ಇಲ್ಲಿನ ಸತ್ಯನಾರಾಯಣ ಪೇಟೆ ಕೂಲ್ ಕಾರ್ನರ್ ಬಳಿ ಕೆಎಂಎಫ್ ಮಾಜಿ ಅಧ್ಯಕ್ಷರು, ಬಳ್ಳಾರಿ ನಗರ ಮಾಜಿ ಶಾಸಕರಾದ ಗಾಲಿ ಸೋಮಶೇಖರ್ ರೆಡ್ಡಿ ಅವರು ಬೈಕ್ ರ‍್ಯಾಲಿಗೆ ಚಾಲನೆ ನೀಡಿದರು. ತಾಲೂಕಿನ ಸುಪ್ರಸಿದ್ಧ ಧಾರ್ಮಿಕ ಶಕ್ತಿ ಕ್ಷೇತ್ರ, ಮೊಕಾ ಗ್ರಾಮದ ಶ್ರೀ ಮರೂರು ಅಭಯ ಆಂಜನೇಯ ಸ್ವಾಮಿ ಭಕ್ತರು, ಹನುಮ ಭಕ್ತರು, ಶ್ರೀ ಹನುಮ ಮಾಲಾಧಾರಿಗಳು, ಬಿಜೆಪಿ ಕಾರ್ಯಕರ್ತರು ಸಾವಿರಾರು ಬೈಕ್ ಗಳೊಂದಿಗೆ ಜಮಾಯಿಸಿದ್ದರು. ಎಲ್ಲ ಕಡೆ ಜೈ ಶ್ರೀರಾಮ್ ಬಾವುಟಗಳು ರಾರಾಜಿಸಿದವು. ಈ ಸಂದರ್ಭದಲ್ಲಿ ಜೈ ಶ್ರೀರಾಮ್, ಜೈ ಜೈ ಶ್ರೀರಾಮ್, ಹನುಮಾನ್ ಕಿ ಜೈ ಘೋಷಣೆಗಳು ಮೊಳಗಿದವು.
ಇಲ್ಲಿಂದ ಪ್ರಾರಂಭವಾದ ಬೈಕ್ ರ‍್ಯಾಲಿ ನಗರದ ಸಂಗಮ ವೃತ್ತ, ಬೆಂಗಳೂರು ರಸ್ತೆ, ಹಳೆ ಬ್ರೂಸ್ ಪೇಟೆ ಠಾಣೆ, ಜೈನ್ ಮಾರ್ಕೆಟ್, ಮೋತಿ ವೃತ್ತದ ಮೇಲ್ಸೇತುವೆ ಮೂಲಕ, ಕೌಲ್ ಬಜಾರ್ ಪೊಲೀಸ್ ಠಾಣೆ, ಗಣೇಶ್ ದೇವಾಲಯ, ಸಂತ ಜೋಸೆಫ್ ಶಾಲೆ, ರೇಡಿಯೋ ಪಾರ್ಕ್, ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ, ಕೌಲ್ ಬಜಾರ್ ಬ್ರಿಡ್ಜ್, ಮೇದಾರ್ ರಸ್ತೆ, ಕುಟ್ಟಿ ಸರ್ಕಲ್ ಮೂಲಕ, ಎಸ್ಪಿ ವೃತ್ತ, ಅಲ್ಲಿoದ ನಗರದ ಅಧಿದೇವತೆ ಶ್ರೀ ಕನಕ ದುರ್ಗಮ್ಮ ದೇವಿ ದೇವಾಲಯಕ್ಕೆ ತಲುಪಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಮಾತನಾಡಿ, ಮರೂರ ಶ್ರೀ ಆಂಜನೇಯ ಸ್ವಾಮಿ ಶಕ್ತಿ ಅಘಾದವಾದದ್ದು, ಭಕ್ತಿಯಿಂದ ಸ್ಮರಿಸಿ ಪೂಜಿಸಿದರೆ, ಎಲ್ಲ ಕಷ್ಟಗಳು ದೂರವಾಗಲಿವೆ. ಶ್ರೀ ಹನುಮಂತ ದೇವರಿಗೆ ಮೊರೆ ಹೋದರೆ, ನಿತ್ಯ ಶ್ರೀ ಹನುಮಾನ್ ಚಾಲಿಸ ಮಂತ್ರವನ್ನು ಭಕ್ತಿಯಿಂದ ನಿತ್ಯ ಪಠಿಸಿದರೆ ನಮ್ಮೆಲ್ಲ ಬೇಡಿಕೆಗಳು ಈಡೇರಲಿವೆ, ಶ್ರೀ ಹನುಮನ ನೆನದರೆ ಭಯವಿಲ್ಲ, ಶ್ರೀ ಹನುಮನ ನೆನೆದರೆ ಅಂಜುವ ಮಾತೇ ಇಲ್ಲ, ವಾಯುದೇವರ ಸ್ಮರಣೆ ಮಾಡಿದರೆ ಸಕಲ ಪಾಪಗಳೂ ದೂರವಾಗಲಿವೆ. ನಗರದಲ್ಲಿ ಹಮ್ಮಿಕೊಂಡ ಶ್ರೀ ಹನುಮ ಭಕ್ತರ ಮಹಾ ಬೈಕ್ ರ‍್ಯಾಲಿಯಲ್ಲಿ ಸಾವಿರಾರು ಯುವಕರು ಸ್ವಯಂ ಪ್ರೇರಿತವಾಗಿ ಭಾಗವಹಿಸಿದ್ದು, ಅತ್ಯಂತ ಸಂತಸ ಮೂಡಿಸಿದೆ ಎಂದರು.
ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ, ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎಸ್.ಗುರುಲಿಂಗನಗೌಡ, ಹಿಂದೂ ಜಾಗರಣ ವೇದಿಕೆಯ ವಿಭಾಗೀಯ ಸಂಚಾಲಕ ಶ್ರೀರಾಮ್, ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸ ಮೋತ್ಕರ, ಸುರೇಖಾ ಮಲ್ಲನಗೌಡ, ಕೆ.ಹನುಮಂತ, ಕೆ.ಎಸ್. ಅಶೋಕ್ ಕುಮಾರ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್.ದಿವಾಕರ್, ಜಿಲ್ಲಾ ಉಪಾಧ್ಯಕ್ಷ ವೀರಶೇಖರ್ ರೆಡ್ಡಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗಣಪಲ್ ಐನಾಥ್ ರೆಡ್ಡಿ, ನಗರ ಅಧ್ಯಕ್ಷ ವೆಂಕಟರಮಣ, ಮುಖಂಡರಾದ ಬಿ.ಆರ್ ರಾಘವೇಂದ್ರ ಯಾದವ್, ಬಿಜೆಪಿ ಕಚೇರಿಯ ಶರಣು, ರಾಮಾಂಜನೇಯ ಸೇರಿದಂತೆ ಅನೇಕ ಹನುಮ ಭಕ್ತರು ಇದ್ದರು.