ತನ್ನೊಡಲು ಬರಿದಾದರೇನಂತೆ
ಊರದಾರಿಯ ಮಡಿಲನು ತುಂಬಿಸಿ
ನೀರುಣಿಸಿ ವಾತ್ಸಲ್ಯದಲಿ ಚುಂಬಿಸಿ
ಹಸಿರು ತೊಟ್ಟಿಲನು ತೂಗಿದಾಕೆ ತಿಮ್ಮಕ್ಕ.!
ಗಿಡ ಮರಗಳಲಿ ಸ್ವಂತ ಸಂತತಿಯ ಕಂಡೆ
ಬಡತನದಲು ಬೆಳೆಸಿ ಮಮತೆಯನುಂಡೆ
ತನು ಮನದೊಳಿರುವ ನೋವ ಮರೆತು
ಹಸಿರನೇ ಒಲವಾಗಿಸಿ ಉಸಿರಾಗಿಸಿಕೊಂಡೆ.
ಅಕ್ಷರಗಳ ಅರಿವಿರದಾದರೂ ಅನಕ್ಷರಳಲ್ಲ
ಹಸಿರಿನ ಮಹಿಮೆ ತಿಳಿಸಿ ಹೆಸರಾದೆಯಲ್ಲ
ಸಂದ ಪ್ರಶಸ್ತಿಗಳಿಗೇನು ಕಡಿಮೆಯಿಲ್ಲ..!
ಕರ್ನಾಟಕದ ಕಲ್ಪವಲ್ಲಿ ನೀನಾದೆಯಲ್ಲ..!
ಮಾತೃಪ್ರೇಮದಲಿ ಮರಗಳನು ಸಲುಹಿದೆ
ಧರಣಿ ಪ್ರೇಮವ ಸಾರಿದ ಸಾಧಕಿ ನೀನಾದೆ
ಸಾಲುಮರಗಳ ಬೆಳೆಸಿ ಸಿರಿ ನಾಡಾಗಿಸಿದೆ
ಜಗವದಕೆ ತಲೆದೂಗಿತು ಈ ವೃಕ್ಷಮಾತೆಗೆ
✍ ಶ್ರೀವಿದ್ಯಾ .ಎ.ಟಿ