LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಂಘಟನೆ, ಸಮಾನತೆ,  ಸಂಘರ್ಷ, ಸಹಕಾರ, ಸಾಮಾಜಿಕ ನ್ಯಾಯದ ಪ್ರತಿಪಾದಕರು, ನಮ್ಮ ಕೆ.ಎನ್.ಆರ್.

ತುಮಕೂರು : ಕ್ಯಾತ್ಸಂದ್ರ ನಂಜಪ್ಪ ರಾಜಣ್ಣ ಅಭಿಮಾನಿಗಳ ಪಾಲಿಗೆ ಪ್ರೀತಿಯ ಕೆ.ಎನ್.ಆರ್. ಜನಮಾನಸದಲ್ಲಿ ಅಚ್ಚಳಿಯದ ಹೆಗ್ಗುರುತುಗಳನ್ನು ಮೂಡಿಸಿರುವ ಕೆ.ಎನ್.ಆರ್, ಜನರಿಂದ, ಜನರಿಗಾಗಿ, ಜನರಿಗೋಸ್ಕರವೇ  ತಮ್ಮ ಬದುಕು ಸಮರ್ಪಿಸಿಕೊಂಡಿರುವ ಧೀಮಂತ ನಾಯಕ. ಕೆ.ಎನ್. ರಾಜಣ್ಣ ಸ್ವಾತಂತ್ರ್ಯ ಹೋರಾಟಗಾರರು ಮತ್ತು ರೈತ ಕುಟುಂಬದ ಕುಡಿ. 1951, ಏಪ್ರಿಲ್ 13 ರಂದು ನಂಜಪ್ಪ ಮತ್ತು ಲಕ್ಷ್ಮೀ ದೇವಮ್ಮರ ಸುಪುತ್ರರಾಗಿ ಜನಿಸಿದರು. ವಿದ್ಯಾರ್ಥಿ ಮುಖಂಡರಾಗಿ ಸಣ್ಣ  ಝರಿಯಂತೆ ಆರಂಭವಾದ ಕೆ.ಎನ್.ಆರ್ ಅವರ ಸಾರ್ವಜನಿಕ ಬದುಕು ತೊರೆ ತೊರೆಯಾಗಿ ಹರಿದು ಸರೋವರ, ನದಿ ಸ್ವರೂಪ ಪಡೆದುಕೊಂಡಿತು. ಕಲ್ಪತರು ನಾಡಿನ ಕಲ್ಪವೃಕ್ಷವಾಗಿ ಎಲ್ಲರಿಗೂ ಬೇಕಾದ ನಾಯಕರಾಗಿ ಅವರು ಹೊರ ಹೊಮ್ಮಿದ್ದಾರೆ. ಕೆ.ಎನ್.ರಾಜಣ್ಣರ ರಾಜಕೀಯ ಬದುಕು ವಿಭಿನ್ನ. ಸಾಮಾಜಿಕ ನ್ಯಾಯ, ಸಮಾನತೆ, ಸಂಘಟನೆ, ಸಂಘರ್ಷ, ಸಹಕಾರ ಅವರ ಮೂಲ ಮಂತ್ರ. ಇವೇ ಅವರ ಬದುಕಿನ ಪಂಚಶೀಲ ತತ್ವಗಳು. ಸಹಕಾರ ಕ್ಷೇತ್ರವಂತೂ ಕೆ.ಎನ್. ರಾಜಣ್ಣರ ಜೀವಾಳ, ಶಕ್ತಿ, ಉಸಿರು, ಬದುಕು ಎಲ್ಲವೂ ಆಗಿದೆ. ನಾಡಿನ ಸಹಕಾರಿ ದಿಗ್ಗಜರಲ್ಲಿ ಅವರು ಅಗ್ರಗಣ್ಯರು. ನೇರ ನಡೆ, ನುಡಿ, ನಿಷ್ಠುರತೆಯ ಧುರೀಣರು.



1969 ರಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ಕೆ.ಎನ್.ಆರ್, ತುಮಕೂರು ತಾಲ್ಲೂಕು ಕಾಂಗ್ರೆಸ್ ಘಟಕದ ಕಾರ್ಯದರ್ಶಿ,  1980 ರಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಗಾಗಿ ತಮ್ಮನ್ನು ಅರ್ಪಿಸಿಕೊಂಡರು.

1976 ರಲ್ಲಿ ಕ್ಯಾತ್ಸಂದ್ರ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕರಾಗಿ, 1979 ರಲ್ಲಿ ಕ್ಯಾತ್ಸಂದ್ರ ಟೌನ್ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 1998 ರಲ್ಲಿ ತುಮಕೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ವಿಧಾನಪರಿಷತ್ ಪ್ರವೇಶಿಸಿದರು. 2004ರಲ್ಲಿ ಬೆಳ್ಳಾವಿ, 2013 ರಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಕೆ.ಎನ್.ಆರ್ ಶಾಸಕರಾಗಿ ಚುನಾಯಿತರಾದರು.

2001 ರ ಸೆಪ್ಟೆಂಬರ್ ನಲ್ಲಿ ಸಹಕಾರಿ ವಲಯದ ಪ್ರಾತಿನಿಧಿಕ ಸಂಸ್ಥೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದ ಅವರು ಎರಡನೇ ಅವಧಿಗೂ  ಅವಿರೋಧವಾಗಿ ಆಯ್ಕೆಯಾದರು. 2013 ರಲ್ಲಿ ಸಹಕಾರ ರತ್ನ ಪ್ರಶಸ್ತಿ ಮುಡಿಗೇರಿಸಿಕೊಂಡ ಕೆ.ಎನ್.ರಾಜಣ್ಣ, ನವದೆಹಲಿಯ ಕೋ ಆಪರೇಟೀವ್ ಬ್ಯಾಂಕ್, ನಾಫೆಡ್ ನಿರ್ದೇಶಕರಾಗಿ, ಮುಂಬೈನ ನ್ಯಾಪ್ ಸ್ಯಾಬ್ ಉಪಾಧ್ಯಕ್ಷರಾಗಿ,ರಾಜ್ಯಹಣಕಾಸು ಸಂಸ್ಥೆಯ ನಿರ್ದೇಶಕರಾಗಿ, ಮೂರು ಬಾರಿ ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳಿಯಲ್ಲಿ ನಿರ್ದೇಶಕರಾಗಿ, ನಾಲ್ಕು ಬಾರಿ ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರಾಗಿದ್ದ ಅವರು, ಇದೀಗ ಐದನೇ ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದೇಶ, ವಿದೇಶಗಳ ಸಹಕಾರಿ ಕ್ಷೇತ್ರದ ಎಲ್ಲಾ ಆಯಾಮಗಳನ್ನು ಬಲ್ಲ ಕೆ.ಎನ್. ರಾಜಣ್ಣ, ಜಗತ್ತಿನ ಪ್ರಮುಖ ದೇಶಗಳಲ್ಲಿ ಪ್ರವಾಸ ಮಾಡಿದ್ದಾರೆ. ಅಂತಾರಾಷ್ಟ್ರೀಯ ಸಹಕಾರಿ ಸಮ್ಮೇಳನದಲ್ಲಿ ಭಾಗವಹಿಸಿದ್ದರು.



ಬೆಂಗಳೂರು ವಿಶ್ವವಿದ್ಯಾಯದ ಸೆನೆಟ್ ಸದಸ್ಯರಾಗಿ, 1979 ರಿಂದ ಹತ್ತು ವರ್ಷ ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷರಾಗಿದ್ದರು. ತುಮಕೂರು ಎಪಿಎಂಸಿ ನಿರ್ದೇಶಕರು, ತಾಲ್ಲೂಕು ಭೂ ನ್ಯಾಯಮಂಡಳಿ ಸದಸ್ಯರಾಗಿದ್ದರು. ಕ್ಯಾತ್ಸಂದ್ರದ ಚಂದ್ರಮೌಳೇಶ್ವರ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾಗಿಯೂ ಕೆ.ಎನ್.ಆರ್ ಕಾರ್ಯಭಾರ ಮಾಡಿದ್ದಾರೆ.

ಸಹಕಾರ ಕ್ಷೇತ್ರಕ್ಕೆ ಸ್ಮರಣೀಯ ಸೇವೆ ಸಲ್ಲಿಸಿರುವ ಕೆ.ಎನ್. ರಾಜಣ್ಣ ಅವರ ಹೆಸರಿನಲ್ಲಿ ಮಧುಗಿರಿಯಲ್ಲಿ ಕೆ.ಎನ್.ಆರ್ ಪತ್ತಿನ ಸಹಕಾರಿ ನಿಯಮಿತ, ತುಮಕೂರಿನಲ್ಲಿ ಕೆ.ಎನ್.ಆರ್ ಮಹಿಳಾ ಪತ್ತಿನ ಸೌಹಾರ್ದ ಸಹಕಾರ ನಿಯಮಿತ, ತುಮಕೂರಿನಲ್ಲಿ ಕೆ.ಎನ್.ಆರ್ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ, ಗುಬ್ಬಿಯ ಕೆ.ಎನ್.ಆರ್ ಪರಿಶಿಷ್ಟ ಪಂಗಡಗಳ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಮತ್ತು ಪಾವಗಡದಲ್ಲಿ ಕೆ.ಎನ್.ಆರ್ ಸಾವಯವ ಕೃಷಿ ಉತ್ಪಾದಕರ ಹಾಗೂ ಮಾರಾಟಗಾರರ ಸಹಕಾರ ಸಂಘಗಳು ಸ್ಥಾಪನೆಯಾಗಿವೆ.

ತುಮಕೂರು ಟೌನ್ ಕ್ಲಬ್ ಕಾರ್ಯದರ್ಶಿಯಾಗಿ, ತುಮಕೂರು ಕೋಟೆ ಆಂಜನೇಯಸ್ವಾಮಿ ದೇವಾಸ್ಥಾನದ ಗೌರವಾಧ್ಯಕ್ಷರಾಗಿ ಧಾರ್ಮಿಕ ಚಟುವಟಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ. ತುಮಕೂರು ಮಧು ಸ್ಫೋರ್ಟ್ಸ್ ಕ್ಲಬ್, ತುಮಕೂರು ಕರಾಟೆ ಸಂಸ್ಥೆ, ತುಮಕೂರು ಜಿಲ್ಲಾ ಕ್ರಷರ್ಸ್ ಮಾಲೀಕರ ಸಂಘದ ಅಧ್ಯಕ್ಷರಾಗಿದ್ದರು.

ಕೆ.ಎನ್. ರಾಜಣ್ಣ ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದಾಗ ತೀವ್ರ ಬರಗಾಲಕ್ಕೆ ತುತ್ತಾಗಿದ್ದಾಗ ಜಿಲ್ಲೆಯ ಗೋಶಾಲೆಗಳಲ್ಲಿ ರೈತ ಕುಟುಂಬದವರಿಗೆ ಉಚಿತ ಊಟ ಒದಗಿಸಿ ಮಾದರಿಯಾಗಿದ್ದರು. ಜಿಲ್ಲೆಯ ರೈತರ ಮಕ್ಕಳಿಗೆ ಪ್ರತಿವರ್ಷ ಪ್ರತಿಭಾಪುರಸ್ಕಾರ ನೀಡುವ ಮಾದರಿ ಕಾರ್ಯಕ್ರಮ ಜಾರಿಗೊಳಿಸಿದ್ದಾರೆ. ಕೆ.ಎನ್. ರಾಜಣ್ಣರ ದೂರದರ್ಶಿತ್ವ ಮತ್ತು ಸತತ ಪರಿಶ್ರಮದಿಂದ  2011 – 12 ನೇ ಸಾಲಿನಲ್ಲಿ ಅಪೆಕ್ಸ್ ಬ್ಯಾಂಕ್ ನೀಡುವ ಅತ್ಯುತ್ತಮ ಪ್ರಶಸ್ತಿಯನ್ನು ತುಮಕೂರು ಡಿಸಿಸಿ ಬ್ಯಾಂಕ್ ಪಡೆದುಕೊಳ್ಳಲು ಸಾಧ್ಯವಾಯಿತು. ಜಿಲ್ಲೆಯಲ್ಲಿ ಕೆ.ಎನ್.ಆರ್ರ ಪರಿಶ್ರಮದಿಂದ ಹಲವಾರು ಸಹಕಾರಿ ಸಂಸ್ಥೆಗಳು, ಸ್ವಸಹಾಯ ಸಂಘಗಳು, ಪತ್ತಿನ ಸಹಕಾರ ಸಂಘಗಳು ಅಸ್ಥಿತ್ವಕ್ಕೆ ಬಂದಿವೆ.



ಹಿಂದುಳಿದ ವರ್ಗಗಳ ಹರಿಹಾರ, ಸಾಮಾಜಿಕ ನ್ಯಾಯದ ಪ್ರತಿಪಾದಕರಾದ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕೆ.ಎನ್.ರಾಜಣ್ಣ 2023 ರ ಮೇ 27 ರಂದು ಸಚಿವರಾಗಿ ಪದಗ್ರಹಣ ಮಾಡಿದರು. ತಮ್ಮ ನೆಚ್ಚಿನ ಸಹಕಾರ ಇಲಾಖೆ ಸಾರಥ್ಯ ವಹಿಸಿಕೊಂಡಿರುವ ಅವರು, ಸಹಕಾರಿ ಕ್ಷೇತ್ರದಲ್ಲಿ ತಮ್ಮ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ದಾಪುಗಾಲಿಟ್ಟಿದ್ದಾರೆ. ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿದೆ. ಇದೀಗ ಅಭಿಮಾನಿಗಳು ಕೆ.ಎನ್.ಆರ್ ಅವರ ಬದುಕಿನ ಅಮೃತ ಮಹೋತ್ಸವವನ್ನು ಅಮಿತೋತ್ಸಾಹ ಮತ್ತು ಸಂಭ್ರಮದಿಂದ ಆಚರಿಸುತ್ತಿದ್ದಾರೆ.  ನಮ್ಮೆಲ್ಲರ ಕ್ಯಾತ್ಸಂದ್ರ ನಂಜಪ್ಪ ರಾಜಣ್ಣರಿಗೆ ಶುಭವಾಗಲಿ, ಜಯವಾಗಲಿ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST