ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಾಹಿತಿ ಬಿ.ಪೀರ್ ಬಾಷಾ ಅವರು “ಗದ್ದಿಗೆಯಲ್ಲಿ ಕುಳಿತ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳಿಗೆ ವಿವೇಕ ಮತ್ತು ನ್ಯಾಯ ಪ್ರಜ್ಞೆ ಇದ್ದರೇ ಕೂಡಲೇ ಯುವಕರ ಸಮಸ್ಯೆಯನ್ನು ಅರ್ಥಮಾಡಿಕೊಂಡು ನೇಮಕಾತಿಗೆ ಮುಂದಾಗಬೇಕು. ಖಾಲಿ ಹುದ್ದೆಗಳನ್ನು ಭರ್ತಿಮಾಡಿ ಕೊಂಡರೆ ಮಾತ್ರ ಪಾರ್ಲಿಮೆಂಟು, ವಿಧಾನಸೌಧಗಳಲ್ಲಿ ಹೇಳುವ ‘ಪ್ರಜಾಪ್ರಭುತ್ವ ಎನ್ನುವ ಪದಕ್ಕೆಅರ್ಥ ಬರುತ್ತದೆ. ಕೆಲಸ ಮಾಡುವುದನ್ನು ಬಿಟ್ಟು ಮಾತನಾಡಿದರೆ ಬೊಗಳೆ ಮಾತಾಗುತ್ತದೆ. ಯುವಕರಿಗೆ ಈಗ ಬೊಗಳೆ ಮಾತು, ಜುಮ್ಲಾ ಮಾತು ಸಾಕಾಗಿದೆ“ ಎಂದುಆಕ್ರೋಶ ವ್ಯಕ್ತಪಡಿಸಿದರು.

ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ಎರ್ರಿಸ್ವಾಮಿ ಮಾತನಾಡಿ “ರಾಜ್ಯದ ೪೩ ಇಲಾಖೆಗಳಲ್ಲಿ ೨,೮೪,೮೮೧ ಹುದ್ದೆಗಳು ಖಾಲಿ ಬಿದ್ದಿವೆ. ಈ ಹಿಂದೆ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ಖಾಲಿ ಹುದ್ದೆಗಳ ಭರ್ತಿಗೆ ಕೋವಿಡ್ ಕಾರಣ ಹೇಳಿ ಯಾವುದೇ ಪ್ರಯತ್ನ ಮಾಡಲಿಲ್ಲ. ಬಿಜೆಪಿ ಪಕ್ಷದ ವೈಫಲ್ಯಗಳನ್ನು ಎತ್ತಿ ತೋರಿಸುತ್ತಾ ಕಾಂಗ್ರೆಸ್ ಪಕ್ಷವು ತಾನು ಅಧಿಕಾರಕ್ಕೆ ಬಂದರೆ ಎಲ್ಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆಯನ್ನು ನೀಡಿತ್ತು. ಆದರೆ ಅಧಿಕಾರಕ್ಕೆ ಬಂದು ೨ ವರ್ಷ ೪ ತಿಂಗಳು ಕಳೆದರೂ ಸಹ ಒಳಮೀಸಲಾತಿ ಹೆಸರಿನಲ್ಲಿ ಯಾವುದೇ ನೇಮಕಾತಿಯನ್ನುಮಾಡಿಲ್ಲ. ತಾನು ನೀಡಿದ ಉದ್ಯೋಗದ ಗ್ಯಾರಂಟಿಯನ್ನು ಅಧಿಕಾರಕ್ಕೆ ಬಂದ ನಂತರ ಕಾರ್ಯರೂಪಕ್ಕೆ ತರುವುದೆಂದು ಯುವಜನತೆ ನಿರೀಕ್ಷೆಯಲ್ಲಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಗಿದೆ. ಯುವಕರು ಬಲಿಷ್ಠ-ಪ್ರಜತಾಂತ್ರಿಕ ಹೋರಾಟಕ್ಕೆ ಮುಂದಾಗಬೇಕಾದ ಕಾಲಬಂದಿದೆ” ಎಂದರು.
“ಉದ್ಯೋಗ ನಮ್ಮಹಕ್ಕು” “ಕೂಡಲೇ ನೇಮಕಾತಿ ನಡೆಸಲೇಬೇಕು” “ ೫ವರ್ಷಗಳ ಸಡಲಿಕೆ ನ್ಯಾಯಯುತ” “ಪಾರದರ್ಶಕ ಹೋರಾಟ ನಡೆಸಿ” ಎಂದು ಘೋಷಣೆ ಕೂಗುತ್ತಾ ಉದ್ಯೋಗಾಕಾಂಕ್ಷಿಗಳು ಅಂಬೇಡ್ಕರ್ ವೃತ್ತದಿಂದ ಪುನೀತ್ ರಾಜ್‌ಕುಮಾರ್ ವೃತ್ತದವರೆಗೂ ಮೆರವಣಿಗೆಯಲ್ಲಿ ಸಾಗಿ ತಹಶೀಲ್ದಾರ ಕಛೇರಿ ಮುಂದೆ ಸಮಾವೇಶ ಗೊಂಡರು.

ಪ್ರಕಾಶ್ ಬಸವನದುರ್ಗಾ ನಿರೂಪಣೆ ಮಾಡಿದರೆ, ಪಾಲಾಕ್ಷ ಹಡಗಲಿ ಸ್ಪೂರ್ತಿದಾಯಕ ಹಾಡನ್ನು ಪ್ರಸ್ತುತಪಡಿಸಿದರು. ಸಾಹಿತಿಗಳಾದ ಮಂಜು ಬದಾಮಿ , ಶ್ರೀನಿವಾಸ ಮರಬ್ಬಿಹಾಳ್, ಹರ್ಷಾಬಸವನದುರ್ಗಾ, ಅಭಿಷೇಕ್ ಕಾಳೆ, ಸೈಯದ್ ಸಮೀರ್, ವಿನಯ್ ಸೇರಿದಂತೆ ಮುಂತಾದ ಉದ್ಯೋಗಾಕಾಂಕ್ಷಿಗಳು ಪ್ರತಿಭಟನಾ ಸಭೆಯಲ್ಲಿ ಹಾಜರಿದ್ದರು.