ಬಳ್ಳಾರಿ : ಬೆತೆಸ್ಥ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಬೆತೆಸ್ಥ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಬೆತೆಸ್ಥ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕಿ ಎಂವಿಎಸ್ ಸುಶೀಲಾಬಾಯಿ ಅವರ ಹೆಸರಿನಲ್ಲಿ ಗುರುಗೌರವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡು ಬಳ್ಳಾರಿ ಪೂರ್ವ ವಲಯದ ಎಸ್‌ಆರ್‌ಪಿ ಕ್ಲಸ್ಟರ್‌ನಲ್ಲಿ ಬರುವ 22 ಶಾಲೆಗಳಿಂದ ಸಾಧನೆ ಮಾಡಿರುವ ವಿವಿಧ ಶಿಕ್ಷಕ ಶಿಕ್ಷಕಿಯರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಎಸ್‌ಆರ್‌ಪಿ ಕ್ಲಸ್ಟರ್‌ನ ಸಿಆರ್‌ಪಿ ಮಹಮ್ಮದ್ ಅವರು ಮಾತನಾಡುತ್ತಾ, ಶಿಕ್ಷಕ ವೃತ್ತಿ ಎಂದರೆ ಸುಲಭವಾಗಿರುವ ಕೆಲಸ ಎಂಬುದಾಗಿ ಕೆಲವರು ಮಾತನಾಡಿಕೊಳ್ಳುತ್ತಾರೆ. ಆದರೆ ದೇವರ ಸಮನಾದ ವೃತ್ತಿ ಶಿಕ್ಷಣ ವೃತ್ತಿಯಾಗಿದೆ. ಇಂದಿನ ಒತ್ತಡದ ಜೀವನದ ನಡುವೆ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಕಾರ್ಯ ಮಾಡುತ್ತಿರುವ ಎಲ್ಲ ಶಿಕ್ಷಕರ ಸೇವೆ ಅನನ್ಯ. ಶಿಕ್ಷಕರಲ್ಲಿ ಸರ್ಕಾರಿ, ಖಾಸಗಿ ಎಂಬ ಬೇಧಭಾವಗಳಿರುವುದಿಲ್ಲ. ಶಿಕ್ಷಕ ಎಂದರೆ ಶಿಕ್ಷಕರಷ್ಟೇ. ನಾವು ಯಾವಾಗದ ಗುರುಗಳ ಗುಲಾಮರಾಗುತ್ತೇವೋ ಅಂದು ನಾವು ಪರಿಪೂರ್ಣ ವಿದ್ಯಾರ್ಥಿಗಳಾಗುತ್ತೇವೆ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಸ್‌ಆರ್ ಕಾಲೋನಿ ಸರ್ಕಾರಿ ಶಾಲೆಯ ಸಹಶಿಕ್ಷಕಿ ಡಾ.ಕಲ್ಯಾಣಿ ಅವರು ಮಾತನಾಡುತ್ತಾ, 12ನೇ ಶತಮಾನದಲ್ಲಿ ಅಲ್ಲಮಪ್ರಭು ಹೇಳಿದಂತೆ ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ದಿಯ ಹೇಳಿದೊಡೆ ಆಗಲಿ ಮಹಾಪ್ರಸಾದ ವೆಂದೆನೆಯ್ಯ ಎಂಬ ಮಾತು ಇಂದಿಗೆ ಪ್ರಸ್ತುತವಾಗಿದೆ. ಹಿಂದಿನ ದಿನದಲ್ಲಿ ಶಿಕ್ಷಕರು ಒಂದು ಮಾತು ಹೇಳಿದರೆ ಅದನ್ನು ನೆರವೇರಿಸುವ ವಿದ್ಯಾರ್ಥಿಳಿದ್ದರು. ಆದರೆ ಇಂದಿನ ಶಿಕ್ಷಣ ವ್ಯವಸ್ಥೆ ಬದಲಾಗಿದ್ದು, ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ನಾವು ಬೇಡಿಕೊಳ್ಳಬೇಕಿದೆ. ದಯವಿಟ್ಟು ಓದಿರಿ, ದಯವಿಟ್ಟು ಬರೆಯಿರಿ, ದಯವಿಟ್ಟು ಶಾಲೆಗೆ ಬನ್ನಿ ಎಂದು ಬೇಡುವ ಪರಿಸ್ಥಿತಿ ಇದೆ. ಇಂದು ಗುರು ಶಿಷ್ಯರ ಸಂಬಂಧ ಕೇವಲ ಶಾಲೆಯ ಕೋಣೆಗಳಿಗೆ ಸೀಮಿತವಾಗಿದೆ ಎಂದು ವಿಷಾಧ ವ್ಯಕ್ತ ಪಡಿಸಿದರು.

ಮಕ್ಕಳು ಪ್ರಾಥಮಿಕ ಶಿಕ್ಷಣ ಮುಗಿಸಿಕೊಂಡು ಪ್ರೌಢಶಾಲೆಗೆ ಹೋಗುತ್ತಿದ್ದಂತೆಯೇ ಹಳೆಯ ಶಿಕ್ಷಕರನ್ನು ಮರೆತು ಬಿಡುತ್ತಾರೆ. ಏಕೆ ಹೀಗೆ ಆಗುತ್ತಿದೆ ಎಂಬುದು ತಿಳಿಯದಾಗಿದೆ. ನಮಗೆ ಎರಡಕ್ಷರ ಕಲಿಸಿದವರೂ ಕೂಡ ಶಿಕ್ಷಕರಾಗುತ್ತಾರೆ. ಅವರು ಎಲ್ಲೇ ಕಂಡರೂ ಅವರಿಗೆ ಗೌರವದಿಂದ ಮಾತನಾಡಿಸಿದರೆ ಸಾಕು. ಅದೇ ಬಹುದೊಡ್ಡ ಪ್ರಶಸ್ತಿ ಸಿಕ್ಕಂತಾಗುತ್ತದೆ. ನಾವು ಶಿಕ್ಷಕರನ್ನು ಪ್ರೀತಿಸಬೇಕು. ಗೌರವಿಸಬೇಕು. ಶಿಕ್ಷಕರ ದಿನಾಚರಣೆ ದಿನದಂದು ಮಾತ್ರ ಒಂದು ಹೂವು ನೀಡಿ ಶುಭ ಕೋರಿದರೆ ಸಾಲದು, ಮರುದಿನ ಶಿಕ್ಷಕರು ಹೇಳುವ ಮಾತುಗಳನ್ನು ಕೇಳಬೇಕು. ಮಕ್ಕಳೇ ಶಿಕ್ಷಕರಿಗೆ ಅನ್ನದಾತರು, ನಮ್ಮ ಪ್ರಶಸ್ತಿ ನೀವೇ, ಕಿರೀಟಗಳು ನೀವೆ ಅದೇ ನೀವು ನಮಗೆ ನೀಡುವ ಪ್ರಶಸ್ತಿಗಳು ಎಂದರು.

ಇನ್‌ಫ್ಯಾಂಟ್ ಜೀಸಸ್ ಶಾಲೆಯ ಮೆಹಮೂಬ್ ಭಾಷಾ ಅವರು ಮಾತನಾಡಿ, ಮಕ್ಕಳು ಶಾಲೆಯಲ್ಲಿರುವಾಗ ಮಾತ್ರ ಶಿಕ್ಷಕರನ್ನು ಗೌರವಿಸುತ್ತಾರೆ. ಶಾಲೆ ಬಿಟ್ಟ ನಂತರ ಆ ಶಿಕ್ಷಕರು ಎದುರಿಗೆ ಬಂದರೂ ಸೌಜನ್ಯಕ್ಕಾದರೂ ಅವರನ್ನು ಮಾತನಾಡಿಸುವ ಗೋಜಿಗೆ ಹೋಗುವುದಿಲ್ಲ. ಇದು ಬದಲಾಗಬೇಕು. ಮಕ್ಕಳಿಗೆ ಬೋಧನೆ ಮಾಡುವವರು ಎಲ್ಲಿಯಾದರೂ ಶಿಕ್ಷಕರೇ ಆಗಿರುತ್ತಾರೆ. ಅವರನ್ನು ಗೌರವದಿಂದ ಕಾಣಬೇಕು. ಎಲ್ಲಿ ಕಂಡರೂ ಅವರಿಗೆ ನಮಸ್ತೆ, ನಾನು ನಿಮ್ಮ ವಿದ್ಯಾರ್ಥಿ ಎಂದು ಹೇಳಿಕೊಂಡರೆ ಆ ಶಿಕ್ಷಕರಿಗೆ ಎಷ್ಟು ಸಂತಸವಾಗುತ್ತದೆ ಎಂದರೆ ಅದನ್ನು ವ್ಯಕ್ತಪಡಿಸುವುದಕ್ಕೂ ಮಾತಗಳು ಸಾಲುವುದಿಲ್ಲ ಎಂದರು.

ಸಂಸ್ಥೆಯ ಅಧ್ಯಕ್ಷರು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ಭೂಪ್ರಕಾಶ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ನಮ್ಮ ತಾಯಿಯಾದ ಸುಶೀಲಾಬಾಯಿ ಅವರು ವಿವಿಧ ಶಾಲೆಗಳಲ್ಲಿ ಸಹಶಿಕ್ಷಕಿಯಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ 1998ರಲ್ಲಿ ನಿವೃತ್ತಿ ಹೊಂದಿದರು. ಆನಂತರ ಬಡ ಮಕ್ಕಳಿಗೆ ಶಿಕ್ಷಣ ದೊರೆಯಬೇಕು ಎಂಬ ಆಸೆಯಿಂದ ಬೆತೆಸ್ಥ ಶಾಲೆಯು ಜನ್ಮತಾಳಿದ್ದು, ಇಂದಿಗೂ ಅವರ ಮಾರ್ಗದರ್ಶನದಲ್ಲಿ ಶಾಲೆ ಮುನ್ನಡೆಯುತ್ತಿದೆ. ಶಿಕ್ಷಣ ಸಂಸ್ಥೆಗಳು ಸ್ಪರ್ಧಾತ್ಮಕವಾಗಿ, ಆರ್ಥಿಕ ವ್ಯವಹಾರವಾಗಿ ಬೆಳೆಯುತ್ತಿರುವ ಈ ಕಾಲಘಟ್ಟದಲ್ಲಿ ಮಕ್ಕಳಿಗೊಂದು ನೈತಿಕ ಮೌಲ್ಯವನ್ನು ತುಂಬಬೇಕು. ಅವರು ಭವ್ಯ ಭಾರತದ ಶ್ರೇಷ್ಠ ಪ್ರಜೆಗಳಾಗಿ ಕಾಣ ಸಿಕೊಳ್ಳುವ ಹಾಗೆ ಮಾರ್ಗದರ್ಶನ ಮಾಡಬೇಕು ಎನ್ನುವ ಕಾರಣಕ್ಕೆ ಈ ಸಂಸ್ಥೆಯನ್ನು ಸ್ಥಾಪಿಸಿದ್ದು, ವಿದ್ಯಾರ್ಥಿಗಳಿಗೆ ವಿದ್ಯೆಯನ್ನೇ ಸಂಪತ್ತಾಗಿ ಕೊಟ್ಟರೆ ಆ ಸಂಪತ್ತು ಶಾಶ್ವತವಾಗಿ ಈ ಜಗತ್ತನ್ನು ಬೆಳಗುವುದಕ್ಕೆ ಕಾರಣವಾಗುತ್ತದೆ ಎಂಬುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕ್ಲಸ್ಟರ್‌ನ ವಿವಿಧ ಸರ್ಕಾರಿ ಹಾಗೂ ಖಾಸಗೀ ಶಾಲೆಗಳಿಂದ ಆಗಮಿಸಿದ್ದ ವಿ.ಶ್ರವಂತಿ, ಎನ್.ಶಾರದ, ಡಾ.ಕಲ್ಯಾಣ ವೈ, ಫಾತೀಮಾ ಮೇರಿ, ಎಸ್.ಶಶಿರೇಖಾ, ಕೆ.ಸಿ.ಲಕ್ಷ್ಮಿದೇವಿ, ಕೆ.ಎಲ್.ಸೋಮಶೇಖರ್, ಚಂದ್ರಿಕಾ ಎನ್, ಹೊನ್ನೂರಪ್ಪ, ಶಾಯಿದಾ ಶಬೀನ, ವಿಜಯಕುಮಾರಿ, ನೀಲ, ಜಿ.ವೇಣುಬಾಯಿ, ಮೆಹಬೂಬ್ ಭಾಷಾ, ಎಸ್.ಎ.ಹಸೀನಾ ಬಾನು, ವಿ ಕಾವೇರಿ ಮಿತ್ತಲ್ ಹಾಗೂ ಸಿಆರ್‌ಪಿ ಮಹಮ್ಮದ್ ಅವರಿಗೆ ಎಂವಿಎಸ್ ಸುಶೀಲಾಬಾಯು ಗುರುಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೇದಿಕೆ ಮೇಲೆ ಬೆತೆಸ್ಥ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕರಾದ ಎಂ.ವಿ.ಎಸ್.ಸುಶೀಲಾಬಾಯಿ, ಪ್ರಧಾನ ಕಾರ್ಯದರ್ಶಿ ರಾಕೇಶ್.ವಿ., ಖಜಾಂಚಿ ಸುನೀಲ್ ಕುಮಾರ್, ಲಿಟಲ್ ಏಂಜೆಲ್ ಶಾಲೆಯ ಆಡಳಿತಾಧಿಕಾರಿ ಮಹಮ್ಮದ್ ಮುಸ್ತಾಫ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಇಂದಿರಾ ಹಾಗೂ ಭಾರತಿ ಅವರು ನಿರೂಪಿಸಿದರೆ, ಲಕ್ಷಿö್ಮÃ ಅವರು ಅತಿಥಿಗಳನ್ನು ಸ್ವಾಗತಿಸಿದರು. ಇದೇ ವೇಳೆ ಶಾಲೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಿತು.