ಇದು ಸಿರುಗುಪ್ಪ ತಾಲ್ಲೂಕಿನ ಭೈರಗಾಮದಿನ್ನೆ ಗ್ರಾಮದ ಸ.ಕಿ.ಪ್ರಾ.ಶಾಲೆಯ ಪ್ರತಿಯೊಬ್ಬ ಮಗವಿನ ಅಳಲಾಗಿದೆ. ಯಾಕೆಂದರೆ ಆರಂಭದಿಂದಲೂ ಹತ್ತು ಹಲವು ಸಂಕಷ್ಟದ ನಡುವೆ ನಿರ್ಮಾಣವಾದ 3 ಕೊಠಡಿಗಳುಳ್ಳ ಹೊಸ ಶಾಲಾ ಕಟ್ಟಡ ಕಳೆದ 3 ತಿಂಗಳ ಹಿಂದೆ ನಿರ್ಮಾಣಗೊಂಡಿದ್ದರು, ಇದುವರೆಗೂ ಉದ್ಘಾಟನೆಗೊಳ್ಳದಿರುವುದೇ ಮಕ್ಕಳ ತೊಂದರೆಗೆ ಕಾರಣವಾಗಿದೆ.
ಈಗಾಗಲೇ ಶಾಲಾ ಮಕ್ಕಳು ತಾಲೂಕಿನ ಶಾಸಕ ಬಿ.ಎಂ.ನಾಗರಾಜರಿಗೆ ತಮ್ಮ ದಿನನಿತ್ಯದ ಪಡಿಪಾಟಲನ್ನು ವಿವರಿಸಿ ಶಾಲಾ ಉದ್ಘಾಟನೆ ಮಾಡುವಂತೆ ಕೋರಿ ಕಳೆದ ಸೋಮವಾರ ಪತ್ರ ಬರೆದಿದ್ದಾರೆ. ಅಲ್ಲದೆ ನಮ್ಮ ಪತ್ರಿಕಾ ಪ್ರತಿನಿಧಿ 2 ಬಾರಿ ಸಂಪರ್ಕಿಸಿದಾಗಲೂ ಕೇವಲ ಸಬೂಬಿನ ಮಾತುಗಳಿಂದ ಸಾಂತ್ವನ ಹೇಳುವುದಾಗಿ ಕಂಡು ಬಂದಿದೆ.

ಸುತ್ತಮುತ್ತಲಿನ ಪ್ರತಿಷ್ಟಿತ ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯುವ ರೀತಿಯಲ್ಲಿ ಗುಣಮಟ್ಟದ ಶಿಕ್ಷಣ ಕಾಯ್ದುಕೊಂಡು ಸಿರುಗುಪ್ಪ ತಾಲ್ಲೂಕಿನ ಅತ್ಯುತ್ತಮ ಸ.ಕಿ.ಪ್ರಾ.ಶಾಲೆಗಳಲ್ಲಿ ಈ ಶಾಲೆಯು ಒಂದು ಎಂಬ ಖ್ಯಾತಿ ಪಡೆದಿರುವ ಈ ಶಾಲೆಗೆ 2 ದಶಕಗಳಿಂದಲೂ ಮೂಲಭೂತ ಸೌಕರ್ಯಗಳಾದ ಖಾಯಂ ಶಿಕ್ಷಕರ ಕೊರತೆ, ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ ಮತ್ತಿತರೆ ಕೊರತೆಗಳಿಗೆ ಪರಿಹಾರ ದೊರೆತಿಲ್ಲ. ಈ ಕೊರತೆಗಳಿಂದಾಗಿ ಈ ಬಾರಿ ಮಕ್ಕಳ ಸಂಖ್ಯೆ 144 ರಿಂದ 110ಕ್ಕೆ ಇಳಿದಿದೆ. ಕೇವಲ ಮುಖ್ಯಶಿಕ್ಷಕರ ಪ್ರೋತ್ಸಾಹ ಮತ್ತು ಅತಿಥಿ ಶಿಕ್ಷಕರ ಪರಿಶ್ರಮದಿಂದ ಇಲ್ಲಿನ ಮಕ್ಕಳು ವಲಯ, ತಾಲೂಕು, ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಗುರುತಿಸಿಕೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ.

ಅಲ್ಲದೆ ಪ್ರತಿವರ್ಷ ಇಲ್ಲಿನ 5-6 ವಿದ್ಯಾರ್ಥಿಗಳು ಜಿಲ್ಲೆಯ ವಸತಿ ಶಾಲೆಗಳಿಗೆ ಆಯ್ಕೆಯಾಗುತ್ತಿದ್ದಾರೆ. ಇಷ್ಟೆಲ್ಲಾ ಸಾಧನೆ ತೋರುವ ಮಕ್ಕಳಿಗೆ ಸುಸಜ್ಜಿತ ಕಟ್ಟಡ ಮತ್ತಿತರೆ ಸೌಕರ್ಯಗಳ ಅವಶ್ಯಕತೆ ಇದೆ ಹಾಗಾಗಿ ಕೂಡಲೇ ನೂತನ ಶಾಲಾ ಕೊಠಡಿ ಉದ್ಘಾಟನೆ ಮಾಡುವಂತೆ ಶಾಸಕರಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಕ್ಷಣ ಪ್ರೇಮಿ ಹಾಗೂ ಕಾರಂತ ರಂಗಲೋಕ ಸಂಸ್ಥೆಯ ಕಾರ್ಯದರ್ಶಿ, ರಂಗ ಸಂಶೋಧಕ ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ ಆಗ್ರಹಿಸಿದ್ದಾರೆ.