LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿಕಾಸ ವೇದಿಕೆಯ `ಬೇಲೂರು ಹಬ್ಬ - 2025' ಯಶಸ್ವಿ

ಸಂಸ್ಕೃತಿ-ಚಿಂತನೆಗಳ ಸಂಗಮ: ಗಹನ ಚರ್ಚೆ, ಗೌರವ ಸಲ್ಲಿಕೆ:  ಮಾಧ್ಯಮ ಕ್ಷೇತ್ರಕ್ಕೆ ನವಚೈತನ್ಯ

ಹಾಸನ: ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಪ್ರರ ಸಂಘಟನೆ ವಿಕಾಸ ವೇದಿಕೆ ವತಿಯಿಂದ ಆಯೋಜಿಸಿದ್ದ "ಬೇಲೂರು ಹಬ್ಬ - ೨೦೨೫" ಕಾರ್ಯಕ್ರಮವು ಸಾಂಸ್ಕೃತಿಕ ಮೆರುಗು ಹಾಗೂ ಗಹನ ಚರ್ಚೆಗಳ ಸಂಗಮಕ್ಕೆ ಸಾಕ್ಷಿಯಾಯಿತು. ಸಮಾಜದ ಸವಾಲುಗಳು ಮತ್ತು ಮಾಧ್ಯಮ ಕ್ಷೇತ್ರದ ಪಾತ್ರದ ಕುರಿತು ಇಲ್ಲಿ ಬೆಳಕು ಚೆಲ್ಲಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮೈಸೂರು ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ, ಹಿಂದೂ ಧರ್ಮ ಮತ್ತು ಬ್ರಾಹ್ಮಣ ಸಮುದಾಯಗಳನ್ನು ಹೀಗಳೆಯುವ ಇತ್ತೀಚಿನ ಪ್ರವೃತ್ತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. "ದಸರಾ ಮಾಡಬೇಕು ಎಂದರೆ ಮಹಿಷ ದಸರಾ ಮಾಡಬೇಕು ಎನ್ನುತ್ತಾರೆ" ಎಂಬ ಹೇಳಿಕೆಗಳನ್ನು ಪ್ರಸ್ತಾಪಿಸಿ, ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮತ್ತು ಚಿಂತಕ ಭಗವಾನ್ ಅವರ ಸನಾತನ ಧರ್ಮ ಹಾಗೂ ಬ್ರಾಹ್ಮಣರ ಕುರಿತ ಹೇಳಿಕೆಗಳನ್ನು ಬಲವಾಗಿ ಖಂಡಿಸಿದರು. ಶಿಕ್ಷಣದೊಂದಿಗೆ ಸಂಸ್ಕಾರದ ಮಹತ್ವವನ್ನು ಒತ್ತಿ ಹೇಳಿದ ಅವರು, ಬ್ರಾಹ್ಮಣ ಪತ್ರಕರ್ತರ ಮೇಲಿನ ಸವಾಲುಗಳತ್ತಲೂ ಗಮನ ಸೆಳೆದರು.

ವಿಕಾಸ ವೇದಿಕೆಯ ಅಧ್ಯಕ್ಷ ಶ್ರೀನಾಥ್ ಜೋಶಿ, 2017 ರವರೆಗೆ ಅಸಂಘಟಿತರಾಗಿದ್ದ ಬ್ರಾಹ್ಮಣ ಪತ್ರಕರ್ತರು `ವಿಕಾಸ' (ವಿಪ್ರ ಪತ್ರಕರ್ತರ ಸಂಘ) ಮೂಲಕ ಸಂಘಟಿತರಾದ ಬಗೆಯನ್ನು ವಿವರಿಸಿದರು. ಮಾಧ್ಯಮ ಕ್ಷೇತ್ರದಲ್ಲಿ ಉದ್ಯೋಗ ಭದ್ರತೆ, ಯುವ ಪತ್ರಕರ್ತರಿಗೆ ಮಾರ್ಗದರ್ಶನ ಹಾಗೂ ಮಾಧ್ಯಮದಲ್ಲಿ ಬ್ರಾಹ್ಮಣರ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಈ ವೇಳೆ 'ವಿಕಾಸ ಮಹಿಳಾ ವೇದಿಕೆ' ಸ್ಥಾಪನೆಯನ್ನೂ ಘೋಷಿಸಲಾಯಿತು.



ಕಾರ್ಯಕ್ರಮದ ಆರಂಭದಲ್ಲಿ ಸ್ಪೂರ್ತಿ ಎಸ್. ಅವರ ಕಥಕ್ ನೃತ್ಯವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಹನುಮೇಶ್ ಅವರು ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ಮಾಡಿದರು. ಕನ್ನಡಪ್ರಭ ಪ್ರಸಾರಣ ವಿಭಾಗದ ಮುಖ್ಯಸ್ಥರಾದ ಅನಂತಮೂರ್ತಿ, ಜನಮಿತ್ರ ಪತ್ರಿಕೆಯ ಗಿರಿಜಾ ಶಂಕರ್, ವಿಕಾಸ ವೇದಿಕೆಯ ರಾಜ್ಯಾಧ್ಯಕ್ಷರು, ಬೇಲೂರು ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ರಘುನಾಥ್, ಸುಬ್ರಮಣ್ಯ, ವಿಜಯ್ ಕೇಶವ್, ಮಂಜುನಾಧ ಮೂರ್ತಿ. ಕೆಪಿಎಸ್ ಪ್ರಮೋದ್ ಸೇರಿದಂತೆ ಹಲವು ಗಣ್ಯರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಪ್ರ ವಾರ್ತೆ ಡಿಜಿಟಲ್ ಮೀಡಿಯಾ ಎಂಬ ಹೊಸ ಡಿಜಿಟಲ್ ಮಾಧ್ಯಮ ಉದ್ಘಾಟನೆಗೊಂಡಿತು.

ಪುಸ್ತಕ ಬಿಡುಗಡೆ: ಗಿರಿಜಾಶಂಕರ್ ಪ್ರಬುದ್ಧ ಮಾತು

ಕಾರ್ಯಕ್ರಮದ ಪ್ರಮುಖ ಭಾಗವಾಗಿ, ಜನಮಿತ್ರ ಪತ್ರಿಕೆಯ ನಿವೃತ್ತ ಸಂಪಾದಕರು ಹಾಗೂ ಪ್ರಕಾಶಕರಾದ ಎಸ್. ಗಿರಿಜಾಶಂಕರ್ ಅವರು ಮಂಜುನಾಥ ಸೀತಾರಾಮ ಶಾಸ್ತ್ರಿ ಅವರು ರಚಿಸಿರುವ 'ಪ್ಲಗ್, ಸ್ಕೂಪ್ & ಬಿಯಾಂಡ್' ಕೃತಿಯನ್ನು ಬಿಡುಗಡೆಗೊಳಿಸಿದರು. ತಮ್ಮ ಆಕರ್ಷಕ ಮತ್ತು ಪ್ರಬುದ್ಧ ಭಾಷಣದ ಮೂಲಕ ಸಭಿಕರನ್ನು ಮಂತ್ರಮುಗ್ಧಗೊಳಿಸಿದ ಗಿರಿಜಾಶಂಕರ್, ವರಕವಿ ದ.ರಾ.ಬೇಂದ್ರೆ ಅವರ "ನಗುನಗುತ ಬಾಳೋಣ, ತುಸುನಗುತ ತೆರಳೋಣ" ಮಾತುಗಳನ್ನು ನೆನಪಿಸಿಕೊಂಡು, "ನಮಗೆ ಮೀಸಲಾತಿಯ ಊರುಗೊಲು ಬೇಡ" ಎಂಬ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಮಾತುಗಳನ್ನು ಮುಕ್ತಾಯಗೊಳಿಸಿದರು.

ಮಾಧ್ಯಮ ಸೇವೆಗೆ 'ವಿಕಾಸ ಪ್ರಶಸ್ತಿ' ಗೌರವ

ಪತ್ರಿಕೋದ್ಯಮ ಕ್ಷೇತ್ರದಲ್ಲಿ ದೀರ್ಘಕಾಲದ ಸೇವೆ ಸಲ್ಲಿಸಿದವರನ್ನು ಗುರುತಿಸುವ ಭಾಗವಾಗಿ, ಹಾಸನ ಮಾಧ್ಯಮ ಪತ್ರಿಕೆಯ ಚನ್ನರಾಯಪಟ್ಟಣ ವರದಿಗಾರರಾದ ಜಯರಾಮ್, ಕನ್ನಡಪ್ರಭ ಪತ್ರಿಕೆಯ ವರದಿಗಾರ ರಾಘವೇಂದ್ರ ಹೊಳ್ಳ, ಚಿಕ್ಕಮಗಳೂರಿನ ದತ್ತಾತ್ರಿ ಸೇರಿದಂತೆ ಅನೇಕ ಹಿರಿಯ ಪತ್ರಕರ್ತರಿಗೆ ಪ್ರತಿಷ್ಠಿತ 'ವಿಕಾಸ ಪ್ರಶಸ್ತಿ' ನೀಡಿ ಸನ್ಮಾನಿಸಲಾಯಿತು. ಹಾಗೆಯೇ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.



ವಿಪ್ರ ಸಾಧಕರ ಪುಸ್ತಕ ಪ್ರಕಟಣೆಗೆ ತೋ. ಚ. ಅನಂತ ಸುಬ್ಬರಾಯ ಆಶಯ

 ಸಮಾರಂಭದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದ ತೋ. ಚ. ಅನಂತ ಸುಬ್ಬರಾಯ ಅವರು, ಪತ್ರಿಕೋದ್ಯಮ ಕ್ಷೇತ್ರದಲ್ಲಿ ದುಡಿದ ವಿಪ್ರ (ಬ್ರಾಹ್ಮಣ) ಸಾಧಕರ ಕೊಡುಗೆಗಳನ್ನು ಒಳಗೊಂಡ ಒಂದು ಹೊತ್ತಿಗೆಯನ್ನು (ಪುಸ್ತಕ) ಹೊರತರುವ ತಮ್ಮ ಹಂಬಲವನ್ನು ವ್ಯಕ್ತಪಡಿಸಿದರು. "ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವುದು ಹಾಗೂ ಕಿರಿಯರನ್ನು ಬೆಳೆಸುವುದು ನಮ್ಮ ಜವಾಬ್ದಾರಿ" ಎಂಬ ಕಿವಿಮಾತನ್ನು ಹೇಳುವ ಮೂಲಕ ಸಮುದಾಯದ ಐಕ್ಯತೆ ಮತ್ತು ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುವ ಮಹತ್ವವನ್ನು ಅವರು ಒತ್ತಿ ಹೇಳಿದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST