ಬಳ್ಳಾರಿ : ಬಳ್ಳಾರಿ ಜಿಲ್ಲಾ ಸವಿತಾ ಸಮಾಜ ಅಭಿವೃದ್ಧಿ ಸಂಘದ ವತಿಯಿಂದ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವರಾದ ಸಂತೋಷ್ ಎಸ್. ಲಾಡ್ ರವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಬಳ್ಳಾರಿ ಜಿಲ್ಲಾ ಸವಿತಾ ಸಮಾಜ ಅಭಿವೃದ್ಧಿ ಸಂಘ (ರಿ)ದ ಪದಾಧಿಕಾರಿಗಳ ನೇತೃತ್ವದಲ್ಲಿ ಸವಿತಾ ಸಮುದಾಯದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡು ಅಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ, ಅಲ್ಲಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಅವರಿಗೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಸಚಿವ ಸಂತೋಷ್‌ಲಾಡ್ ೨೦೨೬ರ ಫೆ.೩ರಂದು ವಿಧಾನಸೌಧದ ಹೊರಾಂಗಣದಲ್ಲಿ ಕೇಂದ್ರ ಬಜೆಟ್ ಕುರಿತು ಮಾತನಾಡುವ ಸಂದರ್ಭದಲ್ಲಿ ಸವಿತಾ ಸಮುದಾಯದ ಬಗ್ಗೆ ಕೀಳಾಗಿ ಹಾಗೂ ಜಾತಿಗೆ ಅವಮಾನಕಾರಿ ಪದಗಳನ್ನು ಬಳಸಿದ್ದಾರೆ. ಸಚಿವರ ಈ ಹೇಳಿಕೆಗಳು ಸವಿತಾ ಸಮಾಜದ ಸದಸ್ಯರಲ್ಲಿ ತೀವ್ರ ಆಕ್ರೋಶ ಹಾಗೂ ನೋವನ್ನುಂಟುಮಾಡಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೇ ಇಂತಹ ಜಾತಿನಿಂದನೆಯ ಮಾತುಗಳು ಕೇಳಿಬರುತ್ತಿರುವುದು ಅತ್ಯಂತ ಖಂಡನೀಯವೆಂದು ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾತಿ ಅವಮಾನಕಾರಿ ಪದಗಳ ಬಳಕೆಯನ್ನು ನಿಷೇಧಿಸಿ ದಶಕಗಳು ಕಳೆದಿದ್ದರೂ, ಇಂತಹ ಘಟನೆಗಳು ಮುಂದುವರಿಯುತ್ತಿರುವುದು ದುರದೃಷ್ಟಕರ. ತಲ ತಲಾಂತರದಿಂದ ಕ್ಷೌರಿಕ ವೃತ್ತಿಯೊಂದಿಗೆ ವಾದ್ಯ-ಬ್ಯಾಂಡ್ ಸೇವೆ, ನಾಟಿ ವೈದ್ಯ ಪದ್ಧತಿ ಮುಂತಾದ ಸೇವೆಗಳನ್ನು ಮಾಡುತ್ತಾ ಬಂದಿರುವ ಸವಿತಾ ಸಮಾಜವು ಎಲ್ಲಾ ಜಾತಿ-ಜನಾಂಗದವರಿಗೆ ಸಾಮಾಜಿಕ ಸೇವೆ ಸಲ್ಲಿಸುತ್ತಾ ಬಂದಿದೆ. ಆದರೂ ವೃತ್ತಿನಿರತ ಕ್ಷೌರಿಕ ಸಮುದಾಯ ನಿರಂತರವಾಗಿ ಜಾತಿನಿಂದನೆ ಹಾಗೂ ಶೋಷಣೆಗೆ ಒಳಗಾಗುತ್ತಿರುವುದಾಗಿ ಸಮಾಜದ ಮುಖಂಡರು ಬೇಸರ ವ್ಯಕ್ತಪಡಿಸಿದರು.

ಸಮಾಜ ಸುಧಾರಣೆಗೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿರುವ ಸವಿತಾ ಸಮಾಜದ ಬಗ್ಗೆ ಜನಪ್ರತಿನಿಧಿಗಳೇ ಈ ರೀತಿಯ ಅಪನಿಂದನಕಾರಿ ಹೇಳಿಕೆ ನೀಡಿರುವುದು ಅತೀವ ನೋವು ತಂದಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಜಾತಿನಿಂದನೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಸಮಾಜದ ಸಮಾನತೆ ಮತ್ತು ಸೌಹಾರ್ದತೆಗೆ ಧಕ್ಕೆ ತರುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಯಾವುದೇ ಜನಪ್ರತಿನಿಧಿಗಳು, ಅಧಿಕಾರಿಗಳು ಅಥವಾ ಸಾರ್ವಜನಿಕರು ಸವಿತಾ ಸಮಾಜದ ಕುರಿತು ಅವಮಾನಕಾರಿ ಅಥವಾ ನಿಷೇಧಿತ ಪದಗಳನ್ನು ಬಳಸಬಾರದು ಎಂಬುದಕ್ಕೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಬಳ್ಳಾರಿ ಜಿಲ್ಲಾ ಸವಿತಾ ಸಮಾಜದ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಸವಿತಾ ಸಮಾಜ ಅಭಿವೃದ್ಧಿ ಸಂಘ (ರಿ) ಗೌರವಾಧ್ಯಕ್ಷ ಮಲ್ಲಿಕಾರ್ಜುನ, ಜಿಲ್ಲಾಧ್ಯಕ್ಷ ಡಿ.ಚಂದ್ರಶೇಖರ್, ಜಿಲ್ಲಾ ಉಪಾಧ್ಯಕ್ಷ ಟಿ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಎಂ.ದೇವಣ್ಣ, ತಾಲ್ಲೂಕು ಗೌರವಾಧ್ಯಕ್ಷ ಎಂ.ವೆಂಕಟೇಶ್, ತಾಲ್ಲೂಕು ಅಧ್ಯಕ್ಷ ರಘುಕುಮಾರ್, ತಾ.ಉಪಾಧ್ಯಕ್ಷ ನರಸಿಂಹುಲು, ತಾ. ಪ್ರಧಾನ ಕಾರ್ಯದರ್ಶಿ ಉಮೇಶ್, ನಗರ ಗೌರವಾಧ್ಯಕ್ಷ ಎಂ.ಗೋವಿಂದರಾಜುಲು, ನಗರ ಅಧ್ಯಕ್ಷ ಕೆ.ಶಿವಶಂಕರ್, ನಗರ ಉಪಾಧ್ಯಕ್ಷ ಬಿ.ಅರುಣ್, ನಗರ ಪ್ರಧಾನ ಕಾರ್ಯದರ್ಶಿ ಸಿ.ನಾರಾಯಣ ಸೇರಿದಂತೆ ಸದಸ್ಯರಾದ ಮಾರುತಿ, ಪಿ.ಜಗನ್ನಾಥ್ ಮತ್ತಿತರರು ಉಪಸ್ಥಿತರಿದ್ದರು.