ನಗರದ ಸತ್ಯಾಗಾರ್ಡನ್ ನಲ್ಲಿ ಶನಿವಾರ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸರ್ಕಾರ ಆರೋಗ್ಯ, ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದೆ. ಬಡವರಿಗೆ ರೂಪಿಸಿರುವ ಯೋಜನೆ ಅಭಿವೃದ್ಧಿಗೆ ಪೂರಕವಾಗಿವೆ. ಜನಗಣತಿ ಸಮೀಕ್ಷೆಯಲ್ಲಿ ಎಲ್ಲರು ಪಾಲ್ಗೊಳ್ಳಬೇಕು. ಕಾರ್ಯಕ್ರಮ ಕೊಡಲು ಡಾಟಾ ಬೇಕು. ಎಲ್ಲಾ ಸಮಾಜದ ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿ ಕಲ್ಯಾಣಕ್ಕೆ ಇದು ಬೇಕು ಎಂದರು.
ಸಿಂಧನೂರಿಗೆ 73 ಕೋಟಿ ರೂ. ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ತೆರೆಯಲಾಗಿದೆ. 10 ನೇ ತರಗತಿ ಓದಿದ ನಂತರ ಪ್ರವೇಶ ಪಡೆಯಬಹುದಾಗಿದೆ. ಇಲ್ಲಿ ಓದಿದವರಿಗೆ ಗ್ಯಾರಂಟಿ ಉದ್ಯೋಗ ಸಿಗಲಿದೆ. ಮೂರು ಕೋರ್ಸ್ ಆರಂಭಿಸಲಿದ್ದು ಇಲ್ಲಿ ತರಬೇತಿ ವಿದ್ಯಾರ್ಥಿಗಳು ನೇರವಾಗಿ ಉದ್ಯೋಗಕ್ಕೆ ಹೋಗಲಿದ್ದಾರೆ. ಐಟಿಐ ಕಾಲೇಜ್ ನಲ್ಲಿ ಓದುವ ವಿದ್ಯಾರ್ಥಿಗಳು ಶೇ.40 ರಷ್ಟು ಜನರಿಗೆ ನೌಕರಿ ಸಿಗುತ್ತಿದೆ. ಜಿಲ್ಲೆಯಲ್ಲಿ ಎರಡು ಜಿಟಿಆರ್ ಟಿಸಿ ಕೇಂದ್ರ ಆರಂಭಿಸಲಿದ್ದೇವೆ. ರಾಜ್ಯದಲ್ಲಿ 30 ಕೇಂದ್ರದಲ್ಲಿ 6 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಯುವನಿಧಿಗೆ 3 ಲಕ್ಷ ನಿರುದ್ಯೋಗಿಗಳು ನೋಂದಣಿ ಹೊಂದಿದ್ದಾರೆ. ಭವಿಷ್ಯದ ಉದ್ದೇಶದಿಂದ ಅವರಿಗೆ ಉದ್ಯೋಗದ ಅವಕಾಶ ಕಲ್ಪಿಸುವ ಆಲೋಚನೆ ಹೊಂದಿದ್ದು, ಸರ್ಕಾರ ಕೂಡ ವಿಶೇಷ ಕ್ರಮಕ್ಕೆ ಮುಂದಾಗಿದೆ. ಸರ್ಕಾರ ಕ್ರಿಯಾಶೀಲವಾಗಿ ಜನರಿಗೆ ಯೋಜನೆ ಕೊಡುತ್ತಿದೆ ಎಂದರು.

ಯುವನಿಧಿ ಕಾರ್ಯಕ್ರಮದಡಿ 3 ಲಕ್ಷ ಜನ ಯುವಕರು ನೊಂದಣಿ ಆಗಿದ್ದಾರೆ. ಯುವಕರ ಭವಿಷ್ಯದ ಹಿತದೃಷ್ಟಿಯಿಂದ ಡಿಪ್ಲೋಮಾ, ಡಿಗ್ರಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಯುವನಿಧಿ ಯೋಜನೆ ಜಾರಿಗೊಳಿಸಿದ್ದೇವೆ. ಯುವನಿಧಿಯಲ್ಲಿ ಹಣ ಕೊಟ್ಟು ಸುಮ್ಮನೆ ಕುಂತಿಲ್ಲ, ಕಲಬುರಗಿ, ಮೈಸೂರು ಹಾಗೂ ಕೊಪ್ಪಳದಲ್ಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ಯುವಕರನ್ನು ಕೌಶಲ್ಯಾಭಿವೃದ್ಧಿಯಲ್ಲಿ ತೊಡಗಿಸಿ ಉದ್ಯೋಗ ಸೃಷ್ಟಿಸಲು ಸರ್ಕಾರ ಪ್ರಯತ್ನ ಮಾಡಲಾಗುತ್ತಿದೆ ಎಂದರು.
371 ಜೆ ಕಲ್ಯಾಣ ಕರ್ನಾಟಕ ಭಾಗಕ್ಕೆ ವರದಾನ. ಯುಪಿಎ ಸರ್ಕಾರದ ಕಾಳಜಿಯಿಂದ ಈ ಭಾಗದಲ್ಲಿ ಬಹುದೊಡ್ಡ ಬದಲಾವಣೆ ಆಗುತ್ತಿದೆ. 10 ವರ್ಷದಲ್ಲಿ 80 ಸಾವಿರ ಸರ್ಕಾರಿ ನೌಕರಿ ಸಿಕ್ಕಿದೆ. 9 ಸಾವಿರ ವಿದ್ಯಾರ್ಥಿಗಳು ವೈದ್ಯರಾಗಿದ್ದಾರೆ. ಮೀಸಲಾತಿಯಿಂದ ಪ್ರತಿವರ್ಷ 900 ಸೀಟುಗಳು ಸಿಗುತ್ತಿವೆ. 25 ಸಾವಿರ ವಿದ್ಯಾರ್ಥಿಗಳು ಇಂಜನೀಯರ ಗಳಾಗಿದ್ದಾರೆ. 18 ಸಾವಿರ ಕೋಟಿ ಅನುದಾನ ಬಂದಿದೆ ಎಂದರು.
ಸಿಂಧನೂರಿನಲ್ಲಿ ಅಭಿವೃದ್ಧಿ ಪರ್ವ ಮುಂದುವರೆದಿದೆ. ಹಂಪನಗೌಡ ಬಾದರ್ಲಿ ವಿಶೇಷ ಒತ್ತು ನೀಡಿ ಕೆಲಸ ಮಾಡುತ್ತಿದ್ದಾರೆ. 1636 ಕೋಟಿ ರಾಯಚೂರು-ಸಿಂಧನೂರು ರಸ್ತೆ ಸೇರಿದಂತೆ ಅನೇಕ ಅನುದಾನ ಬಂದಿದೆ ಎಂದರು.
ಅತಿಥಿ ಉಪನ್ಯಾಸಕರ ನೇಮಕಾತಿ ಶೀಘ್ರ : ಡಾ.ಶರಣಪ್ರಕಾಶ ಪಾಟೀಲ್
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಶೀಘ್ರವೇ ಅತಿಥಿ ಉಪನ್ಯಾಸರ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ, ವೈದ್ಯಕೀಯ ಶಿಕ್ಷಣ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ಸೇವಾ ಪರಿಗಣನೆ ಸಂಬಂಧಿಸಿದಂತೆ ನೇಮಕಾತಿ ತಡವಾಗಿದೆ. ಅತಿಥಿ ಉಪನ್ಯಾಸಕರ ನೇಮಕಾತಿಯ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯಿಂದ ವಿಶೇಷ ಸಭೆ ನಡೆಸಲಾಗಿದ್ದು, ಕಾನೂನು ಸಚಿವರೊಂದಿಗೆ ಚರ್ಚಿಸಲಾಗಿದೆ. ಸರ್ಕಾರದಿಂದ ಕೂಡಲೇ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳಲು ಕ್ರಮಕೈಗೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ಮಳೆಹಾನಿಯಾದ ಬಗ್ಗೆ ವರದಿ ಸಲ್ಲಿಸಲು ಮುಖ್ಯಮಂತ್ರಿಗಳು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ರಾಯಚೂರಿನಲ್ಲಿಯೂ ಅತಿ ಹೆಚ್ಚು ಮಳೆಯಾಗಿದ್ದು, ಈ ಬಗ್ಗೆಯೂ ಸರಕಾರದ ಗಮನಕ್ಕಿದೆ. ಕೂಡಲೇ ಬೆಳೆ ಹಾನಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಮಳೆ ವಾತವರಣ ಸೆ.30 ವರೆಗೆ ಮುಂದುವರೆಯುವ ಬಗ್ಗೆ ಮಾಹಿತಿ ಇದ್ದು, ಭತ್ತ ಹೊರತುಪಡಿಸಿ ತೊಗರಿ, ಸೂರ್ಯಕಾಂತಿ, ಸಜ್ಜೆ ಸೇರಿದಂತೆ ಎಲ್ಲಾ ಬೆಳೆಗಳು ಸತತ ಮಳೆಯಿಂದ ನೀರಿನಲ್ಲಿ ಇದ್ದು, ಅವುಗಳ ರಕ್ಷಣೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಬೆಳೆ ಉಳಿಸಲು ಕೃಷಿ ಇಲಾಖೆಗೆ ಸೂಚಿಸಲಾಗಿದೆ ಎಂದು ಹೇಳಿದರು.

ಪಡಿತರ ಅಕ್ಕಿ ಅಕ್ರಮ ಸಾಗಾಣಿಕೆ ಮಾಡಿ ಕಾಳಸಂತೆಗೆ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಯಾರೂ ಸಹ ಉಪವಾಸ ಮಲಗಬಾರದು ಎಂದು ಯೋಜನೆ ತಂದಿದ್ದು, ಸಾರ್ವಜನಿಕರು ಸಹ ಯೋಜನೆಯ ದುರುಪಯೋಗಪಡಿಸಿಕೊಳ್ಳಬಾರದು ಎಂದು ಮನವಿ ಮಾಡಿದರು.
ಸಿಂಧನೂರಿನ ತಾಲ್ಲೂಕು ವ್ಯಾಪ್ತಿಯ 19 ಹಳ್ಳಿಗಳನ್ನು ಮಸ್ಕಿಗೆ ಸೇರ್ಪಡೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು 'ಇಬ್ಬರು ಶಾಸಕರು ಪತ್ರ ನೀಡಿದ್ದು, ಆದರೆ ಅಂತಿಮ ನಿರ್ಧಾರ ಜನರದ್ದಾಗಿದೆ. ಸ್ಥಳೀಯ ಜನರ ಅಭಿಪ್ರಾಯ ಸಂಗ್ರಹಿಸಿ ಈ ಬಗ್ಗೆ ತೀರ್ಮಾನ ಮಾಡುತ್ತೇವೆ' ಎಂದರು.
ಮೆಡಿಕಲ್ ಸೀಟುಗಳ ಹಂಚಿಕೆಯಲ್ಲಿ ಯಾರಿಗೂ ತೊಂದರೆ ಆಗಿಲ್ಲ. ಸರ್ಕಾರಿ 400, ಖಾಸಗಿ 600 ಮೆಡಿಕಲ್ ಸೀಟುಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ್, ಶಾಸಕ ಹಂಪನಗೌಡ ಬಾದರ್ಲಿ ಇದ್ದರು.