ಕಾರಟಗಿ: ಬಾಕಿ 6 ತಿಂಗಳ ವೇತನ ಪಾವತಿ, ನರೇಗಾ ಎಲ್ಲ ನೌಕರರಿಗೆ ಸೇವಾ ಭದ್ರತೆ, ಆರೋಗ್ಯ ವಿಮೆ ಸೇರಿ ಇನ್ನಿತರ ಬೇಡಿಕೆಗಳಿಗೆ ಒತ್ತಾಯಿಸಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ, ಬೇರ್ ಫೂಟ್ ಟೆಕ್ನಿಷಿಯನ್ ಸಂಘದಿಂದ ತಾ.ಪಂ ಕಛೇರಿ ಆವರಣದಲ್ಲಿ ಮಂಗಳವಾರದಂದು ಅನಿರ್ಧಿಷ್ಟಾವದಿ ಅಸಹಕಾರ ಚಳುವಳಿ ಪ್ರತಿಭಟನೆ ನಡೆಸಲಾಯಿತು.

ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ಪದಾಧಿಕಾರಿಗಳಾದ ತಾಂತ್ರಿಕ ಸಂಯೋಜಕ ವಿಶ್ವನಾಥ ಜಿನ್ನೂರು ಅವರು ಮಾತನಾಡಿ ಉದ್ಯೋಗ ಖಾತರಿ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ 06 ತಿಂಗಳಿಂದ ವೇತನ ಪಾವತಿಯಾಗಿಲ್ಲ, ಇದರಿಂದ ಎಲ್ಲಾ ನೌಕರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುತ್ತಾರೆ. ಕುಟುಂಬ ನಿರ್ವಹಣೆ, ದಿನಸಿ ಖರೀದಿ, ಮಕ್ಕಳ ಶಾಲಾ ಪ್ರವೇಶಾತಿ, ಕುಟುಂಬ ಸದಸ್ಯರ ವೈದ್ಯಕೀಯ ವೆಚ್ಚಗಳು, ಪ್ರಯಾಣ ವೆಚ್ಚಗಳು, ಸಾಲಗಳ ಮರುವಾವತಿ, ಇ.ಎಂ.ಐ. ಸೇರಿ ಅನೇಕ ರೀತಿಯ ಖರ್ಚುವೆಚ್ಚಗಳನ್ನು ನಿಭಾಯಿಸಲು ತೀವ್ರ ತೊಂದರೆಯುಂಟಾಗುತ್ತಿದ್ದು, ತ್ವರಿತವಾಗಿ ವೇತನ ಪಾವತಿಸಲು ವಿಫಲವಾಗಿದೆ ತ್ವರಿತವಾಗಿ ಮುಂದಾಗಬೇಕು ಎಂದರು.
ತಾ.ಪಂ ಐಇಸಿ ಸಂಯೋಜಕ ಸೋಮನಾಥ ಗೌಡರ್ ಅವರು ಮಾತನಾಡಿ ಈಗಾಗಲೇ ಬೇಡಿಕೆಗಳ ಈಡೇರಿಕೆಗಾಗಿ ಜು.7 ರಿಂದ ರಾಜ್ಯದ್ಯಂತ ನೌಕರರು ಅಸಹಕಾರ ಚಳುವಳಿ ಮಾಡುತ್ತಿದ್ದು, ಕೂಡಲೇ ಬಾಕಿ ವೇತನ ಪಾವತಿಸಿ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ನೌಕರರಿಗೆ ಸೇವಾ ಭದ್ರತೆ, ಆರೋಗ್ಯ ವಿಮೆ ಹಾಗೂ ಬಾಕಿ 6 ತಿಂಗಳ ವೇತನ ಪಾವತಿ ಆಗುವವರೆಗೂ ಅಸಹಕಾರ ಚಳುವಳಿ ಮಾಡುತ್ತೇವೆ ಎಂದರು.

ಈ ವೇಳೆ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕದ ಸದಸ್ಯರಾದ ಅಭಿಷೇಕ್ , ಚೇತನ್, ಶರಣಬಸವ, ಯೋಗೇಶ್, ವಿರೂಪಾಕ್ಷ, ನೂರುಪಾಷ, ಅನಿತಾ, ಜಯಶ್ರೀ, ಬೇರ್ ಫೂಟ್ ಟೆಕ್ನಿಷಿಯನ್ ಸಂಘದ ಸದಸ್ಯರಾದ ಅನಿಲ್ ಕುಮಾರ್, ಸೋಮನಾಥ, ಇಮಾಂಬಿ, ವಿರೇಶ್, ಮುದುಕಪ್ಪ, ಯಮನೂರು, ಕಾಶೀನಾಥ್, ಬಸವರಾಜ್ ಸೇರಿದಂತೆ ಇತರರಿದ್ದರು.