LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕಾಣದ ಲೋಕಕ್ಕೆ ಪಯಣಿಸಿದ ಚತುರ್ಭಾಷಾ ನಟಿ ಬಿ. ಸರೋಜಾದೇವಿ

ಬೆಂಗಳೂರು : ಆರು ದಶಕಗಳ ಕಾಲ ಬೆಳ್ಳಿತೆರೆಯಲ್ಲಿ ಮಿಂಚಿದ ಬಹುಭಾಷಾ ನಟಿ ಬಿ. ಸರೋಜಾದೇವಿ ಇಂದು ನಮ್ಮೊಂದಿಗಿಲ್ಲ. ಅನೇಕ ಭಾಷೆಗಳಲ್ಲಿ ತಮ್ಮ ಅಭೂತಪೂರ್ವ ಅಭಿನಯದ ಮೂಲಕ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು ಇಂದು ಬೆಳಿಗ್ಗೆ ಕಾಣದ ಲೋಕಕ್ಕೆ ಪಯಣಿಸಿದರು.

ಚಾಮರಾಜಪೇಟೆಯಿಂದ ಚೆನ್ನೈವರೆಗೆ ಅವರು ಸಾಗಿದ ಹಾದಿ ಕುತೂಹಲಕಾರಿಯಾದದ್ದು. ಅಭಿನಯವನ್ನು ತಪಸ್ಸಿನಂತೆ ಆಚರಿಸಿಕೊಂಡು ಬಂದಿದ್ದ ಅವರು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಹಿರಿಯ ನಟಿಯನ್ನು ಕಳೆದುಕೊಂಡು ಕನ್ನಡ ಚಿತ್ರೋದ್ಯಮ ಬಡವಾಗಿದೆ.



1942ರಲ್ಲಿ ಬೆಂಗಳೂರಿನಲ್ಲಿ ಜನಿಸಿದ್ದ ಬಿ. ಸರೋಜಾದೇವಿ ಅವರು, ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಜನಮಾನಸದಲ್ಲಿ ಬೇರೂರಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ಅಭಿನಯ ಸರಸ್ವತಿ ಬಿ. ಸರೋಜಾದೇವಿ, ಮಹಾಕವಿ ಕಾಳಿದಾಸ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಕೇವಲ 17ರ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಪ್ರವೇಶ ಮಾಡಿದ ಅವರು, ಅನೇಕ ಅತ್ಯುತ್ತಮ ಚಿತ್ರಗಳನ್ನು ನೀಡಿದ್ದಾರೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರೆನಿಸಿದ್ದ ಬಿ. ಸರೋಜಾದೇವಿ 2019ರಲ್ಲಿ ತೆರೆಕಂಡ ಪುನೀತ್ ರಾಜ್ ಕುಮಾರ್ ನಟನೆಯ ‘ನಟಸಾರ್ವಭೌಮ’ ಅವರ ನಟಿಸಿದ ಕೊನೆಯ ಚಿತ್ರವಾಗಿತ್ತು.

ಒಂದು ಕಾಲದಲ್ಲಿ ಕನ್ನಡದ ಬೆಳ್ಳಿತೆರೆಯಲ್ಲಿ ಬೆಳಗಿದ ಬಹುಭಾಷಾ ಅಭಿನೇತ್ರಿ ಬಿ. ಸರೋಜಾದೇವಿ ಎಲ್ಲರ ಗಮನ ಸೆಳೆದಿದ್ದರು. ಕಿತ್ತೂರು ಚನ್ನಮ್ಮ, ಅಮರಶಿಲ್ಪಿ ಜಕಣಾಚಾರಿ, ಬಬ್ರುವಾಹನ, ಭಾಗ್ಯವಂತರು, ರತ್ನಗಿರಿ ರಹಸ್ಯ, ಜಗಜ್ಯೋತಿ ಬಸವೇಶ್ವರ, ಲಕ್ಷ್ಮೀಸರಸ್ವತಿ, ಭೂಕೈಲಾಸ, ಅಣ್ಣತಂಗಿ, ಮಲ್ಮಮ್ಮನ ಪವಾಡ ಅವರು ನಟಿಸಿರುವ ಪ್ರಮುಖ ಚಿತ್ರಗಳಾಗಿದ್ದು, ವಿಶಿಷ್ಟ ಅಭಿನಯದ ಮೂಲಕ ದಕ್ಷಿಣ ಭಾರತದಲ್ಲೇ ಅಗ್ರಗಣ್ಯ ನಟಿಯರಲ್ಲಿ ಒಬ್ಬರಾಗಿ ಅವರು ಗುರುತಿಸಿಕೊಂಡಿದ್ದರು.



ಕನ್ನಡದಲ್ಲಿ ಡಾ. ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್ ಹಾಗೂ ತೆಲುಗಿನಲ್ಲಿ ಎನ್.ಟಿ. ರಾಮರಾವ್, ಎ. ನಾಗೇಶ್ವರರಾವ್, ತಮಿಳಿನಲ್ಲಿ ಎಂ.ಜಿ. ರಾಮಚಂದ್ರ, ಜೆಮಿನಿ ಗಣೇಶನ್, ಶಿವಾಜಿ ಗಣೇಶನ್ ಹಾಗೂ ಹಿಂದಿಯಲ್ಲಿ ದಿಲೀಪ್ ಕುಮಾರ್, ರಾಜೇಂದ್ರ ಕುಮಾರ್, ಶಮಿಕಪೂರ್, ಸುನೀಲ್ ದತ್ ರಂತಹ ಮಹಾನ್ ತಾರೆಯರ ಜೊತೆ ನಟಿಸಿದ್ದ ಬಿ. ಸರೋಜಾದೇವಿ ಚತುರ್ಭಾಷಾ ತಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕನ್ನಡದ ಮೊದಲ ನಟಿ ಎಂದು ಜನಪ್ರಿಯತೆ ಹೊಂದಿದ್ದಾರೆ.

1969ರಲ್ಲಿ ಪದ್ಮಶ್ರೀ ಹಾಗೂ 1992ರಲ್ಲಿ ಪದ್ಮಭೂಷಣ ಪ್ರಶಸ್ತಿಗಳಿಗೆ ಭಾಜನರಾಗಿರುವ ಅವರು, ಭಾರತದ 60ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೇಂದ್ರ ಸರ್ಕಾರದಿಂದ 2008ರ ಜೀವಮಾನ ಸಾಧನೆ ಪ್ರಶಸ್ತಿಯ ಗರಿ ಮೂಡಿಸಿಕೊಂಡಿದ್ದಾರೆ. ಎರಡು ಬಾರಿ ಎನ್.ಟಿ.ಆರ್‌ ಪ್ರಶಸ್ತಿಗೆ ಭಾಜನರಾಗಿದ್ದರು. ಅಲ್ಲದೆ, ರಾಜ್ಯೋತ್ಸವ, ಹಲವಾರು ರಾಜ್ಯ ಪ್ರಶಸ್ತಿಗಳು, ಫಿಲಂಫೇರ್ ಜೀವಮಾನ ಸಾಧನೆ ಪ್ರಶಸ್ತಿ ಸೇರಿದಂತೆ ನೆರೆಯ ರಾಜ್ಯ ಸರ್ಕಾರಗಳ ಪುರಸ್ಕಾರಗಳು ಅವರಿಗೆ ಸಂದಿವೆ.



ನಾಳೆ ಮೇರು ನಟಿ ಬಿ. ಸರೋಜಾದೇವಿ ಅಂತ್ಯಸಂಸ್ಕಾರ

ಕನ್ನಡ ಚಿತ್ರರಂಗದ ಮೇರು ನಟಿ ಬಿ.ಸರೋಜಾದೇವಿ ಅವರ ಅಂತ್ಯಸಂಸ್ಕಾರ ಮಂಗಳವಾರ (ಜುಲೈ 15)ರಂದು ಮಂಡ್ಯ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದಶಾವರದಲ್ಲಿ ನೆರವೇರಲಿದೆ.

ಸೋಮವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದ ಸರೋಜಾದೇವಿ ಅವರ ಅಂತಿಮ ದರ್ಶನಕ್ಕೆ ಮಂಗಳವಾರ ಬೆಳಿಗ್ಗೆ 11.30ರ ವರೆಗೆ ಏರ್ಪಡಿಸಲಾಗಿದ್ದು, ನಂತರ ದಶಾವರದಲ್ಲಿ ತಾಯಿ ಸಮಾಧಿ ಪಕ್ಕದಲ್ಲಿ ನೆರವೇರಲಿದೆ.

ಸರೋಜಾದೇವಿ ಪುತ್ರ ಗೌತಮ್ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದ್ದು, ನಾಳೆ ಬೆಳಿಗ್ಗೆ 11.30ರ ನಂತರ ಪಾರ್ಥಿವ ಶರೀರವನ್ನು ಚನ್ನಪಟ್ಟಣಕ್ಕೆ ಕರೆದೊಯ್ಯಲಾಗುವುದು. ಅಲ್ಲಿ ದಶಾವರದ  ಕಣ್ವ ಡ್ಯಾಂ ಬಳಿ ಒಕ್ಕಲಿಗ ಸಂಪ್ರದಾಯದಂತೆ ಅವರ ತಾಯಿ ಸಮಾಧಿ ಪಕ್ಕದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST