LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಂದಿಬೆಟ್ಟದಲ್ಲಿ ಮೋಜುಮಸ್ತಿಗೆ ಕಡಿವಾಣ ಹಾಕದಿದ್ದರೆ ಅಪಾಯ

ಬೆಂಗಳೂರು : ದಕ್ಷಿಣ ಭಾರತದಲ್ಲೇ ಅತಿ ಎತ್ತರದ ಜೀವ ವೈವಿಧ್ಯತೆಯ ತಾಣ ನಂದಿಬೆಟ್ಟದಲ್ಲಿ ಪರಿಸರ ವಿರೋಧಿ ರೋಪ್ ವೇ ಯೋಜನೆ ರದ್ದುಪಡಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ರೈತ, ವಿದ್ಯಾರ್ಥಿ ಸಂಘಟನಗಳು, ಚಲನಚಿತ್ರೋದ್ಯಮ, ಸಾಮಾಜಿಕ ಕಾರ್ಯಕರ್ತರು ಹಾಗೂ ಪರಿಸರವಾದಿಗಳು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಕಾನೂನು ಹೋರಾಟ ತೀವ್ರಗೊಳಿಸುವುದಾಗಿ ಹೇಳಿದ್ದಾರೆ.

ನಗರದಲ್ಲಿ ವಿಶ್ವಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡ ವಿವಿಧ ಸಂಘಟನೆಗಳ ಮುಖಂಡರು ಪರಿಸರ ಸಂರಕ್ಷಣೆಗಾಗಿ ಹೋರಾಟವೊಂದೇ ಮಾರ್ಗ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿ ನಂದಿ ಬೆಟ್ಟದಲ್ಲಿ ರೋಪ್ ವೇ ನಿರ್ಮಿಸುವುದನ್ನು ರದ್ದುಪಡಿಸಬೇಕು. ಪಂಚ ನದಿಗಳ ಉಗಮ ಸ್ಥಾನವನ್ನು ಸಂರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಸರ ತಜ್ಞ ಡಾ.ಎ.ಎನ್. ಯಲ್ಲಪ್ಪ ರೆಡ್ಡಿ, ಪ್ರಾಣವಾಯು ಒದಗಿಸುವ ನಂದಿಬೆಟ್ಟ ಭಾರೀ ಕುಲುಷಿತವಾಗಿದ್ದು, ಕಳೆದ ಕೆಲ ವರ್ಷಗಳಲ್ಲಿ 500 ಟ್ರ್ಯಾಕ್ಟರ್ ಪ್ಲಾಸ್ಟಿಕ್, ಮದ್ಯದ ಬಾಟೆಲ್ ಗಳು, ನಿರೋಧ್ ಮತ್ತಿತರೆ ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ. ಒಂದು ಟ್ರ್ಯಾಕ್ಟರ್ ನಿರೋಧ್ ದೊರೆತಿವೆ. ನಂದಿ ಬೆಟ್ಟ ತ್ಯಾಜ್ಯ ಸುರಿಯುವ ತಿಪ್ಪೆಯನ್ನಾಗಿ ಮಾಡಬಾರದು. ಪಂಚನದಿಗಳ ಉಗಮಸ್ಥಾನವಾದ ಇಲ್ಲಿ  ಜಲ ಮೂಲ ಬತ್ತಿಹೋಗಿದ್ದು, ಇಲ್ಲಿನ ಶುದ್ಧ ಪರಿಸರ ಹಾಳಾಗಿದೆ. ಮೋಜು, ಮಸ್ತಿ ಮಾಡಲು ಜನ ಇಲ್ಲಿಗೆ ಹೋಗುತ್ತಿದ್ದಾರೆ. ನಂದಿ ಬೆಟ್ಟದ ಮೇಲೆ ವಾಹನಗಳ ಸಂಚಾರ ನಿಷೇಧಿಸಬೇಕು. ಇಲ್ಲಿನ ಪರಿಸರ ಬೇಕಿದ್ದರೆ ನಡೆದುಕೊಂಡು ಹೋಗಿ ಆಸ್ವಾದಿಸುವ ಪರಿಸ್ಥಿತಿ ನಿರ್ಮಾಣವಾಗಬೇಕು. ನಂದಿ ಬೆಟ್ಟ ರಕ್ಷಿಸಲು ಅಭಿಯಾನಕ್ಕೆ ಹೋರಾಟದ ಸ್ಪರೂಪ ನೀಡಬೇಕು ಎಂದು ಹೇಳಿದರು.

ವಿಶ್ವಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸಿ.ಡಿ. ಕಿರಣ್ ಮಾತನಾಡಿ, ನಂದಿಬೆಟ್ಟ ಉಳಿಸಲು ಭಾರೀ ಪ್ರಮಾಣದಲ್ಲಿ ಅಭಿಯಾನ ನಡೆಸುತ್ತಿದ್ದು, ಕಾನೂನು ಹೋರಾಟವನ್ನೂ ಸಹ ಮಾಡುತ್ತಿದ್ದೇವೆ. ರೋಪ್ ವೇ ಯೋಜನೆ ಕೈಬಿಡಬೇಕು. ಇಲ್ಲವಾದಲ್ಲಿ ಸಾರ್ವಜನಿಕ ಸಂವಾದ ನಡೆಸಬೇಕು. ಪರಸರಕ್ಕೆ ಮಾರಕವಾಗುವ ನಿರ್ಧಾರಗಳಿಗೆ ಅವಕಾಶ ನೀಡುವುದಿಲ್ಲ. ಇಲ್ಲಿನ ಜಲ ಸಂಪತ್ತು ರಕ್ಷಿಸುವ ಜೊತೆಗೆ ನಂದಿ ಭಾಗದ ಜೀವ ವೈವಿಧ್ಯತೆಯ ಸಂರಕ್ಷಣೆಗೆ ನಮ್ಮ ಪ್ರತಿಷ್ಠಾನ ಟೊಂಕಕಟ್ಟಿ ನಿಂತಿದೆ. ಬೇಕಿದ್ದರೆ ಇಲ್ಲಿ ಪರಿಸರ ಸ್ನೇಹಿ ಚಾರಣ, ಸುಸ್ಥಿರ ಪ್ರವಾಸೋದ್ಯಮ ಚಟುವಟಿಕೆಗಳು, ನೈಸರ್ಗಿಕ ಸೌಂದರ್ಯ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದು ಹೇಳಿದರು.

ಬಾರ್ಕೂರು ಸಂಸ್ಥಾನ ಮಠದ ಸಂತೋಷ್ ಗುರೂಜಿ ಮಾತನಾಡಿ, ನಮ್ಮ ಹೋರಾಟ ಯಾವುದೇ ಪಕ್ಷದ ವಿರುದ್ಧವಲ್ಲ. ಪ್ರಕೃತಿ ನಾಶದಿಂದ ಉತ್ತರ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾನದಲ್ಲಿ ಭೂ ಕುಸಿತ ಸಂಭವಿಸಿದೆ. ನಂದಿಬೆಟ್ಟದ ಮೇಲೆ ಇದೇ ರೀತಿ ದೌರ್ಜನ್ಯ ನಡೆಸಿದರೆ ಬೆಟ್ಟ ಕುಸಿಯಲಿದೆ. ಇಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸಬೇಕು. ಆರೋಗ್ಯಕರ ಪರಿಸರ ವಾತಾವರಣ ನಿರ್ಮಾಣ ಮಾಡಬೇಕು ಎಂದರು.



ಚಿತ್ರನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ಕನ್ನಡದ ನಾಡು ನುಡಿ, ಜಲ. ಸಂಸ್ಕೃತಿ ವಿಚಾರ ಬಂದಾಗ ಚಿತ್ರೋದ್ಯಮ ಸದಾ ಕಾಲ ಬೆಂಬಲವಾಗಿ ನಿಂತಿದೆ. ನಂದಿ ಬೆಟ್ಟದ ವಿಚಾರದಲ್ಲೂ ಚಿತ್ರೋದ್ಯಮ ಅಖಂಡ ಬೆಂಬಲ ನೀಡಲಿದ್ದು, ಹೋರಾಟದಲ್ಲಿ ನಾವೂ ಕೂಡ ಭಾಗಿಯಾಗುತ್ತೇವೆ. ನಂದಿ ಬೆಟ್ಟದಲ್ಲಿ ಪರಿಸರ ವಿರೋಧಿ ಕ್ರಮಗಳನ್ನು ಕೈಗೊಂಡರೆ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ನಟ, ನಟಿಯರಿಂದ ಸಣ್ಣ ಸಣ್ಣ ವಿಡಿಯೋಗಳನ್ನು ಮಾಡಿ, ಜನ ಸಮುದಾಯದಲ್ಲಿ ಜನಜಾಗೃತಿ ಮೂಡಿಸುವುದಾಗಿ ಹೇಳಿದರು.

ರೈತ ನಾಯಕಿ ಸುನಂದಾ ಜಯರಾಂ ಮಾತನಾಡಿ, ಕೆ.ಆರ್.ಎಸ್ ಅನ್ನು ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಸರ್ಕಾರದ ತೀರ್ಮಾನದ ವಿರುದ್ಧ ಹೋರಾಟ ಮಾಡಿ ಗೆಲುವು ಸಾಧಿಸಿದ್ದೇವೆ. 93 ಕೋಟಿ ರೂ ವೆಚ್ಚದಲ್ಲಿ ಕಾವೇರಿ ಆರತಿ ಮಾಡುವ ಅವೈಜ್ಞಾನಿಕ ನಿರ್ಧಾರದ ವಿರುದ್ಧ ಇದೀಗ ಹೋರಾಟಕ್ಕೆ ಅಣಿಯಾಗಿದ್ದೇವೆ. ಹೋರಾಟದಿಂದ ಮಾತ್ರ ಸರ್ಕಾರವನ್ನು ಮಣಿಸಲು ಸಾಧ್ಯ. ಹೀಗಾಗಿ ನಂದಿ ಉಳಿಸಿ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದರು.

ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್ ಮಾತನಾಡಿ, ಪರಿಸರ ಸರಂಕ್ಷಣೆ ಪ್ರತಿಯೊಬ್ಬರ ಹೊಣೆ. ತಾವು ಕುಲಪತಿಯಾಗಿದ್ದಾಗ ವಿವಿ ಆವರಣದಲ್ಲಿ ಸಸ್ಯ ಸಂಕುಲ ರಕ್ಷಣೆಗೆ ಒತ್ತು ನೀಡಿದ್ದೆ. ಇದೀಗ ಶೈಕ್ಷಣಿಕ ವಲಯದಿಂದ ಹೋರಾಟಕ್ಕೆ ಬಂಬಲ ನೀಡುವುದಾಗಿ ಹೇಳಿದರು.

ಹಿರಿಯ ವಕೀಲ ಶಿವಪ್ರಕಾಶ್ ಮಾತನಾಡಿ, ನಂದಿ ಉಳಿಸಿ ಕುರಿತು ಕಾನೂನು ಹೋರಾಟ ನಡೆಸಿದ್ದು, ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಜನಪರವಾಗಿರಬೇಕು. ಜನವಿರೋಧಿ, ಪರಿಸರ ವಿರೋಧಿ ನಿರ್ಧಾರಗಳ ವಿರುದ್ಧ ಜನಾಭಿಪ್ರಾಯದ ಮೂಲಕ ಹೋರಾಟ ಆರಂಭವಾಗಬೇಕು ಎಂದು ಹೇಳಿದರು.

ವಿಶ್ವಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಮಂಜುನಾಥ್ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST