- ಮಂಜುನಾಥ ವಾಲ್ಮೀಕಿ
ಮರಿಯಮ್ಮನಹಳ್ಳಿ: ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಭೀಕರ ಅಪಘಾತಗಳಲ್ಲಿ ತುಂಬಾ ಜೀವಗಳು ಬಲಿಯಾಗಿವೆ. 2022 ರಿಂದ 2025 ರ ವರೆಗೆ 88 ಜೀವಗಳು ಬಲಿಯಾಗಿದ್ದು, 186 ಜನ ಗಂಭೀರ ಗಾಯಗೊಂಡಿದ್ದಾರೆ. ಈ ಹೆದ್ದಾರಿ ಹೆಮ್ಮಾರಿಯಾಗಿ ಬದಲಾಗಿದ್ದು ಸವಾರರಲ್ಲಿ ಆತಂಕ ಉಂಟುಮಾಡಿದೆ.
ಹೌದು, ಹೊಸಪೇಟೆ ಅಂಡರ್ ಪಾಸ್ ನಿಂದ ಪೋತಲಕಟ್ಟೆ ಕ್ರಾಸ್ ವರೆಗೆ 3 ವರ್ಷದಲ್ಲಿ ಸಂಭವಿಸಿದ 88 ಪ್ರಾಣ ಹಾನಿ ಮತ್ತು 186 ಗಂಭೀರ ಗಾಯಗೊಂಡ ಬಗ್ಗೆ ಮಾಹಿತಿ ಹಕ್ಕು ಅಡಿಯಲ್ಲಿ ಮಾಹಿತಿ ಪಡೆದಿದ್ದು ಕಳವಳ ಮೂಡಿಸಿದೆ. ಇದು ಪ್ರಕರಣ ದಾಖಲಾದ ಮಾಹಿತಿ ಆದರೆ ದಾಖಲಾಗದೇ ಇರುವ ಅಪಘಾತಗಳಿಂದ ಆದ ಜೀವ ಹಾನಿ ಬಗ್ಗೆ ಲೆಕ್ಕವಿಲ್ಲದಾಗಿದೆ.
ಅಪಾಯಕಾರಿ ಕ್ರಾಸ್ ಗಳು: ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಮೊದಲ ಕ್ರಾಸ್ ಬಿಎಂಎಂ ಬಳಿಯ ಡಣಾಪುರ ಕ್ರಾಸ್, ಡಣಾಯಕನಕೆರೆ ಮಾಗಾಣಿ ಕ್ರಾಸ್, ದೇವಲಪುರ ಕ್ರಾಸ್, ಡಣಾಯಕನಕೆರೆ ಗ್ರಾಮಕ್ಕೆ ತೆರಳುವ ಕ್ರಾಸ್, ಗೊಲ್ಲರಹಳ್ಳಿ ಕ್ರಾಸ್, ಹಾರುವನಹಳ್ಳಿ ಕ್ರಾಸ್ ಹಾಗೂ ಪೋತಲ ಕಟ್ಟೆ ಕ್ರಾಸ್ ಗಳು ಅಪಾಯಕಾರಿಯಾಗಿವೆ. ಈ ಕ್ರಾಸ್ ಗಳಲ್ಲಿ ದ್ವಿಚಕ್ರ ಸವಾರರು ರಸ್ತೆ ದಾಟುವಾಗ ಎದರಿಗೆ ಬರುವ ವಾಹನಗಳಿಗೆ ಡಿಕ್ಕಿಯಾಗಿ ಸ್ಥಳದಲ್ಲೇ ಮೃತ ಪಟ್ಟ ಘಟನೆಗಳು ಹೆಚ್ಚಾಗಿವೆ.

ಫ್ಲೈ ಓವರ್ ಅಥವಾ ಸರ್ವಿಸ್ ರಸ್ತೆ : ಅಪಘಾತ ಸಂಭವಿಸುವ ಕ್ರಾಸ್ ಗಳಲ್ಲಿ ಹೆದ್ದಾರಿ ಪ್ರಾಧಿಕಾರ ಫ್ಲೈಓವರ್ ಅಥವಾ ಸರ್ವಿಸ್ ರಸ್ತೆ ನಿರ್ಮಿಸಿ ಕೊಡಬೇಕಾಗಿತ್ತು. ಆದರೆ ಹೆದ್ದಾರಿ ಪೂರ್ಣಗೊಂಡು ಹಲವು ವರ್ಷಗಳೇ ಕಳೆದಿವೆ. ಅಪಘಾತದಿಂದ ಜೀವಹಾನಿಗಳು ನಿರಂತರವಾಗಿ ನಡೆಯುತ್ತಿದ್ದರೂ ಹೆದ್ದಾರಿ ಪ್ರಾಧಿಕಾರ ಕಾಲಕ್ಕನುಗುಣವಾಗಿ ಹೆದ್ದಾರಿಯಲ್ಲಿ ಸುರಕ್ಷಿತ ಸಂಚಾರ ವ್ಯವಸ್ಥೆ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.
ಬೆಳಕಿನ ವ್ಯವಸ್ಥೆ: ಗಾಳೆಮ್ಮನಗುಡಿ, ಮರಿಯಮ್ಮನಹಳ್ಳಿ ಬಳಿಯ ಫ್ಲೈ ಓವರ್ ಮೇಲೆ ರಾತ್ರಿ ಹೊತ್ತಿನಲ್ಲಿ ಸವಾರರಿಗೆ ಅನುಕೂಲವಾಗಲು ವಿದ್ಯುತ್ ವ್ಯವಸ್ಥೆ ಕಲ್ಪಿಸ ಬೇಕು. ಇದರಿಂದ ಸಂಭಾವ್ಯ ಅಪಾಯಗಳನ್ನು ತಡೆಯ ಬಹುದು. ಹಾಗೆ ಯಾವ ಭಾಗದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುತ್ತೋ ಪ್ರಾಧಿಕಾರ ಕೂಡಲೇ ದುರಸ್ತಿಗೆ ಮುಂದಾಗ ಬೇಕಿದೆ.

ಗಣ್ಯರಿಗೆ ಮನವಿ: ಡಣಾಪುರ ದಿಂದ ಮರಿಯಮ್ಮನಹಳ್ಳಿಗೆ, ಮರಿಯಮ್ಮನಹಳ್ಳಿ ಯಿಂದ ದೇವಲಾಪುರ, ಡಣಾಯಕನಕೆರೆ ಗ್ರಾಮಗಳಿಗೆ, ತಿಮ್ಮಲಾಪುರ ಟೋಲ್ ಪ್ಲಾಜಾ ದಿಂದ ತಿಮ್ಮಲಾಪುರ ಗ್ರಾಮ ಹಾಗೂ ಪೋತಲಕಟ್ಟೆ ಗ್ರಾಮಕ್ಕೆ ಸರ್ವಿಸ್ ರಸ್ತೆ ಬೇಕೆಂದು ಈ ಭಾಗದ ಯುವಕರು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಗು, ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಜೊತೆಗೆ ಇತ್ತೀಚೆಗೆ ಬಳ್ಳಾರಿ ಸಂಸದ ಈ ತುಕಾರಾಮ್, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಬಿ ಜೆಡ್ ಜಮೀರ್ ಅವರಿಗೂ ಮನವಿ ಸಲ್ಲಿಸಿದ್ದು ಸಮಸ್ಯೆ ಪರಿಹಾರಕ್ಕೆ ಜಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ.
ಎನ್ ಎಚ್ 50 ರಲ್ಲಿ ಅಪಘಾತ ಸಂಭಿಸುವ ಕ್ರಾಸ್, ಪ್ರದೇಶಗಳಲ್ಲಿ ಫ್ಲೈ ಒವರ್, ಸರ್ವಿಸ್ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಇತ್ತೀಚೇಗೆ ಡಣಾಪುರ ಕ್ರಾಸ್ ಬಳಿ 33 ಕೋಟಿ ವೆಚ್ಚದಲ್ಲಿ ಫ್ಲೈಓವರ್ ಮತ್ತು ಅಂಡರ್ ಪಾಸ್ ಗೆ ಚಾಲನೆ ನೀಡಿದ್ದೇನೆ'
ಈ ತುಕಾರಾಮ್ ಸಂಸದರು ಬಳ್ಳಾರಿ.