LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಮ್ಮ ಮತ ನಮ್ಮ ಹಕ್ಕು, ಸಂವಿಧಾನ ಉಳಿಸಿ ಪ್ರತಿಭಟನಾ ಸಮಾವೇಶ

ಬೆಂಗಳೂರು : ಕೇಂದ್ರ ಚುನಾವಣಾ ಆಯೋಗ ಚುನಾವಣೆಯಲ್ಲಿ ವ್ಯಾಪಕವಾಗಿ ಅಕ್ರಮವೆಸಗಿರುವುದು ಸತ್ಯ. ಮತದಾರರ ಪಟ್ಟಿಯ ವಿದ್ಯುನ್ಮಾನ ರೂಪ ಹಾಗೂ ಮತಗಟ್ಟೆಗಳಲ್ಲಿ ಮಾಡಿರುವ ವೀಡಿಯೊ ರೆಕಾರ್ಡಿಂಗ್‌ಗಳನ್ನು ನೀಡಿದರೆ ಮತಗಳ್ಳತನವನ್ನು ಸಾಬೀತು ಮಾಡುತ್ತೇವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಸವಾಲು ಹಾಕಿದ್ದಾರೆ.

ಮತಗಳ್ಳತನದ ವಿರುದ್ಧ ನಗರದ ಫ್ರೀಡಂ ಪಾರ್ಕ್‌ ನಲ್ಲಿ ಕಾಂಗ್ರೆಸ್ ನಡೆಸಿದ ’ನಮ್ಮ ಮತ ನಮ್ಮ ಹಕ್ಕು, ಸಂವಿಧಾನ ಉಳಿಸಿ ಪ್ರತಿಭಟನಾ’ ರ್‍ಯಾಲಿಯಲ್ಲಿ ಮಾತನಾಡಿದ ರಾಹುಲ್‌ಗಾಂಧಿ, ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನವಾಗಿರುವುದು ನೂರಕ್ಕೆ  ನೂರರಷ್ಟು ಸತ್ಯ, ಮತಗಳ್ಳತನದಿಂದಲೇ ನರೇಂದ್ರಮೋದಿ ಪ್ರಧಾನಿಯಾಗಿದ್ದಾರೆ ಎಂಬ ಗಂಭೀರ ಆರೋಪ ಮಾಡಿದರು.



ಕೇಂದ್ರ ಚುನಾವಣಾ  ಆಯೋಗ ಬಿಜೆಪಿಗೆ ನೆರವಾಗಲು ಮೋದಿ ಅವರನ್ನು ಪ್ರಧಾನಿ ಮಾಡಲು ಮತಗಳ್ಳತನ ಮಾಡಿ ಸಂವಿಧಾನಕ್ಕೆ ಅಪಚಾರವೆಸಗಿದೆ. ವಿದ್ಯುನ್ಮಾನ ಮಾಹಿತಿ ಹಾಗೂ ಮತಗಟ್ಟೆಯ ವೀಡಿಯೊ ರೆಕಾರ್ಡಿಂಗ್‌ಗಳನ್ನು ನಮಗೆ ನೀಡಿದರೆ ಮತಗಳ್ಳತನವನ್ನು ಸಾಬೀತು ಮಾಡಲು ಸಹಕಾರಿಯಾಗುತ್ತದೆ. ನಾವು ಸಾಬೀತುಪಡಿಸುತ್ತೇವೆ ಎಂದು ಹೇಳಿದರು.

ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಆಗಿರುವ ಮತಗಳ್ಳತನವನ್ನು ಈಗ ದಾಖಲೆ ಸಮೇತ ಬಹಿರಂಗ ಮಾಡಿದ್ದೇವೆ. ಈ ಕಾರ್ಯ ಮಾಡಲು ನಮಗೆ 6 ತಿಂಗಳು ಸಮಯ ಹಿಡಿಯಿತು. ಚುನಾವಣಾ  ಆಯೋಗ ನಾವು ಕೇಳಿರುವ ಮಾಹಿತಿಯನ್ನು ಕೊಡಲಿ, ದೇಶದ ಯಾವ ಯಾವ ಕ್ಷೇತ್ರದಲ್ಲಿ ಮತಗಳ್ಳತನವಾಗಿದೆ ಎಂಬುದನ್ನು ಸಾಬೀತು ಮಾಡಿ ತೋರಿಸುತ್ತೇವೆ ಎಂದು ಅವರು ಅದಮ್ಯ ವಿಶ್ವಾಸದಿಂದ ಹೇಳಿದರು.

ಚುನಾವಣಾ ಆಯೋಗ ನಾವು ಕೇಳಿರುವ ಮಾಹಿತಿಯನ್ನು ಕೊಡದಿದ್ದರೆ ಅದು ಒಂದು ಅಪರಾಧಕ್ಕೆ ಬೆಂಬಲ ನೀಡಿದಂತೆ. ಕೇಂದ್ರ ಚುನಾವಣಾ ಆಯೋಗ ನಮಗೆ ಮಾಹಿತಿಗಳನ್ನು ಕೊಡಲೇಬೇಕು ಎಂದು ಒತ್ತಾಯಿಸಿದರು ಚುನಾವಣಾ ಆಯೋಗ ಹಿಂದಿನ 10 ವರ್ಷದ ಎಲೆಕ್ಟ್ರಾನಿಕ್ ರೂಪದ ಮತಪಟ್ಟಿಯನ್ನು ನಮಗೆ ಕೊಡಬೇಕು. ಮತಗಟ್ಟೆಯ ವಿಡಿಯೋ ರೆಕಾರ್ಡಿಂಗ್‌ ನೀಡಬೇಕು. ಅದನ್ನು ಕೊಡದೇ ಇದ್ದರೆ ಅವರು ಅಪರಾಧ ಮುಚ್ಚಿಡುತ್ತಿದ್ದಾರೆ ಎಂದು ಅರ್ಥ. ಆ ಮೂಲಕ ಚುನಾವಣಾ ಆಯೋಗ ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.



ಕೇಂದ್ರ ಚುನಾವಣಾ ಆಯೋಗ ನಮಗೆ ಮಾಹಿತಿಗಳನ್ನು ಕೊಡದಿದ್ದರೆ ನಾವು ಸುಮ್ಮನೆ ಕೂರುವುದಿಲ್ಲ. ಮಾಹಿತಿಗಳನ್ನು ಪಡೆಯಲು ಹಾಗೂ ಮತಗಳ್ಳತನವನ್ನು ಸಾಬೀತುಪಡಿಸಲು ಏನು ಮಾಡಬೇಕೋ ಅದನ್ನು ಮಾಡಿಯೇ ತೀರುತ್ತೇವೆ. ಚುನಾವಣಾ ಆಯೋಗದ ಅಕ್ರಮವನ್ನು ಬಯಲಿಗಳೆಯುತ್ತೇವೆ ಎಂದು ರಾಹುಲ್ ಗಾಂಧಿ ಗುಡುಗಿದರು.

ಈ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಹಣ ಕೊಟ್ಟು ಸರ್ಕಾರವನ್ನೇ ಕಳ್ಳತನ ಮಾಡಿತ್ತು ಎಂದು ಬಿಜೆಪಿಯ ಆಪರೇಷನ್ ಕಮಲವನ್ನು ಉಲ್ಲೇಖಿಸಿ ಮಾತನಾಡಿದ ಅವರು, ಈಗ ಮೋದಿ ಅವರು ಮತ ಕದ್ದು ಪ್ರಧಾನಿಯಾಗಿದ್ದಾರೆ ಎಂದು ಅವರು ದೂರಿದರು.

ಮತಗಳ್ಳತನದ ವಿರುದ್ಧ ನನ್ನದು ಒಂಟಿ ದನಿಯಲ್ಲ, ಇಡೀ ದೇಶದ ಎಲ್ಲ ವಿರೋಧ ಪಕ್ಷಗಳು ನನ್ನ ಜತೆ ನಿಂತಿವೆ. ಮತಗಳ್ಳತನಕ್ಕೆ ನಮ್ಮ ಬಳಿ ಸಾಕ್ಷ್ಯ ಇದೆ. ಚುನಾವಣಾ ಆಯೋಗ ನಮಗೆ ಎಲ್ಲ ಮಾಹಿತಿ ಕೊಡಲಿ. ಎಲ್ಲೆಲ್ಲಿ ಮತಗಳ್ಳತನವಾಗಿದೆ ಎಂಬುದನ್ನು ಬಯಲು ಮಾಡುತ್ತೇವೆ ಎಂದು ರಾಹುಲ್‌ಗಾಂಧಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಮತ ಕದ್ದು ಪ್ರಧಾನಿಯಾಗಿದ್ದಾರೆ.೨೫ ಕ್ಷೇತ್ರಗಳಲ್ಲಿ ಬಿಜೆಪಿ ೩೫ ಸಾವಿರ ಮತಗಳ ಒಳಗೆ ಗೆದ್ದಿದೆ. ಎಲ್ಲೆಲ್ಲ ಅಕ್ರಮಗಳಾಗಿರುವುದು ಸತ್ಯ. ಇದನ್ನೆಲ್ಲ ಬಯಲಿಗೆಳೆಯುತ್ತೇವೆ ಎಂದರು.



ಸಂವಿಧಾನ ಈ ದೇಶದ ಬಡವರಿಗೆ ಇರುವ ದೊಡ್ಡ ಅಸ್ತ್ರ,ಈ ಸಂವಿಧಾನವನ್ನು ಅಪವಿತ್ರಗೊಳಿಸಲು,ಸಂವಿಧಾನಿಕ್ಕೆ ಅವಮಾನ ಅಪಚಾರ ಮಾಡಲು ನಾವು ಬಿಡುವುದಿಲ್ಲ. ಮತಗಳ್ಳತನದ ವಿರುದ್ಧದ ಹೋರಾಟ ಮುಂದುವರೆಯಲಿದೆ ಎಂದು ರಾಹುಲ್‌ಗಾಂಧಿ ಹೇಳಿದರು.ಕಳೆದ ಚುನಾವಣೆಯಲ್ಲಿ ನಾವು ಸಂವಿಧಾನ ರಕ್ಷಣೆ ಮಾಡಿದ್ದೇವೆ. ಈ ಸಂವಿಧಾನ ಪುಸ್ತಕದಲ್ಲಿ ಭಾರತದ ಸಾವಿರಾರು ವರ್ಷದ ಇತಿಹಾಸ ಅಡಗಿದೆ. ಈ ಪುಸ್ತಕದಲ್ಲಿ ಬಣವಣ್ಣ, ನಾರಾಯಣ ಗುರು, ಪುಲೆಯವರ ಧ್ವನಿ ಅಡಗಿದೆ. ಇದರ ಅಡಿಪಾಯ ಏನೆಂದರೆ ಅದು ಒಬ್ಬ ವ್ಯಕ್ತಿ ಒಬ್ಬ ಮತ. ಈ ಸಂವಿಧಾನ ನಾಗರಿಕರಿಗೆ ಏಕ ಮತದ ಅಧಿಕಾರ ಕೊಡುತ್ತದೆ. ಕಳೆದ ಚುನಾವಣೆಯಲ್ಲಿ ಮೋದಿ ಅವರು ಈ ಸಂವಿಧಾನದ ಮೇಲೆ ದಾಳಿ ಮಾಡಿದರು. ಸಾಂವಿಧಾನಿಕ ಸಂಸ್ಥೆಯನ್ನು ಮುಗಿಸುವ ಕೆಲಸ ಮಾಡಿದ್ದಾರೆ" ಎಂದು ಕಿಡಿ ಕಾರಿದರು.

"ಕಳೆದ ಬಾರಿ ನಮ್ಮ ಮುಂದೆ ಒಂದು ಪ್ರಶ್ನೆ ಉದ್ಭವಿಸಿತ್ತು. ಲೋಕಸಭಾ ಚುನಾವಣೆ ಬಳಿಕ ಮಹಾರಾಷ್ಟ್ರ ಚುನಾವಣೆ ನಡೆಯಿತು. ಲೋಕಸಭೆಯಲ್ಲಿ ಮಹಾರಾಷ್ಟ್ರದಲ್ಲಿ ಇಂಡಿಯಾ ಗೆದ್ದಿತ್ತು. ನಾಲ್ಕು ತಿಂಗಳ ಬಳಿಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮಹಾರಾಷ್ಟ್ರದಲ್ಲಿ ಗೆಲುವು ಸಾಧಿಸಿತ್ತು. ಅಚ್ಚರಿದಾಯಕ ಫಲಿತಾಂಶ ಆಗಿತ್ತು. ಮಹಾರಾಷ್ಟ್ರದಲ್ಲಿ ಹೊಸದಾಗಿ ಒಂದು ಕೋಟಿ ಜನರು ಮತದಾನ ಮಾಡಿದ್ದಾರೆ. ಲೋಕಸಭೆಯಲ್ಲಿ ಆ ಒಂದು ಕೋಟಿ ಜನ ಮತ ಮಾಡಿರಲಿಲ್ಲ. ಎಲ್ಲಿ ಹೊಸ ಮತದಾರರು ಮತದಾನ ಮಾಡಿದ್ದಾರೆ ಅವರು ಗೆದ್ದಿದ್ದಾರೆ. ಲೋಕಸಭೆಯಲ್ಲಿ ಸಿಕ್ಕಂತೆ ನಮಗೆ ವಿಧಾನಸಭೆ ಚುನಾವಣೆಯಲ್ಲೂ ಮತ ಪ್ರಮಾಣ ಸಿಕ್ಕಿದೆ. ಹೊಸದಾಗಿ ಮತದಾರರಿದ್ದ ಕ್ಷೇತ್ರದಲ್ಲಿ ಬಿಜೆಪಿಗರು ಗೆದ್ದಿದ್ದಾರೆ. ಆಗ ನಮಗೆ ಸಂದೇಹ ಬಂದಿತ್ತು" ಎಂದರು.

"ಕರ್ನಾಟಕದಲ್ಲಿ ನಮ್ಮ ಸರ್ವೆ ಪ್ರಕಾರ 15-16 ಸೀಟು ಬರುವ ಗೆಲ್ಲುವ ನಿರೀಕ್ಷೆ ಇತ್ತು. ಆದರೆ ನಾವು 9 ಸೀಟು ಗೆದ್ದೆವು. ಚುನಾವಣಾ ಆಯೋಗದಿಂದ ಸಾಫ್ಟ್ ಕಾಪಿ ಕೇಳಿದ್ದೆವು. ಆದರೆ ಅವರು ನಿರಾಕರಿಸಿದ್ದರು. ಮತಗಟ್ಟೆಗಳ ವಿಡಿಯೋ ಕೇಳಿದ್ದೆವು. ಅದನ್ನೂ ಕೊಡಲಿಲ್ಲ. ಬದಲಿಗೆ ಕಾನೂನು ಬದಲಾವಣೆ ಮಾಡಿದರು.‌ ಒಂದು ಲೋಕಸಭೆ ಕ್ಷೇತ್ರದಲ್ಲಿ ನಮ್ಮ ವಿಶ್ಲೇಷಣೆ ಮಾಡಿದೆವು. ಮಹದೇವಪುರದ ಕ್ಷೇತ್ರದಲ್ಲಿ ಫಲಿತಾಂಶ ವಿಶ್ಲೇಷಣೆ ಮಾಡಿದೆವು. ಅದರಲ್ಲಿ 100% ಬಿಜೆಪಿ, ಚುನಾವಣಾ ಆಯೋಗ ನಿಮ್ಮಿಂದ ಮತವನ್ನು ಕದ್ದಿದೆ. ಅದರಲ್ಲಿ 1,00,250 ಮತಗಳನ್ನು ಕಳ್ಳತನ ಮಾಡಿದ್ದಾರೆ. ಅದರರ್ಥ ಆರು ಮತಗಳಲ್ಲಿ ಒಂದು ಮತ ಕದಿಯಲಾಗಿದೆ. ಐದು ರೀತಿಯಲ್ಲಿ ಮತ ಕದಿಯಲಾಗಿದೆ" ಎಂದು ದೂರಿದರು.

"ಮನೆಯ ಮಾಲೀಕ ಬಿಜೆಪಿ ನಾಯಕರಾಗಿದ್ದ. ಆ ಮನೆಯಲ್ಲಿ 50-80 ಮತದಾರರು ಇದ್ದರು. 32,000 ಕೇಸ್ಗಳಲ್ಲಿ ಫಾರ್ಮ್ 6 ಮೂಲಕ ಸಲ್ಲಿಕೆಯಾದ ಹೊಸ ಮತದಾರರ ಪಟ್ಟಿಯಲ್ಲಿ ಅಕ್ರಮ ಆಗಿದೆ. ನಕಲಿ ಮತದಾರ ಒಂದು ಸಾರಿ ಕರ್ನಾಟಕದಲ್ಲಿ ಮತ ಹಾಕುತ್ತಾನೆ. ಆತನೇ ಉತ್ತರ ಪ್ರದೇಶದಲ್ಲೂ ಮತ ಹಾಕುತ್ತಾನೆ. ಮತದಾನ ಮಾಡುವ ಹಕ್ಕು ಆ ವ್ಯಕ್ತಿಗೆ ದೇಶದ ವಿವಿಧ ಕಡೆಗಳಲ್ಲಿ ಇದೆ. ನನ್ನ ಬಳಿ ಚುನಾವಣಾ ಆಯೋಗ ಪ್ರಮಾಣ ಪತ್ರ ಕೇಳುತ್ತಾರೆ. ನಮ್ಮ ಮುಂದೆ ಪ್ರಮಾಣ ಮಾಡಿ ಅಂತಾರೆ. ನಾನು ಸಂವಿಧಾನ ಪುಸ್ತಕ ದ ಮೇಲೆ ಕೈ ಇಟ್ಟು ಪ್ರಮಾಣ ಮಾಡಿದ್ದೇನೆ" ಎಂದರು.



ಚುನಾವಣಾ ಆಯೋಗ ವೆಬ್ ಸೈಟ್ ಬಂದ್: "ಈಗ ಚುನಾವಣಾ ಆಯೋಗ ಮತಗಳ್ಳತನದ ಆರೋಪ ಮಾಡಿದ ಬಳಿಕ ತನ್ನ ವೆಬ್ ಸೈಟ್ ಬಂದ್ ಮಾಡಿದೆ. ಮಧ್ಯಪ್ರವೇಶ, ಬಿಹಾರ ರಾಜ್ಯದಲ್ಲಿ ವೆವ್ ಸೈಟ್ ಬಂದ್ ಮಾಡಿದ್ದಾರೆ. ದೇಶದ ಜನರು ಈ ರೀತಿ ಪ್ರಶ್ನೆ ಮಾಡಿದರೆ ಚು.ಆಯೋಗ ನಾಟಕ ಬಯಲಾಗುತ್ತದೆ. ಚು.ಆಯೋಗ ನಮಗೆ ದೇಶದ ಡಿಜಿಟಲ್ ರೂಪದ ಮತದಾರರ ಪಟ್ಟಿಯನ್ನು ನೀಡಲಿ. ವಿಡಿಯೋ ರೆಕಾರ್ಡ್ ಕೊಡಲಿ. ಅದು ನೀಡಿದರೆ ದೇಶದಲ್ಲಿ ಕೇವಲ ಒಂದು ಸೀಟು ಮಾತ್ರ ಅಲ್ಲ ಇಡೀ ದೇಶದಲ್ಲಿ ಮತ ಕಳ್ಳತನ ಆಗಿದೆ ಎಂಬುದನ್ನು ತೋರಿಸುತ್ತೇವೆ. ಚು.ಆಯೋಗ ಸಂವಿಧಾನದ ಪರವಾಗಿ ನಿಲ್ಲಬೇಕು. ರಾಜ್ಯದಲ್ಲಿ ಒಂದಕ್ಕಿಂತ ಹೆಚ್ಚಿಗೆ ಮತ ಕಳ್ಳತನ ಆಗಿದೆ" ಎಂದು ಆರೋಪಿಸಿದ್ದಾರೆ.

 "ಭಾರತ ದೇಶದ ಬಡ ಜನರ ಮೇಲೆ ದಾಳಿ ಮಾಡಲಾಗುತ್ತಿದೆ. ಇದರ ಮೇಲೆ ದಾಳಿ ಮಾಡಿ ಬಚಾವು ಆಗುತ್ತೀರಿ ಅಂತ ಅಂದುಕೊಂಡಿದ್ದರೆ ಮತ್ತೆ ಯೋಚನೆ ಮಾಡಿ. ನಿಮಗೆ ಪಾಠ ಕಲಿಸುತ್ತೇವೆ. ಇದರ ಮೇಲೆ ಹಲ್ಲೆ ಮಾಡಿದರೆ ನಾವು ನಿಮ್ಮ ಮೇಲೆ ದಾಳಿ ಮಾಡುತ್ತದೆ. ಮೋದಿ ಕೇವಲ 25 ಸೀಟುಗಳಲ್ಲಿ ಪ್ರಧಾನಿ ಆಗಿದ್ದಾರೆ. 25 ಸೀಟಲ್ಲಿ ಅವರು ಕೇವಲ 30,000 ಮತಗಳ ಅಂತರದಿಂದ ಗೆದ್ದಿದ್ದಾರೆ. ನಾನು ಒಬ್ಬನೇ ಈ ಬಗ್ಗೆ ಮಾತನಾಡುತ್ತಿಲ್ಲ. ದೇಶದ ಎಲ್ಲ ರಾಜಕೀಯ ಪಕ್ಷ ಇದನ್ನು ಪ್ರಶ್ನೆ ಮಾಡುತ್ತಿವೆ. ಚು.ಆಯೋಗ ಈ ಎಲ್ಲಾ ಮಾಹಿತಿಯನ್ನು ನಮ್ಮ ವಶಕ್ಕೆ ನೀಡಬೇಕು. ರಾಜ್ಯದಲ್ಲಿನ ಮತ ಕಳ್ಳತನ ಒಂದು ಅಪರಾಧವಾಗಿದೆ. ಚು.ಆಯೋಗ ಒಂದು ಸೀಟಿನ ಸತ್ಯ ಹೊರಗೆಡವಲು ಆರು ತಿಂಗಳು ಬೇಕಾಯಿತು. ನೀವು ಮಾಹಿತಿ ಕೊಟ್ಟಿಲ್ಲ ವಾದರೆ 25 ಸೀಟುಗಳಲ್ಲಿ ಮಾಹಿತಿ ಹೊರ ಹಾಕುತ್ತೇವೆ" ಎಂದರು.



ಕರ್ನಾಟಕದಲ್ಲಿ ಕ್ರಿಮಿನಲ್ ಚಟುವಟಿಕೆ ಆಗಿದೆ. ರಾಜ್ಯ ಸರ್ಕಾರ ಇದರ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕಾಗುತ್ತದೆ.‌ ಚುನಾವಣಾ ಆಯೋಗ ಅಧಿಕಾರಿಗಳನ್ನು ಪ್ರಶ್ನೆ ಮಾಡಬೇಕಾಗುತ್ತದೆ. ಬಿಜೆಪಿ ಸಿದ್ಧಾಂತ ಸಂವಿಧಾನ ವಿರೋಧಿಯಾಗಿದೆ" ಎಂದು ಟೀಕಿಸಿದರು.

ಈ ಪ್ರತಿಭಟನಾ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ ವೇಣುಗೋಪಾಲ್, ರಣದೀಪ್‌ಸಿಂಗ್ ಸುರ್ಜೇವಾಲಾ ಸೇರಿದಂತೆ ಕಾಂಗ್ರೆಸ್‌ನ ಹಲವು ಮುಖಂಡರು, ಶಾಸಕರು, ಸಂಸದರುಗಳು ಭಾಗಿಯಾಗಿದ್ದರು.
ಚುನಾವಣಾ ಆಯೋಗಕ್ಕೆ ಪಂಚ ಪ್ರಶ್ನೆ: 

ರಾಹುಲ್ ಗಾಂಧಿ ಇದೇ ವೇಳೆ ಚುನಾವಣಾ ಆಯೋಗಕ್ಕೆ ಪಂಚ ಪ್ರಶ್ನೆಗಳನ್ನು ಕೇಳಿದರು. 

"ಡಿಜಿಟಲ್ ರೂಪದಲ್ಲಿ ವೋಟರ್ ಲಿಸ್ಟ್ ಏಕೆ ಜನರಿಗೆ ಕೊಡುತ್ತಿಲ್ಲ?. ಏಕೆ ಚುನಾವಣಾ ಆಯೋಗ 

ವಿಡಿಯೋ ಸಾಕ್ಷಿ ನಾಶ ಮಾಡುತ್ತಿದೆ?. ಇಸಿಐ ಅಪಾರ ಪ್ರಮಾಣದಲ್ಲಿ ವಂಚನೆ ಏಕೆ ಮಾಡುತ್ತಿದೆ?. 

ಉತ್ತರ ಕೊಡುವ ಬದಲು ವಿಪಕ್ಷವನ್ನು ಏಕೆ ಹೆದರಿಸುತ್ತಿದೆ?. ಬಿಜೆಪಿ ಏಜೆಂಟ್ ಆಗಿ 

ಚುನಾವಣಾ ಆಯೋಗ ಏಕೆ ಕೆಲಸ ಮಾಡುತ್ತಿದೆಎಂದು ಪ್ರಶ್ನಿಸಿದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST