LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸೆ.14 ರಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಭಕ್ತರಿಗಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಉಂಡೆ ಮತ್ತು ಚಕ್ಕುಲಿ ತಯಾರಿ

 

ಉಡುಪಿ: ಮಧ್ವರಿಗೊಲಿದ ಶ್ರೀ ಕೃಷ್ಣ ಉಡುಪಿಯಲ್ಲಿ ನೆಲೆ ನಿಂತು ಭಕ್ತರನ್ನು ಹರಸುತ್ತಿದ್ದಾನೆ ಎನ್ನುವ ನಂಬಿಕೆ ಕೋಟ್ಯಾಂತರ ಭಕ್ತರು ಹೊಂದಿದ್ದಾರೆ. ಸೆ.೧೪ರಂದು ಜರುಗಲಿರುವ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಇದೀಗ ಶ್ರೀ ಮಠದಲ್ಲಿ ಭರದ ಸಿದ್ಧತೆಗಳು ನಡೆದಿವೆ. ಬಹುಮುಖ್ಯವಾಗಿ ಶ್ರೀ ಕೃಷ್ಣನಿಗಾಗಿ ಲಕ್ಷಾಂತರ ಸಂಖ್ಯೆಯ ಉಂಡೆ ಮತ್ತು ಚಕ್ಕುಲಿ ತಯಾರಿಕೆ ಶ್ರದ್ಧೆ ಮತ್ತು ಸಂಭ್ರಮದಿAದ ನಡೆದಿದೆ.

 

ನಾದಬ್ರಹ್ಮವೆನಿಸಿದ ಧಾರ್ಮಿಕ ಕೇಂದ್ರ ಉಡುಪಿಯಲ್ಲಿ ಖಾದ್ಯಗಳನ್ನು ಸವಿಯುವುದೇ ಒಂದು ಭಾಗ್ಯ. ಇದರ ಸವಿರುಚಿ ಆಸ್ವಾದಿಸಲು ಬರುವ ಭಕ್ತರಿಗಾಗಿ, ಜನ್ಮಾಷ್ಟಮಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಉಂಡೆ ಚಕ್ಕುಲಿಗಳು ಸಿದ್ದಗೊಳ್ಳುತ್ತಿವೆ. ಅನೇಕ ಪಾಕಪ್ರವೀಣರು ಇವುಗಳ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶ್ರೀ ಕೃಷ್ಣ ಹಾಗೂ ಮಕ್ಕಳು ಇಷ್ಟಪಡುವ ಪ್ರಸಾದ ಇದಾಗಿರುವುದರಿಂದ ಅಷ್ಟಮಿಯ ಮರುದಿನ ನಡೆಯುವ ಅನ್ನಸಂತರ್ಪಣೆ ಸಂದರ್ಭದಲ್ಲಿ ಪ್ರಸಾದ ರೂಪದಲ್ಲಿ ಇವುಗಳನ್ನು ವಿತರಣೆ ಮಾಡಲಾಗುತ್ತದೆ.



ಸೆ. ೧೫ರಂದು ವಿಟ್ಲ ಪಿಂಡಿ ಎಂದು ಕರೆಯುವ ಕೃಷ್ಣ ಲೀಲೋತ್ಸವಕ್ಕೆ ಅಗತ್ಯ ಸಿದ್ಧತೆಗಳು ನಡೆದಿವೆ. ಮೊಸರು ಕುಡಿಕೆ ಉತ್ಸವ ಅತ್ಯಂತ ಆಕರ್ಷಕ ಹಾಗೂ ಚೇತೋಹಾರಿ. ಲಕ್ಷಾಂತರ ಜನರು ಸೇರುವ ಈ ಕಾರ್ಯಕ್ರಮಕ್ಕೆ ರಥಬೀದಿಯ ಸುತ್ತಲೂ ೧೩ ತ್ರಿಕೋನಾಕೃತಿಯ ಮರದ ಗುರ್ಜಿಗಳ ನಿರ್ಮಾಣ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಶ್ರೀಕೃಷ್ಣ ಮಠದಲ್ಲಿ ಗೋವುಗಳನ್ನು ನೋಡಿಕೊಳ್ಳುವ ಗೋವಳರು ರಥಬೀದಿ ಸುತ್ತಲೂ ಇದನ್ನು ಅಳವಡಿಕೆ ಮಾಡಿದ್ದಾರೆ. ನಂದಗೋಪಕೃಷ್ಣನ ಬಾಲ್ಯದ ದಿನಗಳನ್ನು ನೆನಪಿಸುವ ಸಾಕ್ಷಾತ್ ಬೃಂದಾವನದ ವೈಭೋಗ ಇದೀಗ ಉಡುಪಿಯಲ್ಲಿ ಕಾಣಲು ಸಾಧ್ಯ.



ಉಡುಪಿಯ ವಿವಿಧೆಡೆ ಸಿದ್ಧತೆ:

 

ಮಧ್ವರ ನಂತರ ವ್ಯಾಸರಾಜರಿಗೆ ಬಹುಪ್ರಿಯನಾಗಿದ್ದ ಶ್ರೀಕೃಷ್ಣ ಅನೇಕ ಹರಿದಾಸರಿಗೆ ತನ್ನ ಔನ್ನತ್ಯ-ಲಾಲಿತ್ಯ ತೋರಿ ಕಲಿಯುಗದ ಕಾಮಧೇನು, ಕಲ್ಪವೃಕ್ಷವಾಗಿದ್ದಾನೆ. ಈ ಕಲಿಯುಗದಲ್ಲಿ ಹರಿ ನಾಮವ ನೆನೆದರೆ ಕುಲಕೋಟಿಗಳು ಉದ್ಧರಿಸುವವೋ ರಂಗ ಎಂದು ಹರಿದಾಸರು ಕೃಷ್ಣನನ್ನು ಹಾಡಿ ಹೊಗಳಿದ್ದನ್ನು ಆಲಿಸಬಹುದು. ಉಡುಪಿಯಲ್ಲಿ ಪ್ರತಿದಿನ, ಪ್ರತಿಕ್ಷಣ ಶ್ರೀಕೃಷ್ಣನ ನಾಮಾವಳಿ ಮೊಳಗುತ್ತಿದೆ. ಹೀಗಾಗಿ ವ್ಯಾಸರಾಜ ಮಠ, ಕೃಷ್ಣ ಮಠ ಮತ್ತು ಕನಕ ಗೋಪುರದ ಮುಂಭಾಗದಲ್ಲಿ ಎರಡು ದೆಸೆಯಲ್ಲಿ ಬೃಹತ್ ಮಂಟಪದ ಗುರ್ಜಿಗಳನ್ನು ನಿರ್ಮಿಸಲಾಗಿದೆ. ಅಷ್ಟಮಠಕ್ಕೆ ಸಂಬAಧಿಸಿದ ೮, ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನದ ೨ ಗುರ್ಜಿಗಳು, ೩ ಮಂಟಪ ಗುರ್ಜಿಗಳು ಸೇರಿ ಒಟ್ಟು ೧೩ ಗುರ್ಜಿಗಳನ್ನು ಇಲ್ಲಿ ರಚಿಸಲಾಗಿದೆ. ಪ್ರತಿ ಗುರ್ಜಿಗಳಲ್ಲಿ ತಲಾ ಮೂರು ಕುಡಿಕೆ ಇರಿಸಲಾಗಿದೆ. ಈ ಕುಡಿಕೆಗಳಲ್ಲಿ ಮೊಸರು, ಅರಳಿನ ಹುಡಿ, ಅರಿಶಿಣ - ಕುಂಕುಮದ ನೀರು ತುಂಬಿಸಲಾಗುತ್ತದೆ. ಒಟ್ಟು ೪೭ ಮಣ್ಣಿನ ಕುಡಿಕೆಗಳಿಗೆ ಕಲಾತ್ಮಕವಾಗಿ ಬಣ್ಣ ಬಳಿಯಲಾಗಿದೆ. ಈ ವಿಟ್ಲ ಪಿಂಡಿಯ ಹಬ್ಬ ನೋಡುವುದೇ ಒಂದು ಚೆಂದ. ರೋಮಾಂದನಗೊಳಿಸುವ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಇದೀಗ ಉಡುಪಿ ನಂದನವನದAತೆ ಶೃಂಗಾರಗೊAಡು ನಿಂತಿದೆ.



ಸರ್ಕಾರದಿಂದ ಆಚರಣೆ:

 

ರಾಜ್ಯ ಸರ್ಕಾರ ರಾಜ್ಯದಾದ್ಯಂತ ಶ್ರೀಕೃಷ್ಣಜಯಂತಿಯನ್ನು ಅದ್ದೂರಿಯಾಗಿ ಆಚರಿಸುತ್ತಿದೆ. ಉಡುಪಿಯಲ್ಲಿಯೂ ಇಲ್ಲಿನ ಜಿಲ್ಲಾಡಳಿತ ಸೆ. ೧೪ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲು ಅಗತ್ಯ ಸಿದ್ಧತೆ ನಡೆಸಿದೆ. ಅಂದು ಬೆಳಗ್ಗೆ ೯.೩೦ರಿಂದ ರಾಜಾಂಗಣ, ಮಧ್ವ ಮಂಟಪ, ಅನ್ನಬ್ರಹ್ಮ ಮೊದಲಾದ ಕಡೆಗಳಲ್ಲಿ ವಿವಿಧ ವಯೋಮಿತಿಯ ಮಕ್ಕಳ ಕೃಷ್ಣವೇಷ ಸ್ಪರ್ಧೆ ಆಯೋಜಿಸಲಾಗಿದೆ. ಸಂಜೆ ೫ಕ್ಕೆ ರಾಜಾಂಗಣದಲ್ಲಿ ಉಡುಪಿ ಜಿಲ್ಲಾಡಳಿತ ಸರ್ಕಾರದ ವತಿಯಿಂದ ಶ್ರೀಕೃಷ್ಣ ಜಯಂತಿಯನ್ನು ವೈಭವಯುತವಾಗಿ ಆಚರಿಸಲಿದೆ.



ವೈವಿಧ್ಯ ಕಾರ್ಯಕ್ರಮಗಳು:

 

ಹರಿದಾಸರು ನರಜನ್ಮ ಬಂದಾಗ, ನಾಲಿಗೆ ಇರುವಾಗ ಕೃಷ್ಣಾ ಎನಬಾರದೇ? ಎಂದಿದ್ದಾರೆ. ಭಕ್ತರು ಶ್ರೀಕೃಷ್ಣನೆಂದರೆ ಕಷ್ಟವು ಪರಿಹಾರವೆಂದು ಬಹುವಾಗಿ ನಂಬಿದ್ದಾರೆ. ಈ ಕಾರಣಕ್ಕಾಗಿ ಸೆ.೧೪ರಂದು ಬೆಳಗ್ಗೆ ೯.೩೦ರಿಂದ ರಾಜಾಂಗಣ, ಮಧ್ವ ಮಂಟಪ, ಅನ್ನಬ್ರಹ್ಮ ಮೊದಲಾದ ಕಡೆಗಳಲ್ಲಿ ವಿವಿಧ ವಯೋ ಮಿತಿಯ ಮಕ್ಕಳ ಕೃಷ್ಣವೇಷ ಸ್ಪರ್ಧೆ ಆಯೋಜಿಸಲಾಗಿದೆ. ಸಂಜೆ ೬ ಕೈ ಕೃಷ್ಣಾವತಾರ ಉಪನ್ಯಾಸ, ೭ಕ್ಕೆ ಶ್ರೀಕೃಷ್ಣ ಪುತ್ರ ವಿವಾಹೋತ್ಸವ ಯಕ್ಷಗಾನ, ರಾತ್ರಿ ೧೧ ಕ್ಕೆ ಪರ್ಯಾಯ ಶ್ರೀಪಾದರಿಂದ ವಿಶೇಷ ಪೂಜೆ, ೧೨.೧೧ ಕ್ಕೆ ಶ್ರೀಕೃಷ್ಣನಿಗೆ ಶ್ರೀಪಾದರಿಂದ ಪೂಜೆ ನೆರವೇರಲಿದೆ. ಬಳಿಕ ಭಕ್ತರಿಂದ ಅರ್ಘ್ಯ ಪಾದ್ಯ ಪ್ರದಾನವಾಗಲಿದೆ. ಸೆ. ೧೫ ರಂದು ಅಪರಾಹ್ನ ೩ ಗಂಟೆಗೆ ಶ್ರೀಕೃಷ್ಣ ಲೀಲೋತ್ಸವ ಆರಂಭವಾಗಲಿದೆ. ಈ ಎರಡು ದಿನಗಳ ಕಾಲ ಉಡುಪಿಯಲ್ಲಿ ಭಕ್ತರ ಸಂದಣಿ ತುಂಬಿತುಳುಕುತ್ತಿರುತ್ತದೆ. ಸಾಗರದ ಅಲೆಗಳಂತೆ ಭಕ್ತರು ದೇಶ, ವಿದೇಶಗಳಿಂದ ಈ ಅದ್ಭುತ ಸುಂದರ, ದೃಶ್ಯಾವಳಿಗಳನ್ನು ಕಣ್ತುಂಬಿಸಿಕೊಳ್ಳಲು ನೆರೆದಿರುತ್ತಾರೆ.



ಪಾರಂಪರಿಕ ಹಿನ್ನೆಲೆ:

 

ವಿಟ್ಲ ಪಿಂಡಿಯ ಮಹೋತ್ಸವ ಕಣ್ತುಂಬಿಸಿಕೊಳ್ಳಲು ಭಕ್ತರು ತವಕಗೊಂಡಿದ್ದರ ಹಿನ್ನೆಲೆಯಲ್ಲಿ ಕಳೆದ ೨೫ ವರ್ಷಗಳಿಂದ `ಮೃಣ್ಮಯ ಮೂರ್ತಿ' ತಯಾರಿಸಿ ಅಷ್ಟಮಿಯ ದಿನ ಚಿನ್ನದ ರಥದಲ್ಲಿ ಭವ್ಯ ಮೆರವಣಿಗೆ ನಡೆಸಲಾಗುತ್ತಿದೆ. ನಂತರ ಮಧ್ವ ಸರೋವರದಲ್ಲಿ ವಿಸರ್ಜಿಸುವ ಪರಿಪಾಠವಿದೆ. ಸೋಮನಾಥ ಚಿಕ್ಪಾಡಿ ಎನ್ನುವವರು ತಮ್ಮ ಪೂರ್ವಜರಿಂದ ಮೃಣ್ಮಯಿ ಕೃಷ್ಣನ ಮೂರ್ತಿಯನ್ನು ತಯಾರಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಕಡಗೋಲು, ಹಗ್ಗವನ್ನು ಹಿಡಿದಿರುವ ಕೃಷ್ಣನ ಮೃಣ್ಮಯ ಸುಂದರ ಮೂರ್ತಿಯ ಸೊಬಗು ಭಕ್ತರನ್ನು ಸೆಳೆಯುತ್ತಿದೆ. ಚಾತುರ್ಮಾಸದಲ್ಲಿ ಕೃಷ್ಣನ ಉತ್ಸವ ಮೂರ್ತಿ ಭಾಗೀರತಿ ಜಯಂತಿ ಆಸುಪಾಸಿನಲ್ಲಿ ಉಡುಪಿ ದೇಗುಲದಲ್ಲಿ ಪ್ರವೇಶಿಸುತ್ತದೆ. ಲೋಹದ ಕೃಷ್ಣನ ಮೂರ್ತಿಯನ್ನು ಉತ್ಸವದಲ್ಲಿ ಕೂಡಿಸುವ ಹಾಗಿಲ್ಲ. ಚಾತುರ್ಮಾಸದಲ್ಲಿ ದೇವರು ಆಚೆ ಬರುವ ಹಾಗಿಲ್ಲ. ಹೀಗಾಗಿ ಕೃಷ್ಣನ ಮೃಣ್ಮಯಿ ಮೂರ್ತಿಯನ್ನು ೯ ಇಂಚಿನಲ್ಲಿ ಮಾಡುವುದು ಕ್ರಮವಾಗಿದೆ. ಮೃಣ್ಮಯಿ ಮೂರ್ತಿಯನ್ನು ಮೆರವಣಿಗೆ ನಡೆಸಿ, ಮಧ್ವ ಸರೋವರದಲ್ಲಿ ವಿಸರ್ಜಿಸಿ ವಿಟ್ಲ ಪಿಂಡಿ ಆಚರಣೆ ಸಂಪನ್ನಗೊಳಿಸಲಾಗುತ್ತದೆ. ಇದು ಉಡುಪಿಯಲ್ಲಿ ವಿಶೇಷ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST