ರೇವಂತರೆಡ್ಡಿ
ಹೈದರಾಬಾದ್ : ಹೈದರಾಬಾದನ್ನು ಹಾಲಿವುಡ್, ಬಾಲಿವುಡ್ ಚಲನಚಿತ್ರ ಕೈಗಾರಿಕೆಗೆ ಕೇಂದ್ರವಾಗಿ ರೂಪಿಸಲು ರಾಜ್ಯ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ಒದಗಿಸಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಸ್ಪಷ್ಟಪಡಿಸಿದರು.

ಮೂಲತಃ, "2047 ದೃಷ್ಟಿಕೋನದ ಯೋಜನೆಯನ್ನು" ರಚಿಸುತ್ತಿರುವ ತೆಲಂಗಾಣ ಸರ್ಕಾರ, ಚಲನಚಿತ್ರ ಉದ್ಯಮವೂ ಅಭಿವೃದ್ದಿ ಹೊಂದಬೇಕು ಎಂಬ ದೃಷ್ಟಿಯಿಂದ ಅದರಲ್ಲೊಂದು ವಿಶೇಷ ಅಧ್ಯಾಯವನ್ನು ಸೇರಿಸಲು ಉದ್ದೇಶಿಸಿದೆ. ಈ ಭಾಗದಲ್ಲಿ ಅಗತ್ಯ ಯೋಜನೆಯನ್ನು ಚಿತ್ರರಂಗದ ಪ್ರಮುಖರು ರೂಪಿಸಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.

ಹೈದರಾಬಾದ್ ಹೈಟೆಕ್ಸ್ ನಲ್ಲಿ ವಿಜೃಂಭಣೆಯಿಂದ ನಡೆದ “ತೆಲಂಗಾಣ ಗದ್ದರ್ ಫಿಲ್ಮ್ ಅವಾರ್ಡ್ಸ್ – 2024” ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ್, ಸಚಿವ ಕೋಮಟಿರೆಡ್ಡಿ ವೆಂಕಟರೆಡ್ಡಿ ಮತ್ತು ಎಫ್‌ಡಿಸಿ ಅಧ್ಯಕ್ಷ ದಿಲ್ ರಾಜು ಅವರೊಂದಿಗೆ ಮುಖ್ಯಮಂತ್ರಿ ಭಾಗವಹಿಸಿದರು. ಈ ಸಂದರ್ಭ ಮಾತನಾಡಿದ ಅವರು: “ಸ್ವಾತಂತ್ರ್ಯ ಬಂದ 100 ವರ್ಷಗಳಾದ 2047ರ ವೇಳೆಗೆ ದೇಶ ಆರ್ಥಿಕವಾಗಿ ಬಲಿಷ್ಠವಾಗಬೇಕಾದರೆ ಚಿತ್ರರಂಗವೂ ಕೈಗಾರಿಕೆಯಾಗಿಯೇ ಬೆಳೆಯಬೇಕು. 2047ರ ವೇಳೆಗೆ ತೆಲಂಗಾಣ ₹3 ಟ್ರಿಲಿಯನ್ ಆರ್ಥಿಕತೆಯ ರಾಜ್ಯವಾಗಬೇಕಾದರೆ, ಮುಂದಿನ 10 ವರ್ಷಗಳಲ್ಲಿ ₹1 ಟ್ರಿಲಿಯನ್ ಗುರಿ ತಲುಪಬೇಕಾದರೆ, ಚಿತ್ರರಂಗವೂ ಅದರ ಭಾಗವಾಗಿರಬೇಕು.” ಎಂದರು.

“ಚಲನಚಿತ್ರ ಕೈಗಾರಿಕೆ ಅಭಿವೃದ್ಧಿಗೆ ನಿಮಗೆ ಏನು ಬೇಕಾಗಿದೆಯೋ ಹೇಳಿ. ನಾನು ಯಾವ ಸ್ಥಾನದಲ್ಲಿದ್ದರೂ ನಿಮ್ಮೊಂದಿಗೆ ನಿಲ್ಲುತ್ತೇನೆ. ಎಲ್ಲ ರೀತಿಯ ಉತ್ತೇಜನ ನೀಡಲು ಸರ್ಕಾರ ಸಿದ್ಧವಾಗಿದೆ. ಯಾರೂ ಬೇಕಾದರೂ ತೆಲಂಗಾಣ ಕ್ಕೆ ಬಂದು ವ್ಯಾಪಾರ ಮಾಡಬಹುದು. ಫಾರ್ಚೂನ್ ಸೇರಿಂತೆ 500 ಕಂಪನಿಗಳ ಪೈಕಿ 85 ಕಂಪನಿಗಳು ಈಗ ಇಲ್ಲಿವೆ. ನಾವು ಜಾಗತಿಕ ನಗರಗಳೊಂದಿಗೆ ಸ್ಪರ್ಧಿಸಲು ಉದ್ದೇಶಿಸಿದ್ದೇವೆ ಎಂದರು.

“1964ರಲ್ಲಿ ತೆಲುಗು ಚಿತ್ರರಂಗವನ್ನು ಗೌರವಿಸಲು ಈ ಪ್ರಶಸ್ತಿಗಳನ್ನು ಆರಂಭಿಸಲಾಯಿತು. 2014ರವರೆಗೆ ನಿರಂತರವಾಗಿ ನೀಡಲಾಗುತ್ತಿತ್ತು. ಆದರೆ ಹಲವು ಕಾರಣಗಳಿಂದಾಗಿ 14 ವರ್ಷಗಳ ಹಿಂದೆ ಅವು ನಿಂತವು. ದಿಲ್ ರಾಜು ಅವರು ಅವುಗಳನ್ನು ಪುನರಾರಂಭಿಸುವ ಪ್ರಸ್ತಾಪವನ್ನು ಮುಂದಿಟ್ಟರು. ಇದಲ್ಲದೆ ಕಳೆದ 10 ವರ್ಷಗಳಲ್ಲಿ ಸಾಧನೆ ಮಾಡಿದ ಎಲ್ಲರನ್ನು ಗೌರವಿಸಲು ಈ ಸಮಾರಂಭವನ್ನು ಆಯೋಜಿಸಲಾಗಿದೆ. ಇದಕ್ಕಾಗಿ ಸಹಕಾರ ನೀಡಿದ ಚಿತ್ರರಂಗದ ಎಲ್ಲರಿಗೂ ಅಭಿನಂದನೆಗಳು.” “ಕೆಲವೊಮ್ಮೆ ಸರ್ಕಾರದ ನಿರ್ಧಾರಗಳು ಕಠಿಣವಾಗಿ ಕಾಣಬಹುದು. ಆದರೆ ಸರ್ಕಾರದ ದೃಷ್ಟಿಯಲ್ಲಿ ಚಿತ್ರರಂಗ ಪ್ರಿಯವಾಗಿದೆ. ಇದು ಈಗ ಮಾತ್ರವಲ್ಲ, ಹಿಂದಿನ ಕಾಂಗ್ರೆಸ್ ಸರ್ಕಾರಗಳ ಕಾಲದಲ್ಲೂ ಚಿತ್ರರಂಗವನ್ನು ಗೌರವಿಸಲಾಗಿದೆ. ಇಂತಹ ಅದ್ಭುತ ಸಮಾರಂಭವನ್ನು ಆಯೋಜಿಸಿದವರಿಗೂ, ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು.” ಎಂದು ತಿಳಿಸಿದರು.

“ಗದ್ದರ್ ಅಣ್ಣ ಅವರ ಸ್ಫೂರ್ತಿಯಿಂದ ಸರ್ಕಾರ ಮುಂದೆ ನಡೆಯುತ್ತಿದೆ. ತೆಲಂಗಾಣ ಅಭಿವೃದ್ಧಿಯಲ್ಲಿ ಚಿತ್ರರಂಗದ ಪಾಲು ಇರಬೇಕು. ನಾವು ಎಲ್ಲರೂ ಒಟ್ಟಾಗಿ ಕೈಜೋಡಿಸಿ ತೆಲಂಗಾಣ ದ ಅಭಿವೃದ್ಧಿಗೆ ಶ್ರಮಿಸಬೇಕು. ರಾಜ್ಯವನ್ನು ಅಭಿವೃದ್ಧಿಯ ದಿಕ್ಕಿನಲ್ಲಿ ಕೊಂಡೊಯ್ಯುವಲ್ಲಿ ಕಲಾ ಚೈತನ್ಯ ಸಹಕಾರಿಯಾಗಬೇಕು” ಎಂದು ಮುಖ್ಯಮಂತ್ರಿಗಳು ಹೇಳಿದರು.

2014ರಿಂದ 2024ರವರೆಗೆ ಪ್ರತಿವರ್ಷ, ಆಯಾ ವರ್ಗಗಳಲ್ಲಿ ಆಯ್ಕೆಗೊಂಡ ಉತ್ತಮ ಚಿತ್ರಗಳು, ನಟರು‑ನಟಿಯರು, ನಿರ್ದೇಶಕರು, ನಿರ್ಮಾಪಕರು, ಸಂಗೀತ ಮತ್ತು ಸಾಹಿತ್ಯಕಾರರು, ತಾಂತ್ರಿಕ ತಜ್ಞರು, ಚಿತ್ರರಂಗದಲ್ಲಿ ಮಹತ್ವದ ಕೊಡುಗೆ ನೀಡಿದವರನ್ನು ಮುಖ್ಯಮಂತ್ರಿಗಳೇ “ಗದ್ದರ್ ಫಿಲ್ಮ್ ಅವಾರ್ಡ್ಸ್” ಅನ್ನು ನೀಡಿದರು.

14 ವರ್ಷಗಳ ಕಾಲ ನಿಂತಿದ್ದ ಈ ಪ್ರಶಸ್ತಿ ಕಾರ್ಯಕ್ರಮವನ್ನು ಜನತಾ ಸರ್ಕಾರ ಮತ್ತೆ ಪುನರಾರಂಭಿಸಿದ್ದು, 2014ರಿಂದ 2024ರವರೆಗೆ ಒಂದು ದಶಕದ ಅವಧಿಯಲ್ಲಿ ಚಲನಚಿತ್ರ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿಗಳನ್ನು ನೀಡಲಾಯಿತು. ಜೊತೆಗೆ ಚಿತ್ರರಂಗದ ಪಿತಾಮಹರ ಹೆಸರಿನಲ್ಲಿ ಸ್ಥಾಪಿತವಾದ ವಿಶೇಷ ಪ್ರಶಸ್ತಿಗಳನ್ನೂ ಈ ವೇದಿಕೆಯಲ್ಲಿ ಪ್ರದಾನಿಸಲಾಯಿತು.

ಎನ್.ಟಿ.ಆರ್ ರಾಷ್ಟ್ರೀಯ ಫಿಲ್ಮ್ ಅವಾರ್ಡ್ ನಂದಮೂರಿ ಬಾಲಕೃಷ್ಣ ಅವರಿಗೆ,
ಪೈಡಿ ಜಯರಾಜ್ ಫಿಲ್ಮ್ ಅವಾರ್ಡ್ ಮಣಿರತ್ನಂ ಅವರಿಗೆ,
ಬಿ.ಎನ್. ರೆಡ್ಡಿ ಫಿಲ್ಮ್ ಅವಾರ್ಡ್ ಸುಕುಮಾರ್ ಅವರಿಗೆ,
ನಾಗಿರೆಡ್ಡಿ-ಚಕ್ರಪಾಣಿ ಫಿಲ್ಮ್ ಅವಾರ್ಡ್ ಅಟ್ಲೂರಿ ಪೂರ್ಣಚಂದರ್ ರಾವ್ ಅವರಿಗೆ,
ಕಾಂತಾರಾವ್ ಫಿಲ್ಮ್ ಅವಾರ್ಡ್ ವಿಜಯ್ ದೇವರಕೊಂಡ ಅವರಿಗೆ,
ರಘುಪತಿ ವೆಂಕಯ್ಯ ಫಿಲ್ಮ್ ಅವಾರ್ಡ್ ಯಂಡಮೂರಿ ವೀರೇಂದ್ರನಾಥ್ ಅವರಿಗೆ,
ಉತ್ತಮ ನಟ ಪ್ರಶಸ್ತಿ ಅಲ್ಲು ಅರ್ಜುನ್ ಅವರಿಗೆ,
ಉತ್ತಮ ನಟಿ ಪ್ರಶಸ್ತಿನಿವೇದಿತಾ ಥಾಮಸ್ ಅವರಿಗೆ ಪ್ರದಾನ ಮಾಡಲಾಯಿತು.
ಇವುಗಳ ಜೊತೆಗೆ ಇತರ ಹಲವು ವಿಭಾಗಗಳಲ್ಲಿಯೂ ಪ್ರಶಸ್ತಿಗಳನ್ನು ನೀಡಲಾಯಿತು.

ಆಸ್ಕಾರ್ ಪ್ರಶಸ್ತಿ ವಿಜೇತರಾದ ಚಂದ್ರಬೋಸ್ ಮತ್ತು ಎಂ.ಎಂ. ಕೀರವಾಣಿ ಅವರನ್ನು ಈ ವೇದಿಕೆಯಲ್ಲಿ ಮುಖ್ಯಮಂತ್ರಿ ಸತ್ಕರಿಸಿದರು. ಗದ್ದರ್ ಜಯಂತಿ ಸಮಾರಂಭದ ಅಂಗವಾಗಿ ಸರ್ಕಾರದ ಪರವಾಗಿ ₹3 ಕೋಟಿ ಮೊತ್ತದ ಸಹಾಯಧನದ ಪಟ್ಟಿ "ಗದ್ದರ್ ಫೌಂಡೇಶನ್" ನ ಸೂರ್ಯಕಿರಣ್ ಅವರಿಗೆ ಹಸ್ತಾಂತರಿಸಲಾಯಿತು.

ಜನಪದ ಗಾಯಕ ಗದ್ದರ್ ಅವರ ಹೆಸರಿನಲ್ಲಿ ಫಿಲ್ಮ್ ಅವಾರ್ಡ್‌ಗಳನ್ನು ಪುನಶ್ಚೇತನಗೊಳಿಸಿರುವುದಕ್ಕೆ ನಟರು, ಚಿತ್ರರಂಗದ ಪ್ರಮುಖರು ಸರ್ಕಾರದ ತೀರ್ಮಾನವನ್ನು ಮೆಚ್ಚುಗೆ ಸೂಚಿಸಿದರು ಮತ್ತು ಕೃತಜ್ಞತೆ ವ್ಯಕ್ತಪಡಿಸಿದರು.