ಜು.25 ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಶ್ರೀ ಜ್ಞಾನೇಶ್ವರ ಮಹಾರಾಜರ ಜ್ಞಾನೇಶ್ವರಿ ಪೋತಿ ಸ್ಥಾಪನೆ ನಡೆದ ಬಳಿಕ, ಶ್ರೀ ವಿಠ್ಠಲ ರುಕ್ಮಿಣಿ ದೇವಿಯರ ವಿಶೇಷ ಪೂಜೆ, ಅಲಂಕಾರ, ಸಾಮೂಹಿಕ ಭಜನೆ ಮತ್ತು ಸಂತರಿಂದ ಪಂಢರಪುರ ಮಹಾತ್ಮೆ ಕುರಿತು ಪ್ರವಚನ ಕಾರ್ಯಕ್ರಮಗಳು ಜರುಗಿದವು.

ಜು.26ರಂದು ಬೆಳಿಗ್ಗೆ ದೇವರ ಅಭಿಷೇಕ, ಅಲಂಕಾರ ಸೇವೆ, ಪೂಜೆ, ಸಾಮೂಹಿಕ ಭಜನೆ ಮತ್ತು ಕೀರ್ತನ ಕಾರ್ಯಕ್ರಮಗಳು ನಡೆದವು. ಪಂಢರಾಪುರದ ಶ್ರೀ ವಿಠ್ಠಲ ಮಂದಿರ ವರ್ಣನೆ, ಚಂದ್ರಭಾಗಾ ಮಹಾತ್ಮೆ, ಭಕ್ತ ಪುಂಡಲೀಕ, ಸಂತ ಜ್ಞಾನದೇವ, ನಾಮದೇವ, ನಿವೃತ್ತಿನಾಥ ಮಹಾರಾಜ, ಚೋಖಮೇಳಾ, ನರಹರಿ ಸೋನಾರ ಮೊದಲಾದ ಸಂತರ ಜೀವನ ದರ್ಶನ ಕುರಿತು ಪ್ರವಚನ ನಡೆಯಿತು. ವಾರಕರಿ ಆಚರಣೆ, ಪಂಢರಾಪುರ ದಿವ್ಯ ಮಹಾತ್ಮೆಯ ಜೊತೆಗೆ ಗೋಪಾಲಪುರ, ನಿತ್ಯೋಪಚಾರಗಳ ಕುರಿತು ಸಾಂದರ್ಭಿಕವಾಗಿ ಸಂತರು ಭಕ್ತರಿಗೆ ನೀತಿ ಬೋಧೆ ಮಾಡಿದರು.
ಭಾನುವಾರ ಜು.27ರಂದು ಬೆಳಿಗ್ಗೆ ದೇವರಿಗೆ ದೈನಂದಿನ ವಿಶೇಷ ಪೂಜೆ, ಅಲಂಕಾರ ಸೇವೆ ಬಳಿಕ ನಗರ ಪ್ರದಕ್ಷಿಣೆ ಅಂಗವಾಗಿ ಶ್ರೀ ವಿಠ್ಠಲ ರುಕ್ಮಿಣಿ ಭವ್ಯ ಮೂರ್ತಿಗಳ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ರಾಜೇಶ್ವರಿ ನಗರದ ಸಮಸ್ತ ಭಕ್ತವೃಂದದವರು ಪಾಲ್ಗೊಂಡಿದ್ದರು. ನಂತರ ಮಹಾಮಂಗಳಾರತಿ ಜರುಗಿತು.

ಹಿರಿಯ ಸಂತರಾದ ಡಾ.ಎಸ್.ಎನ್.ಶಾಸ್ತ್ರಿ, ವಿ.ಲಕ್ಷ್ಮಣರಾವ್, ಎಸ್.ವಿಶ್ವನಾಥ ಶಾಸ್ತ್ರಿ, ವಿ.ನಲ್ಲಾರೆಡ್ಡಿ ಮತ್ತು ವಿ.ಪಾಂಡುರಂಗ ಅವರು ಸಪ್ತಾಹ ಆಚರಣೆಗಳ ನೇತೃತ್ವ ವಹಿಸಿದ್ದರು. ಮೂರು ದಿನ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗೋಂಧಳಿ ವಿಠ್ಠಲ ಪಾಡುರಂಗ ದೇವಸ್ಥಾನದ ಪದಾಧಿಕಾರಿಗಳು, ಸರ್ವ ಸದಸ್ಯರು, ಸದ್ಭಕ್ತರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಮಂದಿರದ ಪ್ರಧಾನ ಅರ್ಚಕರಾದ ಬಿ.ಕೆ.ವಿಜಯರಾವ್ ಅವರು ಮಾಧ್ವ ಪರಂಪರೆಯ ಪದ್ಧತಿಯಂತೆ ಪ್ರತಿದಿನ ನಿರ್ಮಾಲ್ಯ ವಿಸರ್ಜನೆ, ಅಭಿಷೇಕ, ಅಲಂಕಾರ, ಅಷ್ಟೋತ್ತರ, ಭಗವಂತನ ಪೂಜೆ, ಮಹಾಮಂಗಳಾರತಿ ನಡೆಸಿಕೊಟ್ಟರು. ಬಳಿಕ ಸಾಮೂಹಿಕ ತೀರ್ಥ ಪ್ರಸಾದ ವ್ಯವಸ್ಥೆ ಜರುಗಿತು.
ಬಳ್ಳಾರಿಯೂ ಸೇರಿದಂತೆ ಕೊಪ್ಪಳ, ಗದಗ ಮತ್ತು ವಿಜಯನಗರ ಜಿಲ್ಲೆಗಳಿಂದ ಹಲವಾರು ಸಂತರು ಮತ್ತು ಕೀರ್ತನಕಾರರು ಆಗಮಿಸಿ ಸಪ್ತಾಹವನ್ನು ಸಂಪನ್ನಗೊಳಿಸಿದರು.