿಕೊಂಡಿದ್ದ ಬ್ಯಾಂಕ್ ನ ಕಾರ್ಯಕ್ಕೆ ಯುನೈಟೆಡ್ ವೇ ಬೆಂಗಳೂರು ಮತ್ತು ವಾಗಟ ಗ್ರಾಮ ಪಂಚಾಯತ್ ಸಹಯೋಗ ನೀಡಿದ್ದವು.
ಸುಸ್ಥಿರ ಜಲ ಸಂಪನ್ಮೂಲ ನಿರ್ವಹಣೆ, ಪರಿಸರ ಪುನಃಸ್ಥಾಪನೆ ಮತ್ತು ಸಮುದಾಯ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ (ಸಿಎಸ್ಆರ್) ನಿರಂತರ ಬದ್ಧತೆಯ ಭಾಗವಾಗಿ ಈ ಸರೋವರ ಪುನಶ್ಚೇತನಗೊಳಿಸಲಾಗಿದೆ. ಇದನ್ನು ಯುನೈಟೆಡ್ ವೇ ಬೆಂಗಳೂರಿನ ಪ್ರಮುಖ ಕಾರ್ಯಕ್ರಮವಾಗಿರುವ ʼವೇಕ್ ದಿ ಲೇಕ್ʼ ಕಾರ್ಯಕ್ರಮದ ಅಡಿಯಲ್ಲಿ ಕಾರ್ಯಗತಗೊಳಿಸಲಾಗಿದೆ.
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನ ಸಂಸ್ಥಾಪಕ ಸಮಿತ್ ಘೋಷ್, ನಿರ್ದೇಶಕಿ ಸುಧಾ ಸುರೇಶ್, ಕಾರ್ಯನಿರ್ವಾಹಕ ನಿರ್ದೇಶಕಿ ಕರೋಲ್ ಫರ್ತಾಡೊ ಮತ್ತು ಯುನೈಟೆಡ್ ವೇ ಬೆಂಗಳೂರಿನ ಸಿಇಒ ರಾಜೇಶ್ ಕೃಷ್ಣನ್, ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನ ಪ್ರತಿನಿಧಿಗಳು, ವಾಗಟ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸ್ಥಳೀಯ ಸಮುದಾಯದ ಪಾಲುದಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
21.33 ಎಕರೆ ವಿಸ್ತೀರ್ಣ ಹೊಂದಿರುವ ಕನೆಕ್ಕಲ್ಲು ಸರೋವರವನ್ನು ದೊಡ್ಡ ಪ್ರಮಾಣದ ಹೂಳು ತೆಗೆಯುವುದು, 535 ಮೀಟರ್ ಮುಖ್ಯ ಕಟ್ಟೆ ಮತ್ತು 1,310 ಮೀಟರ್ ಬಾಹ್ಯ ಕಟ್ಟೆಯನ್ನು ಬಲಪಡಿಸುವುದು ಮತ್ತು ನೀರಿನ ಹರಿವಿನ ಮಾರ್ಗಗಳ ಪುನಃಸ್ಥಾಪನೆ ಸೇರಿದಂತೆ ವ್ಯಾಪಕ ಬಗೆಯಲ್ಲಿ ಪುನರುಜ್ಜೀವನಗೊಳಿಸಲಾಗಿದೆ.
ಪೋಷಕಾಂಶ-ಸಮೃದ್ಧ ಸುಮಾರು 180 ಘನ ಮೀಟರ್ಗಳಷ್ಟು ಹೂಳನ್ನು ಹತ್ತಿರದ ರೈತರಿಗೆ ಮರುಹಂಚಿಕೆ ಮಾಡಲಾಗಿದೆ. ಇದು ಕೃಷಿ ಉತ್ಪಾದಕತೆ ಮತ್ತು ಮಣ್ಣಿನ ಫಲವತ್ತತೆ ಹೆಚ್ಚಿಸಿದೆ. 64 ದಶಲಕ್ಷ ಲೀಟರ್ಗಳಿಂದ 92 ದಶಲಕ್ಷ ಲೀಟರ್ ಗಳಿಗೆ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದಲ್ಲಿ 28 ದಶಲಕ್ಷ ಲೀಟರ್ ಹೆಚ್ಚಳದೊಂದಿಗೆ - ಪುನರುಜ್ಜೀವನಗೊಂಡ ಸರೋವರವು ಅಂತರ್ಜಲ ಮರುಭರ್ತಿ, ಮಣ್ಣಿನ ತೇವಾಂಶ ಧಾರಣ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಗೆ ದೀರ್ಘಕಾಲೀನ ನೀರಾವರಿ ಲಭ್ಯತೆಯನ್ನು ಗಮನಾರ್ಹವಾಗಿ ಸುಧಾರಿಸಲಿದೆ. ಒಂದು ವರ್ಷದಲ್ಲಿ ಸರೋವರದ ಸುತ್ತಲೂ 2,000 ಸಸಿಗಳನ್ನು ನೆಡಲಾಗುವುದು. ಇದರಿಂದ ಹಸಿರು ಹೊದಿಕೆ ನಿರ್ಮಾಣವಾಗಿ ವಾತಾವರಣದಿಂದ ಇಂಗಾಲದ ಡೈಆಕ್ಸೈಡ್ ಹೀರಿಕೊಳ್ಳುವ ಪ್ರಕ್ರಿಯೆ ನಡೆಯಲಿದೆ. ಜಲಚರ ಜೀವವೈವಿಧ್ಯತೆ ಹೆಚ್ಚಿಸಲು ಹಸ್ತಾಂತರದ ದಿನ ಸರೋವರದಲ್ಲಿ 20,000 ಮೀನುಗಳನ್ನು ಸರೋವರಕ್ಕೆ ಬಿಡಲಾಗಿದೆ.
ಸರೋವರ ಪುನಶ್ಚೇತನ ಉಪಕ್ರಮವು ಸುತ್ತಮುತ್ತಲಿನ 16 ಹಳ್ಳಿಗಳ ರೈತರು, ಯುವಕರು ಮತ್ತು ನಿವಾಸಿಗಳಿಗೆ ಪ್ರಯೋಜನ ನೀಡುವ ನಿರೀಕ್ಷೆಯಿದೆ. ಅನೇಕರ ಜೀವನೋಪಾಯಕ್ಕೆ ಹಾದಿ ಮಾಡಿಕೊಡಲಿದೆ. ಪರಿಸರ ಸಂರಕ್ಷಣೆ ಹಾಗೂ ಅಭಿವೃದ್ಧಿಗೂ ಕೊಡುಗೆ ನೀಡಲಿದೆ.
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನ ಮುಖ್ಯ ಕಾರ್ಯಾಚರಣಾ ಅಧಿಕಾರಿ ಮಾರ್ಟಿನ್ ಪಿ.ಎಸ್. ಅವರು ಪ್ರತಿಕ್ರಿಯಿಸಿ, "ಸಮುದಾಯಗಳು ಮತ್ತು ಪರಿಸರ ಜೊತೆಯಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ನಿಜವಾದ ಪ್ರಗತಿ ಸಂಭವಿಸುತ್ತದೆ ಎಂಬುದು ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನ ದೃಢ ನಂಬಿಕೆಯಾಗಿದೆ. ಕನೆಕ್ಕಲ್ಲು ಸರೋವರದ ಪುನರುಜ್ಜೀವನವು ಹಣಕಾಸಿನ ಸೇರ್ಪಡೆಯನ್ನು ಮೀರಿ ಸುಸ್ಥಿರ, ದೀರ್ಘಕಾಲೀನ ಪರಿಣಾಮ ಬೀರುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಈ ಪ್ರಮುಖ ಜಲ ಸಂಪನ್ಮೂಲವನ್ನು ಪುನಃಸ್ಥಾಪಿಸುವ ಮೂಲಕ, ನಾವು ಕೃಷಿ ಚಟುವಟಿಕೆಗಳಿಗೆ ಅಗತ್ಯ ಬೆಂಬಲ ನೀಡುತ್ತಿದ್ದೇವೆ. ಅಂತರ್ಜಲ ಮಟ್ಟ ಸುಧಾರಿಸುತ್ತಿದ್ದೇವೆ. ಸಮುದಾಯಗಳು ಆರೋಗ್ಯಕರ ರೀತಿಯಲ್ಲಿ ಅಭಿವೃದ್ಧಿಪಥದಲ್ಲಿ ಸಾಗಲು ನೆರವಾಗುತ್ತಿದ್ದೇವೆ. ಈ ಅರ್ಥಪೂರ್ಣ ಉಪಕ್ರಮದಲ್ಲಿ ನಮ್ಮೊಂದಿಗೆ ಕೈಜೋಡಿಸಿದ ಯುನೈಟೆಡ್ ವೇ ಬೆಂಗಳೂರು, ವಾಗಟ ಗ್ರಾಮ ಪಂಚಾಯತ್ ಮತ್ತು ಸ್ಥಳೀಯ ನಿವಾಸಿಗಳಿಗೆ ನಾವು ಕೃತಜ್ಞರಾಗಿರುತ್ತೇವೆʼ ಎಂದು ಅಭಿಪ್ರಾಯಪಟ್ಟಿದ್ದಾರೆ.