LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸವದತ್ತಿಯ ಸರ್ವಶಕ್ತಿ... ವೇದ ಜನಯಿತ್ರಿ.... ಬ್ರಹ್ಮರೂಪಿಣಿ... ಶ್ರೀ ರೇಣುಕಾ ಎಲ್ಲಮ್ಮ...!!

ಎಂ.ವಿ.ಜೋಷಿ

ಹೇ... ಮಾತಾ....! ಮಾತಾ....!! ಹೇ ರೇಣುಕಾ ದೇವಿ... ಹೇ ವೇದ ಜನಯಿತ್ರಿ.... ಹೇ ಬ್ರಹ್ಮರೂಪಿಣಿ ತೇ ವಂದನ...! ಹೇ ಯೋಗ ಸಿದ್ಧಿದೇ ಏಕಾದೀನೀಶಾನೀ... ಹೇ... ವಿಮಲ ನಾಮಿಕೇ ಹೇ ವಂದನ...! ಹೇ... ಜ್ಞಾನ ಯೋಗೇ ಶಿ ಗಾಯತ್ರಿ ಸಾವಿತ್ರಿ ವಾಹ್ಯತ್ರಿ ವ್ರಜಧಾತ್ರಿ ತೇ ವಂದನ...! ಹೇ ಏಕ ಮಾತೃಕೇ... ಏಕವೀರೇ ದೇವೀ... ಪ್ರಣವೈಕ ಸುಸ್ವರೇ ತೇ ವಂದನ...! ಉತ್ಕರ್ಷ ದಾಯಿಕೇ ಹೇ ಅಷ್ಟ ಪರ್ಯಾಯ ವಾಚಕೇ... ಹೇ ಪ್ರಹ್ವಿತೇ ವಂದನ...! ಹೇ... ರೇಣುಕಾದೇವಿ... ತೇ ವಂದನೌ... ಹೇ... ಬ್ರಹ್ಮರೂಪಿಣಿ ತೇ ವಂದನೌ... ಹೇ ಬ್ರಹ್ಮ ರೂಪಿಣಿ ತೇ ವಂದನೌ....!!

 

ಇಷ್ಟು ಸಾಕಲ್ಲವೇ...? ಅಜ್ಞಾತ ಕವಿಯೊಬ್ಬರು ಸಂಸ್ಕೃತದಲ್ಲಿ ರಚಿಸಿದ ಶ್ಲೋಕ ಅರಿತುಕೊಂಡರೆ ಎಲ್ಲಮ್ಮ ಎಲ್ಲರಿಗೂ ಅಮ್ಮ. ಎಲ್ಲಾ ಕಡೆ ವ್ಯಾಪಿಸಿದ್ದಾಳೆ ಎನ್ನೋದಕ್ಕೆ. ಇದೇರೀತಿ ಅನೇಕರು ಅನೇಕ ರೀತಿಯಲ್ಲಿ ಎಲ್ಲಮ್ಮನನ್ನು ಕೊಂಡಾಡಿದ್ದಾರೆ. ಭಾರತ ಹುಣ್ಣಿಮೆ ಇದೇ ಫೆ.೧, ೨೦೨೬ ರಂದು ದೊಡ್ಡ ಮಟ್ಟದಲ್ಲಿ ಜರುಗಲಿರುವುದರಿಂದ ಎಲ್ಲಮ್ಮನ ಕುರಿತು ಭಕ್ತಿ ಭರಿತವಾಗಿ ಆರಾಧಿಸಿದವರ ಅಭಿಪ್ರಾಯಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಆಸ್ತಿಕರು ಓದಿ ಸಂತೋಷಿಸಬಹುದು. 

ಚಂಡಿಕೆ ಪ್ರಚಂಡಿಕೆ, ಮತ್ತ ಮಹಿಷ ಕಂಡಿಕೆ, ಕಾಶಿಕಾ ಪುರೇಶ್ವರಿ ಕೃಪಾಕರಿ ಮಹೇಶ್ವರಿ. 

ಸಂಸ್ಕೃತ ಋಷಿ ಪ್ರಣೀತ


 

ರೇಣುಕಾದೇವಿಯು ಸಾಕ್ಷಾತ್ ಜಗದಂಬೆಯು: ಆಕೆಯ ನಿಜ ತತ್ವ ಸಾತ್ವಿಕರಿಗೆ ಮಾತ್ರ ಗೊತ್ತಾಗುತ್ತದೆ. ಶ್ರೀ ರೇಣುಕೆಯು ಸಾಕ್ಷಾತ್ ಆದಿಶಕ್ತಿ. ಕಲಿಯುಗದಲ್ಲಿ ಜಗನ್ಮಾತೆಯಾದ ಶ್ರೀ ರೇಣುಕೆಯ ಮಹಾತ್ಮೆ ದಶದಿಕ್ಕುಗಳಲ್ಲಿ ಪಸರಿಸುತ್ತದೆ. ಆಕೆಯ ಅಮಾನುಷ ಲೀಲೆಗಳು ಅಸಂಖ್ಯವಾಗಿ ಹೊರಬಿದ್ದು, ಜನರನ್ನು ಭಕ್ತಿ ಮಾರ್ಗಕ್ಕೆ ಹಚ್ಚುವವು. ಲೋಕದಲ್ಲೆಲ್ಲಾ ರೇಣುಕಾದೇವಿಯ ಉಪಾಸನೆಯೂ, ಪೂಜೆಯೂ ಆಧಿಕವಾಗಿ ಬೆಳೆಯುವುದು, ಎಲ್ಲ ವರ್ಣದವರೂ, ಎಲ್ಲ ಜಾತಿಯವರೂ, ಎಲ್ಲ ಮತದವರೂ ಮಹಾದೇವಿಯನ್ನು ಆರಾಧಿಸಿ ಪೂಜಿಸುವರು.

ಸೂತಮುನಿ ಪ್ರಣೀತ.




ರಾಜ್ಯದ ಪ್ರಸಿದ್ಧ ಪ್ರೇಕ್ಷಣೀಯ ಯಾತ್ರಾ ಸ್ಥಳಗಳಲ್ಲಿ ಬೆಳಗಾಂ ಜಿಲ್ಲೆಯ ಸವದತ್ತಿಯಲ್ಲಿರುವ ಎಲ್ಲಮ್ಮನ ಕೊಳ್ಳವು ಅಗ್ರಗಣ್ಯವಾದುದು. ಕ್ಷೇತ್ರದ ಸೌಂದರ್ಯ, ಮಹತ್ವದ ಬಗ್ಗೆ ದೊಡ್ಡ ಗ್ರಂಥವನ್ನೇ ರಚಿಸುವಷ್ಟು ಸಾಮಗ್ರಿ ಇದೆ.

ಡಾ.ಮತಿಘಟ್ಟ ಕೃಷ್ಣಮೂರ್ತಿ


ಕರ್ನಾಟಕವು ದೇವಿಯರ ನಾಡು. ಆದಿನಿಷಾದರ ಕಾಲದಿಂದಲೂ ಭೂದೇವಿಯ ಹಲವು ರೂಪಗಳು-ಗುಡ್ಡ ಗವಿ, ಕೊಳ್ಳಗಳಲ್ಲಿ, ಬಯಲು, ಮರಳುಗಾಡು, ಅಟ್ಟಂಬೆಟ್ಟA ಅರಣ್ಯಗಳಲ್ಲಿ-ಒಡಮೂಡಿಕೊಂಡಿವೆ. ಎಲ್ಲಮ್ಮನು ಎಲ್ಲೆಯ-ಸೀಮೆಯ ದೇವಿ, ಶಿವಾ, ಸೀಮಂತಿನಿ: ಎಲ್ಲೆಯ ಒಳಗೆ ಎಲ್ಲರೂ ಬರುವರು, ಪರ್ಸಿಯಾ ಇರಾಣ್, ಎಲಾಮ್ ದವರೆಗೆ ಭಾರತದ ಸೀಮೆ ಇತ್ತು. ಒಮ್ಮೆ ರಾಮಾಯಣದ ಹಿಂದಿನ ಕಾಲ ಅದು. ರಟ್ಟರ ಕಾಲದಲ್ಲಿ ಸುಗಂಧವರ್ತಿಯ ಗುಡ್ಡದಲ್ಲಿ, ಎಳುಕೊಳ್ಳ ದಾಟಿ ತನ್ನ ಘಟ್ಟ ಹಾಕಿದಳು. ಪರಶುರಾಮ, ಕಾರ್ತಿವೀರ್ಯ, ಜಮದಗ್ನಿ-ರೇಣುಕಾ ರಹಸ್ಯವು ಯೋಗಗಮ್ಮ! ಹೆಣ್ಣು ಗಂಡಿನ ಲಿಂಗ ಭೇದ ಮೀರಿದುದು. ಆದರೂ ಯೋನಿ ಯೋನಿಗಳಲ್ಲಿ ತಿರುಗಾಡಿಸುವುದೂ ಇದೇ. ರಂಡೆತನ, ಬಂಜೆತನ, ಮುತೈದೆತನ, ಗೆಣೆತನ, ತಾಯ್ತನ, ವಿಧಿಮಾಯತನ, ಬಡತನ, ಒಡೆತನ - ಎಲ್ಲ ಏರಿಳಿವು ಎಲ್ಲವೂ ಎಲ್ಲಮ್ಮನ ಕುಣಿತದಲ್ಲಿ ತೋರಿಸಿ ಹೋಗುವುವು.

ವರಕವಿ ಡಾ.ದ.ರಾ.ಬೇಂದ್ರೆ




ಎಲ್ಲಮ್ಮ ಶಕ್ತಿಯ ಪರಮಾವತಾರ: ರೇಣುಕೆ ಆದಿಶಕ್ತಿ, ಆಗ್ನಿಹಸ್ತೆ, ಪಾರ್ವತಿಯ ಅಂಶ, ಚಂಡಿ ಚಾಮುಂಡಿ, ಅವಳು ಒಲಿದರೆ ನಾರಿ: ಮುನಿದರೆ ಮಾರಿ. ತಾಯಿ ಕಾಡಿ ಬೇಡುತ್ತಾಳೆ. ಬೇಡಿದ್ದನ್ನು ನೀಡಿದರೆ ಕಾಪಾಡುತ್ತಾಳೆ. ಅವಳೊಡ್ಡಿದ ಭಕ್ತಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಯಾವ ಕೊರತೆಯೂ ಆಗಲಾರದು. ಎಲ್ಲಮ್ಮನ ಪವಾಡಗಳು ಅನಂತ; ಸೊಕ್ಕಿಗೆ ಬಂದವರನ್ನು ಕಾಡಿ, ಅವರನ್ನು ಪರೀಕ್ಷೆಗೆ ಒಡ್ಡಿ ಸೊಕ್ಕು ಮುರಿದಳೆಂದು ಹೇಳುವ ಅನೇಕ ಕಥೆಗಳೂ, ಹಾಡುಗಳೂ ಕೇಳಿ ಬರುತ್ತವೆ. "ಎಂದು ಹೊಸ ಭಕ್ತರು ಗುಡ್ಡಕ್ಕೆ ಬರುವುದಿಲ್ಲವೋ ಅಂದು ನಾನಿಲ್ಲಿ ಇರುವುದಿಲ್ಲ'' ಎಂದು ಎಲ್ಲಮ್ಮನುಡಿದಿರುವಳಂತೆ.

ಡಾ.ಎಂ.ಎಸ್. ಸುಂಕಾಪುರ.


ಎಲ್ಲರ ಅಮ್ಮ ಎಲ್ಲಮ್ಮ, ಜಗದಂಬಾ, ಜಗನ್ಮಾತಾ, ಮಹಾಮಾಯೆ. ಮಹಾತಾಯಿ, ವಿಶ್ವಮಾತೆ, ಶಕ್ತಿದೇವಿ ಇತ್ಯಾದಿ ಅವತಾರ, ಸ್ವರೂಪ, ರೂಪಗಳಿಂದ ಪೂಜಿಸಿಕೊಳ್ಳುವ ದೇವತೆ ಯ(ಎ)ಲ್ಲಮ್ಮ, ಸರ್ವರ ನಾಯಿ, ಜಗದಂಬಾ ಜನಪದ ಮನೋಭೂಮಿಕೆಯಲ್ಲಿ ಎಲ್ಲಮ್ಮ ಸರ್ವಮಯಿಯಾಗಿದ್ದಾಳೆ. ಮಹಾಭಾರತ, ಭಾಗವತ ಪುರಾಣಗಳಲ್ಲಿ ದಾಖಲೆಗೊಂಡಿರುವ ರೇಣುಕೆಯೇ ಎಲ್ಲಮ್ಮನಾಗಿರುವಳು.

ಡಾ. ನಿಂಗಣ್ಣ ಸಣ್ಣಕ್ಕಿ.




ಎಲ್ಲಮ್ಮ ಇದು ಕನ್ನಡ ನಾಡಿನ ವಿಶಿಷ್ಟವಾದ ಹೆಸರು. ರೇಣುಕರಾಜನ ಮಗಳು ಎಂಬುವುದಕ್ಕೆ ಪರಂಪರಯ ಬಲವಿದೆ. ಯಾಕೆಂದರೆ, ಕಾಶ್ಮೀರದಲ್ಲೂ ಶಾಕ್ತ ಸಂಪ್ರದಾಯವಿದ್ದ ಬಗ್ಗೆ ಸಾಕಷ್ಟು ದಾಖಲೆಗಳಿವೆ. ಹಿಮಾಚಲ ಪ್ರದೇಶದಲ್ಲಿಯ ಶ್ರೀಮಾವೂರು ಎಂಬಲ್ಲಿ ಶ್ರೀ ರೇಣುಕಾ ಕ್ಷೇತ್ರವಿದೆ. ದೇವಿಯ ಕುಲಾಚಾರ ಸಂಪ್ರದಾಯವು ಉತ್ತರದಿಂದ ದಕ್ಷಿಣಕ್ಕೆ ಇಳಿದು ಬಂದಿರಬೇಕು. ಕಾಶ್ಮೀರದ `ಜಲ್ಹ' (ಎಲ್ಲ) ಅಣ್ಣಮೂಲ ಸಂಪ್ರದಾಯಿಕ `ಅಂಬಾ'(ಅಮ್ಮ) ದೇವಿಯ ಕುಲಾಚಾರವುಳ್ಳ ಅವಶಿಷ್ಟ ಮನೆತನದವನು ಶಾಕ್ತ ಪಂಥಿಯಾಗಿರಬೇಕು.

ಡಾ.ಶಂ.ಭಾ. ಜೋಷಿ


 

ಕರ್ನಾಟಕದ ದೇವಿಯನ್ನು `ಎಲ್ಲಮ್ಮ' ಎಂದು ಕರೆದವನು ವಿಜಯನಗರದ ಚಕ್ರವರ್ತಿ ಶ್ರಿ ಕೃಷ್ಣದೇವರಾಯನ ಆಳ್ವಿಕೆಯಲ್ಲಿದ್ದ ಬಾಗಿ ಬೊಮ್ಮಪ್ಪ ನಾಯ್ಕನೆಂಬುವನು. ಕ್ರಿ.ಶ.೧೫೦೪ರಲ್ಲಿ ರೇಣುಕಾ(ಎಲ್ಲಮ್ಮ) ಗುಡಿಯ ದಕ್ಷಿಣ ಭಾಗದ ನಗರಖಾನೆಯನ್ನು ಕಟ್ಟಿಸಿದಾಗ ಬರೆಯಿಸಿದ ಶಾಸನದಲ್ಲಿ ದೇವತೆಯನ್ನು `ಜತ್ತಕ' ಎಂದು ಉಲ್ಲೇಖಿಸಲಾಗಿದೆ. ಎಲ್ಲಮ್ಮ (ರೇಣುಕಾ) ಸಂಪ್ರದಾಯವು ಕರ್ನಾಟಕದ ಅನೇಕ ಕಡೆಗಳಲ್ಲಿ ಕಾಣಸಿಗುತ್ತವೆ.

ಡಾ.ಬೆಟಗೇರಿ ಕೃಷ್ಣಶರ್ಮಾ




* ಕೋಪಿಷ್ಟನಾದ ಜಮದಗ್ನಿಯ ಶಾಪದಿಂದ ಆವರಿಸಿದ ತೊನ್ನು ರೋಗವನ್ನು ಸತಿ ರೇಣುಕೆ ಸವದತ್ತಿ ಕ್ಷೇತ್ರದ ಜೋಗುಳಬಾವಿಯ ಸ್ನಾನದಿಂದ ಕಳೆದುಕೊಂಡಳು. ತಂದೆಯ ಆಣತಿಯಂತೆ ಪರಶುರಾಮ ತಾಯಿಯ ಕೊಲೆ ಮಾಡಿ, ತಂದೆಯ ವರದಿಂದ ಅವಳ ಜೀವವನ್ನು ಮರಳಿ ಪಡೆದ: ಕಾಮಧೇನುವಿನ ಆಸೆಗಾಗಿ ಜಮದಗ್ನಿಯನ್ನು ಕೊಂದ ಕಾರ್ತಿವೀರ್ಯಾರ್ಜುನನನ್ನು ಪರಶುರಾಮ ಹತಿಸಿದ-ಎಂಬ ಪುರಾಣದ ಮೂಲಕ ಎಲ್ಲಮ್ಮನ ಸಂಪ್ರದಾಯ ಉತ್ತರ ಕರ್ನಾಟಕದಲ್ಲಿ ತುಂಬ ಪ್ರಸಾರದಲ್ಲಿದೆ. ದಕ್ಷಿಣಕ್ಕೆ ಹೋದಂತೆ ಕಡಿಮೆಯಾಗುತ್ತಿದ್ದರೂ `ಕರ್ನಾಟಕದ ದೇವತೆ' ಎನ್ನುವಷ್ಟರ ಮಟ್ಟಿಗೆ ಇವಳ ಪ್ರತೀತಿ ನಾಡಿನ ತುಂಬಾ ಹಬ್ಬಿದೆ.

ಡಾ.ಎಂ.ಎಂ.ಕಲಬುರ್ಗಿ


 

ಅನೇಕ ಪುರಾಣಗಳು ಜಮದಗ್ನಿಯು ಗೋದಾವರಿ ನದಿ ತೀರದಲ್ಲಿ ಇರುತ್ತಿದ್ದನೆಂದು ವರ್ಣಿಸುತ್ತವೆ. ರೇಣುಕೆ, ಜಮದಗ್ನಿ ಮತ್ತು ಪರಶುರಾಮರ ಪಂಥಗಳು ಇಡೀ ಭಾರತದ ತುಂಬಾ ಹಬ್ಬಿರುವುದರಿಂದ ಮಲಪ್ರಭಾ ನದಿ ತೀರದ ಎಲ್ಲಮ್ಮನ ಗುಡ್ಡದಲ್ಲಿ ಪೌರಾಣಿಕ ಸಂಗತಿಗಳು ನಡೆದವೆಂದು ಹೇಳುವುದು ಸತ್ಯಕ್ಕೆ ದೂರವಾಗಬಹುದು. ಆದರೆ ಇಂತಹ ಎಲ್ಲಮ್ಮ ದೇವಸ್ಥಾನಗಳು ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಮುಂತಾದ ರಾಜ್ಯಗಳಲ್ಲಿ ಹಬ್ಬಿಕೊಂಡಿರುವುದರಿAಗೋದಾವರಿ ನದಿ ತೀರದ ಎಲ್ಲಮ್ಮನ ಸಂಪ್ರದಾಯವೇ ಭಾರತದ ತುಂಬಾ ಹಬ್ಬಿರಲಿಕ್ಕೆ ಸಾಕು. ಎಲ್ಲಮ್ಮನು ಕಾಶ್ಮೀರದ ಕ್ಷತ್ರಿಯ ರಾಜನ ಪುತ್ರಿ. ಜಮದಗ್ನಿ ಒಬ್ಬ ಬ್ರಾಹ್ಮಣ ಋಷಿ. ಮಹಾರಾಷ್ಟ್ರದ ಮುಂಬೈ ನಗರದಿಂದ ಹಿಡಿದು, ದಕ್ಷಿಣ ಕರ್ನಾಟಕದವರಗಿನ ಜನರು ಜಾತ್ರೆಯ ಕಾಲಕ್ಕೆ ಕಂಡು ಬರುತ್ತಾರೆ. ಬನದ ಹುಣ್ಣಿಮೆ ಮತ್ತು ಭಾರತ ಹುಣ್ಣಿಮೆಗಳಲ್ಲಿ ಮುಂದುವರಿದವರು, ಹಿಂದುಳಿದವರು, ಅಜ್ಞರು, ತಜ್ಞರು, ಬ್ರಾಹ್ಮಣರು, ಹರಿಜನರು, ಬಡವರು, ಸಿರಿವಂತರು. ರೈತರು ಎಲ್ಲರೂ ಸೇರುತ್ತಾರೆ. ಸಾಲದ್ದಕ್ಕೆ ಇತ್ತಿತ್ತಲಾಗಿ ಮಹಮ್ಮದೀಯ ಪಂಥದವರೂ ದೇವಸ್ಥಾನಕ್ಕೆ ಹೊಂದಿಕೊಳ್ಳಲು ಪ್ರಾರಂಭಿಸಿದ್ದಾರೆ.

ಯ.ಗು.ಕುಲಕರ್ಣಿ




ನಾಡಿನ, ರಾಷ್ಟ್ರದ, ಅಂತರಾಷ್ಟ್ರೀಯ ಪ್ರವಾಸಿಗರು, ಭಕ್ತರು, ವಿದ್ಯಾರ್ಥಿಗಳು, ಸಂಶೋಧಕರು ಸವದತ್ತಿಯಲ್ಲಿ ಪ್ರತಿನಿತ್ಯ ನೆರೆದಿರುತ್ತಾರೆ. ಕೆಲವರು ಮುಗ್ಧ ಭಕ್ತಿಯಿಂದ, ಕೆಲವರು ಜನರ ಜೀವನ ವಿಧಾನ ಆಚರಣೆಗಳನ್ನಭ್ಯಸಿಸಲು, ಇನ್ನಿತರರು ಪ್ರಕೃತಿ ಪರಿಸರದಲ್ಲಿ ವಿಶ್ರಾಂತಿಗೆAದು ಒಟ್ಟು ವರ್ಷದ ಎಲ್ಲ ತಿಂಗಳೂ ನಿಜವಾದ ಅರ್ಥದಲ್ಲಿ ಜಾತ್ರೆಯೇ. ಒಂದು ಕಾಲಕ್ಕೆ ಸೀಮೆ ದೇವತೆಯಾಗಿದ್ದ ಎಲ್ಲಮ್ಮ ಊರ ಮಧ್ಯಕ್ಕೆ ಬಂದು ಇಂದು ಲೋಕದೇವತೆಯಾಗಿದ್ದಾಳೆ. ಬಗೆಬಗೆಯ ಸಾಂಸ್ಕೃತಿಕ ಹಾಗೂ ರಾಜಕೀಯ ಪಲ್ಲಟಗಳಿಗೆ ತನ್ನನ್ನೊಡ್ಡಿಕೊಂಡು ಕಲ್ಲಾಗಿದ್ದರೂ ಜೀವಂತವಾಗಿದ್ದಾಳೆ.

- ಡಾ.ಎಚ್.ಆರ್. ಕಮಲಾ(ಹೆಮ್ಮಿಗೆ)


 

`ಸೌದತ್ತಿ ಎಲ್ಲಮ್ಮನ ಪುಣ್ಯಕ್ಷೇತ್ರ' ಎಂದು ಪ್ರಸಿದ್ಧವಾಗಿದೆ. ಗುಡ್ಡದ ಮೇಲಿರುವುದರಿಂದ ಇದಕ್ಕೆ `ಎಲ್ಲಮ್ಮನ ಗುಡ್ಡ' ಎಂದೂ ಕರೆಯುವರು. ಇಲ್ಲಿಯ ಅಧಿದೇವತೆ `ಶ್ರೀ ರೇಣುಕಾ ಎಲ್ಲಮ್ಮ', ಹೀಗೆ ರೇಣುಕಾ ಮತ್ತು ಎಲ್ಲಮ್ಮನೆಂದು ಜನಪದ ಹಾಗೂ ಶಿಷ್ಟ ಎರಡೂ ಮಟ್ಟದ ಧಾರ್ಮಿಕ ಸಂಪ್ರದಾಯಕ್ಕೆ ಸೇರಿದ ಹೆಸರು ಹೊಂದಿರುವುದು ಈಕೆ ಎರಡೂ ಸಂಪ್ರದಾಯಗಳಿಗೆ ಸೇರಿರುವದರ ಸೂಚಕ. ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ಆಂಧ್ರಪ್ರದೇಶಗಳಲ್ಲಿ ಎಲ್ಲಮ್ಮ ರೇಣುಕಾ ಹೆಸರಿನ ಅನೇಕ ಕ್ಷೇತ್ರಗಳಿದ್ದು, ಇವೆಲ್ಲವೂ ಒಟ್ಟಾರೆ ಮಾತೃದೇವತಾ ಸಂಪ್ರದಾಯಕ್ಕೆ ಸೇರಿದವು. ಇಂದು ರೇಣುಕಾ-ಎಲ್ಲಮ್ಮ ಎಂದು ಪ್ರಸಿದ್ದವಾಗಿರುವ ಮಾತೃದೇವತೆಗೆ ಏಳುಕೊಳ್ಳದಮ್ಮ, ಜಗದಂಬ, ಮಾತಂಗಿ, ಮಹಾಸತಿ ಮುಂತಾದ ಇನ್ನೂ ಅನೇಕ ಹೆಸರುಗಳಿವೆ.

 ಡಾ.ಕೆ.ಜಿ.ಗುರುಮೂರ್ತಿ


 

* ಎಲ್ಲಮ್ಮನನ್ನು `ಏಳುಕೊಳ್ಳದ ಎಲ್ಲಮ್ಮ' ಎಂದೇ ಕರೆಯುವುದು ರೂಢಿ. `ಏಳುಕೊಳೆಲ್ಲಮ್ಮ ನಿನ್ನಾಲ್ಕುಧೋ ಉಧೋ' ಇದು ಭಕ್ತರ ಉದ್ಯೋಷ. ಎಲ್ಲಿ ಕಾಣೆಲ್ಲಿ ಕಾಣೆ... ಎಲ್ಲಮ್ಮನಂಥಾಕಿನಲ್ಲಿ ಕಾಣೆಲ್ಲಿ ಕಾಣೆ... ಹುಟ್ಟಿ ಬಂದೆ ಎಲ್ಲಮ್ಮನಾಗಿ ನಿನ ಮದುವಿ ಮಾಡಿ ಕೊಟ್ಟಾರವ್ವಾ ಜಮದಗ್ನಿಗೆ... ಇತ್ಯಾದಿ ಎಲ್ಲಮ್ಮನ ಮಹಿಮೆಯನ್ನು ಸಾರುವ ಜನಪದ ಹಾಡುಗಳು. ರೇಣುಕೆಯ ಉಲ್ಲೇಖ ದೊರೆಯುವ ಮೊದಲ ಹಂತದ ಪುರಾಣಗಳು; ವಾಯು ಪುರಾಣ. ಹರಿವಂಶ, ಭಾಗವತ ಮತ್ತು ಮಹಾಭಾರತ, ಎರಡನೆಯ ಹಂತದಲ್ಲಿ ಸ್ಕಾಂದ ಪುರಾಣ. ತ್ರಿಪುರಾ ರಹಸ್ಯ, ಮೂರನೆಯ ಹಂತದಲ್ಲಿ ಗುಣಭದ್ರ ಮಹಾ ಪುರಾಣದ ಉತ್ತರ ಭಾಗ. ಒಂದರಲ್ಲಿ ವಿಷ್ಣು ಪಾರಮ್ಯ: ಮತ್ತೊಂದರಲ್ಲಿ ಶಿವ-ಶಕ್ತಿ ಪಾರಮ್ಮ. ಮೂರನೆಯದರಲ್ಲಿ ಜೈನ ಧಾರ್ಮಿಕ ಸಂಗತಿಗಳು.

ಡಾ.ದೇವೇಂದ್ರ ಕುಮಾರ ಹಕಾರಿ


 

ವರ್ಷದ ಹನ್ನೆರಡು ತಿಂಗಳೂ ಎಲ್ಲಮ್ಮನ ಜಾತ್ರೆ ಎಂಬುದನ್ನು ನಾವು ಕಾಣುತ್ತಿದ್ದೇವೆ. ಹುಣ್ಣಿಮೆ, ಅಮಾವಾಸ್ಯೆಗಳಲ್ಲಂತೂ ವಿಪರೀತ ಜನಸಂಖ್ಯೆ ಕೂಡುವುದು. ಏಳುಕೊಳ್ಳದ ಎಂಟೂ ದಿಕ್ಕುಗಳಲ್ಲಿ ಇಳಿದುಕೊಳ್ಳುವ ಯಾತ್ರಾ ಜನರನ್ನೂ ಕಾಣುತ್ತೇವೆ. ದಕ್ಷಿಣ ಭಾರತದಲ್ಲಿ ಎಲ್ಲಮ್ಮನ ಕ್ಷೇತ್ರ ಹೆಸರುವಾಸಿಯಾಗಿದೆ. ಭಕ್ತರು ಹೇಳುವ ಹಾಡು ಮಾತಾಗಿ, ಮಾತು ಭಕ್ತಿಯ ಹೆಸರಾಗಿ ಧ್ವನಿಗೈಯುತ್ತಿದೆ.

 

- ಡಾ.ನಿಂಗಣ್ಣ ಸಣ್ಣಕ್ಕಿ




ಋಷಿಮುನಿಗಳ ತಪೋಭೂಮಿಯಾದ ಸವದತ್ತಿಯ ಏಳುಕೊಳ್ಳದ ಕ್ಷೇತ್ರದಲ್ಲಿ ಸ್ಥಿರವಾಗಿ ನೆಲೆ ನಿಂತಿದ್ದಾಳೆ. ಜಾತಿ-ಭಾಷೆಗಳ ಭೇದವಿಲ್ಲದೇ ತಾಯಿಯ ಅನುಗ್ರಹ ಪಡೆಯ ಬರುವ, ಅನೇಕ ಕಷ್ಟ ಸಂಕಟಗಳಿಗೆ ಸಿಲುಕಿರುವಂಥ ಎಷ್ಟೋ ಭಕ್ತರಿಗೆ, ತಾಯಿಯನ್ನು ಕಳೆದುಕೊಂಡಂತ ಎಷ್ಟೋ ಮಕ್ಕಳಿಗೆ ತಾಯಿಯಾಗಿದ್ದಾಳೆ ನಮ್ಮೆಲ್ಲರ ಅಮ್ಮ ಎಲ್ಲಮ್ಮ....!

-ವರನಟ ಡಾ.ರಾಜ್‌ಕುಮಾರ್


 

ಪ್ರಸಕ್ತ ಸಂದರ್ಭದಲ್ಲಿ ಏಳುಕೊಳ್ಳದ ಎಲ್ಲಮ್ಮ ದೇವತೆಯನ್ನು ಒಂದು ಊರು ಅಥವಾ ಒಂದು ಸೀಮೆಯ ದೇವತೆಯಾಗಿ, ಕಾಲಕ್ರಮೇಣ ದಕ್ಷಿಣ ಭಾರತದ ನಾಲ್ಕಾರು ಪ್ರಾಂತಗಳಲ್ಲಿ ಪ್ರಚಾರ ಹೊಂದಿ ಕೊನೆಯಲ್ಲಿ ರೇಣುಕೆಯಾಗಿ ಸಮಗ್ರ ಭಾರತದ ಬ್ರಾಹ್ಮಣ ಸಂಸ್ಕೃತಿಯಲ್ಲಿ ಲೀನವಾಗಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಒಂದು ಊರು ಅಥವಾ ಸೀಮೆಯ ಗಡಿ(ಎಲ್ಲೆ)ದೇವತೆಯಾಗಿ ಸ್ಥಾಪನೆಗೊಂಡ ಎಲ್ಲವ ಶಕ್ತಿ, ವ್ಯಾಪ್ತಿ ಹಾಗೂ ಚಮತ್ಕಾರ ಸಾಮರ್ಥ್ಯಗಳು ಎಲ್ಲೆ ಮೀರಿ ಬೆಳೆದು ಬಂದಿವೆ.

 ಡಾ.ಸಿ.ಪಾರ್ವತಮ್ಮ


 

ಕ್ಷೇತ್ರದ ಪ್ರಧಾನ ದೇವರು ಎಲ್ಲಮ್ಮ ವಾಡಿಕೆಯಲ್ಲಿ 'ಏಳುಕೊಳ್ಳದ ಎಲ್ಲಮ್ಮ'ನೆಂದು ಭಕ್ತಾದಿಗಳು ಉದ್ಗಾರ ಮಾಡುತ್ತಾರೆ. ಲಕ್ಷಾಂತರ ಭಕ್ತರು ಕ್ಷೇತ್ರದ ಒಂದು ವಿಶಿಷ್ಟ ಸಂಪ್ರದಾಯದAತೆ ದೇವಿಗೆ ನಡೆದುಕೊಳ್ಳುತ್ತಾರೆ. ಪೌರಾಣಿಕ ಕಥೆಯು ಮತ್ತ್ವ, ವಾಯು, ಮಾರ್ಕಂಡೇಯ, ಸ್ಕಂದ ಹಾಗೂ ಬ್ರಹ್ಮಾಂಡ ಮೊದಲಾದ ಪುರಾಣಗಳಲ್ಲಿಯೂ ಮಹಾಭಾರತದ ಆದಿ, ಸಭಾ. ಅನುಶಾಸನ ಮತ್ತು ವನಪರ್ವಗಳಲ್ಲಿಯೂ, ರಾಮಾಯಣದ ಬಾಲಕಾಂಡದಲ್ಲಿಯೂ ಅಲ್ಪಸ್ವಲ್ಪ ವ್ಯತ್ಯಾಸದೊಡನೆ ಉಲ್ಲೇಖವಾಗಿದೆ.

ಡಾ.ಅ.ಸುಂದರ


 

ಎಲ್ಲಮ್ಮನ ಮೂಲವನ್ನು ಕುರಿತಂತೆ ಹಲವು ಐತಿಹ್ಯಗಳು ನಂಬಿಕೆಗಳು ಪ್ರಚಲಿತವಾಗಿವೆ. ಅವುಗಳಲ್ಲಿ ಪ್ರಧಾನವಾದವು ಎರಡು. ಒಂದರ ಪ್ರಕಾರ ಅವಳು ಉತ್ತರ ದೇಶದಿಂದ ಕರ್ನಾಟಕಕ್ಕೆ ಬಂದವಳೆಂದು ತಿಳಿಯುತ್ತದೆ. ಅವಳು ಕಾಶ್ಮೀರ ದೇಶದವಳು: ರೇಣುಕರಾಜನ ಮಗಳು, ಜಮದಗ್ನಿಯನ್ನು ಲಗ್ನವಾಗಿದ್ದಳೆಂಬುದು ಅದರಿಂದ ವ್ಯಕ್ತವಾಗುವ ವಿಷಯ. ವಿಷಯಕ್ಕೆ ಸಂಬಂಧಿಸಿದಂತೆ ಪುರಾಣಗಳೂ, ಜಾನಪದ ಕಥೆಗಳೂ ಸಾಕಷ್ಟು ಪ್ರಚಲಿತವಾಗಿವೆ. ಎಂದರೆ, ಐತಿಹ್ಯಕ್ಕೆ ಸಾಕಷ್ಟು ಪ್ರಸಾರವಿದೆ.

 ಡಾ.ಎಂ.ಬಿ.ನೇಗಿನಹಾಳ




ಜೋಗತಿ ಪದ್ಧತಿಯನ್ನು ಹೆಚ್ಚಾಗಿ ಹಿಂದುಳಿದ ಜಾತಿಯ ಜನರು ಅನುಸರಿಸುತ್ತಿರುವುದರಿಂದ ಆದೊಂದು ಚಿಕ್ಕ ಸಂಪ್ರದಾಯವಾಗಿ ಬೆಳೆದಿದೆ. ಎಲ್ಲಮ್ಮ ಅಥವಾ ರೇಣುಕಾ ದೇವಿಯ ಬಗ್ಗೆ ಅನೇಕ ಪುರಾಣಗಳಲ್ಲಿ ಹೇಳಿರುವುದರಿಂದ ಮತ್ತು ಅವಳ ಮಗನಾದ ಪರಶುರಾಮ ವಿಷ್ಣುವಿನ ಅವತಾರವೆಂದು ಹಿಂದೂ ಜನರು ನಂಬಿರುವುದರಿಂದ ಮತ್ತು ಅವರ ಪಂಥವನ್ನು ಮಹಾ ಸಂಪ್ರದಾಯದ ಜನರೂ ಅನುಸರಿಸುತ್ತಿರುವುದರಿಂದ ಅದು ಭಾರತದಲ್ಲಿ ಮಹಾ ಸಂಪ್ರದಾಯವೂ ಆಗಿದೆ.

 ಡಾ.ಎನ್.ಕೆ.ಕಡೆತೋಟದ


 

ಶಕ್ತಿಯ ಆರಾಧನೆ ಭರತಖಂಡದಲ್ಲಿ ಪುರಾತನವಾದುದು. ಆರಾಧನೆ ವಿವಿಧ ಕಡೆಗಳಲ್ಲಿ ನಾನಾ ರೀತಿಯಾಗಿ ನಡೆಯುತ್ತಲಿದೆ. ರೋಗ ರುಜಿನಗಳ ಪರಿಹಾರಕ್ಕಾಗಿ ಶಕ್ತಿಯನ್ನು ಕಾಳಿ, ದುರ್ಗಮ್ಮ ದ್ಯಾಮವ್ವ, ಕರೆವ್ವ, ಮಾರವ್ವ, ಚಂಡಿ, ಎಲ್ಲಮ್ಮ, ಹುಲಿಗೆಮ್ಮ, ಉಚ್ಚಂಗಮ್ಮ ಮೊದಲಾದ ಹೆಸರುಗಳಿಂದ ಆರಾಧಿಸಿ ಅನುಕೂಲವಿದ್ದಾಗ ಹರಕೆ ಸಲ್ಲಿಸುವ ಸಂಪ್ರದಾಯ ಜಾನಪದದಲ್ಲಿದೆ. ಎಲ್ಲಮ್ಮ ಸ್ತ್ರೀ ಮತ್ತು ಪುರುಷ ಶಕ್ತಿಗಳ ಸಂಮಿಲನವಾದ್ದರಿAಆಕೆಯ ಭಕ್ತರಾದ ಜೋಗವ್ವ ಮತ್ತು ಜೋಗಪ್ಪರು ದೇವಿಯ ಭಕ್ತರಾಗುತ್ತಾರೆ.

 - ಹಿರೇಮಠ


 

ಸವದತ್ತಿ ಹಿಂದೆ ಸುಗಂಧವರ್ತಿ ಎಂದು ಹೆಸರಿತ್ತೆಂದು ಕಾಣುತ್ತದೆ. ಬೆಳಗಾಂವಿ ನಗರಕ್ಕೆ ೭೮ ಕಿ.ಮಿ. ದೂರದಲ್ಲಿದೆ. ಇತಿಹಾಸ ಪ್ರಸಿದ್ಧ ಪುಣ್ಯ ಕ್ಷೇತ್ರ, ಪರಶುರಾಮನ ನಾಡೆಂದು ಹೆಸರಾಗಿದೆ. ದೇವಾಲಯದ ಮುಖ್ಯ ಭಾಗವು ಸುಮಾರು ೮-೯ನೇ ಶತಮಾನದ ನಿರ್ಮಾಣ. ಎಲ್ಲಮ್ಮನ ಗುಡ್ಡದ ಪಶ್ಚಿಮಕ್ಕೆ ಮಾವಿನ ತೋಪಿನಲ್ಲಿ ಜೋಗುಳಬಾವಿ ಇದೆ. ಇಲ್ಲಿ ಮೀಯುವುದರಿಂದ ಚರ್ಮರೋಗ ಪರಿಹಾರವಾಗುವುದೆಂಬ ಪ್ರತೀತಿ ಇದೆ. ಶಿಶುನಾಳ ಷರೀಫರು ಎಲ್ಲಮ್ಮ ತಾಯಿಯ ಖ್ಯಾತಿಯನ್ನು ತಮ್ಮ ಹಾಡುಗಳಲ್ಲಿ ಗುಣಗಾನ ಮಾಡಿದ್ದಾರೆ.

ಇಲ್ಲಿ ಹರಿಯುವ ನದಿ ಮಲಪ್ರಭಾ. ಸವದತ್ತಿ ಮುನವಳ್ಳಿ ನಡುವೆ ಬೆಟ್ಟವನ್ನು ಸೀಳಿಕೊಂಡು ಹರಿದಿದೆ. ಅದಕ್ಕೆ ನವಿಲುಕೊಳ್ಳ, ನವಿಲುತೀರ್ಥ ಎಂದು ಕರೆಯುವರು. ನದಿಗೆ ಕಟ್ಟಲಾದ ಆಣೆಕಟ್ಟು ತುಂಗಭದ್ರೆಯ ಪಂಪಸಾಗರದ ನಂತರ ರೂಪಿತವಾದ ನಮ್ಮ ರಾಜ್ಯದ ಬಹುದೊಡ್ಡ `ರೇಣುಕಾ ಸಾಗರ' ಆಣೆಕಟ್ಟು. ಸಾಗರದ ನೀರು ಸಂಪೂರವಾಗಿ ಉಪಯೋಗವಾದರೆ ಕೃಷ್ಣರಾಜ ಸಾಗರಕ್ಕಿಂತಲೂ ಮೂರುಪಟ್ಟು ನೀರಾವರಿ ಒದಗಿಸಬಲ್ಲದು. ಹೀಗೆ ಸಾವಿರ ವರ್ಷಗಳ ಮಡಿಲಲ್ಲಿ ಸವದತ್ತಿ ತನ್ನ ವೈಭವವನ್ನು ಮೆರೆಯುತ್ತಿದೆ.

 ಡಾ.ಚೆನ್ನಕ್ಕ ಮೋಹನ ಪಾವಟೆ


 

ಎಲ್ಲಮ್ಮನ ಜಾತ್ರೆ ಸವದತ್ತಿಯಲ್ಲಿ ಮಾತ್ರವಲ್ಲದೆ ಕರ್ನಾಟಕದ ಅನೇಕ ಕಡೆಗಳಲ್ಲಿ ನಡೆಯುತ್ತವೆ. ಎಲ್ಲಮ್ಮನಿಗೆ ಎಲ್ಲ ಜಾತಿ-ಮತ-ಪಂಥಗಳಲ್ಲೂ ಭಕ್ತವರ್ಗವಿದೆ. ಅವಳು ಭಕ್ತಕೋಟಿಯ ಕುಲದೇವತೆ, ನನ್ನ ಕ್ಷೇತ್ರಕ್ಕೆ ಯಾವೊತ್ತು ಹೊಸ ಭಕ್ತಾದಿಗಳು ಬರುವುದಿಲ್ಲವೊ ದಿನದಿಂದಲೇ ನಾನು ಅಲ್ಲಿಲ್ಲವೆಂದು ತಿಳಿಯಿರಿ ಎಂದು ಎಲ್ಲಮ್ಮ ಭಾಷೆ ಕೊಟ್ಟಿದ್ದಾಳೆಂಬುವುದು ಜನಪದ ನಂಬಿಕೆ. ಆದ್ದರಿಂದಲೇ ಪ್ರತಿದಿನವೂ ತಪ್ಪದೇ ನೂರಾರು ಭಕ್ತರು ಸುತ್ತಲಿನ ದೂರದ ಊರುಗಳಿಂದ ಬಂದೇ ಬರುತ್ತಾರೆ. ಎಲ್ಲಮ್ಮನ ಜಾತ್ರೆ ಹರಿಜಾತ್ರೆ, ವರ್ಷದ ಹನ್ನೆರಡೂ ತಿಂಗಳು ಇವಳ ಜಾತ್ರೆ.

 ಡಾ. ವಿರೂಪಾಕ್ಷ ಬಡಿಗೇರ,


 

* ಪರಿಶೋಧಕರಿಗೆ ಫಲವತ್ತಾದ ಕ್ಷೇತ್ರವಾಗಿ, ಸಮಾಜ ಸುಧಾರಕರಿಗೆ ಒಂದು ಸವಾಲಾಗಿ, ಹಲವು ಶತಮಾನಗಳ ಹಲವು ಸ್ತರಗಳ ಜನರ ದಟ್ಟ ನಂಬಿಕೆಗಳನ್ನು ಹೆಪ್ಪುಗಟ್ಟಿಕೊಂಡು ನಿಗೂಢಗಳ ಕೋಟೆಯನ್ನೇ ಕಟ್ಟಿಕೊಂಡಿರುವ ಸವದತ್ತಿಯ ಎಲ್ಲಮ್ಮನ ಕ್ಷೇತ್ರಕ್ಕೆ ಎಣೆಯಾದುದು ಕರ್ನಾಟಕದಲ್ಲಿ ನಿಶ್ಚಿತವಾಗಿ ಮತ್ತೊಂದು ಇಲ್ಲ. ಭಾರತದಲ್ಲಿ ಅಂತಹವು ಬಹಳ ಇರಲಾರವು. ಮೇಲ್ನೋಟಕ್ಕೆ ಆದೊಂದು ಸರಳ ಕ್ಷೇತ್ರ. ಅಲ್ಲಿ ತಿರುಪತಿಯ ಶ್ರೀಮಂತಿಕೆ ಇಲ್ಲ: ಮಧುರೈ ಮೀನಾಕ್ಷಿ ದೇವಾಲಯದ ವೈಭವದ ಕಟ್ಟಡ ಇಲ್ಲ. ಕಾಶಿಯ ಪಾವಿತ್ರ್ಯ ಇಲ್ಲ. ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಒಳಹೊಕ್ಕು ವಿಚಾರಿಸಿದಾಗ ದಿಗ್ಭ್ರಮೆ ಹಿಡಿಸುವಷ್ಟು ಸಂಕೀರ್ಣ ರಚನೆಯನ್ನು ಹೊಂದಿರುವ ಕ್ಷೇತ್ರದ ಬಗ್ಗೆ ಯಾರೇ ಒಬ್ಬ ವ್ಯಕ್ತಿ ಹೇಳಿ ಮುಗಿಸುವಂಥದ್ದು ಎಂದರೆ ಆದೊಂದು ಸಾಧ್ಯವಾಗದ ಮಾತು. ದೇವಿಯ ಪ್ರಭಾವ ಜನಗಳ ಮನಸ್ಸನ್ನು ಆಳದಲ್ಲಿ ವ್ಯಾಪಿಸಿದೆ. ಸರಿಯಾಗಿ ಹೇಳುವುದಾದರೆ ಆಕ್ರಮಿಸಿದೆ.

 - ಡಾ.ಎಂ.ಚಿದಾನಂದ ಮೂರ್ತಿ


 

`ಭಕ್ತರು ಬಂದು... ಬಂದು... ಸವದತ್ತಿ ಸವೆದೇತಿ..!                              -ದ.ರಾ.ಬೇಂದ್ರೆ

 

ಎಲ್ರೂ ಹೋಗುವರಂತ ಎಲ್ಲಮ್ಮನ ಜಾತರಿಗೆ ಇಲ್ಲದಲೆ ಮನಸು ನಾ ಹೋದೆ... ಪ್ರೀತೀಯ ಬಳ್ಳಿ ತೊಡಕಿತೋ ಬದುಕೀಗೆ...! ಎಲ್ಲಮ್ಮನಂಥಾಕಿ ಎಲ್ಲಿ ಹುಡುಕಿದರಿಲ್ಲ... ಕಲ್ಲು ಗೊಂಬ್ಯಾಗಿ ಗುಡಿಯಾಗ... ಕುಂತರೂ ಬೆಲ್ಲ ತುಂಬಿದಳೋ ಬಾಳೊಳಗ..! `ನಮ್ಮೂರ ಕಾಯೋಳೆ ನಮ್ಮವ್ವ ಎಲ್ಲವ್ವ ನಂಮನೆ ಒಂದಾಗಿ ಇರಲವ್ವಾ... ನಂಮನೆ ಕಣಜ ಹಿಗ್ಗಲವ್ವಾ....! ನಮ್ಮನ್ನು ಕಾಯೋಳೆ ನಮ್ಮವ್ವ.. ಎಲ್ಲಮ್ಮ ನಂಮನೆ ಒಂದಾಗಿ ಇರಲವ್ವ.... ಬೆಳೀಲವ್ವಾ... ನಂ ಕಣಜ ಹಿಗ್ಗಲವ್ವಾ... ಇಂಥ ಸುಗ್ಗಿ ಬರಲವ್ವ'...!!

 -ಡಾ.ಬೆಸಗರಹಳ್ಳಿ ರಾಮಣ್ಣ

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST