ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಕರುಣಾಜನಕ ಘಟನೆ ನಡೆದಿದೆ. ಅಲ್ಲೀಪುರದ ಬಳಿಯ ಬೆಂಗಳೂರು–ಹೊಸಪೇಟೆ ಬೈಪಾಸ್ ರಸ್ತೆಯಲ್ಲಿ ಕಳೆದ 5 ದಿನಗಳ ಹಿಂದೆ ನವಜಾತ ಹೆಣ್ಣು ಶಿಶುವೊಂದು ಪತ್ತೆಯಾಗಿದೆ. ಹೆಣ್ಣು ಮಗುವು ಜನಿಸಿದ ಹಿನ್ನೆಲೆಯಲ್ಲಿ ಕೆಲವರು ಶಿಶುವನ್ನು ಬೇಲಿಗೆ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ.
ಮಗು ಅಳುವ ಶಬ್ದ ಕೇಳಿದ ಸ್ಥಳೀಯ ತರಕಾರಿ ವ್ಯಾಪಾರಿಗಳು ಕೂಡಲೇ ಮುಂಜಾಗ್ರತೆ ವಹಿಸಿ ಮಗುವನ್ನು ರಕ್ಷಿಸಿದ್ದಾರೆ. ಆಕೆಯ ಮೇಲೆ ಈಗಾಗಲೇ ಕ್ರಿಮಿ ಮತ್ತು ಕೀಟಗಳು ಕಿತ್ತು ತಿಂದ ಪರಿಣಾಮ ಗಂಭೀರ ಸ್ಥಿತಿಯಲ್ಲಿದ್ದ ಶಿಶುವನ್ನು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಯಿತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ನವಜಾತ ಶಿಶು ದುರಂತವಾಗಿ ಮೃತಪಟ್ಟಿದೆ. ಮಗುವಿನ ಪೋಷಕರು ಯಾರೂ ಮುಂದೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರೇ ಶಿಶುವಿನ ಅಂತ್ಯಕ್ರಿಯೆ ನೆರವೇರಿಸಿದರು.
ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವನ್ನು ತ್ಯಜಿಸಿರುವವರ ಪತ್ತೆಗಾಗಿ ತನಿಖೆ ಪ್ರಾರಂಭಿಸಲಾಗಿದೆ ಎಂದು ತಿಳಿದುಬಂದಿದೆ.