LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಇತಿಹಾಸದ ಬರವಣಿಗೆಯಲ್ಲಿ ವಸ್ತುನಿಷ್ಠತೆ ತುಂಬಾ ಮುಖ್ಯ

ಬಳ್ಳಾರಿ: ಇತಿಹಾಸದ ಬರವಣಿಗೆ ವಸ್ತುನಿಷ್ಠತೆ ಮತ್ತು ನೈಜಯಿಂದ ಕೂಡಿರಬೇಕು. ಇತಿಹಾಸವನ್ನು ಪುರಾಣಗಳ ಆಧಾರದ ಮೇಲೆ ವೈಭವೀಕರಣ ಮಾಡುವುದು ಸರಿಯಲ್ಲ. ಹಂಪಿಯ ಗತಕಾಲದ ಇತಿಹಾಸವನ್ನು ಕಟ್ಟಿಕೊಡುವಲ್ಲಿ ಇಲ್ಲಿನ ನೈಸರ್ಗಿಕ ಅಂಶಗಳು ಮತ್ತು ಮಾನವ ನಿರ್ಮಿತ ವಸ್ತುಗಳು ಮಹತ್ವದ ಪಾತ್ರವಹಿಸುತ್ತವೆ. ಹಂಪಿ ಪರಿಸರ ಮತ್ತು ಜನಜೀವನದ ಕುರಿತು ತಲಸ್ಪರ್ಶೀಯ ಅಧ್ಯಯನಗಳು ನಡೆಯಬೇಕು ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಾಚೀನ ಮತ್ತು ಪ್ರಾಚ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಎಚ್.ಎಸ್. ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.

 

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ ೨೦೨೫-೨೬ನೇ ಶೈಕ್ಷಣಿಕ ಸಾಲಿನ ಹಂಪಿ ಪರಿಸರದ ಪುರಾತತ್ವ ಮತ್ತು ಇತ್ತೀಚಿನ ಶೋಧಗಳು ವಿಶೇಷ ಉಪನ್ಯಾಸ ಉದ್ಘಾಟಿಸಿ ಮಾತನಾಡಿದ ಅವರು, ಹಂಪಿ ಪರಿಸರವು ಧಾರ್ಮಿಕ ಕ್ಷೇತ್ರವಾಗಿ, ತೀರ್ಥ ಕ್ಷೇತ್ರವಾಗಿ, ಪ್ರವಾಸಿ ಕ್ಷೇತ್ರವಾಗಿ ತುಂಬಾ ಪ್ರಾಚೀನವಾದ ಸ್ಥಳ. ಸಹೋದರತ್ವವನ್ನು ಜಗತ್ತಿಗೆ ಪ್ರತಿಪಾದಿಸಿದ ಕ್ಷೇತ್ರ. ರಾರ್ಬಟ್ ಸಿವೇಲ್ ಅವರ ಮರೆತು ಹೋದ ಮಹಾಸಾಮ್ರಾಜ್ಯ ಕೃತಿಯು ವಿಜಯನಗರ ಸಾಮ್ರಾಜ್ಯದ ಆಡಳಿತ, ಕಲೆ ಮತ್ತು ವಾಸ್ತುಶಿಲ್ಪವನ್ನು ಎತ್ತಿಹಿಡಿಯುತ್ತದೆ. ದೇಶದ ಸ್ವಾತಂತ್ರ ಮತ್ತು ಕರ್ನಾಟಕ ಏಕೀಕರಣದ ನಂತರ ಹಂಪಿ ಪ್ರದೇಶ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ.

 

1986ರಲ್ಲಿ ಯುನೆಸ್ಕೋ ಹಂಪಿಯನ್ನು ವಿಶ್ವಪಾರಂಪರಿಕ ತಾಣವಾಗಿ ಘೋಷಣೆ ಮಾಡಿತು. ಹಂಪಿಯ ವಿಶ್ವಪರಂಪರೆಗೆ ಧಕ್ಕೆಯಾಗದಂತೆ, ಹಂಪಿ ಪರಿಸರದ ರಕ್ಷಣೆ ಮತ್ತು ಅದರ ಉತ್ಖನನಕ್ಕೆ ಸಂಬಂಧಿಸಿದಂತೆ ಎಎಸ್‌ಐ ಸಂಸ್ಥೆ, ಕೇಂದ್ರ ಪುರಾತತ್ವ ಇಲಾಖೆ ಮತ್ತು ರಾಜ್ಯ ಪುರಾತತ್ವ ಇಲಾಖೆಗಳು ಸಾಕಷ್ಟು ಯೋಜನೆಗಳನ್ನು ರೂಪಿಸಿವೆ. ಹಂಪಿಯ ಕುರಿತ ಸಂಶೋಧನೆಯು ಅನೇಕ ಆಯಾಮಗಳನ್ನು ಒಳಗೊಂಡಿದೆ. ಯುವ ಸಂಶೋಧಕರು ತಮ್ಮ ಸಂಶೋಧನೆಯಲ್ಲಿ ಏನು? ಎಲ್ಲಿ? ಯಾವಾಗ? ಹೇಗೆ? ಯಾರಿಂದ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ತುಂಬಾ ಮುಖ್ಯ. ಇತಿಹಾಸ ಎನ್ನುವುದು ಇತಿಹಾಸಕಾರನ ಆಲೋಚನೆಗಳ ಫಲ. ಹೀಗಾಗಿ ಇತಿಹಾಸ ಬರವಣಿಗೆಯು ಕಾರ್ಯಕಾರಣ ಸಂಬಂಧವನ್ನು ಹೊಂದಿರಬೇಕು. ಹಂಪಿಯ ರಕ್ಷಣೆ ಮತ್ತು ಜನಜೀವನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸವಾಲುಗಳಿವೆ. ಹಂಪಿಯ ಜನರು ಜೀವನವನ್ನು ಕಟ್ಟಿಕೊಳ್ಳುವ ಭರದಲ್ಲಿ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಂತಹ ನಿರ್ಲಕ್ಷಕ್ಕೆ ಒಳಗಾಗಿರುವ ವಿಷಯಗಳ ಮೇಲೆ ಹೆಚ್ಚು ಅಧ್ಯಯನಗಳು ನಡೆಯಬೇಕು ಎಂದರು.



ಚರಿತ್ರೆ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ವಿರೂಪಾಕ್ಷಿ ಪೂಜಾರಹಳ್ಳಿ ಮಾತನಾಡಿ, ವಿಜಯನಗರವು ಆ ಕಾಲದ ಮಹಾನಗರವಾಗಿತ್ತು. ಇಲ್ಲಿನ ವಾಸ್ತುಶಿಲ್ಪ, ಕಲೆ, ಸಾಹಿತ್ಯ ಸಂಸ್ಕೃತಿ ಮತ್ತು ಪ್ರಕೃತಿ ಕುರಿತು ಹಲವಾರು ವಿದೇಶಿ ವಿದ್ವಾಂಸರು ಹಾಡಿ ಹೊಗಳಿದ್ದಾರೆ. ಪ್ರೌಢ ದೇವರಾಯನ ಕಾಲದಲ್ಲಿ ಭಕ್ತಿ ಸಾಹಿತ್ಯ ಮತ್ತು ಶರಣ ಸಾಹಿತ್ಯಕ್ಕೆ ಆದ್ಯತೆ ನೀಡಲಾಯಿತು. ವಿಜಯನಗರ ಕಾಲದಲ್ಲಿ ಹಂಪಿ ಪರಿಸರವು ಬೇಟೆ ಮತ್ತು ಪಶುಪಾಲನೆಗೆ ಹೆಸರುವಾಸಿಯಾಗಿತ್ತು. ವಿಜಯನಗರ ಸಾಮ್ರಾಜ್ಯವು ಅಧಿಕಾರ ವಿಕೇಂದ್ರಿಕರಣಕ್ಕೆ ಒತ್ತು ನೀಡಿತ್ತು. ಇಂದು ಹೊಸದನ್ನು ಸಂಶೋಧಿಸುವ ಭರದಲ್ಲಿ ಸಮಾಜದಲ್ಲಿ ದ್ವಂದ್ವವನ್ನು ಸೃಷ್ಠಿಸಬಾರದು ಎಂದರು.

 

ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಎಸ್.ವೈ. ಸೋಮಶೇಖರ್ ಮಾತನಾಡಿ, ವಿಜಯನಗರ ಅರಸರು ಪರಿಸರ ಪ್ರಜ್ಞೆಯುಳ್ಳವರಾಗಿದ್ದರು. ಸಾಮ್ರಾಜ್ಯ ಕಟ್ಟುವಲ್ಲಿ ಜಲಮೂಲಗಳ ರಕ್ಷಣೆ ಮತ್ತು ಬಳಕೆಯು ತುಂಬಾ ಮುಖ್ಯವಾಗುತ್ತದೆ. ಜೀವಜಲದ ಬಳಕೆಗಾಗಿ ಅರಸರು ತುರ್ತಾ ಆಣೆಕಟ್ಟು ನಿರ್ಮಾಣ, ಕಮಲಾಪುರ ಕೆರೆ ನಿರ್ಮಾಣ ಮತ್ತು ಕಾಲುವೆಗಳ ನಿರ್ಮಾಣದ ಮೂಲಕ ಜನಜಾನುವಾರುಗಳಿಗೆ ಮತ್ತು ಕೃಷಿ ಕಾರ್ಯಗಳಿಗೆ ನದಿಯ ನೀರನ್ನು ವರ್ಷಪೂರ್ತಿ ಒದಗಿಸಲು ತುಂಬಾ ವ್ಯವಸ್ಥಿತವಾದ ಮತ್ತು ಪರಿಸರ ಸ್ನೇಹಿಯಾದ ಯೋಜನೆಯನ್ನು ರೂಪಿಸಿದ್ದರು ಎಂದರು.

 

ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ವಾಸುದೇವ ಬಡಿಗೇರ ಮಾತನಾಡಿ, ಮಧ್ಯಕಾಲೀನ ಯುಗದಲ್ಲಿ ಉತ್ತರ ಭಾರತದಲ್ಲಿ ಫತೇಪುರ ಸಿಕ್ರಿ ಮತ್ತು ದಕ್ಷಿಣ ಭಾರತದಲ್ಲಿ ಹಂಪಿ ತುಂಬಾ ವ್ಯವಸ್ಥಿತವಾದ ನಗರಗಳು ಎಂದು ಪ್ರಸಿದ್ಧಿ ಪಡೆದಿದ್ದವು. ಹಂಪಿ ಎರಡು ಸಂಸ್ಕೃತಿಗಳ ಸಮ್ಮಿಲನ. ಅಲಕ್ಷಿತ ಮತ್ತು ನಿರ್ಲಕ್ಷಿತ ಸಮುದಾಯಗಳ ಬಗ್ಗೆ ಹಾಗೂ ಸ್ಥಳನಾಮಗಳ ಬಗ್ಗೆ ಅಧ್ಯಯನಗಳು ನಡೆಯಬೇಕು ಎಂದು ತಿಳಿಸಿದರು.

 

ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ರಮೇಶ ನಾಯ್ಕ ಅವರು ಸ್ವಾಗತ ಮತ್ತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಅಧ್ಯಾಪಕರು, ಸಂಶೋಧನಾರ್ಥಿಗಳು ಉಪಸ್ಥಿತರಿದ್ದರು. ಸಂಶೋಧನಾರ್ಥಿ ವಾಸುದೇವ ನಿರೂಪಿಸಿದರು. ಬಸವರಾಜ ವಂದಿಸಿದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST