LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಾದಿಗರ ನೈಜ ಪ್ರಗತಿಗೆ ನಾಂದಿ ಹಾಡಿದ ಸಿದ್ದು

ಮಾದಿಗರಿಗೆ ನೈಜ ಸ್ವತಂತ್ರ್ಯ ಲಭಿಸಲು ಸಿದ್ಧು ಕಾರಣ

ಸಿದ್ಧರಾಮಯ್ಯ ಕೃತಜ್ಞತಾ ಸಮಾವೇಶದಲ್ಲಿ ಎಚ್.ಆಂಜನೇಯ ಹೇಳಿಕೆ

ಚಿತ್ರದುರ್ಗ:  ಒಳಮೀಸಲಾತಿ ವಿಷಯದಲ್ಲಿ ಸಿದ್ದರಾಮಯ್ಯ ನುಡಿದಂತೆ ನಡೆದು ಮಾದಿಗರ ಹೃದಯ ಗೆದ್ದಿದ್ದಾರೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ನಗರದ ಒನೆಕ ಓಬವ್ವ ವೃತ್ತದಲ್ಲಿ ಭಾನುವಾರ ಆಯೋಜಿಸಿದ್ದ ಮಾದಿಗರ ವಿಜಯೋತ್ಸವ ಹಾಗೂ ಸಿಎಂ ಸಿದ್ದರಾಮಯ್ಯಗೆ ಕೃತಜ್ಞತೆ ಕಾಯಕ್ರಮದಲ್ಲಿ ಮಾತನಾಡಿದರು.

ಒಳಮೀಸಲಾತಿ ಹೋರಾಟ ಸುಧೀರ್ಘ 35 ವರ್ಷ ಹಾದಿ ಸವಿಸಿದೆ. ಸಹಸ್ರಾರು ಮಂದಿ ಮನೆ ತೊರೆದು ಚಳವಳಿ ನಡೆಸಿದ್ದಾರೆ. ಅನೇಕರು ಜೀವತೆತ್ತಿದ್ದಾರೆ. ಎಲ್ಲ ಪಕ್ಷಗಳ ಮುಖಂಡರು, ಇತರೆ ಸಮುದಾಯದವರು ಮಾದಿಗರ ಕುರಿತು ಮಮತೆ ತೋರಿದ್ದಾರೆ. ಪರಿಣಾಮ ಆಗಸ್ಟ್ 19ರಂದು ಮಾದಿಗರಿಗೆ ನೈಜ ಸ್ವತಂತ್ರವನ್ನು ಸಿದ್ದರಾಮಯ್ಯ ನೀಡಿದ್ದಾರೆ ಎಂದರು.

ಬಸವ ಅನುಯಾಯಿಗಳಾದ ನಾವು ಶಾಂತಿ-ಸೌಹಾರ್ದತೆಯಿಂದ 35 ವರ್ಷ ಎಲ್ಲ ರೀತಿ ಹೋರಾಟ ನಡೆಸಿದ್ದೇವು. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಒಳಮೀಸಲಾತಿ ಪರವಿದ್ದವು. ಆದರೆ, ಅದನ್ನು ಜಾರಿಗೊಳಿಸುವ ಅವಕಾಶ ಅವರಿಗೆ ದೊರೆಯಲಿಲ್ಲ. ಆದರೆ, ಭಾಗ್ಯಗಳ ಸರದಾರ ಸಿದ್ದರಾಮಯ್ಯ ಅವರಿಗೆ ಮಾದಿಗರಿಗೆ ನ್ಯಾಯ ಕಲ್ಪಿಸುವ ಸೌಭಾಗ್ಯ ದೊರೆಯಿತು. ಅದನ್ನು ಸಮರ್ಥವಾಗಿ ನಿರ್ವಹಿಸಿದರು ಎಂದು ಶ್ಲಾಘೀಸಿದರು.



ಎಂದೂ ಮಾದಿಗರು ಪರಿಶಿಷ್ಟ ಜಾತಿಯಲ್ಲಿ ಶೇ.1ರಷ್ಟು ಮೀಸಲಾತಿ ಪಡೆಯಲು ಸಾಧ್ಯವಾಗಿಲ್ಲ. ಆದರೆ, ಈಗ ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ ಶೇ.6ರಷ್ಟು ಮೀಸಲಾತಿ ನೀಡಿ ನಮ್ಮ ಪ್ರಗತಿಗೆ ಸಹಕರಿಸಿದ್ದಾರೆ. ಕೊಟ್ಟ ಅವಕಾಶವನ್ನು ನಾವು ಸಮರ್ಥವಾಗಿ ಸದ್ಬಳಕೆ ಮಾಡಿಕೊಂಡು ಮುಖ್ಯವಾಹಿನಿಗೆ ಬರಬೇಕು. ಉನ್ನತ ಶಿಕ್ಷಣ, ಉದ್ಯೋಗ, ಆರ್ಥಿಕ ನೆರವು ಪಡದು ಅಭಿವೃದ್ಧಿ ಸಾಧಿಸಬೇಕೆಂದು ತಿಳಿಸಿದರು.

ಯಾರೇ ಅನುಕೂಲ ಮಾಡಿದರೂ ಅದಕ್ಕೆ ಪ್ರತಿಯಾಗಿ ಕೃತಜ್ಞತೆ ಸಲ್ಲಿಸುವ ಹುಟ್ಟುಗುಣ  ಮಾದಿಗರದ್ದಾಗಿದೆ. ಈ ಕಾರಣಕ್ಕೆ ಅನೇಕ ಅಡೆತಡೆಗಳ ಮಧ್ಯೆ ಮೊದಲಿನಿಂದಲೂ ಭರವಸೆ ನೀಡಿದಂತೆ ಶೇ.6 ಮೀಸಲಾತಿ ಸಿದ್ದರಾಮಯ್ಯ ನೀಡಿದ್ದಾರೆ. ಅವರಿಗೆ ಸಮಾಜ ಸದಾ ಕೃತಜ್ಞರಾಗಿರುತ್ತದೆ. ಇನ್ನಷ್ಟು ಬೇಡಿಕೆಗಳಿದ್ದು, ಅವುಗಳನ್ನು ಈಡೇರಿಸಿಕೊಳ್ಳುವತ್ತ ನಾವುಗಳು ಒಗ್ಗಟ್ಟಿನಿಂದ ಹೆಜ್ಜೆ ಹಾಕಬೇಕಿದೆ ಎಂದರು.

ರಾಯಚೂರಿನಲ್ಲಿ ಶಕ್ತಿಪ್ರದರ್ಶನ:  ಮಾದಿಗರ ಹೋರಾಟ ಈಗ ಆರಂಭವಾಗಿದೆ. ಒಳಮೀಸಲಾತಿ ಜಾರಿಗೊಂಡಿತು ಎಂದು ನಾವೆಲ್ಲರೂ ನಿದ್ರೆಗೆ ಜಾರುವಂತಿಲ್ಲ. ಇನ್ನಷ್ಟು ಬೇಡಿಕೆಗಳಿಗಾಗಿ ಹೋರಾಟ ನಡೆಸಬೇಕು. ರಾಯಚೂರಿನಲ್ಲಿ ಬೃಹತ್ ಸಮಾವೇಶ ಆಯೋಜಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿ ಅವರಿಗೆ ಬೇಡಿಕೆಗಳ ಪಟ್ಟಿ ಸಲ್ಲಿಸಲಾಗುವುದು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಲು, ಸಿದ್ದರಾಮಯ್ಯ ಸಿಎಂ ಆಗಲು ಮಾದಿಗರ ಕೊಡುಗೆ ಇದೆ. ಅದೇ ರೀತಿ ನಮ್ಮ ಸಮಾಜಕ್ಕೆ ಹೆಚ್ಚು ಅನುಕೂಲ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಅವರನ್ನು ಗೌರವಿಸುವುದು, ಕೃತಜ್ಞತೆ ಸಲ್ಲಿಸುವುದು ನಮ್ಮ ಕರ್ತವ್ಯ ಎಂದು ಆಂಜನೇಯ ಹೇಳಿದರು.

ಇಡೀ ಸಚಿವ ಸಂಪುಟ, ಕಾಂಗ್ರೆಸ್ ಪಕ್ಷ ಒಳಮೀಸಲಾತಿ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶಿಸಿ ಜಾರಿಗೊಳಿಸುವಲ್ಲಿ ಶ್ರಮಿಸಿದೆ. ಜೊತೆಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಹೋರಾಟಗಾರರು ಹೀಗೆ ನಮಗೆ ಸಹಕರಿಸಿ ಎಲ್ಲರಿಗೂ ಧನ್ಯವಾದಗಳನ್ನು ಇಲ್ಲಿಂದಲೇ ಅರ್ಪಣೆ ಎಂದರು.

ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, 1993ರಿಂದಲೂ ಒಳಮೀಸಲಾತಿ ಹೋರಾಟದಲ್ಲಿ ಆಂಜನೇಯ, ಕೆ.ಎಚ್.ಮುನಿಯಿಪ್ಪ ಮುಂಚೂಣಿಯಲಿದ್ದು, ಸುಪ್ರೀಂ ಕೋರ್ಟ್ ತೀರ್ಪು ಬಳಿಕ ಬೀದಿ ಬೀದಿ ಸುತ್ತಿದ್ದಾರೆ, ಸಿಎಂ ಅವರ ಮೇಲೆ ನಿರಂತರ ಒತ್ತಡ ತಂದಿದ್ದಾರೆ. ಜೊತೆಗೆ ಅನೇಕ ಸಂಘಠನೆಗಳ ನಾಯಕರು, ಮುಖಂಡರ ಸೇವೆ ಸ್ಮರಣೀಯ ಎಂದು ತಿಳಿಸಿದರು.

1947ರಲ್ಲಿ ದೇಶಕ್ಕೆ, 2025ರಲ್ಲಿ ಮಾದಿಗರಿಗೆ ಸ್ವತಂತ್ರ ಸಿಕ್ಕಿದೆ. ಇದಕ್ಕೆ ಮುಖ್ಯ ಕಾರಣಕರ್ತರು ಸಿದ್ದರಾಮಯ್ಯ. ಸಮುದಾಯವನ್ನು ದಾಸದಿಂದ ಮುಕ್ತಿಗೊಂಸಿರುವ ಅವರ ಬದ್ಧತೆಗೆ ನಾವೆಲ್ಲರೂ ಕೃತಜ್ಞರಾಗಿರಬೇಕು ಎಂದರು.

ಡಾ.ಬಿ.ತಿಪ್ಪೇಸ್ವಾಮಿ ಜೆಜೆ ಹಟ್ಟಿ ಮಾತನಾಡಿ, ಆಂಜನೇಯ ಅವರ ಆಗಮನ ಕಾರಣಕ್ಕೆ ದಿಢೀರ್ ಕಾರ್ಯಕ್ರಮ ಆಯೋಜಿಸಿದ್ದು, ಮುಂದೆ ಎಲ್ಲ ಪಕ್ಷಗಳಲ್ಲಿರುವ ಸಮುದಾಯದವರನ್ನು ಸೇರಿಸಿಕೊಂಡು ಬೃಹತ್ ವಿಜಯೋತ್ಸವ ಆಚರಿಸುವ ಅಗತ್ಯ ಇದೆ ಎಂದು ತಿಳಿಸಿದರು.

ಒಳಮೀಸಲಾತಿ ಜಾರಿಗಾಗಿ ಅನೇಕರು ಪ್ರಾಣ ತ್ಯಾಗ ಮಾಡಿದ್ದಾರೆ. ಇನ್ನೂ ಕೆಲವರು ಮನೆ-ಸ್ವಂತ ಬದುಕು ಮರೆತು ನಿಸ್ವಾರ್ಥವಾಗಿ ಚಳವಳಿ ನಡೆಸಿದ್ದಾರೆ. ಅವರೆಲ್ಲರ ಶ್ರಮದ ಫಲ ಇಂದು ಸಿದ್ದರಾಮಯ್ಯ ನಮಗೆ ನ್ಯಾಯ ಕಲ್ಪಿಸಿಕೊಟ್ಟಿದ್ದಾರೆ ಎಂದರು.

ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ಮಾದಿಗರು ವಿವಿಧ ಸಂಘಟನೆಗಳ ಹೆಸರಲ್ಲಿ ಹಂಚಿಹೋಗಿದ್ದಾರೆ. ಸ್ವಪ್ರತಿಷ್ಠೆ, ಸ್ವಾರ್ಥ ತೊರೆದು ಮಾದಿಗ ಹೆಸರಿನಲ್ಲಿ ಒಗ್ಗೂಡಿದರೆ ಹಕ್ಕು ಪಡೆಯಲು ಸಾಧ್ಯ. ಸಿದ್ದರಾಮಯ್ಯ ಅವರ ಬದ್ಧತೆ ಪ್ರಶ್ನಾತೀತ ಎಂದು ತಿಳಿಸಿದರು.



ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಜಿಪಂ ಮಾಜಿ ಸದಸ್ಯ ಆರ್.ನರಸಿಂಹರಾಜು, ಐನಹಳ್ಳಿ ಗ್ರಾಪಂ ಅಧ್ಯಕ್ಷ ಆರ್.ಉಮೇಶ್, ಮುಖಂಡರಾದ ಕುಂಚಿಗನಾಳ್ ಮಹಾಲಿಂಗಪ್ಪ, ಕೆ.ಮಲ್ಲೇಶ್, ಕೆ.ಟಿ.ಶಿವಕುಮಾರ್, ಕೆಂಗುಂಟೆ ಜಯ್ಯಪ್ಪ, ಡಿ.ಶಿವಣ್ಣ ಜೆಜೆ ಹಟ್ಟಿ, ಬೀರಾವರ ಪ್ರಕಾಶ್, ರಮೇಶ್ ಕೋಟಿ, ಪ್ರಸನ್ನ ಜಯಣ್ಣ, ಕಣ್ಮೇಶ್, ಎಂ.ಆರ್.ಶಿವರಾಜ್, ಅನಿಲ್ ಕೋಟಿ, ಚೇತನ್ ಬೋರೇನಹಳ್ಳಿ, ರವೀಂದ್ರ,

ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ್, ರುದ್ರಮುನಿ, ಚಿದಾನಂದ, ಯಶವಂತ ಇತರರಿದ್ದರು.

ಹಾಲಿನಾಭಿಷೇಕ:  ಅಂಬೇಡ್ಕರ್ ಪ್ರತಿಮೆ, ಸಿದ್ದರಾಮಯ್ಯ ಭಾವಚಿತ್ರಕ್ಕೆ ಹಾಲಿನಾಭಿಷೇಕ, ಹೂವಿನ  ಸುರಿಮಳೆ ಸುರಿಸುವ ಮೂಲಕ ಮಾದಿಗ ಸಮುದಾಯದವರು ಸಂಭ್ರಮಿಸಿದರು. ಜೈ ಜೈ ಮಾದಿಗ, ಜೈ ಅಂಬೇಡ್ಕರ್, ಜೈ ಸಿದ್ದರಾಮಯ್ಯ, ಜೈ ಆಂಜನೇಯ ಘೋಷಣೆಗಳು ಮೊಳಗಿದವು.

ಚಳ್ಳಕೆರೆ ಗೇಟ್‍ನಿಂದ ಒನಕೆ ಓಬವ್ವ ವೃತ್ತದವರೆಗೆ ಮೆರವಣಿಗೆ  ನಡೆಸಲಾಯಿತು.  ಮದಕರಿ ನಾಯಕ ಪ್ರತಿಮೆಗೆ ಮಾಲಾರ್ಪಣೆ ಮೂಲಕ ಗೌರವ ಸಲ್ಲಿಸಲಾಯಿತು. ದಾರಿಯುದ್ದಕ್ಕೂ ಸಮುದಾಯದ ನಾಯಕರ ಮೇಲೆ ಹೂವಿನ ಸುರಿಮಳೆ ಸುರಿಸಿದರು. ತಮಟೆ, ಕಲಾತಂಡಗಳು ಗಮನಸೆಳೆದವು.

ಜನ್ಮದಿನ ಆಚರಣೆ: ಒಳಮೀಸಲಾತಿ ಜಾರಿಗೊಳ್ಳುವವರೆಗೂ ಹಬ್ಬ-ಹರಿದಿನ, ಜನ್ಮದಿನ ಆಚರಿಸಿಕೊಳ್ಳುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದ ಆಂಜನೇಯ ತಮ್ಮ ಜನ್ಮದಿನ ಆಚರಿಸಿಕೊಂಡಿರಲಿಲ್ಲ. ಆದ್ದರಿಂದ ಅವರ ಅಭಿಮಾನಿಗಳು ಬೃಹತ್ ಕೇಕ್ ಕತ್ತರಿಸಿ, ದೊಡ್ಡ ಹಾರ ಅರ್ಪಿಸಿ ವಿಜಯೋತ್ಸವದಲ್ಲಿ ಜನ್ಮದಿನ ಆಚರಿಸಿ ಸಂಭ್ರಮಿಸಿದರು.
ಶೋಷಿತರ ಪರ ಕಾಂಗ್ರೆಸ್ ಪಕ್ಷ ಸದಾ ನೊಂದವರ ಪರ ನಿರ್ಧಾರ ಕೈಗೊಳ್ಳುತ್ತದೆ ಎಂಬುದಕ್ಕೆ ಒಳಮೀಸಲಾತಿ ಜಾರಿ ವಿಷಯವೇ ಸಾಕ್ಷಿ. ವಿಷಯದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿ ಎಲ್ಲರೂ ಬದ್ಧತೆ ಪ್ರದರ್ಶಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ  ಡಿ.ಸುಧಾಕರ್ ಹೇಳಿದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST