ಬಳ್ಳಾರಿ: ಇತ್ತೀಚೆಗೆ ಸೋಶಿಯಲ್ ಮೀಡಿಯಾ ಮತ್ತು ಡಿಜಿಟಲ್ ಮಾಧ್ಯಮಗಳು ಯಥೇಚ್ಛವಾಗಿ ಸಾರ್ವಜನಿಕರಿಗೆ ನೋಡಲು ಸಿಗುತ್ತವೆ. ಆದರೆ, ಅಷ್ಟೇ ಬೇಗ ಸಾರ್ವಜನಿಕರು ಆ ಸುದ್ದಿಗಳನ್ನು ಮರೆತು ಹೋಗುತ್ತಾರೆ, ಮುದ್ರಣ ಮಾಧ್ಯಮದಲ್ಲಿ ಪ್ರಕಟವಾಗುವ ಸುದ್ದಿಯು ನಮಗೆ ಯಾವಾಗಲೂ ನೋಡಲು ಸಿಗುತ್ತದೆ ಮತ್ತು ಅತ್ಯಂತ ಕರಾರುವಕ್ಕಾದ ಸುದ್ದಿಯನ್ನು ಮುದ್ರಣ ಮಾಧ್ಯಮದಲ್ಲಿ ಕಾಣಬಹುದು ಎಂದು ಬಿಜೆಪಿಯ ಹಿರಿಯ ಧುರೀಣ ಮಾಜಿ ಸಚಿವ ಬಿ.ಶ್ರೀರಾಮುಲು ಅಭಿಪ್ರಾಯ ಪಟ್ಟರು.
ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬಳ್ಳಾರಿ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿ, ಪತ್ರಕರ್ತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ ಅವುಗಳೆಲ್ಲವನ್ನು ಮೀರಿ ಕೆಲಸ ಮಾಡುವ ಪತ್ರಕರ್ತ ಸಮಾಜದಲ್ಲಿ ಗುರುತಿಸಿ ಕೊಳ್ಳುತ್ತಾನೆ ಮತ್ತು ತನ್ನ ವೃತ್ತಿಯಲ್ಲಿ ಯಶಸ್ಸು ಪಡೆಯುತ್ತಾನೆ ಎಂದು ಶ್ರೀರಾಮುಲು ಹೇಳಿದರು.

ಬಳಿಕ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್ ಮಾತನಾಡಿ ಮಾಧ್ಯಮ ಸಂವಿಧಾನದ ನಾಲ್ಕನೇ ಅಂಗವಾಗಿದೆ ಶಾಸಕಾಂಗ ಕಾನೂನುಗಳನ್ನು ರೂಪಿಸಿದರೆ ಕಾರ್ಯಾಂಗ ಅದನ್ನು ಜಾರಿಗೊಳಿಸುತ್ತದೆ, ನ್ಯಾಯಾಂಗ ಅದನ್ನು ಸಮರ್ಪಕ ರೀತಿಯಲ್ಲಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತದೆ, ಆದರೆ, ಪತ್ರಿಕಾ ರಂಗ ಈ ಮೂರು ಕಂಬಗಳ ಮೇಲೆ ನಿಗಾ ಇಟ್ಟು ಅವರ ತಪ್ಪುಗಳನ್ನು ತಮ್ಮ ಮಾಧ್ಯಮದಲ್ಲಿ ಪ್ರಸ್ತುತ ಪಡಿಸುತ್ತಾ ಸರಿದಾರಿಗೆ ತರುವಲ್ಲಿ ಕೆಲಸ ಮಾಡುತ್ತಾ ಸಂವಿಧಾನದ ನಾಲ್ಕನೇ ಅಂಗವೆಂದೆ ಮಾಧ್ಯಮ ರಂಗ ಹೆಸರು ಪಡೆದುಕೊಂಡಿದೆ ಎಂದರು.
ಬಳಿಕ ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್ ಮಾತನಾಡಿ, ಪತ್ರಕರ್ತರು ಇಂದಿನ ಸಮಾಜದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಇದ್ದದ್ದನ್ನು ನೇರವಾಗಿ ಬರೆಯುವುದು ಸಹ ಅವರಿಗೆ ತೊಂದರೆ ಆಗಿ ಪರಿಣಮಿಸುತ್ತದೆ ಇಂಥ ಎಲ್ಲಾ ಸವಾಲುಗಳನ್ನು ಮೆಟ್ಟಿ ಅವರು ಸಮಾಜವನ್ನು ಸರಿದಾರಿಗೆ ತರುವಲ್ಲಿ ಹಗಲಿರಳಲು ಶ್ರಮಿಸುತ್ತಿದ್ದಾರೆ. ಅವರಿಗೆ ಪತ್ರಿಕಾ ದಿನಾಚರಣೆಯ ಶುಭಾಶಯಗಳು ಎಂದು ಶುಭಕೋರಿದರು.
ಇನ್ನು ಕಾರ್ಯಕ್ರಮದಲ್ಲಿ ಪತ್ರಕರ್ತ ಗಿರೀಶ್ ಕುಮಾರ್ ಗೌಡರಿಂದ ಛಾಯಾಚಿತ್ರ ಪ್ರದರ್ಶನ ನಡೆಸಿದರು. ಅಲ್ಲದೇ, ಜಿಲ್ಲೆಗೆ ಬರುವ ವಿವಿಧ ರಾಜ್ಯ, ಪ್ರಾದೇಶಿಕ ಹಾಗೂ ಸ್ಥಳೀಯ ದಿನಪತ್ರಿಕೆಗಳನ್ನು ಬಿತ್ತರಿಸಿ ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ಎಡಿಸಿ ಮಹಮ್ಮದ್ ಜುಬೇರ್, ಸಹಾಯಕ ವಾರ್ತಾಧಿಕಾರಿ ಗುರುರಾಜ್, ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್, ಉಪಮೇಯರ್ ಡಿ.ಸುಕುಂ, ಮಾಜಿ ಮೇಯರ್ ಎಂ.ರಾಜೇಶ್ವರಿ ಸುಬ್ಬರಾಯುಡು, ಪಾಲಿಕೆಯ ಸದಸ್ಯರಾದ ಪ್ರಭಂಜನ್ ಕುಮಾರ್, ರೈತ ಸಂಘದ ಸಂಗನಕಲ್ಲು ಕೃಷ್ಣ, ದರೂರು ಪುರುಷೋತ್ತಮ್ ಗೌಡ, ಕರೂರ್ ಮಾಧವ ರೆಡ್ಡಿ, ವಿ.ಎಸ್.ಶಿವಶಂಕರ್, ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಾಳ್ಳಿ ತಾಯಣ್ಣ, ಕಾಂಗ್ರೆಸ್ ವಕ್ತಾರ ವೆಂಕಟೇಶ ಹೆಗಡೆ, ಕಾಂಗ್ರೆಸ್ ಮುಖಂಡ ಡಿ.ಆಯಾಜ್ ಆಹ್ಮದ್, ಉದ್ಯಮಿ ಹಾಗೂ ಸಮಾಜ ಸೇವಕರಾದ ಜಿ.ಕೆ.ಸ್ವಾಮಿ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸತ್ಯಬಾಬು, ಜನವಾದಿ ಮಹಿಳಾ ಸಂಘದ ಅಧ್ಯಕ್ಷೆ ಚಂದ್ರಕುಮಾರಿ, ಶಮೀಮ್ ಜಕ್ಲೀ, ಉಪನ್ಯಾಕರಾಗಿ ಆಗಮಿಸಿದ್ದ ಪಾಲಿಕೆಯ ಆರೋಗ್ಯಾಧಿಕಾರಿ ಮುನಾಫ್ ಪಟೇಲ್, ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿನೋದ್ ಚವ್ಹಾಣ್, ನಿರೂಪಿಸಿದರೆ, ಪತ್ರಕರ್ತ ವೆಂಕಟೇಶ್ ದೇಸಾಯಿ ಸ್ವಾಗತಿಸಿದರು. ಸಂಘದ ಅಧ್ಯಕ್ಷ ಯಾಳ್ಪಿ ವಲಿಭಾಷ ಪ್ರಾಸ್ತಾವಿಕ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಎನ್.ಎಂ.ನಬಿಸಾಬ್ ಮತ್ತು ಪ್ರವೀಣ್ ರಾಜ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ರವಿಕುಮಾರ್, ಕಾರ್ಯದರ್ಶಿ ಹಸಿರು ಕ್ರಾಂತಿ ಪತ್ರಿಕೆಯ ಪಿ.ರಘುರಾಮ್, ಕಾರ್ಯಕಾರಿ ಸಮಿತಿ ಸದಸ್ಯರಾದ ಜಂಬುನಾಥ್, ಉಪಾಧ್ಯಕ್ಷರಾದ ಬಜಾರಪ್ಪ, ಮಲ್ಲಿಕಾರ್ಜುನ, ಪಂಪನಗೌಡ, ಸಿದ್ಧಿಕ್, ಅಸ್ಲಾಂ, ಲುಕ್ಮನ್, ಖಲಂದರ್, ಹೇಮಂತ್ ರಾಜ್, ಮಹೇಶ್, ಪ್ರಸಾದ್, ಮಂಜು, ಬಾಬು, ಮಲ್ಲಿಕಾರ್ಜುನ, ಬಸವರಾಜ್, ರಮೇಶ್, ಮರಿಸ್ವಾಮಿ, ಸುಂಕಣ್ಣ, ರಾಕೇಶ್, ಸೇರಿದಂತೆ ಜಿಲ್ಲೆಯ ಸಿರಿಗೇರಿ, ಕುರುಗೋಡು, ಕಂಪ್ಲಿ ಹಾಗೂ ಸಿರುಗುಪ್ಪದ ಹಲವಾರು ಪತ್ರಕರ್ತರು ಉಪಸ್ಥಿತರಿದ್ದರು.