LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಖಾಸಗಿ ಶಾಲೆಗಳ ನವೀಕರಣ ನಿಬಂಧನೆ ಸರಳೀಕರಣಕ್ಕೆ ಕ್ರಮ: ಸಚಿವ ಮಧು ಬಂಗಾರಪ್ಪ

ಬೆಂಗಳೂರು :  ಖಾಸಗಿ ಶಾಲೆಗಳ ನವೀಕರಣ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸರ್ಕಾರ ಜಾರಿಗೆ ತಂದಿರುವ ನಿಬಂಧನೆಗಳನ್ನು ಸರಳೀಕರಿಸಲಾಗುವುದು. ಈ ವಿಚಾರದಲ್ಲಿ ಅಧಿಕಾರಿಗಳು ಶಾಲಾ ಆಡಳಿತ ಮಂಡಳಿ ಯವರಿಗೆ ಕಿರುಕುಳ ನೀಡುವುದು ಕಂಡುಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಚ್ಚರಿಕೆ ನೀಡಿದ್ದಾರೆ.

ಖಾಸಗಿ ಶಾಲಾ ಸಂಘಟನೆ ಕ್ಯಾಮ್ಸ್ ವಿವಿಧ ಶಾಲಾ ಆಡಳಿತ ಮಂಡಳಿಗಳು, ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ವಿಷನ್- ಮಿಷನ್ ಎಂಬ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಇಲಾಖೆ ಯಲ್ಲಿ ತಂದ ಸುಧಾರಣೆಗಳಿಗಾಗಿ ನೀಡಿದ ’ಶಿಕ್ಷಣ ಬಂಗಾರ’ ಬಿರುದು ಸ್ವೀಕರಿಸಿ

ಮಾತನಾಡಿದ ಅವರು, ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ವಿಚಾರದಲ್ಲಿ ಹಲವು ವರ್ಷಗಳಿಂದ ಸಾಕಷ್ಟು ಸಮಸ್ಯೆಗಳಿವೆ. ಈ ಮೊದಲು ಸುಮಾರು ೬೦ಕ್ಕೂ ಹೆಚ್ಚು ದಾಖಲೆಗಳನ್ನು ಸಲ್ಲಿಸಬೇಕಿತ್ತು. ನಮ್ಮ ಸರ್ಕಾರ ಬಂದಮೇಲೆ ಅದನ್ನು ೩೦ಕ್ಕೆ ಇಳಿಸಿ ಸರಳೀಕರಿಸಲಾಗಿದೆ. ಮುಂದಿನ ದಿನ ಗಳಲ್ಲಿ ನಿಯಮಗಳಿಗೆ ಬದಲಾವಣೆ ತಂದು ಮತ್ತಷ್ಟು ಸರಳೀಕರಿಸಲಾಗುವುದು. ಈ ನಿಟ್ಟಿನಲ್ಲಿ ಬೆಳಗಾವಿಯ ಅಧಿವೇಶನದಲ್ಲಿ ಸದನ ಸಮಿತಿಯನ್ನೂ ರಚಿಸಲಾಗಿದೆ. ಸಮಿತಿ ನೀಡುವ ವರದಿ ಪರಿಶೀಲಿಸಿ ಮಾನ್ಯತೆ ನವೀಕರಣ ಪ್ರಕ್ರಿಯೆಯನ್ನು ಎಷ್ಟು ಸಾಧ್ಯವೋ ಅಷ್ಟು ಸರಳೀಕರಿಸಲು ಕ್ರಮ ವಹಿಸಲಾಗುವುದು. ಈ ಮಧ್ಯೆ, ಮಾನ್ಯತೆ ನವೀಕರಣ ವಿಚಾರದಲ್ಲಿ ಅಧಿಕಾರಿಗಳಿಂದ ಕಿರುಕುಳದ ಆರೋಪ, ದೂರುಗಳು ಬರುತ್ತಿವೆ. ಇದನ್ನು ಸಹಿಸುವುದಿಲ್ಲ, ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ ಎಂದರು.

“ಮಕ್ಕಳು ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಿದ್ದರೆ ಅದನ್ನು ಮಕ್ಕಳ ತಪ್ಪು ಎಂದು ಮಾತ್ರ ಪರಿಗಣಿಸಲು ಸಾಧ್ಯವಿಲ್ಲ. ಶಿಕ್ಷಣ ನೀಡುವ ಸಂಸ್ಥೆಗಳು, ಶಿಕ್ಷಕ  - ಶಿಕ್ಷಕಿಯರು ಹಾಗೂ ಶಿಕ್ಷಣ ಇಲಾಖೆ ಕೂಡ ಇದರ ಹೊಣೆ ಹೊರುವ ಅಗತ್ಯವಿದೆ”. ಖಾಸಗಿ ಶಾಲೆಗಳ ವಿಚಾರದಲ್ಲಿ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳ ಹೊರತಾಗಿ ಇತರ ಇಲಾಖೆಗಳಿಂದ ಆಗುವ ಅನಗತ್ಯ ಹಸ್ತಕ್ಷೇಪವನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದ ಸಚಿವರು, ಇದರಿಂದ ಶಾಲೆಗಳು ಎದುರಿಸುತ್ತಿರುವ ಅಡಚಣೆಗಳನ್ನು ನಿವಾರಿಸಲು ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಕ್ಕಳ ಹಿತ ಮತ್ತು ರಕ್ಷಣೆಯನ್ನು ಪ್ರಧಾನ ಉದ್ದೇಶವಾಗಿಟ್ಟುಕೊಂಡು, ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ದೃಷ್ಟಿಯಿಂದ ಅಗತ್ಯವಿದ್ದರೆ ಪ್ರಸ್ತುತ ಕಾನೂನುಗಳಲ್ಲಿ ಬದಲಾವಣೆ ಮಾಡಲು ಸರ್ಕಾರ ಸಿದ್ಧವಿದೆ ಎಂದ ಮಧು ಬಂಗಾರಪ್ಪ ಅವರು, ಖಾಸಗಿ ಶಿಕ್ಷಣ ಕ್ಷೇತ್ರದೊಂದಿಗೆ ಸಂವಾದ ಮತ್ತು ಸಹಕಾರದ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದ್ಧತೆಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಖಾಸಗಿ ಶಾಲಾ ಸಂಘಟನೆಗಳ ಪದಾಧಿಕಾರಿಗಳು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಆಧರಿಸಿ ಗಣಿತ ವಿಷಯದಲ್ಲಿ ಸಿಬಿಎಸ್‌ಇ ಮಾದರಿಯಲ್ಲಿ ಸುಲಭ ಮತ್ತು ಕಠಿಣ ಎರಡು ರೀತಿಯ ಪ್ರಶ್ನೆಪತ್ರಿಕೆ ನೀಡಲು ಮನವಿ ಮಾಡಿದರು. ಮನವಿ ಸ್ವೀಕರಿಸಿದ ಸಚಿವ ಮಧು ಬಂಗಾರಪ್ಪ, ಪರಿಶೀಲಿಸಿ ಮಾಹಿತಿ ನೀಡಲು ಅಧಿಕಾರಿಗಳಿಗೆ ವೇದಿಕೆಯಲ್ಲೇ ಸೂಚಿಸಿದರು.

ಸಮಾವೇಶದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಡಿ ಟಿ ಶ್ರೀನಿವಾಸ್ , ರಾಮೋಜಿ ಗೌಡ, ಭಾರತೀಯ ಶಿಕ್ಷಣ ಮಂಡಳಿಯ ಕಾರ್ಯ ನಿರ್ವಹಣಾ ಅಧ್ಯಕ್ಷರು ಡಾ. ಎನ್ ಪಿ ಸಿಂಗ್, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ, ಶಿಕ್ಷಣ ತಜ್ಞ ಗಣೇಶ ಭಟ್, ಕ್ಯಾಮ್ಸ್ ಕಾರ್ಯದರ್ಶಿ ಡಿ ಶಶಿಕುಮಾರ್ ಸೇರಿದಂತೆ ಕ್ಯಾಮ್ಸ್ ನ  ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಮಟ್ಟದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ತಿತರಿದ್ದರು.

ಸಮಾವೇಶಕ್ಕೆ ಬಳ್ಳಾರಿ ಜಿಲ್ಲೆ ಖಾಸಗಿ ಶಾಲೆಗಳ ಸಂಘಟನೆಯ ಅಧ್ಯಕ್ಷ ಮರ್ರಿಸ್ವಾಮಿ ರೆಡ್ಡಿ, ಖಜಾಂಚಿ ರಂಜಾನ್, ಸೇರಿದಂತೆ ಕ್ಯಾಮ್ಸ್ ಸದಸ್ಯರಾದ ಬೆತೆಸ್ಥ ಶಾಲೆಯ ರಾಕೇಶ್ ಮತ್ತಿತರರು ಶಿಕ್ಷಕರು ಭಾಗವಹಿಸಿದ್ದರು.

ಇದೇ ವೇಳೆ ಬಸ್ಮಾ ಅಧ್ಯಕ್ಷ ಮರ್ರಿಸ್ವಾಮಿ ರೆಡ್ಡಿಯವರನ್ನು ರಾಜ್ಯ ಕಾರ್ಯಕಾರಿ ಸಮಿತಿ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಘೋಷಿಸಲಾಯಿತು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST