ಸವಿತಾ ಮಹರ್ಷಿ ಜಯಂತಿ ಆಚರಣೆಯಲ್ಲಿ ಪಾಲಿಕೆ ವಿರೋಧ ಪಕ್ಷದ ನಾಯಕ ಶ್ರೀನಿವಾಸ್ ಮೋತ್ಕರ್ ಅಭಿಮತ
ಬಳ್ಳಾರಿ : ಸವಿತಾ ಮಹರ್ಷಿ ಜಯಂತಿಯನ್ನು ಹಬ್ಬದ ವಾತಾವರಣದಲ್ಲಿ ಆಚರಿಸಲಾಗುತ್ತಿದ್ದು, ಸಮುದಾಯದವರು ಒಂದೇ ವೇದಿಕೆಯಲ್ಲಿ ಒಟ್ಟಾಗಿ ಸೇರುವ ಅಪರೂಪದ ಸಂದರ್ಭ ಇದಾಗಿದೆ. ಸಂಘಟನೆಯ ಬಲವೇ ಸಮಾಜದ ಪ್ರಗತಿಗೆ ಆಧಾರ ಎಂದು ಬಳ್ಳಾರಿ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಶ್ರೀನಿವಾಸ್ ಮೋತ್ಕರ್ ಹೇಳಿದರು.

ನಗರದ ಬುಡಾ ಕಾಂಪ್ಲೆಕ್ಸ್‌ನಲ್ಲಿ ಬಳ್ಳಾರಿ ಜಿಲ್ಲಾ ಸವಿತಾ ಸಮಾಜ ಅಭಿವೃದ್ಧಿ ಸಂಘ, ಬಳ್ಳಾರಿ ತಾಲ್ಲೂಕು ಸವಿತಾ ಸಮಾಜ ಸಮಾಜ ಅಭಿವೃದ್ಧಿ ಸಂಘ, ಬಳ್ಳಾರಿ ನಗರ ಸವಿತಾ ಸಮಾಜ ಸಂಘ, ಬಳ್ಳಾರಿ ಜಿಲ್ಲಾ ಸವಿತಾ ಸಮಾಜ ನಾದಸ್ವರ ಡೋಲು ಅಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಸವಿತಾ ಮಹರ್ಷಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಎಂದಿಗೂ ಸಮುದಾಯದ ಜೊತೆಯಲ್ಲಿ ಇರುತ್ತೇವೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಮೊಟ್ಟ ಮೊದಲನೇದಾಗಿ ಸವಿತಾ ಸಮುದಾಯ ಭವನ ನಿರ್ಮಾಣ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.
ಸಮಾಜದ ಜಿಲ್ಲಾಧ್ಯಕ್ಷ ಡಿ.ಚಂದ್ರಶೇಖರ್ ಸೇರಿದಂತೆ ಇನ್ನಿತರೆ ಮುಖಂಡರು ಮಾತನಾಡಿ, ಸಂಘದ ಅಭಿವೃದ್ಧಿಯೇ ಸಮಾಜದ ಅಭಿವೃದ್ಧಿಗೆ ದಾರಿ. ಸಮಾಜವನ್ನು ಒಗ್ಗಟ್ಟಿನಿಂದ ಮುಂದಕ್ಕೆ ಕೊಂಡೊಯ್ಯಬೇಕು. ಸಂಘದ ಬಗ್ಗೆ ಯಾರು ಏನೇ ಹೇಳಿದರು ಗಮನ ಹರಿಸಬೇಡಿ. ನಮ್ಮ ಸಂಘ ಅಧಿಕೃತವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಇರಬೇಕು. ಇಂದಿನ ಯುವಕರ ತಂಡ ಬಹಳ ಉತ್ಸುಕರಾಗಿ ಸೇವೆ ಸಲ್ಲಿಸುತ್ತಿದ್ದು, ಹೀಗೆ ಮುಂದುವರೆಯಲಿ ಎಂದು ಆಶಿಸಿದರು.

ಮನುಷ್ಯನನ್ನು ಅಂದವಾಗಿ ರೂಪಿಸುವ ಶಕ್ತಿ ಸವಿತಾ ಸಮುದಾಯಕ್ಕೆ ಇದೆ. ಕೆಲವರಿಗೆ ಓದು ಇದ್ದರೂ ಅನುಭವ ಕಡಿಮೆ, ಕೆಲವರಿಗೆ ಅನುಭವ ಇದ್ದರೂ ಓದು ಕಡಿಮೆ. ಆದರೆ ಇಲ್ಲಿ ಯಾವುದೇ ಬೇಧಭಾವ ಇಲ್ಲ ಎಲ್ಲರೂ ಸಮಾನರಾಗಿದ್ದು, ಐಕ್ಯತೆ ಇಲ್ಲದಿದ್ದರೆ ಸಾಧನೆ ಸಾಧ್ಯವಿಲ್ಲ. ಹಾಗಾಗಿ ನಾವು ಐಕ್ಯತೆಯಿಂದ ಇರಬೇಕು ಎಂದು ತಿಳಿಸಿದರು.
ಸಮುದಾಯದ ಹಿರಿಯ ಮುಖಂಡರೂ ಹಾಗೂ ಜಿಲ್ಲಾ ಸಲಹೆಗಾರರಾದ ವೆಂಕಟೇಶ್ ತೋರಣಗಲ್ ಅವರು ಮಾತನಾಡಿ, ಹಿಂದಿನಿಂದಲೂ ನಮ್ಮನ್ನು ಕೀಳಾಗಿ ನೋಡಲಾಗುತ್ತಿದೆ. ಇದು ಬದಲಾಗಬೇಕಾದರೆ ನಾವೆಲ್ಲ ಒಗ್ಗಟ್ಟಾಗಬೇಕು. ನಮ್ಮ ಕುಲ ಕಸುಬನ್ನು ಇತರರು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇಂದು ಅನೇಕ ಸಂಘಗಳು ಇದ್ದರೂ ಸಮಾಜ ಇನ್ನೂ ಹಿಂದುಳಿದಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಯುವಕರು ಮುಂದೆ ಬರಬೇಕು, ಸಂಘಟನಾ ಹಾಗೂ ಆರ್ಥಿಕ ವಿಚಾರಗಳಲ್ಲಿ ಪ್ರೋತ್ಸಾಹ ನೀಡಲಾಗುವುದು. ಜೊತೆಗೆ ನಿಗಮದಿಂದ ಸಿಗುವ ಸೌಲಭ್ಯಗಳನ್ನೂ ಪಡೆಯಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು ಎಂದರು.

ಪತ್ರಕರ್ತ ಹಾಗೂ ಸಮಾಜದ ಯುವ ಘಟಕದ ಅಧ್ಯಕ್ಷ ರಾಕೇಶ್.ವಿ. ಮಾತನಾಡಿ, ಶಿವನ ದಿವ್ಯ ದೃಷ್ಠಿಯಲ್ಲಿ ಜನ್ಮ ತಾಳಿದವರು ಸವಿತಾ ಮಹರ್ಷಿ. ಪೌರಾಣಿಕ ವ್ಯಕ್ತಿಯಾದ ಸವಿತಾ ಮಹರ್ಷಿಯು ರಥಸಮ್ತಿಯ ದಿನ ಮಾಘ ಮಾಸದ ಶುಕ್ಲ ಪಕ್ಷದಲ್ಲಿ ಜನಿಸಿದವರು. ಧಾರ್ಮಿಕವಾಗಿ ಶಿವನ ಎಡಗಣ್ಣನ್ನು ಚಂದ್ರನಿಗೆ ಬಲಗಣ್ಣನ್ನು ಸೂರ್ಯನಿಗೆ ಹೋಲಿಸಲಾಗುತ್ತದೆ. ಶಿವನ ಬಲಗಣ್ಣಿನಿಂದ ಜನಿಸಿದವನೇ ಸವಿತಾ ಮಹರ್ಷಿ ಎಂಬುದು ಪ್ರತಿಥಿ ಇದೆ. ಇವರ ಮಗಳಾದ ಗಾಯತ್ರಿದೇವಿಯು ಶ್ರೇಷ್ಠ ಮಂತ್ರವಾದ ಗಾಯತ್ರಿ ಮಂತ್ರವನ್ನು ರಚಿಸಿದ್ದಾರೆ. ಈ ಸಮಾಜಕ್ಕೆ 2000 ಸಾವಿರ ವರ್ಷಗಳ ಇತಿಹಾಸವಿದೆ ಎಂದು ತಿಳಿಸಿದರಲ್ಲದೆ, ಇಂದಿನ ದಿನಗಳಲ್ಲಿ ಸಮುದಾಯದ ಅಭಿವೃದ್ಧಿಯಾಗಬೇಕಾದರೆ ಹಿರಿಯರು ಒಗ್ಗಟ್ಟಾಗಬೇಕು. ಜೊತೆಗೆ ಮುಂದಿನ ಪೀಳಿಗೆಗೆ ಶಿಕ್ಷಣ ಕಡ್ಡಾಯವಾಗಬೇಕು. ಶಿಕ್ಷಣ ಪಡೆದರೆ ಮಾತ್ರ ನಮ್ಮ ಸಮುದಾಯದ ಏಳ್ಗೆ ಸಾಧ್ಯ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಶಿವಶಂಕರ್, ರಘು ಕುಮಾರ್, ಮಲ್ಲಿಕಾರ್ಜುನ್, ಅರುಣ್ ಕುಮಾರ್, ರಾಮಣ್ಣ, ನಾರಾಯಣಸ್ವಾಮಿ, ಗೋವಿಂದರಾಜುಲು, ಎಂ.ವೆಂಕಟೇಶ್, ನಾಗರಾಜ್, ನಾರಾಯಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇದೇ ವೇಳೆ ಸಮಾಜದ ಅಭಿವೃದ್ಧಿ ಶ್ರಮಿಸಿದ ಹಲವರಿಗೆ ಸನ್ಮಾನಿಸಿ ಗೌರವಿಸಲಾಯಿತು.