ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಋತುಗಾನ ಪ್ರತಿಷ್ಠಾನ ಜಂಟಿಯಾಗಿ ನಗರದ ಬಿ.ಎಂ.ಶ್ರೀ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ' ಕನ್ನಡ ಜಗತ್ತಿಗೆ ತುಳುಲೋಕದ ಪರಿಚಯ' ಮಾಲಿಕೆಯಡಿ "ತುಳು ಪಾಡ್ದನಗಳ ಲೋಕದೃಷ್ಠಿ" ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಕೇವಲ ಎರಡು ಜಿಲ್ಲೆಗಳನ್ನು ಕೇಂದ್ರೀಕರಿಸದೆ, ರಾಜ್ಯಾದ್ಯಂತ ತುಳು ಭಾಷೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಇದಕ್ಕೆ ಬಜೆಟ್ ನಲ್ಲಿ ಪ್ರತ್ಯೇಕ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು. ತುಳು ಭಾಷಿಕರು ಕನ್ನಡಿಗರ ಜೊತೆ ಬೆರೆತು ಹೋಗಿದ್ದಾರೆ. ಅವರಿಗೆ ಕನ್ನಡದ ಬಗ್ಗೆ ಚೆನ್ನಾಗಿ ಗೊತ್ತಿದೆ. ಆದರೆ ತುಳುವಿನ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಕನ್ನಡಿಗರಿಗೆ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪಾಡ್ದನಗಳು ಮೌಖಿಕ ಸಾಹಿತ್ಯವಾಗಿದೆ. ತುಳು ಪಾಡ್ದನಗಳ ಬಗ್ಗೆ ಕನ್ನಡಿಗರಿಗೆ ಹೇಳುವ ಜೊತೆಗೆ, ಹೊಸ ತಲೆಮಾರಿನ ತುಳುವರಿಗೂ ತಿಳಿಸಿಕೊಡುವ ಅಗತ್ಯವಿದೆ. ತುಳುನಾಡಿನ ಎಲ್ಲ ದೈವಗಳ ಸಾಂಸ್ಕೃತಿಕ ಪದಕೋಶವನ್ನು ಹೊರತರಬೇಕಿದೆ. ತುಳು ಪಾಡ್ದನಗಳನ್ನು ಪಠ್ಯದಲ್ಲಿ ಅಳವಡಿಸಬೇಕು ಎಂದು ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.
ತುಳು ಕನ್ನಡ ರಂಗಕರ್ಮಿ ಸುಧಾಕರ ಬನ್ನಂಜೆ ಮಾತನಾಡಿ, ಸಂವಿಧಾನದ 8 ನೇ ಪರಿಚ್ಛೇದಕ್ಕೆ ತುಳು ಭಾಷೆ ಸೇರಿಸಲು ಅನೇಕ ಪ್ರಯತ್ನಗಳು ಆಗುತ್ತಿವೆ. ತುಳು- ಕನ್ನಡ ಏಕರೂಪದಲ್ಲಿ ಬೆಳೆದ ಭಾಷೆಗಳು. ಕರ್ನಾಟಕದಲ್ಲಿ ತುಳು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಮಾತನಾಡಿ , ಕರಾವಳಿಯ ಹೊರ ಜಿಲ್ಲೆಯ ಜನರು ತುಳು ಭಾಷೆಯಲ್ಲಿ ಏನಿದೆ ಅನ್ನುವ ಸಾಮಾನ್ಯ ಪ್ರಶ್ನೆಯನ್ನು ಮುಂದಿಡುತ್ತಾರೆ, ತುಳು ಭಾಷೆಯ ಅಗಾಧ ಸಾಹಿತ್ಯ ಭಂಡಾರವನ್ನು ಹಾಗೂ ಸಂಪತ್ಭರಿತ ತುಳು ಭಾಷಾ ವಿಚಾರವನ್ನು ಕನ್ನಡಿಗರ ಮುಂದಿಡುವ ಸಲುವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಕರಾವಳಿಯಲ್ಲೂ ಶಾಲಾ ಕಾಲೇಜುಗಳಲ್ಲಿ ತುಳು ಭಾಷೆಯ ಕಾರ್ಯಕ್ರಮ ಆಯೋಜಿಸಿ, ಹೊಸ ತಲೆಮಾರಿಗೆ ತುಳು ಬಗ್ಗೆ ಅಭಿಮಾನ ಮೂಡಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಋತುಗಾನ ಪ್ರತಿಷ್ಠಾನದ ಅಧ್ಯಕ್ಷೆ ವಿಜಯಲಕ್ಷ್ಮಿ ಸತ್ಯಮೂರ್ತಿ, ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಶೇಖರ್ ಪುತ್ರನ್ ಉಪಸ್ಥಿತರಿದ್ದರು.
ಶೈಲಸುತೆ ರಂಜಿತಾ ನಿರೂಪಣೆ ಮಾಡಿದರು.ಕು. ಪ್ರಣತಿ ಪ್ರಾರ್ಥನೆ ಗೀತೆ ಹಾಡಿದರು.
ತುಳು-ಕನ್ನಡ ಕವಿಗೋಷ್ಠಿಯಲ್ಲಿ ರುಕ್ಮಿಣಿ ನಾಯರ್, ಆನಂದ್ ಕುಮಾರ್, ಸಯ್ಯದ್ ಯೇಜಸ್ ಪಾಷ, ಪದ್ಮಾ ಟಿ. ಚಿನ್ಮಯಿ, ರಾಕೇಶ್ ಎಂ, ಸ್ಮಿತಾ ಬಲ್ಲಾಳ್ ಅವರು ಕವಿತಾ ವಾಚನ ಮಾಡಿದರು.